ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bengaluru Airport: ಬೆಂಗಳೂರು ಏರ್‌ಪೋರ್ಟ್‌ನಲ್ಲಿ ದಸರಾ ಸಂಭ್ರಮ; ಸೆ.29ರವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ

Dasara 2025: ಬೆಂಗಳೂರು ಏರ್‌ಪೋರ್ಟ್‌ನ ಟರ್ಮಿನಲ್ 1 ಮತ್ತು ಟರ್ಮಿನಲ್ 2 ರಲ್ಲಿ ನಡೆಯಲಿರುವ ದಸರಾ ಸಂಭ್ರಮಾಚರಣೆಗೆ ಆಗಮಿಸಿ ಕಲೆ, ಸಂಗೀತ, ನೃತ್ಯ ಮತ್ತು ಸಂಪ್ರದಾಯದ ಸೊಬಗನ್ನು ಆಸ್ವಾದಿಸಲು ವಿಮಾನ ನಿಲ್ದಾಣ ಪ್ರಾಧಿಕಾರ ಮನವಿ ಮಾಡಿದೆ. ದಸರಾ ಹಿನ್ನೆಲೆ ಎಂಟು ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಬೆಂಗಳೂರು: ರಾಜ್ಯಾದ್ಯಂತ ಎಲ್ಲೆಡೆ ದಸರಾ ಸಂಭ್ರಮ ಮನೆಮಾಡಿದೆ. ಅದೇ ರೀತಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Bengaluru Airport) ದಸರಾ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 22 ರಿಂದ 29 ರವರೆಗೆ ಎಂಟು ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗ-ಪ್ರಾಯೋಜಕತ್ವ ನೀಡಿದ್ದು, ಈ ಸಾಂಸ್ಕೃತಿಕ ಹಬ್ಬದಲ್ಲಿ ಭಾಗವಹಿಸಲು ಸಾರ್ವಜನಿಕರಿಗೆ ಮುಕ್ತ ಮತ್ತು ಉಚಿತ ಅವಕಾಶವಿದ್ದು, ವಿಮಾನ ಪ್ರಯಾಣದ ಟಿಕೆಟ್ ಅಗತ್ಯವಿರುವುದಿಲ್ಲ.

ಈ ಬಗ್ಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ ಮಾಹಿತಿ ನೀಡಿದೆ. ಇಂದು (ಸೋಮವಾರ) ಏರ್‌ಪೋರ್ಟ್‌ನಲ್ಲಿ ದಸರಾ ಸಂಭ್ರಮಕ್ಕೆ ಚಾಲನೆ ದೊರೆತಿದ್ದು, ಡೊಳ್ಳು ಕುಣಿತ, ಗಾರುಡಿ ಗೊಂಬೆ ಪ್ರದರ್ಶನ ನೋಡುಗರ ಗಮನ ಸೆಳೆಯಿತು.

ಟರ್ಮಿನಲ್ 1 ಮತ್ತು ಟರ್ಮಿನಲ್ 2 ರಲ್ಲಿ ನಡೆಯಲಿರುವ ದಸರಾ ಸಂಭ್ರಮಾಚರಣೆಗೆ ಆಗಮಿಸಿ ಕಲೆ, ಸಂಗೀತ, ನೃತ್ಯ ಮತ್ತು ಸಂಪ್ರದಾಯದ ಸೊಬಗನ್ನು ಆಸ್ವಾದಿಸಲು ಪ್ರಾಧಿಕಾರ ಮನವಿ ಮಾಡಿದೆ. ಪ್ರಯಾಣಿಕರು, ಸಾರ್ವಜನಿಕರು ತಮ್ಮ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ತೆರಳಿ ಬೆಂಗಳೂರು ಏರ್‌ಪೋರ್ಟ್‌ನಲ್ಲಿ ದಸರಾ ಹಬ್ಬದ ಸಂಭ್ರಮವನ್ನು ಸವಿಯಬಹುದಾಗಿದೆ.



ಸಾಂಸ್ಕೃತಿಕ ಕಾರ್ಯಕ್ರಮಗಳ ಪಟ್ಟಿ

ಸೆ.22- ಡೊಳ್ಳು ಕುಣಿತ, ಗಾರುಡಿ ಗೊಂಬೆ

ಸೆ.23- ಬೇಡರ ನೃತ್ಯ ಮತ್ತು ತಮಟೆ ವಾದ್ಯ

(ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ, ಟರ್ಮಿನಲ್‌ 1 ಕರ್ಬ್‌ಸೈಡ್‌ ಮತ್ತು ಟರ್ಮಿನಲ್ 2 ಫೋರ್‌ಕೋರ್ಟ್)

ಸೆ.24- ಘಟಂ ವಾದ್ಯಗೋಷ್ಠಿ ದಸರಾ ವೈಭವ: ಜಾನಪದ ಮತ್ತೆ ಸಾಂಸ್ಕೃತಿಕ ಕಲಾ ಪ್ರಕಾರಗಳ ಮೂಲಕ ಸಂಸ್ಕೃತಿ ವೈಭವದ ಪ್ರದರ್ಶನ

ಸೆ.25- ತೊಗಲು ಗೊಂಬೆಯಾಟ, ದಸರಾ ವೈಭವ: ವೈವಿಧ್ಯಮಯ ಕಲಾ ಪ್ರಕಾರಗಳ ಪ್ರದರ್ಶನ

ಸೆ.26- ಶಾಸ್ತ್ರೀಯ ಸಂಯೋಜನೆಯ ಮೂಲಕ ನವರಾತ್ರಿ ಕಥಾ ವೈಭವದ ಪ್ರಸ್ತುತಿ

(ಸಂಜೆ 6 ಗಂಟೆಯಿಂದ 8 ಗಂಟೆಯವರೆಗೆ, ಟರ್ಮಿನಲ್ 1ರ ಆಗಮನ ಕರ್ಬ್‌ಸೈಡ್)

ಸೆ.27- ಸುಗಮ ಸಂಗೀತ, ಯಕ್ಷಗಾನ ಪ್ರಸಂಗ, ತೊಗಲು ಗೊಂಬೆಯಾಟ

ಸೆ.28- ವಾದ್ಯಮೇಳ, ಭರತನಾಟ್ಯ ನೃತ್ಯರೂಪಕ ಮತ್ತು ಪ್ರದರ್ಶನ

ಸೆ.29: ದಸರಾ ವೈಶಿಷ್ಟ್ಯ: ನೃತ್ಯ ಮತ್ತು ಸಂಗೀತದ ಮೂಲಕ ದೈವಿಕ ಶಕ್ತಿಗೆ ವಿಶೇಷ ನಮನ

(ಸಂಜೆ 6 ಗಂಟೆಯಿಂದ 8 ಗಂಟೆಯವರೆಗೆ, ಟರ್ಮಿನಲ್ 2 ಆಗಮನ ಫೋರ್‌ಕೋರ್ಟ್)

ಈ ಸುದ್ದಿಯನ್ನೂ ಓದಿ | Mysuru Dasara 2025: ಮೈಸೂರಿನಲ್ಲಿ ದಸರಾ ಮಹೋತ್ಸವ ಉದ್ಘಾಟಿಸಿದ ಸಾಹಿತಿ ಬಾನು ಮುಷ್ತಾಕ್‌