ಬೆಳಗಾವಿ: ಅಂಗನವಾಡಿ ಕಾರ್ಯಕರ್ತೆಯರು, ಸಿಬ್ಬಂದಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Laxmi Hebbalkar) ಮಾಹಿತಿ ನೀಡಿದ್ದು, ಇಲಾಖೆಯಲ್ಲಿ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ನೌಕರರಿಗೆ ಬಡ್ತಿಯನ್ನು ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಬೆಳಗಾವಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಬೆಳಗಾವಿ ನಗರ ಗಾಂಧಿ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಪೋಷಣ್ ಮಾಸಾಚರಣೆ- 2025ರ ಅಂಗವಾಡಿ ಅನ್ನಪ್ರಾಶನ, ಅಕ್ಷರಾಭ್ಯಾಸ, ಗರ್ಭಿಣಿಯರಿಗೆ ಸೀಮಂತ, ಮಕ್ಕಳಿಗೆ ಪೌಷ್ಟಿಕ ಆಹಾರ ಕಿಟ್ ವಿತರಣೆ ಮತ್ತು ವಿಶೇಷಚೇತನ ಫಲಾನುಭವಿಗಳಿಗೆ ಯಂತ್ರಚಾಲಿತ ವಾಹನಗಳ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಸಚಿವರು ಮಾತನಾಡಿದ್ದಾರೆ.
ಇಲಾಖೆಯ ನೌಕರರಿಗೆ ಬಡ್ತಿ ಭಾಗ್ಯ
ಇಲಾಖೆಯಲ್ಲಿ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ನೌಕರರಿಗೆ ಬಡ್ತಿಯನ್ನು ನೀಡಲಾಗಿದೆ. ಮೇಲ್ವಿಚಾರಕರ ಹುದ್ದೆಯಿಂದ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ (ಎಸಿಡಿಪಿಒ) ಹುದ್ದೆಗೆ ಬಡ್ತಿ ನೀಡಲಾಗುತ್ತಿದೆ. ಈ ಸಂಬಂಧ ಈಗಾಗಲೇ ಇಲಾಖೆಯ ನಿರ್ದೇಶಕರು, ಕಾರ್ಯದರ್ಶಿಗಳಿಗೆ ಸೂಚನೆಯನ್ನು ನೀಡಿದ್ದು, ಅದಷ್ಟು ಬೇಗ ಇದರ ಪ್ರಕ್ರಿಯೆ ನಡೆಯಲಿದೆ ಎಂದರು.
ಇದರ ಜತೆಗೆ ಪದವಿ ಪಡೆದಿರುವ ಹಾಗೂ ದ್ವಿತೀಯ ಪಿಯುಸಿಯಲ್ಲಿ ಉತ್ತಮ ಅಂಕಗಳಿಸಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಬೇರೆ ಬೇರೆ ಹಂತದಲ್ಲಿರುವ ಸಿಬ್ಬಂದಿಗೆ ಒಂದು ಬಾರಿ ಬಡ್ತಿ ನಿಯಮದಡಿ ಮೇಲ್ವಿಚಾರಕ ಹುದ್ದೆಗೆ ಬಡ್ತಿ ನೀಡಲಾಗುವುದು. ಇದಕ್ಕಾಗಿ 400 ಜನರ ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಚಿವರು ಹೇಳಿದರು.
ಸದೃಢ ದೇಶ ನಿರ್ಮಾಣಕ್ಕೆ ಪೋಷಣ್ ಅಭಿಯಾನ
ಸದೃಢ ಸಮಾಜ, ದೇಶದ ಭವಿಷ್ಯವನ್ನು ಉಜ್ವಲಗೊಳಿಸುವ ಸಲುವಾಗಿ ಪೋಷಣ್ ಅಭಿಯಾನ ಕಾರ್ಯಕ್ರಮ ಜಾರಿಗೆ ತರಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಕಾರದೊಂದಿಗೆ ಮಕ್ಕಳಿಗೆ ಪೌಷ್ಠಿಕಾಂಶ ನೀಡುವ ಮೂಲಕ ದೇಶದ ಭವಿಷ್ಯಕ್ಕೆ ಭದ್ರ ಬುನಾದಿ ಹಾಕೋಣ ಎಂದ ಸಚಿವರು, ಪೋಷಣ್ ಅಭಿಯಾನವನ್ನು ಈ ತಿಂಗಳು ಪೂರ್ತಿ ಪ್ರತಿ ಜಿಲ್ಲೆಯಲ್ಲೂ ಮಾಡಲಾಗುವುದು ಎಂದು ಹೇಳಿದರು.
ಗೃಹಲಕ್ಷ್ಮಿ ಯೋಜನೆ ಯಶಸ್ಸಿಗೆ ಅಂಗನವಾಡಿ ಕಾರ್ಯಕರ್ತರೆ ಕಾರಣ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಗೃಹಲಕ್ಷ್ಮಿ ಯೋಜನೆಯನ್ನು ರಾಜ್ಯಾದ್ಯಂತ ನೀಡಲಾಗುತ್ತಿದೆ. ಇಂಥ ಯೋಜನೆಯನ್ನು ಜಾರಿಗೆ ತರುವ ಅದೃಷ್ಟ ನನಗೆ ಒಲಿಯಿತು. ವಾರ್ಷಿಕ 30 ಸಾವಿರ ಕೋಟಿ ರೂಪಾಯಿಯ ಯೋಜನೆಯಾದ ಗೃಹಲಕ್ಷ್ಮಿ ಯೋಜನೆ ಯಶಸ್ವಿಯಾಗಲು ಅಂಗನವಾಡಿ ಕಾರ್ಯಕರ್ತರೇ ಕಾರಣ. ಸ್ವತಃ ಮುಖ್ಯಮಂತ್ರಿಗಳೇ ಎಷ್ಟೋ ಬಾರಿ ನನ್ನ ಬಳಿ ಇದನ್ನು ಹೇಳಿದ್ದಾರೆ ಎಂದರು.
ನಾನು ಇಲಾಖೆಯ ಸಚಿವೆಯಾಗಿ ಬರುವುದಕ್ಕೂ ಮುನ್ನ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಆಯ್ಕೆ ವೇಳೆ ವಿಧವೆಯರಿಗೆ ಕೇವಲ ಶೇಕಡ 5ರಷ್ಟು ಮೀಸಲಾತಿ ನೀಡಲಾಗುತ್ತಿತ್ತು. ಇದೀಗ ವಿಧವೆಯರಿಗೆ ಯಾವುದೇ ನಿರ್ಬಂಧ ಇಲ್ಲದೇ ನೇರ ನೇಮಕಾತಿಗೆ ಅವಕಾಶ ನೀಡಲಾಗಿದೆ. ನೊಂದ ಮಹಿಳೆಯರಿಗೆ ಅನುಕೂಲ ಮಾಡುವ ಸಲುವಾಗಿ ಈ ನಿರ್ಧಾರ ಕೈಗೊಂಡಿರುವೆ ಎಂದು ಸಚಿವರು ಹೇಳಿದರು.
ವೈಯಕ್ತಿಕ ಕೆಲಸವಿದ್ದರೂ ಮಾಡಿಸಿಕೊಡುವೆ
ಇಲಾಖೆಯ ನೌಕರರ ವೈಯಕ್ತಿಕ ಹಾಗೂ ಸಂಬಂಧಿಕರ ಕೆಲಸ ಕಾರ್ಯಗಳನ್ನು ನಾನು ಮಾಡಿಕೊಡುವೆ. ಅದು ಗ್ರಾಮ ಪಂಚಾಯಿತಿಯಿಂದ ಹಿಡಿದು ಜಿಲ್ಲಾಧಿಕಾರಿಗಳ ಕಚೇರಿಯೇ ಆಗಿರಲಿ. ಅದನ್ನು ಮಾಡಿಕೊಡುವ ಜವಾಬ್ದಾರಿ ನನ್ನದು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಎಂದರೆ ನಂಬರ್ 12, 14ನೇ ಸ್ಥಾನ ಎನ್ನುವ ಮಾತಿತ್ತು. ನಾನು ನಮ್ಮ ಇಲಾಖೆಯನ್ನು ಉತ್ತಮ ಸ್ಥಾನಕ್ಕೇರಿಸುವ ಕೆಲಸ ಮಾಡುತ್ತಿದ್ದೇನೆ. ಈಗ ಇಲಾಖೆಗೆ ಎಲ್ಲಿಲ್ಲದ ಮಹತ್ವ ಬಂದಿದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕಕರ್ ಹೇಳಿದರು.
ನೌಕರರ ಮೇಲಿನ ದೌರ್ಜನ್ಯ ಸಹಿಸುವುದಿಲ್ಲ
ಇಲಾಖೆಯ ನೌಕರರ ಮೇಲೆ ದೌರ್ಜನ್ಯವಾದರೆ ನನಗೆ ನೇರವಾಗಿ ಫೋನ್ ಮಾಡಿ, ದೂರು ನೀಡಬಹುದು. ದೌರ್ಜನ್ಯ ಎಂಬುದನ್ನು ಇಲಾಖೆಯಿಂದ ಬೇರು ಸಮೇತ ಕಿತ್ತು ಹಾಕೋಣ. ವೃತ್ತಿ ಹಾಗೂ ವೈಯಕ್ತಿಕ ಕಷ್ಟದಲ್ಲೂ ನಿಮ್ಮ ಜತೆ ಇರುತ್ತೇನೆ ಎಂದ ಸಚಿವರು, ಇದರ ಜತೆಗೆ ಬಾಲ್ಯ ವಿವಾಹ ಮುಕ್ತ ಗ್ರಾಮ ಪಂಚಾಯಿತಿಗೆ ನಮ್ಮ ಇಲಾಖೆಯಿಂದ 25 ಸಾವಿರ ರೂಪಾಯಿ ಬಹುಮಾನವನ್ನು ಘೋಷಿಸಲಾಗಿದೆ ಎಂದರು.
ಮೊಮ್ಮಗನ ನಾಮಕರಣ ಸಮಾರಂಭಕ್ಕೆ ಆಹ್ವಾನ
ಮುಂದಿನ ತಿಂಗಳು ನಡೆಯಲಿರುವ ನನ್ನ ಮೊಮ್ಮಗನ ನಾಮಕಾರಣಕ್ಕೆ ಎಲ್ಲರೂ ತಪ್ಪದೇ ಬರಬೇಕು ಎಂದು ಸಚಿವರು, ಸಮಾರಂಭದಲ್ಲಿ ಹಾಜರಿದ್ದವರಿಗೆಲ್ಲ ಆಹ್ವಾನ ನೀಡಿದರು. ನಿಮ್ಮ ಸಹೋದರಿಯಾಗಿ ನನ್ನ ಮೊಮ್ಮಗನ ನಾಮಕರಣಕ್ಕೆ ಎಲ್ಲರನ್ನೂ ಆಹ್ವಾನಿಸುತ್ತೇನೆ, ಎಲ್ಲರೂ ತಪ್ಪದೇ ಆಗಮಿಸಬೇಕು ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮುಕ್ತ ಆಹ್ವಾನ ನೀಡಿದರು.
ಮೆರವಣಿಗೆಯಲ್ಲಿ ಕರೆದೊಯ್ದರು
ಸಮಾರಂಭಕ್ಕೆ ಆಗಮಿಸಿದ ಸಚಿವರನ್ನು ಆಯೋಜಕರು ಮೆರವಣಿಗೆ ಮೂಲಕ ವೇದಿಕೆಗೆ ಕರೆತಂದರು. ಜನರಿಂದ ತುಂಬಿ ತುಳುಕುತ್ತಿದ್ದ ಗಾಂಧಿ ಭವನ ಸಭಾಂಗಣಕ್ಕೆ ಸಚಿವರ ಆಗಮಿಸಿದ ಬೆನ್ನಲ್ಲೇ ಹರ್ಷೋದ್ಘಾರ ಮುಗಿಲುಮುಟ್ಟಿತು. ಇಡೀ ಕಾರ್ಯಕ್ರಮ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ದೊಡ್ಡ ಹಬ್ಬದ ರೀತಿಯಲ್ಲಿ ನಡೆಯಿತು. ವೇದಿಕೆ ಕಾರ್ಯಕ್ರಮದ ಬಳಿಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಅನ್ನಪ್ರಾಶನ, ಅಕ್ಷರಾಭ್ಯಾಸ, ಸೀಮಂತ, ಮಕ್ಕಳ ಫ್ಯಾಷನ್ ಶೋ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆದವು. ಜತೆಗೆ ಇಲಾಖೆಯ ವಿವಿಧ ಸಾಧನ ಸಲಕರಣೆಗಳನ್ನು ವಿತರಿಸಲಾಯಿತು.
ಸಚಿವರಿಂದ ಉತ್ತಮ ಕೆಲಸ: ಚನ್ನರಾಜ್ ಹಟ್ಟಿಹೊಳಿ
ಇದೇ ವೇಳೆ ಮಾತನಾಡಿದ ವಿಧಾನಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ, ಅಂಗನವಾಡಿಯಲ್ಲಿ ಕಲಿಯುತ್ತಿರುವ ಮಕ್ಕಳು ಖಾಸಗಿ ಶಾಲೆಗಳಿಗೆ ಹೋಗುವುದನ್ನು ತಪ್ಪಿಸುವ ಸಲುವಾಗಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಆರಂಭಿಸಲಾಗುತ್ತಿದೆ. ಇದರಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಪಾತ್ರ ಬಹಳ ದೊಡ್ಡದು ಎಂದರು.
ಈ ಸುದ್ದಿಯನ್ನೂ ಓದಿ | Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಸೆ.18ರಂದು ಕರೆಂಟ್ ಇರಲ್ಲ
ಸಚಿವರು ಕೇವಲ ಆದೇಶ ಮಾಡದೆ, ಕೇಂದ್ರ ಸರ್ಕಾರದ ಮನವೊಲಿಸಿ ಸುಮಾರು 17 ಸಾವಿರ ಸಕ್ಷಮ್ ಅಂಗನವಾಡಿ ಕೇಂದ್ರಗಳಿಗೆ ಅನುದಾನ ತಂದರು. ಕೇಂದ್ರದಿಂದ 50 ರಷ್ಟು ಅನುದಾನ, ಜತೆಗೆ ಕರ್ನಾಟಕ ಸರ್ಕಾರ ಕೂಡ ಉಳಿದ 50ರಷ್ಟು ಅನುದಾನ ನೀಡಿದೆ. ಪ್ರತಿಯೊಂದು ಹಂತದಲ್ಲೂ ಇಲಾಖೆಯ ಕೆಲಸಗಳನ್ನು ಸಚಿವರು ಉತ್ತಮವಾಗಿ ಮಾಡಿಕೊಂಡು ಬರುತ್ತಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ತಿಳಿಸಿದರು.