ಬೆಂಗಳೂರು: ಆಗಸ್ಟ್ 14ರಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ (Darshan Thoogudeepa) ಮತ್ತು ಇತರ ಆರೋಪಿಗಳ ಜಾಮೀನು ರದ್ದುಗೊಳಿಸಿದೆ. ಈ ಹಿನ್ನೆಲೆಯಲ್ಲಿ ದರ್ಶನ್ ಮತ್ತು ಗ್ಯಾಂಗನ್ನು ಪೊಲೀಸರು ಮತ್ತೆ ವಶಕ್ಕೆ ಪಡೆದಿದ್ದಾರೆ. ಗುರುವಾರ ಸಂಜೆ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಐವರು ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ. ಇದೀಗ ಅವರು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ಸಿಸಿಎಚ್ 64ರ ಜಡ್ಜ್ ಈರಪ್ಪಣ್ಣ ಪವಡಿ ನಾಯ್ಕ್ ಆದೇಶದಂತೆ ದರ್ಶನ್ ಸಹಿತ ಐವರು ಆರೋಪಿಗಳನ್ನು ಪೊಲೀಸರು, ಪರಪ್ಪನ ಅಗ್ರಹಾರ ಜೈಲಿಗೆ ಕರೆದೊಯ್ದಿದ್ದಾರೆ.
ಎ 1 ಪವಿತ್ರಾ ಗೌಡ, ಎ 2 ದರ್ಶನ್, ಎ 11 ನಾಗರಾಜು, ಎ 12 ಲಕ್ಷ್ಮಣ, ಎ 14 ಪ್ರದೋಶ್‌ನನ್ನು ಪರಪ್ಪನ ಅಗ್ರಹಾರ ಜೈಲಿಗೆ ಕರೆದೊಯ್ಯಲಾಗಿದೆ. ಇನ್ನು ಪವಿತ್ರಾ ಗೌಡ ಅವರನ್ನು ಪ್ರಮುಖ ಜೈಲಿನ ಮಹಿಳಾ ಬ್ಯಾರಕ್‌ಗೆ ರವಾನೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಜೈಲು ವೈದ್ಯರಿಂದ ಆರೋಗ್ಯ ತಪಾಸಣೆ ಬಳಿಕ ಆರೋಪಿಗಳಿಗೆ ಕೈದಿ ನಂಬರ್ ನೀಡಲಾಗುತ್ತದೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ಜಾಮೀನು ಪಡೆಯುವಾದ ದರ್ಶನ್ ಬಳ್ಳಾರಿ ಜೈಲಿನಲ್ಲಿದ್ದರು. ಹೀಗಾಗಿ ಮತ್ತೆ ಅವರನ್ನು ಅದೇ ಜೈಲಿಗೆ ರವಾನಿಸಲಾಗುತ್ತದೆ ಎನ್ನಲಾಗಿತ್ತು. ಆದರೆ ನ್ಯಾಯಾಧೀಶರು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದಾರೆ.
ʼದಿ ಡೆವಿಲ್ʼ ಚಿತ್ರದ ಗತಿ ಏನು?
ರೇಣುಕಾಸ್ವಾಮಿ ಕೊಲೆ ಪ್ರಕರಣದ ಮುನ್ನ ದರ್ಶನ್ ಒಪ್ಪಿಕೊಂಡಿದ್ದ ಚಿತ್ರ ʼದಿ ಡೆವಿಲ್ʼ. ವೀರ್ ಪ್ರಕಾಶ್ ನಿರ್ದೇಶನದ ಈ ಚಿತ್ರ ಅದಾಗಲೆ ಬಹಳಷ್ಟು ನಿರೀಕ್ಷೆ ಹುಟ್ಟು ಹಾಕಿತ್ತು. ಒಂದಷ್ಟು ಭಾಗದ ಚಿತ್ರೀಕರಣವೂ ಆಗಿತ್ತು. ಆದರೆ ಕೊಲೆ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿದ್ದರಿಂದ ಸಿನಿಮಾ ಅರ್ಧದಲ್ಲೇ ನಿಂತು ಹೋಗಿತ್ತು. ಜೈಲು ಸೇರಿ ಸುಮಾರು 6 ತಿಂಗಳ ಬಳಿಕ ಅಂದರೆ 2024ರ ಡಿಸೆಂಬರ್‌ನಲ್ಲಿ ದರ್ಶನ್‌ಗೆ ಕರ್ನಾಟಕ ಹೈಕೋರ್ಟ್ ಜಾಮೀನು ಮಂಜೂರು ಮಾಡಿತು.
ಜೈಲಿನಿಂದ ಹೊರಬಂದ ದರ್ಶನ್ ಒಂದಷ್ಟು ದಿನ ವಿಶ್ರಾಂತಿ ಪಡೆದು ಬಳಿಕ ಮತ್ತೆ ʼದಿ ಡೆವಿಲ್ʼ ಸಿನಿಮಾದ ಶೂಟಿಂಗ್ ಪುನರಾರಂಭಿಸಿದರು. ಭರದಿಂದ ಚಿತ್ರೀಕರಣವೂ ನಡೆಯಿತು. ಇತ್ತೀಚೆಗೆ ವಿದೇಶಕ್ಕೆ ತೆರಳಿ ಹಾಡಿನ ಶೂಟಿಂಗ್ ಪೂರ್ಣಗೊಳಿಸಿ ಬೆಂಗಳೂರಿಗೆ ಮರಳಿದರು. ಜತೆಗೆ ತಮ್ಮ ಪಾಲಿನ ಡಬ್ಬಿಂಗ್ ಕೂಡ ಮುಗಿಸಿದ್ದಾರೆ. ಚಿತ್ರದ ಮೊದಲ ಹಾಡನ್ನು ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಆಗಸ್ಟ್ 15ರಂದು ರಿಲೀಸ್ ಮಾಡುವುದಾಗಿ ಘೋಷಿಸಲಾಗಿತ್ತು. ಆದರೆ ಇದೀಗ ದರ್ಶನ್ ಮತ್ತೆ ಜೈಲಿಗೆ ಹೋಗಿದ್ದರಿಂದ ಹಾಡಿನ ಬಿಡುಗಡೆಯನ್ನು ಮುಂದೂಡಲಾಗಿದೆ. ಈ ವರ್ಷವೇ ಚಿತ್ರವನ್ನು ತೆರೆಗೆ ತರಲುವ ಸಿದ್ಧತೆಯಲ್ಲಿದ್ದ ತಂಡಕ್ಕೆ ಹಿನ್ನಡೆಯಾಗಿದ್ದು, ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳುತ್ತಾರೆ ಎನ್ನುವ ಬಗ್ಗೆ ಕುತೂಹಲ ಮನೆ ಮಾಡಿದೆ. ಈ ವರ್ಷವೇ ಸಿನಿಮಾ ರಿಲೀಸ್ ಆಗುತ್ತಾ ಎನ್ನುವುದೇ ದರ್ಶನ್ ಫ್ಯಾನ್ಸ್‌ಗೆ ಯಕ್ಷ ಪ್ರಶ್ನೆ.