ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Separate Lingayat Religion: ಲಿಂಗಾಯತ ಧರ್ಮಕ್ಕೆ ಮಾನ್ಯತೆ ಸಿಕ್ಕೇ ಸಿಗುತ್ತದೆ: ಭಾಲ್ಕಿ ಶ್ರೀ

Bhalki Seer: ಬೆಂಗಳೂರು ಅರಮನೆ ಮೈದಾನದಲ್ಲಿ ಭಾನುವಾರ ಏರ್ಪಡಿಸಿದ್ದ ಬಸವ ಸಂಸ್ಕೃತಿ ಅಭಿಯಾನದ ಬೃಹತ್‌ ಸಮಾರೋಪ ಸಮಾರಂಭದಲ್ಲಿ ಅವರು ಭಾಲ್ಕಿ ಹಿರೇಮಠದ ಶ್ರೀ ಬಸವಲಿಂಗ ಪಟ್ಟದ್ದೇವರು ಅವರು ಮಾತನಾಡಿದ್ದಾರೆ. ಕೇಂದ್ರದಿಂದಲೂ ಸಹ ಲಿಂಗಾಯತ ಧರ್ಮಕ್ಕೆ ಈ ಒಪ್ಪಿಗೆಯ ಮುದ್ರೆ ಒಂದಿಲ್ಲೊಂದು ದಿನ ಸಿಕ್ಕೇ ಸಿಗುತ್ತದೆ. ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಒತ್ತಾಸೆಯಿಂದಾಗಿ ರಾಜ್ಯದಲ್ಲಿ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆಯ ಮುದ್ರೆ ಸಿಕ್ಕಿದೆ. ಈಗ ಕೇಂದ್ರ ಸರಕಾರದ ಮಟ್ಟದಲ್ಲಿ ಈ ಕೆಲಸ ಆಗಬೇಕಾಗಿದೆ. ಅಲ್ಲಿಂದಲೂ ಸಹ ಲಿಂಗಾಯತ ಧರ್ಮಕ್ಕೆ (Separate Lingayat Religion) ಈ ಒಪ್ಪಿಗೆಯ ಮುದ್ರೆ ಒಂದಿಲ್ಲೊಂದು ದಿನ ಸಿಕ್ಕೇ ಸಿಗುತ್ತದೆ. ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಲಿಂಗಾಯತ ಮಠಾಧೀಶರ ಒಕ್ಕೂಟದ ಅಧ್ಯಕ್ಷರೂ ಆಗಿರುವ ಭಾಲ್ಕಿ ಹಿರೇಮಠದ ಶ್ರೀ ಬಸವಲಿಂಗ ಪಟ್ಟದ್ದೇವರು ಹೇಳಿದ್ದಾರೆ.

ಇಲ್ಲಿನ ಅರಮನೆ ಮೈದಾನದಲ್ಲಿ ಭಾನುವಾರ ಏರ್ಪಡಿಸಿದ್ದ ಬಸವ ಸಂಸ್ಕೃತಿ ಅಭಿಯಾನದ ಬೃಹತ್‌ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಹನುಮಂತನ ಎದೆಯಲ್ಲಿ ರಾಮನಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಎದೆಯಲ್ಲಿ ಬಸವಣ್ಣನಿದ್ದಾನೆ. ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಹತ್ತಾರು ಬಸವಪರ ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಬೀದರ್‌ ಜಿಲ್ಲೆಯ ಬಸವಕಲ್ಯಾಣದಲ್ಲಿ ವಚನ ವಿಶ್ವವಿದ್ಯಾಲಯ ಸ್ಥಾಪನೆಯ ಕೆಲಸ ಬಾಕಿ ಉಳಿದಿದೆ. ಮುಖ್ಯಮಂತ್ರಿಗಳು ಇದೊಂದು ಕೆಲಸವನ್ನು ಆಗುಮಾಡಬೇಕು. ಅಲ್ಲಿ ವಚನಸಾಹಿತ್ಯ ಕುರಿತು ಸಂಶೋಧನೆ ಮತ್ತು ಚಿಂತನೆಗಳು ನಿರಂತರವಾಗಿ ನಡೆಯಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.

ಲಿಂಗಾಯತರು ಸಿಎಂ ಜತೆ ನಿಲ್ಲಬೇಕು: ಎಂ.ಬಿ. ಪಾಟೀಲ್

ಸಚಿವ ಮತ್ತು ಸಮುದಾಯದ ಮುಖಂಡ ಎಂ.ಬಿ. ಪಾಟೀಲ್‌ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮ್ಮ ಸಮುದಾಯಕ್ಕೆ ಲಿಂಗಾಯತ ನಾಯಕರಿಗಿಂತ ಹೆಚ್ಚು ಕೆಲಸಗಳನ್ನು ಮಾಡಿಕೊಟ್ಟಿದ್ದಾರೆ. ಸರಕಾರಿ ಕಚೇರಿಗಳಲ್ಲಿ ಬಸವಣ್ಣನ ಫೋಟೋ, ಮಹಿಳಾ ವಿ.ವಿ.ಗೆ ಅಕ್ಕಮಹಾದೇವಿಯ ಹೆಸರು, ಬಸವಣ್ಣನನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದು ಇದಕ್ಕೆ ಅತ್ಯುತ್ತಮ ಉದಾಹರಣೆಗಳಾಗಿವೆ. ಇಂತಹ ಸಿದ್ದರಾಮಯ್ಯನವರ ಋಣ ಲಿಂಗಾಯತರ ಮೇಲಿದೆ. ಹೀಗಾಗಿ, ಲಿಂಗಾಯತ ಸಮುದಾಯವೂ ಅವರ ಜೊತೆಗೆ ನಿಲ್ಲಬೇಕಾಗಿದೆ ಎಂದಿದ್ದಾರೆ.

ಲಿಂಗಾಯತರು ಯಾರ ವಿರೋಧಿಗಳೂ ಅಲ್ಲ. ನಮ್ಮದೇನಿದ್ದರೂ ಸಕಾರಾತ್ಮಕ ಚಿಂತನೆಯಾಗಿದೆ. ಲಿಂಗಾಯತ ಧರ್ಮ ಹೆಚ್ಚುಹೆಚ್ಚು ಪ್ರಸಾರವಾಗಿ, ಬಸವ ಭಾರತವಾಗಬೇಕು. ಮುಂದಿನ ದಿನಗಳಲ್ಲಿ ವಚನ ವಿಶ್ವವಿದ್ಯಾಲಯದ ಕನಸು ನನಸಾಗಲಿದೆ. ಭೌಗೋಳಿಕವಾಗಿ ನಾವು ಹಿಂದೂಗಳೇ ಆಗಿದ್ದೇವೆ. ಆದರೆ, ಧರ್ಮದಿಂದ ಲಿಂಗಾಯತರು ಎಂದು ಅವರು ಪ್ರತಿಪಾದಿಸಿದರು.

12ನೇ ಶತಮಾನದಲ್ಲಿ ಬಸವಣ್ಣ ಮೌಢ್ಯ, ಅಸ್ಪೃಶ್ಯತೆ, ಅಸಮಾನತೆಗಳ ವಿರುದ್ಧವಾಗಿ ಹೊಸ ಧರ್ಮವನ್ನು ಹುಟ್ಟು ಹಾಕಿದರು. ಆದರೆ, ಲಿಂಗಾಯತರಲ್ಲೂ ಜಾತಿಪದ್ಧತಿ ನುಸುಳಿಕೊಂಡಿದೆ. ನಾವು ಇನ್ನು ಮುಂದಾದರೂ ನಮ್ಮೊಳಗಿರುವ ದುರ್ಬಲ ಒಳಪಂಗಡಗಳನ್ನು ಮೇಲಕ್ಕೆತ್ತುವ ಕೆಲಸ ಮಾಡಬೇಕಾಗಿದೆ. ಇದಕ್ಕಾಗಿ ಲಿಂಗಾಯತರು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಇಲ್ಲದಿದ್ದರೆ ಬಸವಣ್ಣನಿಗೆ ಅಪಚಾರ ಎಸಗಿದಂತೆ ಆಗುತ್ತದೆ. ಅವರ ತತ್ತ್ವಗಳನ್ನು ಆಚರಿಸುವುದೇ ನಿಜವಾದ ಲಿಂಗಾಯತ ಧರ್ಮ. ಈಗ ಒಂಬತ್ತು ಶತಮಾನಗಳ ನಂತರ ಬಸವ ಸಂಸ್ಕೃತಿಯು ಪುನಃ ಮುನ್ನೆಲೆಗೆ ಬಂದಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಚಿತ್ರದುರ್ಗದ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ, ʻಲಿಂಗಾಯತರು ರಾಜ್ಯದಲ್ಲಿ ತಮ್ಮ ಜನಸಂಖ್ಯೆ ಕಡಿಮೆಯಾಗಿದೆ ಎಂದು ಆತಂಕದ ಮಾತುಗಳನ್ನಾಡುತ್ತಿದ್ದಾರೆ. ಬಸವಣ್ಣ ಹೇಳಿದಂತೆ ಲಿಂಗಾಯತರು ದಲಿತ ಸಮುದಾಯಗಳ ಜನರನ್ನು ಬರಮಾಡಿಕೊಂಡು, ಲಿಂಗಧಾರಣೆ ಮಾಡಿಸಿದ್ದರೆ ಇಂದು ಅವರ ಸಂಖ್ಯೆ ಶೇಕಡ 17ರ ಬದಲಿಗೆ 87ರಷ್ಟಿರುತ್ತಿತ್ತು. ಈ ಕೆಲಸವನ್ನು ಯಾರೂ ಮಾಡಲಿಲ್ಲ. ಆದರೆ, ದಲಿತ ಮತ್ತು ಹಿಂದುಳಿದ ಸಮುದಾಯಗಳಿಗೆ ಸೇರಿದವರೆಲ್ಲ ನಿಜವಾದ ಅರ್ಥದಲ್ಲಿ ಬಸವಣ್ಣನ ಮಕ್ಕಳೇ ಆಗಿದ್ದೇವೆ. ಲಿಂಗಾಯತ ಎಂದರೆ ಸಂಕುಚಿತವಾದ ಜಾತಿಯಲ್ಲ; ಅದೊಂದು ಸಂಸ್ಕೃತಿ ಮತ್ತು ಸಂಸ್ಕಾರʼ ಎಂದು ಬಣ್ಣಿಸಿದ್ದಾರೆ.

ಕೂಡಲಸಂಗಮದ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ʻಹಳೇ ಮೈಸೂರು ಭಾಗದಲ್ಲಿ ಬಸವಣ್ಣನವರ ಪ್ರಚಾರ ಹೆಚ್ಚಾಗಬೇಕಾಗಿದೆ. ಹೀಗಾಗಿ ಬೆಂಗಳೂರಿನ ಮೆಟ್ರೋ ರೈಲು ವ್ಯವಸ್ಥೆಗೆ ಬಸವಣ್ಣನ ಹೆಸರಿಡಬೇಕು. ಹಾಗೆಯೇ, ಕಲಬುರಗಿಯಲ್ಲಿರುವ ಕೇಂದ್ರೀಯ ವಿವಿ ಮತ್ತು ರಾಜ್ಯ ಸರಕಾರದ ವಿಶ್ವವಿದ್ಯಾಲಯ ಎರಡಕ್ಕೂ ಬಸವೇಶ್ವರರ ಹೆಸರಿಡಬೇಕು. ಜೊತೆಗೆ ಕೇಂದ್ರ ಸರಕಾರವು ಅವರನ್ನು ʻಕಾಯಕ ತತ್ತ್ವ ಪಿತಾಮಹʼ ಎಂದು ಘೋಷಿಸುವಂತೆ ಶಿಫಾರಸು ಮಾಡಬೇಕು. ಏಕೆಂದರೆ, ಮನುಷ್ಯನಿಗೆ ಎಲ್ಲಕ್ಕಿಂತ ಅನ್ನ ಮುಖ್ಯ ಎಂದು ಸಾರಿದ ಮೊದಲಿಗ ಬಸವಣ್ಣನಾಗಿದ್ದಾರೆʼ ಎಂದು ಆಗ್ರಹಿಸಿದರು.

ಈ ಸುದ್ದಿಯನ್ನೂ ಓದಿ | Basava Samskruti Abhiyana: ನಮ್ಮ ಮೆಟ್ರೋಗೆ ʼಬಸವ ಮೆಟ್ರೋʼ ಎಂದು ಹೆಸರಿಡಲು ಕೇಂದ್ರಕ್ಕೆ ಶಿಫಾರಸು: ಸಿಎಂ

ಕಾರ್ಯಕ್ರಮದಲ್ಲಿ 400ಕ್ಕೂ ಹೆಚ್ಚು ಸ್ವಾಮೀಜಿಗಳು, ಸಚಿವರಾದ ಕೆ ಎಚ್‌ ಮುನಿಯಪ್ಪ, ಶರಣಪ್ರಕಾಶ ಪಾಟೀಲ್‌, ಲಕ್ಷ್ಮಿ ಹೆಬ್ಬಾಳ್ಕರ್‌, ಮುಖಂಡರಾದ ಬಿ ಆರ್‌ ಪಾಟೀಲ್‌, ನಸೀರ್‌ ಅಹಮದ್‌, ಅಶೋಕ್‌ ಖೇಣಿ, ಸಾಹಿತಿ ಗೊ ರು ಚನ್ನಬಸಪ್ಪ, ಜಾಗತಿಕ ಲಿಂಗಾಯತ ಮಹಾಸಭಾದ ಶಿವಾನಂದ ಜಾಮದಾರ್‌ ಮುಂತಾದವರಿದ್ದರು.

image

ಲಿಂಗಾಯತ ಧರ್ಮಕ್ಕಾಗಿ ಹೋರಾಟ ನಡೆಯಬೇಕು. ನಾವು ನಮ್ಮ ಶತ್ರುಗಳನ್ನೇ ಹೊತ್ತು ಮೆರೆಸಬಾರದು. ಶಾಸಕಾಂಗದಲ್ಲಿ ಬಸವ ತತ್ತ್ವ ಪ್ರತಿಫಲಿಸಬೇಕು. ಬಸವ ತತ್ವವೇ ಬೇರೆ, ಧರ್ಮವೇ ಬೇರೆ. ಬಸವ ಧರ್ಮವು ಇಂದು ಇಡೀ ಪ್ರಪಂಚಕ್ಕೆ ಬೇಕಾಗಿದೆ.

-ನ್ಯಾ. ಎಚ್‌ ನಾಗಮೋಹನ್‌ ದಾಸ್‌
image

12ನೇ ಶತಮಾನದಲ್ಲಿ ಹುಟ್ಟಿಕೊಂಡ ಲಿಂಗಾಯತ ಧರ್ಮ ಆಮೇಲೆ 200ವರ್ಷ ಅಜ್ಞಾತವಾಗಿತ್ತು. ಬಳಿಕ ವಿಜಯನಗರ ಅರಸರ ಕಾಲದಲ್ಲಿ ರಾಜಾಶ್ರಯ ಸಿಕ್ಕಿ ಬೆಳೆಯಿತು. ಈಗ ನಮ್ಮಲ್ಲಿ ಸಾವಿರಕ್ಕೂ ಹೆಚ್ಚು ಮಠಗಳು ಸಕ್ರಿಯವಾಗಿವೆ. ಆದರೂ 300ಕ್ಕೂ ಹೆಚ್ಚು ವಿರಕ್ತಮಠಗಳು ನಮ್ಮಿಂದ ಹೊರಗಿವೆ. ಅವರೂ ಸಹ ತಕರಾರು ಮಾಡದೆ ಲಿಂಗಾಯತ ಧರ್ಮದ ಭಾಗವಾಗಬೇಕು.

-ಶಿವಾನಂದ ಜಾಮದಾರ್‌
image

ಸಿದ್ದರಾಮಯ್ಯನವರು 21ನೇ ಶತಮಾನದಲ್ಲಿ 12ನೇ ಶತಮಾನದ ಗತವೈಭವವನ್ನು ಮರುಸೃಷ್ಟಿಸಿದ್ದಾರೆ. ಉದ್ಯೋಗವನ್ನೇ ದೇವರೆಂದ ಮೊದಲಿಗನೆಂದರೆ ಬಸವಣ್ಣ. ಶರಣಧರ್ಮವು ಕನ್ನಡ ನಾಡಿನ ಧರ್ಮವಾಗಿದೆ.

-ಮಾತೆ ಗಂಗಾದೇವಿ