ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BY Vijayendra: ಹಿಂದೂ ಸಮಾಜ ಒಡೆಯುವ ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ ಸಿಎಂ ಸಿದ್ದರಾಮಯ್ಯ: ವಿಜಯೇಂದ್ರ

BY Vijayendra: ರಾಜ್ಯದ ಮುಖ್ಯಮಂತ್ರಿಗಳಾಗಿ ಇವತ್ತು ಎಲ್ಲ ಸ್ಥಾನಕ್ಕೆ ನ್ಯಾಯ ಕೊಡಬೇಕಾದ ಸ್ಥಾನದಲ್ಲಿರುವ ಸಿದ್ದರಾಮಯ್ಯ ಅವರು ಹಿಂದೂ ಸಮಾಜವನ್ನು ಒಡೆಯುವ ದುಸ್ಸಾಹಸಕ್ಕೆ ಕೈಹಾಕಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಟೀಕಿಸಿದ್ದಾರೆ.

ಬೆಂಗಳೂರು: ಗುಲ್ಬರ್ಗಾ, ಯಾದಗಿರಿ ಭಾಗದ ಜಿಲ್ಲೆಗಳಲ್ಲಿ ಅತಿವೃಷ್ಟಿಯಿಂದ ಹತ್ತಿ, ತೊಗರಿ ಬೆಳೆಯುವ ರೈತರು, ಕೃಷಿಕರು ತೊಂದರೆಯಲ್ಲಿದ್ದಾರೆ. ಸಂಕಷ್ಟದಲ್ಲಿರುವ ರೈತರ ಬೆಳೆ ನಷ್ಟದ ಸಮೀಕ್ಷೆ ಮಾಡಿ ತುರ್ತಾಗಿ ಪರಿಹಾರ ಕೊಡಬೇಕು ಎಂದು ಮುಖ್ಯಮಂತ್ರಿಗಳಿಗೆ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ (BY Vijayendra) ಒತ್ತಾಯಿಸಿದ್ದಾರೆ. ಮಾಧ್ಯಮಗಳೊಂದಿಗೆ ಇಂದು ಮಾತನಾಡಿದ ಅವರು, ಜಾತಿ ಜನಗಣತಿ ಸಿದ್ದರಾಮಯ್ಯ ಅವರಿಗೆ ಹೊಸದೇನೂ ಅಲ್ಲ; ಒಡೆದಾಳುವ ನೀತಿಯನ್ನು ಅನುಸರಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕುರ್ಚಿಗೆ ಕಂಟಕ ಬಂದಾಗ ಜಾತಿ, ಜಾತಿ ಜನಗಣತಿ, ಕಾಂತರಾಜು ವರದಿ ಕುರಿತು ಮಾತನಾಡುತ್ತಾರೆ ಎಂದು ಟೀಕಿಸಿದರು.

ರಾಜ್ಯದ ಮುಖ್ಯಮಂತ್ರಿಗಳಾಗಿ ಇವತ್ತು ಎಲ್ಲ ಸ್ಥಾನಕ್ಕೆ ನ್ಯಾಯ ಕೊಡಬೇಕಾದ ಸ್ಥಾನದಲ್ಲಿರುವ ಸಿದ್ದರಾಮಯ್ಯ ಅವರು, ಹಿಂದೂ ಸಮಾಜವನ್ನು ಒಡೆಯುವ ದುಸ್ಸಾಹಸಕ್ಕೆ ಕೈಹಾಕಿದ್ದಾರೆ ಎಂದು ಟೀಕಿಸಿದ ಅವರು, ವೀರಶೈವ ಲಿಂಗಾಯತಾದಿಯಾಗಿ ಇತರ ಸಮಾಜಗಳನ್ನು ಒಡೆಯುವ ಕೆಲಸ ಮಾಡುತ್ತಿರುವುದು ನಾಡಿನ ದುರಂತ. ಯಾವತ್ತೂ ಈ ನಾಡಿನ ಜನರು ಕ್ಷಮಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಹಿಂದೆ ವೀರಶೈವ ಲಿಂಗಾಯತ ಧರ್ಮ ಎಂದು ಬೆಂಕಿ ಹಚ್ಚುವ ಕೆಲಸ ಮಾಡಿದ್ದರು. ಈಗ ಜಾತಿ ಜನಗಣತಿ ಮೂಲಕ ಸಮಾಜಗಳ ಮಧ್ಯೆ ಬೆಂಕಿ ಹಚ್ಚುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಒಂದೆಡೆ ರಾಜ್ಯದಲ್ಲಿ ಅಭಿವೃದ್ಧಿ ಇಲ್ಲ; ರೈತರು ಸಂಕಷ್ಟದಲ್ಲಿದ್ದಾರೆ. ಯುವಕರಿಗೆ ಉದ್ಯೋಗ ಕೊಡಲು ಆಗುತ್ತಿಲ್ಲ. ಇದರ ನಡುವೆ ಈ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದ್ದು, ಇದು ಖಂಡಿತ ಸರಿಯಲ್ಲ ಎಂದು ಆಕ್ಷೇಪಿಸಿದರು. ಮುಖ್ಯಮಂತ್ರಿಗಳು ರಾಜ್ಯದ ಜನತೆಗೆ ನ್ಯಾಯ ಕೊಡುವ ಕೆಲಸ ಮಾಡಬೇಕೇ ಹೊರತು, ಸಮಾಜ ಒಡೆಯುವ ಕೆಲಸ ಮಾಡಬಾರದು ಎಂದು ದೂರಿದರು.

ರಾಜ್ಯ ಸರ್ಕಾರಕ್ಕೆ ಜಾತಿ ಜನಗಣತಿ ಮಾಡುವ ಅಧಿಕಾರ ಇಲ್ಲ; ಕಾನೂನಿನಲ್ಲಿ ಅವಕಾಶ ಇಲ್ಲ. ಸಾಮಾಜಿಕ- ಆರ್ಥಿಕ ಸಮೀಕ್ಷೆಯ ನೆಪದಲ್ಲಿ ಜಾತಿ ಜನಗಣತಿ ಮಾಡಲು ಹೊರಟಿರುವುದು ಖಂಡಿತ ಸರಿಯಲ್ಲ ಎಂದು ಅವರು ಹೇಳಿದರು.

ಈ ಸುದ್ದಿಯನ್ನೂ ಓದಿ | Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ನಾಳೆ, ನಾಡಿದ್ದು ಕರೆಂಟ್‌ ಇರಲ್ಲ

ನಿಮಗೆ ಅಧಿಕಾರ ಕೊಟ್ಟಿದ್ದೇಕೆ?

ಗ್ಯಾರಂಟಿ ಕೊಡುವ ಕಾರಣಕ್ಕಾಗಿ ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಕೇಂದ್ರದತ್ತ ತೋರಿಸಿ ಬಿಪಿಎಲ್ ಕಾರ್ಡ್ ರದ್ದು ಮಾಡುತ್ತಾರೆ. ರೈತರಿಗೆ ಪರಿಹಾರ ಕೊಡದೆ ಕೇಂದ್ರ ಸರ್ಕಾರದತ್ತ ತೋರಿಸುತ್ತಾರೆ. ಅಭಿವೃದ್ಧಿ ಮಾಡಲು ಹಣ ಇಲ್ಲ; ಕೇಂದ್ರದತ್ತ ಕೈ ತೋರಿಸುತ್ತಾರೆ. ಹಾಗಿದ್ದರೆ ನಿಮಗೆ ಜನರು ಯಾಕೆ ಅಧಿಕಾರ ಕೊಟ್ಟಿದ್ದಾರೆ? ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಪ್ರಶ್ನಿಸಿದರು.