ಧರ್ಮಸ್ಥಳ: ವಿಡಿಯೊ ಮಾಡಲು ಹೋಗಿದ್ದ ನಾಲ್ವರು ಯೂಟ್ಯೂಬರ್‌ಗಳ ಮೇಲೆ ಹಲ್ಲೆ ನಡೆಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ ನಡೆದಿದೆ. ಇದರಿಂದ ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ಉಂಟಾಗಿದ್ದು, ಜನರನ್ನು ಚದುರಿಸಲು ಪೊಲೀಸರು ಲಘು ಲಾಠಿ ಚಾರ್ಜ್ ನಡೆಸಿದ್ದಾರೆ.
ಪ್ರತಿಷ್ಠಿತ ಕುಟುಂಬದ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಯೂಟ್ಯೂಬರ್‌ಗಳ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಯೂಟೂಬರ್‌ಗಳಾದ ಅಜಯ್, ಅಭಿಷೇಕ್, ಸಂತೋಷ್ ಸೇರಿ ನಾಲ್ವರ ಮೇಲೆ ಹಲ್ಲೆ ನಡೆದಿದ್ದು, ಕ್ಯಾಮೆರಾಗಳನ್ನು ಹಾಳು ಮಾಡಲಾಗಿದೆ.
ಸೌಜನ್ಯಾ ಮನೆಗೆ ಭೇಟಿ ನೀಡುವುದಾಗಿ ಬಿಗ್‌ಬಾಸ್ ಮಾಜಿ ಸ್ಪರ್ಧಿ ರಜತ್ ಕಿಶನ್ ತಿಳಿಸಿದ್ದರು. ಈ ಬಗ್ಗೆ ರಜತ್ ಅವರಿಂದ ಮಾಹಿತಿ ಪಡೆಯುತ್ತಿದ್ದ ವೇಳೆ ಯೂಟ್ಯೂಬರ್‌ಗಳ ಹಲ್ಲೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಧರ್ಮಸ್ಥಳದ ಪಾಂಗಳ ಎಂಬಲ್ಲಿ ಹಲ್ಲೆ ನಡೆಸಲಾಗಿದ್ದು, ಉದ್ವಿಗ್ನ ಸ್ಥಿತಿ ಉಂಟಾಗಿದೆ. ಯುವಕರನ್ನು ಚದುರಿಸಲು ಪೊಲೀಸರು ಹರಸಾಹಸ ನಡೆಸಿದ್ದಾರೆ. ಪರಿಸ್ಥಿತಿ ಕೈಮೀರಿದ್ದರಿಂದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಹಲ್ಲೆಗೊಳಗಾದ ಯೂಟ್ಯೂಬರ್ ವೊಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಸುದ್ದಿಯನ್ನೂ ಓದಿ | Dharmasthala Case: ಧರ್ಮಸ್ಥಳ ವಿರುದ್ಧ ಅಪಪ್ರಚಾರ ಮಾಡಿದವರ ಮೇಲೆ ಕ್ರಮ: ಗೃಹ ಸಚಿವ ಪರಮೇಶ್ವರ್ ಎಚ್ಚರಿಕೆ
ಯೂಟ್ಯೂಬರ್‌ಗಳ ಮೇಲೆ ಹಲ್ಲೆ ನಡೆಸಿರುವುದನ್ನು ವಿರೋಧಿಸಿ ಒಂದು ಗುಂಪು ಆಕ್ರೋಶ ವ್ಯಕ್ತಪಡಿಸಿದೆ. ಎರಡೂ ಕಡೆಯ ಯುವಕರ ನಡುವೆ ಕೈ ಕೈ ಮಿಲಾಯಸುವ ಹಂತ ತಲುಪಿದ್ದರಿಂದ ಪೊಲೀಸರು ಗುಂಪು ಚದುರಿಸಿದ್ದು, ಸ್ಥಳದಲ್ಲಿ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.