ಬೆಂಗಳೂರು: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (AICC president Mallikarjun kharge) ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಲ್ಲಿಕಾರ್ಜುನ್ ಖರ್ಗೆ ಅಸ್ವಸ್ಥರಾಗಿದ್ದು, ಅವರನ್ನು ಬೆಂಗಳೂರಿನ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಸಿರಾಟ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಬಳಿಕ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.
ಉತ್ತರ ಕರ್ನಾಟಕದಲ್ಲಿ ಪ್ರವಾಹ; ಬೆಳೆ ಹಾನಿ ಸಮೀಕ್ಷೆ ನಂತರ ಪರಿಹಾರ ವಿತರಣೆ ಎಂದ ಸಿಎಂ
ಕಲಬುರಗಿ: ವೈಮಾನಿಕ ಸಮೀಕ್ಷೆ ಮೂಲಕ ಪ್ರವಾಹ ಹಾನಿ (Karnataka Floods) ಪರಿಶೀಲಿಸಿದ ಬಳಿಕ ಸಿಎಂ ಸಿದ್ದರಾಮಯ್ಯ ಅವರು ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಾಲ್ಕು ಜಿಲ್ಲೆಗಳ ಶಾಸಕರು, ಸಚಿವರು ಮತ್ತು ಅಧಿಕಾರಿಗಳ ಜತೆ ಮಂಗಳವಾರ ಸಭೆಯ ನಡೆಸಿದರು. ಈ ವೇಳೆ ಮಾತನಾಡಿದ ಸಿಎಂ, ಪ್ರವಾಹ ಇಳಿಕೆಯಾದ ಬಳಿಕ ವೈಜ್ಞಾನಿಕ ಜಂಟಿ ಸಮೀಕ್ಷೆ ನಡೆಸಿ ತುರ್ತಾಗಿ ಪರಿಹಾರ ನೀಡಲಾಗುತ್ತದೆ ಎಂದು ಭರವಸೆ ತಿಳಿಸಿದರು.
ಸೆಪ್ಟೆಂಬರ್ ಮೊದಲ ವಾರದವರೆಗೂ ಆಗಿರುವ ಬೆಳೆ ಹಾನಿ ಬಗ್ಗೆ ಜಂಟಿ ಸಮೀಕ್ಷೆ ಮುಗಿದು ಪರಿಹಾರ ವಿತರಣೆ ಆಗುವ ಸಿದ್ಧತೆಯಲ್ಲಿದ್ದಾಗ ಎರಡನೇ ಸುತ್ತಿನ ಬೆಳೆ ಹಾನಿ ಆಗಿದೆ. ಹೀಗಾಗಿ ಸೆಪ್ಟೆಂಬರ್ ಮೊದಲ ವಾರದ ಬಳಿಕವೂ ಆಗಿರುವ ಬೆಳೆ ಹಾನಿಯ ಸಮೀಕ್ಷೆಯನ್ನೂ ಮುಗಿಸಿ ಎಲ್ಲರಿಗೂ ಒಟ್ಟಿಗೇ ಪರಿಹಾರ ಕೊಟ್ಟರೆ ಒಳ್ಳೆಯದು ಎನ್ನುವ ಅಭಿಪ್ರಾಯಕ್ಕೆ ಬಂದಿದ್ದೇವೆ. ಇಲ್ಲದಿದ್ದರೆ ಕೆಲವರಿಗೆ ಮಾತ್ರ ಪರಿಹಾರ ಬಂದಿದೆ, ನಮಗೆ ಬಂದಿಲ್ಲ ಎನ್ನುವ ಗೊಂದಲ, ಅನುಮಾನಗಳು ಶುರುವಾಗಬಹುದು. ಈ ಕಾರಣಕ್ಕೇ ಎಲ್ಲರಿಗೂ ಒಟ್ಟಿಗೇ ಪರಿಹಾರ ಒದಗಿಸುವುದು ಸೂಕ್ತವಾಗಿದೆ.
ಸದ್ಯ ಜಮೀನಿಗೆ ಕಾಲಿಡುವ ಪರಿಸ್ಥಿತಿ ಇಲ್ಲ. ಪ್ರವಾಹ ಇಳಿಕೆಯಾದ ಬಳಿಕ ವೈಜ್ಞಾನಿಕ ಜಂಟಿ ಸಮೀಕ್ಷೆ ನಡೆಸಿ ತುರ್ತಾಗಿ ಪರಿಹಾರ ಒದಗಿಸಲು ಸರ್ಕಾರ ತುದಿಗಾಲಲ್ಲಿ ಇದೆ. ಇದಕ್ಕೆ ಸಮೀಕ್ಷೆಯ ಅಗತ್ಯವಿದೆ. ಅಕ್ಕ ಪಕ್ಕದ ಪ್ರವಾಹ ಇಲ್ಲದ ಜಿಲ್ಲೆಗಳಿಂದ ಕೃಷಿ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಪ್ರವಾಹ ಪೀಡಿತ ಪ್ರದೇಶಗಳಿಗೆ ನಿಯೋಜಿಸುವ ಬಗ್ಗೆ ಯೂ ಸಭೆಯಲ್ಲಿ ತೀರ್ಮಾನಿಸಲಾಯಿತು.
ಸದ್ಯ ಜನ, ಜನವಾರು ಪ್ರಾಣ ಹಾನಿ ಬಗ್ಗೆ ಸಮೀಕ್ಷೆ ಸಿಕ್ಕಿದೆ. ಆದರೆ ಪೂರ್ಣ ಸಮೀಕ್ಷೆ ಆಗಿಲ್ಲದ ಕಾರಣದಿಂದ ಮನೆಗಳ ಹಾನಿ ಬಗ್ಗೆ ಪೂರ್ಣ ವರದಿ ಇಲ್ಲ. ಸಮೀಕ್ಷೆ ಬಳಿಕ ಸರಿಯಾದ ಲೆಕ್ಕ ಸಿಗುತ್ತದೆ. ಆಗ ಎಲ್ಲಾ ಸಂತ್ರಸ್ಥರಿಗೂ ಪರಿಹಾರ ನೀಡಲು ಅನುಕೂಲ ಆಗುತ್ತದೆ ಎಂದು ಸಿಎಂ ಹೇಳಿದರು.