ಬೆಂಗಳೂರು: ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆ ಅರಿಶಿನ - ಕುಂಕುಮಕ್ಕೆ ಹೋಗುತ್ತಿದ್ದ ನವವಿವಾಹಿತೆ ಅಪಘಾತದಲ್ಲಿ ದಾರುಣವಾಗಿ ಮೃತಪಟ್ಟಿರುವ ಘಟನೆ (Road Accident) ಬೆಂಗಳೂರಿನಲ್ಲಿ ಶುಕ್ರವಾರ ನಡೆದಿದೆ. ಲಗ್ಗೆರೆ ಮೇಲ್ಸೇತುವೆ ಬಳಿ ನಡೆದ ಅಪಘಾತದಲ್ಲಿ ಗೀತಾ (23) ಎಂಬ ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೊಂದೆಡೆ ಚನ್ನಪಟ್ಟಣದಲ್ಲಿರುವ ಅಜ್ಜಿ ಕೂಡ ಮೊಮ್ಮಗಳ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಆಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಮೂರು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದ ಗೀತಾ ಹಾಗೂ ಸುನೀಲ್ ಮಲ್ಲೇಶ್ವರಂನಲ್ಲಿ ವಾಸವಿದ್ದರು. ಶುಕ್ರವಾರ ವರಮಹಾಲಕ್ಷ್ಮಿ ಹಬ್ಬವಿದ್ದ ಕಾರಣ ಸುನೀಲ್ ಸಹೋದರಿಯ ಮನೆಗೆ ಅರಿಶಿನ - ಕುಂಕುಮಕ್ಕೆಂದು ಗೀತಾ ಅವರನ್ನು ಆಹ್ವಾನಿಸಲಾಗಿತ್ತು. ಲಗ್ಗೆರೆ ಮೇಲ್ಸೇತುವೆ ಬಳಿ ದಂಪತಿ ತೆರಳುತ್ತಿದ್ದ ಬೈಕ್‌ಗೆ ಲಾರಿಯೊಂದು ಡಿಕ್ಕಿಯಾದ ಪರಿಣಾಮ ತಲೆಗೆ ಗಂಭೀರವಾಗಿ ಗಾಯಗೊಂಡು ಗೀತಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದ ಸ್ಥಳದಲ್ಲಿ ಪತಿ ಸುನೀಲ್ ಅವರ ರೋದನೆ ಮನಕಲುಕುವಂತಿತ್ತು.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆಯಲ್ಲಿ ಸುನೀಲ್ ಅವರಿಗೂ ತೀವ್ರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ರಾಜಾಜಿನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಲಾರಿ ಚಾಲಕ ಸುರೇಶ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Murder Case: ಮದ್ದೂರಿನಲ್ಲಿ ರೌಡಿ ಶೀಟರ್‌ನನ್ನು ಕೊಚ್ಚಿ ಕೊಲೆ