BBMP Budget 2025: ಬಿಬಿಎಂಪಿ ಬಜೆಟ್‌ನಲ್ಲಿ ʼಬ್ರ್ಯಾಂಡ್ ಬೆಂಗಳೂರಿಗೆʼ ಒತ್ತು; ಯಾವ ಕ್ಷೇತ್ರಕ್ಕೆ ಏನು ಕೊಡುಗೆ?
BBMP Budget 2025: ಬ್ರ‍್ಯಾಂಡ್ ಬೆಂಗಳೂರು ಪರಿಕಲ್ಪನೆಗೆ ಪೂರಕವಾಗಿ ಬೆಂಗಳೂರನ್ನು ವಿಶ್ವಮಟ್ಟದ ನಗರವನ್ನಾಗಿಸಲು ಹಲವು ಘೋಷಣೆ ಮಾಡಲಾಗಿದೆ. ಸುಗಮ ಸಂಚಾರ, ಸ್ವಚ್ಛತೆ, ಆರೋಗ್ಯ, ಜಲ ಸರಂಕ್ಷಣೆ, ಶಿಕ್ಷಣ ಸೇರಿ 8 ವಿಷಯಗಳಿಗೆ ಬಜೆಟ್‌ನಲ್ಲಿ ಒತ್ತು ನೀಡಲಾಗಿದೆ.


ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 2025-26ನೇ ಸಾಲಿನ ಬಜೆಟ್ ಅನ್ನು ನಗರದ ಟೌನ್ ಹಾಲ್‌ನಲ್ಲಿ ಆಡಳಿತಗಾರರಾದ ಎಸ್.ಆರ್ ಉಮಾಶಂಕರ್ ಅವರ ಅಧ್ಯಕ್ಷತೆಯಲ್ಲಿ ಹಣಕಾಸು ವಿಭಾಗದ ವಿಶೇಷ ಆಯುಕ್ತರಾದ ಡಾ. ಹರೀಶ್ ಕುಮಾರ್. ಕೆ ಅವರು ಮಂಡಿಸಿದರು. 19,930.64 ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಲಾಗಿದ್ದು, ʼಬ್ರ್ಯಾಂಡ್ ಬೆಂಗಳೂರುʼ ಪೂರಕವಾಗಿ ಸುಗಮ ಸಂಚಾರ, ಸ್ವಚ್ಛತೆ, ಆರೋಗ್ಯ, ಜಲ ಸರಂಕ್ಷಣೆ, ಶಿಕ್ಷಣ ಸೇರಿ 8 ಪರಿಕಲ್ಪನೆಗಳಿಗೆ ಬಜೆಟ್‌ನಲ್ಲಿ ಒತ್ತು ನೀಡಲಾಗಿದೆ.
2025-26ನೇ ವರ್ಷದಲ್ಲಿ ಪಾಲಿಕೆಯ ಆದಾಯವು ಪ್ರಾರಂಭಿಕ ಶಿಲ್ಕು ಸೇರಿ ಒಟ್ಟು ಸ್ವೀಕೃತಿ 19,930.64 ಕೋಟಿ ರೂ.ಗಳಷ್ಟು ಇದ್ದು, ಒಟ್ಟು ಖರ್ಚು 19,927.08 ಕೋಟಿ ರೂ. ಇರಲಿದೆ.
ಬ್ರ‍್ಯಾಂಡ್ ಬೆಂಗಳೂರು ಪರಿಕಲ್ಪನೆಗೆ ಪೂರಕವಾಗಿ ಬೆಂಗಳೂರನ್ನು ವಿಶ್ವಮಟ್ಟದ ನಗರವನ್ನಾಗಿಸಲು ಹಲವು ಘೋಷಣೆ ಮಾಡಲಾಗಿದೆ. ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆ ಅಡಿಯಲ್ಲಿ ಸುಗಮ ಸಂಚಾರ ಮುಕ್ತ, ಹಸಿರೀಕರಣ, ಟೆಕ್, ಶಿಕ್ಷಣ, ಆರೋಗ್ಯ, ನೀರಿನ ಸಂರಕ್ಷಣೆಗೆ ಸೇರಿ 8 ವಿಷಯಗಳಗೆ ಹೆಚ್ಚಿನ ಒತ್ತು ನೀಡಲಾಗಿದೆ.
ಯಾವ ಕ್ಷೇತ್ರಕ್ಕೆ ಎಷ್ಟು ಅನುದಾನ?
- ಘನತ್ಯಾಜ್ಯ ನಿರ್ವಹಣೆ ಯೋಜನೆಗಾಗಿ 1,400 ಕೋಟಿ ಮೀಸಲು ಇರಿಸಲಾಗಿದೆ. ತ್ಯಾಜ್ಯ ವಿಲೇವಾರಿ ಘಟಕ, ಒಣ ತ್ಯಾಜ್ಯ ನಿರ್ವಹಣಾ ಘಟಕ, ಮೆಕ್ಯಾನಿಕ್ ಸ್ವೀಪಿಂಗ್ ಯಂತ್ರಗಳು, ಇನ್ನಿತರ ಘನತ್ಯಾಜ್ಯ ನಿರ್ವಹಣೆ ಯೋಜನೆಗೆ ಅನುದಾನ ಮೀಸಲಿರಿಸಲಾಗಿದೆ.
- ಬೆಂಗಳೂರು ಶಿಕ್ಷಣ ಯೋಜನೆ ಅನುಷ್ಠಾನಗಳಿಗೆ 183 ಕೋಟಿ ಮೀಸಲಿಡಲಾಗಿದೆ. 15 ಶಾಲೆಗಳ ನವೀಕರಣ, 60 ಶಾಲೆಗಳ ಸ್ಮಾರ್ಟ್ ಬೋರ್ಡ್, ಶಾಲಾ ಕಟ್ಟಡಗಳ ನಿರ್ವಹಣೆಗೆ 23 ಕೋಟಿ, ಶಾಲಾ ಮೈದಾನ ಅಭಿವೃದ್ಧಿ ಕಾರ್ಯಗಳು ನಡೆಯಲಿವೆ.
- ಆರೋಗ್ಯ ಬೆಂಗಳೂರು ಯೋಜನೆಗೆ 413 ಕೋಟಿ ಅನುದಾನ ಕೊಟ್ಟಿದ್ದು, 19 ಹೊಸ ಆಸ್ಪತ್ರೆಗಳು, 26 ಹೊಸ ಡೆಂಟಲ್ ಆಸ್ಪತ್ರೆ, ಬೀದಿನಾಯಿಗಳ ನಿರ್ವಹಣೆಗೆ 60 ಕೋಟಿ ಅನುದಾನ ನೀಡಲಾಗಿದೆ.
- ಬೆಂಗಳೂರು ನಗರವನ್ನು ಸುಂದರೀಕರಿಸಲು, ಆಕರ್ಷಣೆ ಮಾಡಲು 50 ಕೋಟಿ, ಜಂಕ್ಷನ್ ಮತ್ತು ಸಾರ್ವಜನಿಕ ಸ್ಥಳಗಳ ಸುಂದರೀಕರಣಕ್ಕೆ 25 ಕೋಟಿ ಮೀಸಲು ಇಡಲಾಗಿದೆ.
- ಸ್ಕೈ ಡೆಕ್ ನಿರ್ಮಾಣಕ್ಕಾಗಿ 50 ಕೋಟಿ ಅನುದಾನ ನೀಡಲಾಗಿದೆ.
- ಬೆಂಗಳೂರು ಪ್ರವಾಹ ಪೀಡಿತ ಪ್ರದೇಶಗಳ ಅಭಿವೃದ್ಧಿಗೆ 247.25 ಕೋಟಿ ಮೀಸಲು ಇಡಲಾಗಿದೆ.
- 225 ವಾರ್ಡ್‌ಗಳ ಅಭಿವೃದ್ಧಿಗಾಗಿ ವಾರ್ಡ್‌ಗೆ ತಲಾ 2.50 ಕೋಟಿಯಂತೆ 675 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ.
- ಪ್ರೀಮಿಯರ್ ಎಫ್‌ಎಆರ್ ನೀತಿ ಜಾರಿ ಮಾಡಿದ್ದು, ಇದರಿಂದ 2 ಕೋಟಿ ಆದಾಯ ನೀರಿಕ್ಷೆ ಮಾಡಲಾಗಿದೆ.
- ಪಾಲಿಕೆ ಸಿಬ್ಬಂದಿ ವರ್ಗಗಳಿಗೆ ಕೌನ್ಸಿಲಿಂಗ್ ಮೂಲಕ ವರ್ಗಾವಣೆ ಅವಕಾಶ ಕೊಡಲಾಗಿದೆ.
- ಸಿಬ್ಬಂದಿ ಹಾಜರಾತಿ ಕಠಿಣಗೊಳಿಸಲು ಜಿಯೋ ಫೆನ್ಸಿಂಗ್ ವ್ಯವಸ್ಥೆ ಮಾಡಲಾಗಿದೆ.
- 12,692 ಪೌರಕಾರ್ಮಿಕರ ಕಾಯಂಗೊಳಿಸಿ 500 ಕೋಟಿ ಮೀಸಲು ಇರಿಸಲಾಗಿದೆ.
- 5,716 ಕೋಟಿ ಕಂದಾಯ ನಿರೀಕ್ಷೆ ಪಾಲಿಕೆ ವ್ಯಾಪ್ತಿಯ 20 ಲಕ್ಷ ಸ್ವತ್ತುಗಳ ಸರ್ವೇಗೆ ಪ್ರತ್ಯೇಕ ವಿಭಾಗ ಸ್ಥಾಪನೆ ಮಾಡಲಾಗುವುದು.
- ಅನಧಿಕೃತ ಜಾಹೀರಾತಿಗೆ ಬ್ರೇಕ್ ಹಾಕಲು ಹೊಸ ನಿಯಮ ಜಾರಿ ಮಾಡಿದ್ದು, ಇದರಿಂದ 750 ಕೋಟಿ ಆದಾಯ ನಿರೀಕ್ಷಿಸಲಾಗಿದೆ.
ಈ ಸುದ್ದಿಯನ್ನೂ ಓದಿ | Wheat stock: ಏ.1ರಿಂದ ಗೋಧಿ ದಾಸ್ತಾನು ಘೋಷಣೆ ಕಡ್ಡಾಯ: ರಾಜ್ಯ-ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರದ ಸೂಚನೆ