ಬೆಂಗಳೂರು: ಬೆಂಗಳೂರಿನ ಗಿರಿನಗರದ (Bengaluru News) ಶ್ರೀರಾಮಚಂದ್ರಾಪುರಮಠದ ಶಾಖಾಮಠದಲ್ಲಿ ಶ್ರೀರಾಮಚಂದ್ರಾಪುರಮಠದ ನೂತನ ಆಡಳಿತ ವ್ಯವಸ್ಥೆ ಶಾಸನತಂತ್ರದ ಕಾರ್ಯಾಗಾರ ಜರುಗಿತು. ಕಾರ್ಯಾಗಾರಕ್ಕೆ ಶ್ರೀಮಠದ ಸಮ್ಮುಖ ಸರ್ವಾಧಿಕಾರಿಗಳು ಹಾಗೂ ನಿವೃತ್ತ ರಾಜ್ಯ ಪೊಲೀಸ್ ಮಹಾನಿರ್ದೇಶಕ ತಿಮ್ಮಪ್ಪಯ್ಯ ಮಡಿಯಾಲ್ ಚಾಲನೆ ನೀಡಿದರು.
ಕಾರ್ಯಾಗಾರದಲ್ಲಿ ಶಾಸನತಂತ್ರದ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ ಮಾತನಾಡಿ, ಶ್ರೀಮಠವು ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಗಳ ದಿವ್ಯ ಮಾರ್ಗದರ್ಶನದಲ್ಲಿ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದು, ಅವುಗಳನ್ನು ಸೂಕ್ತ ರೀತಿಯಲ್ಲಿ ಮುನ್ನೆಡೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಬೃಹತ್ ಕಾರ್ಯಗಳನ್ನು ಯಶಸ್ವಿಯಾಗಿಸಲು ಬದ್ಧರಾಗಿ ಸೂಕ್ತ ಕಾರ್ಯತಂತ್ರಗಳೊಡಣೆ ಮುನ್ನಡೆಯೋಣ ಎಂದು ತಿಳಿಸಿದರು.
ಖ್ಯಾತ ಆಯುರ್ವೇದ ತಜ್ಞ ಡಾ. ಗಿರಿಧರ ಕಜೆ ಮಾತನಾಡಿ, ಯಾವುದೇ ಕಾರ್ಯ ಯಶಸ್ವಿಯಾಗಬೇಕಾದರೆ ಮೊದಲು ಸಮಸ್ಯೆಗಳನ್ನು ಪಟ್ಟಿ ಮಾಡಬೇಕು. ಬಳಿಕ ಅದನ್ನು ಹಂತಹಂತವಾಗಿ ಬಗೆಹರಿಸುವುದನ್ನು ರೂಢಿಸಿಕೊಂಡರೆ ಕಾರ್ಯ ಸಫಲ್ಯ ಸಾಧ್ಯ ಎಂದ ಅವರು, ಮಠದ ಆಡಳಿತ ವ್ಯವಸ್ಥೆಯಾದ ಶಾಸನತಂತ್ರವನ್ನು ಪರಿಣಾಮಕಾರಿಯಾಗಿ ಮುಂದೆ ಕೊಂಡೊಯ್ಯಲು ಮುಖ್ಯವಾಗಿ ಬೇಕಾಗಿರುವುದು ಪ್ರಾಶಸ್ತ್ಯ. ಯಾವ ಕೆಲಸಕ್ಕೆ ಯಾವಾಗ ಎಷ್ಟು ಪ್ರಾಮುಖ್ಯತೆ ನೀಡಬೇಕು ಎನ್ನುವುದು ತಿಳಿಯುವುದು ಅತ್ಯಗತ್ಯ ಎಂದರು.
ಯೋಜನಾ ಖಂಡ ಸಂಯೋಜಕ ವಿದ್ವಾನ್ ಜಗದೀಶ ಶರ್ಮಾ ಸಂಪ ಮಾತನಾಡಿ, ಕಾರ್ಯಕ್ಕೆ ತೊಡಗುವ ಮೊದಲು ಕಾರ್ಯ ಏಕೆ? ಏನು? ಮತ್ತು ಹೇಗೆ ಎನ್ನುವುದನ್ನು ಸ್ಪಷ್ಟಪಡಿಸಿಕೊಳ್ಳಬೇಕು. ಅದಕ್ಕಾಗಿ ಈ ಕಾರ್ಯಾಗಾರವನ್ನು ಏರ್ಪಡಿಸಲಾಗಿದ್ದು, ಶಾಸನತಂತ್ರದ ವಿವಿಧ ಖಂಡಗಳ ಪ್ರಮುಖರು ತಮ್ಮ ವ್ಯಾಪ್ತಿಯ ಕಾರ್ಯಯೋಜನೆಗಳನ್ನು ಸಮರ್ಪಕವಾಗಿ ಯೋಜಿಸುವ ಮೂಲಕ ಶ್ರೀಮಠದ ಸಾಮಾಜಿಕ ಕಾರ್ಯಗಳನ್ನು ಹೆಚ್ಚಿನ ಜನರಿಗೆ ತಲುಪಿಸಬೇಕು ಎಂದರು.
ಈ ಸುದ್ದಿಯನ್ನೂ ಓದಿ | Intelligence Bureau Recruitment 2025: ಗುಪ್ತಚರ ಇಲಾಖೆಯಲ್ಲಿದೆ ಬರೋಬ್ಬರಿ 3,717 ಹುದ್ದೆ; ಹೀಗೆ ಅಪ್ಲೈ ಮಾಡಿ
ಶಾಸನತಂತ್ರದ ವಿವಿಧ ಖಂಡಗಳ ಬಗ್ಗೆ ಗೋಷ್ಠಿಗಳು, ವಿಶ್ಲೇಷಣೆ, ಸಂವಾದ, ಹಾಗೂ ಮಾರ್ಗದರ್ಶನದ ಕಾರ್ಯಕ್ರಮಗಳು ಜರುಗಿದವು. ಶ್ರೀಮಠದ ಪ್ರಶಾಸನಾಧಿಕಾರಿ ಸಂತೋಷ ಹೆಗಡೆ, ವಿತ್ತಾಧ್ಯಕ್ಷ ಗಣೇಶ ಜೆಡ್ಡಿನಮನೆ, ಶಾಸನ ತಂತ್ರದ ಕಾರ್ಯದರ್ಶಿ ಕೃಷ್ಣಪ್ರಸಾದ ಎಡಪ್ಪಾಡಿ ಹಾಗೂ ಕಾರ್ಯಾಲಯ ಕಾರ್ಯದರ್ಶಿ ಅನೂರಾಧಾ ಪಾರ್ವತಿ, ನೂತನ ಶಾಸನತಂತ್ರದ ಖಂಡಗಳಾದ ಶ್ರೀಚರಣ ಖಂಡ, ಶ್ರೀಸಂದೇಶ ಖಂಡ, ಧರ್ಮಕರ್ಮ ಖಂಡ, ಸುಪ್ರಸಾರ ಖಂಡ, ಉತ್ಸವ ಖಂಡ, ಪ್ರಕಲ್ಪ ಖಂಡ, ಸೇವಾ ಖಂಡ, ಯೋಜನಾ ಖಂಡ, ಸುಶಾಸನ ಖಂಡ, ಸಂಘಟನಾ ಖಂಡ, ಸಂಪನ್ಮೂಲ ಖಂಡ, ಸಂಶೋಧನಾ ಖಂಡ, ಸುರಕ್ಷಾ ಖಂಡ ಹಾಗೂ ಲೋಕಸಂಪರ್ಕ ಖಂಡಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.