ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

DK Shivakumar: ಕರಾವಳಿ ಭಾಗದಲ್ಲಿ ಉದ್ಯೋಗ ಸೃಷ್ಟಿ, ಪ್ರವಾಸೋದ್ಯಮ ಬೆಳವಣಿಗೆಗೆ ಪ್ರತ್ಯೇಕ ನೀತಿ: ಡಿ.ಕೆ. ಶಿವಕುಮಾರ್

DK Shivakumar: ಕರಾವಳಿ ಭಾಗದ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಸಚಿವರುಗಳ ಜತೆ ಮೊಟ್ಟ ಮೊದಲ ಸಭೆ ನಡೆಸಲಾಯಿತು. ಅಧಿಕಾರಿಗಳೂ ಸಹ ಸಭೆಯಲ್ಲಿ ಹಾಜರಿದ್ದರು. ಪರಿಹಾರೋಪಾಯಗಳ ಬಗ್ಗೆ ಎಲ್ಲರೂ ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

ಬೆಂಗಳೂರು: ಕರಾವಳಿ ಭಾಗದಲ್ಲಿ ಉದ್ಯೋಗ ಸೃಷ್ಟಿಗೆ ಹಾಗೂ ಪ್ರವಾಸೋದ್ಯಮ ಬೆಳವಣಿಗೆಗೆ ಪ್ರತ್ಯೇಕ ನೀತಿ ಮಾಡಬೇಕು ಎಂದು ಆಲೋಚನೆ ಮಾಡಲಾಗುತ್ತಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಹೇಳಿದರು. ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಶುಕ್ರವಾರ ಸಂಜೆ ಪ್ರತಿಕ್ರಿಯೆ ನೀಡಿದ ಅವರು, ʼಎರಡನೇ ಸಭೆಯನ್ನು ಮಂಗಳೂರಿನಲ್ಲಿ ನಡೆಸಲಾಗುವುದು. ಮುಂದಿನ ಸಭೆಗೆ ಯಾರನ್ನು ಆಹ್ವಾನ ಮಾಡಬೇಕು ಎಂದು ಸಲಹೆ ನೀಡಿದ್ದಾರೆ. ಈ ಸಭೆಯಲ್ಲಿ ಬಂಡವಾಳ ಹೂಡಿಕೆದಾರರು, ಕೇಂದ್ರ ಇಲಾಖೆ ಹಾಗೂ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳನ್ನು ಕರೆಯಲಾಗುತ್ತದೆ. ಕರಾವಳಿ ಭಾಗಕ್ಕೆ ಹೊಸ ರೂಪ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಕರಾವಳಿ ಭಾಗದ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಸಚಿವರುಗಳ ಜತೆ ಮೊಟ್ಟ ಮೊದಲ ಸಭೆ ನಡೆಸಲಾಯಿತು. ಅಧಿಕಾರಿಗಳೂ ಸಹ ಸಭೆಯಲ್ಲಿ ಹಾಜರಿದ್ದರು. ಪರಿಹಾರೋಪಾಯಗಳ ಬಗ್ಗೆ ಎಲ್ಲರೂ ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಹೇಳಿದರು.‌

Karnataka Assembly Session: ಕಾವೇರಿ ಕುಡಿಯುವ ನೀರು, ರಸ್ತೆ ಅಭಿವೃದ್ಧಿ, ಮೆಟ್ರೋ ವಿಸ್ತರಣೆ, ಹೊಸ ರಸ್ತೆ ಜಾಲಗಳ ವಿವರ ಕೊಟ್ಟ ಡಿಕೆಶಿ

ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯಲ್ಲಿ ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಕೈಗೊಂಡಿರುವ ಕಾವೇರಿ ಕುಡಿಯುವ ನೀರು, ಮೇಲ್ಸೇತುವೆಗಳು, ಪೆರಿಫೆರಲ್ ರಿಂಗ್ ರಸ್ತೆ, ಮೆಟ್ರೋ ಮಾರ್ಗ, ಸುರಂಗ ರಸ್ತೆ, ಬಫರ್ ರಸ್ತೆಗಳು, ಮಳೆನೀರುಗಾಲುವೆಗಳ ಅಭಿವೃದ್ಧಿ, ಬ್ಲಾಕ್ ಟಾಪಿಂಗ್, ವೈಟ್ ಟಾಪಿಂಗ್ ಸೇರಿದಂತೆ ಇನ್ನು ಹಲವು ಯೋಜನೆಗಳ ವಿವರ ನೀಡುವ ಮೂಲಕ, ಬೆಂಗಳೂರಿನ ವಿಚಾರವಾಗಿ ಟೀಕೆ ಮಾಡಿದ್ದ ವಿರೋಧ ಪಕ್ಷಗಳ ಶಾಸಕರಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ತಿರುಗೇಟು ನೀಡಿದರು. ಬೆಂಗಳೂರು ಅಭಿವೃದ್ಧಿ ಕಾರ್ಯಗಳ ಸಮಸ್ಯೆಗಳು, ಅತಿವೃಷ್ಟಿಯಿಂದಾಗಿರುವ ನಷ್ಟ ಹಾಗೂ ಕೇಂದ್ರದ ಅನುದಾನಗಳ ಬಗ್ಗೆ ವಿಧಾನಸಭೆಯಲ್ಲಿ (Karnataka Assembly Session) ನಿಯಮಾವಳಿ 69ರ ಅಡಿಯಲ್ಲಿ ಶುಕ್ರವಾರ ನಡೆದ ವಿಶೇಷ ಚರ್ಚೆಗೆ ಅವರು ಉತ್ತರಿಸಿದರು.

ವಿರೋಧ ಪಕ್ಷಗಳ ನಾಯಕರು ಅನೇಕ ಟೀಕೆ ಮಾಡಿದ್ದಾರೆ. ಅದು ಅವರ ಹಕ್ಕು, ಅವರು ನಮ್ಮನ್ನು ಟೀಕೆ ಮಾಡದಿದ್ದರೆ ಅವರ ಅಸ್ತಿತ್ವವೇ ಇರುವುದಿಲ್ಲ. ಹೀಗಾಗಿ ಟೀಕೆ ಮಾಡುತ್ತಾರೆ. ಅದನ್ನು ನಾನು ತಪ್ಪು ಎನ್ನುವುದಿಲ್ಲ. ನಾನು ಬಹಳ ಆಸಕ್ತಿಯಿಂದ ಬೆಂಗಳೂರು ನಗರಾಭಿವೃದ್ಧಿ ಹಾಗೂ ಜಲಸಂಪನ್ಮೂಲ ಇಲಾಖೆ ಜವಾಬ್ದಾರಿ ತೆಗೆದುಕೊಂಡಿದ್ದೇನೆ. ನಾವು ಯಾರೂ ಇಲ್ಲಿ ಶಾಶ್ವತವಲ್ಲ. ನನಗೆ ಸಿಕ್ಕ ಅವಕಾಶದಲ್ಲಿ ಬೆಂಗಳೂರಿಗೆ ಏನಾದರೂ ಕೊಡುಗೆ ಕೊಟ್ಟು ಹೋಗಬೇಕು ಎಂದುಕೊಂಡಿದ್ದೇನೆ. ಹೀಗಾಗಿ ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿದೆ. ವಿರೋಧ ಪಕ್ಷದ ಶಾಸಕರು ಎಷ್ಟು ಟೀಕೆ ಮಾಡುತ್ತಾರೋ ಮಾಡಲಿ, ನಾವು ನಮ್ಮ ಕೆಲಸ ಮಾಡುತ್ತೇವೆ. ಕೊನೆಗೆ ಅವರ ಟೀಕೆಗಳು ಸಾಯುತ್ತವೆ, ನಮ್ಮ ಕೆಲಸಗಳು ಉಳಿಯುತ್ತವೆ ಎಂದು ತಿಳಿಸಿದರು.

ರಸ್ತೆಗಳ ಅಭಿವೃದ್ಧಿಗೆ ಆದ್ಯತೆ

ನಗರದಲ್ಲಿ ರಸ್ತೆ ಗುಂಡಿ ಸಮಸ್ಯೆ ಬಗೆಹರಿಸಲು ಎಲ್ಲೆಲ್ಲಿ ಗುಂಡಿಗಳಿವೆ ಎಂದು ಸಾರ್ವಜನಿಕರು ಕೂಡ ಅಧಿಕಾರಿಗಳ ಗಮನಕ್ಕೆ ತರಲು ಅಕಾಶ ಕಲ್ಪಿಸಿದ್ದೇವೆ. 'ಗುಂಡಿ ಗಮನ' ಯೋಜನೆ ತಂದು ಎಲ್ಲೆಲ್ಲಿ ರಸ್ತೆಗುಂಡಿಗಳಿವೆಯೋ ಅವುಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಪೊಲೀಸರು ಕೂಡ ರಸ್ತೆಗುಂಡಿಗಳ ಪಟ್ಟಿ ಮಾಡುವ ಅವಕಾಶ ಕಲ್ಪಿಸಿದ್ದೇವೆ. ಸುಮಾರು 10 ಸಾವಿರ ಗುಂಡಿಗಳನ್ನು ಗುರುತಿಸಲಾಗಿದ್ದು. ಇದರಲ್ಲಿ ಸುಮಾರು 5,377 ಗುಂಡಿಗಳನ್ನು ಮುಚ್ಚಲಾಗಿದೆ. ಉಳಿದ 5 ಸಾವಿರ ಗುಂಡಿಗಳನ್ನು ಮುಚ್ಚಲು ಕಾರ್ಯಕ್ರಮ ರೂಪಿಸಿದ್ದೇವೆ ಎಂದರು.

ನಗರದಲ್ಲಿ 154 ಕಿಮೀ ನಷ್ಟು ವೈಟ್ ಟಾಪಿಂಗ್ ಕಾಮಗಾರಿಯನ್ನು ರೂ. 1,700 ಕೋಟಿ ವೆಚ್ಚದಲ್ಲಿ ಮಾಡುತ್ತಿದ್ದೇವೆ. ಈ ರಸ್ತೆಗಳು 30 ವರ್ಷಗಳ ಕಾಲ ಬಾಳಿಕೆ ಬರುತ್ತವೆ. ಉಪರಸ್ತೆಗಳನ್ನು ಸಹ ವೈಟ್ ಟಾಪಿಂಗ್ ಯೋಜನೆಯಡಿ ಕೈಗೆತ್ತಿಕೊಳ್ಳಲಾಗುವುದು. ಮೊದಲ ಹಂತದಲ್ಲಿ 632 ಕಿ.ಮೀ ಕೈಗೆತ್ತಿಕೊಳ್ಳಲಾಗುತ್ತಿದ್ದು, ಇದಕ್ಕೆ‌ 7,500 ಕೋಟಿ ಖರ್ಚು ಮಾಡಲಾಗುತ್ತಿದೆ. ಒಟ್ಟಾರೆಯಾಗಿ ರಸ್ತೆಗಳ ಅಭಿವೃದ್ಧಿ ಹಾಗೂ ವೈಟ್ ಟಾಪಿಂಗ್‌ಗೆ ಸುಮಾರು 9 ಸಾವಿರ ಕೋಟಿ ವ್ಯಯಿಸಲು ಯೋಜನೆ ರೂಪಿಸಲಾಗಿದೆ. 450 ಕಿ.ಮೀ ಉದ್ದದ ಪ್ರಮುಖ ಹಾಗೂ ಉಪ ರಸ್ತೆಗಳಿಗೆ ಬ್ಲಾಕ್ ಟಾಪಿಂಗ್ ಮಾಡಲು 699 ಕೋಟಿಯ ಯೋಜನೆ ರೂಪಿಸಲಾಗಿದೆ. ಎಲ್‌ಇಡಿ ಲೈಟ್‌ಗಳನ್ನು ಅಳವಡಿಸಲು 4 ಪ್ಯಾಕೇಜ್‌ಗಳಾಗಿ ರೂ. 180 ಕೋಟಿ ಮೊತ್ತದ ಯೋಜನೆ ರೂಪಿಸಲಾಗಿದ್ದು, ಕೆಲಸ ಪ್ರಾರಂಭವಾಗಿದೆ. ಜನರು ಸಹ ನಗರದಲ್ಲಿ ಎಲ್ಲೆ ರಸ್ತೆಗುಂಡಿ ಕಂಡು ಬಂದರೂ ಫೋಟೊ ತೆಗೆದು ಪಾಲಿಕೆಯ ನಿಗದಿತ ದೂರವಾಣಿ ಸಂಖ್ಯೆಗೆ ಕಳುಹಿಸಬಹುದು ಎಂದು ಹೇಳಿದರು.

ಹೊಸ ರಸ್ತೆ ಜಾಲ

ರಾಜಕಾಲುವೆಗಳ ಪಕ್ಕ 300 ಕಿಮೀ ಉದ್ದಕ್ಕೆ ರಸ್ತೆ ನಿರ್ಮಾಣ ಮಾಡಲು 3 ಸಾವಿರ ಕೋಟಿ ರೂಪಾಯಿಯಲ್ಲಿ ಯೋಜನೆ ರೂಪಿಸಲಾಗಿದೆ. ಡಬಲ್ ಡೆಕ್ಕರ್ ಯೋಜನೆಗೆ ಪ್ರತಿ ಕಿಮೀಗೆ 120 ಕೋಟಿ ವೆಚ್ಚವಾಗುತ್ತಿದ್ದು 9 ಸಾವಿರ ಕೋಟಿ ಮೊತ್ತದ ಯೋಜನೆ ರೂಪಿಸಲಾಗಿದೆ. ಒಟ್ಟು 44 ಕಿಮೀ ಉದ್ದ ಡಬಲ್ ಡೆಕ್ಕರ್ ನಿರ್ಮಾಣ ಮಾಡಲಾಗುವುದು. ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ 109 ಕೋಟಿ ಜಾಗ ಗುರುತಿಸಲಾಗಿದೆ. ಇದಕ್ಕೆ 15 ಸಾವಿರ ಕೋಟಿ ವೆಚ್ಚ ಮಾಡಲಾಗುವುದು ಎಂದರು.

6ನೇ ಹಂತದ ಕಾವೇರಿ ನೀರು ಯೋಜನೆ

ಕಾವೇರಿ ಕುಡಿಯುವ ನೀರು ಪೂರೈಕೆ ಯೋಜನೆಯ 5ನೇ ಹಂತವನ್ನು ಪೂರ್ಣಗೊಳಿಸಿ 110 ಹಳ್ಳಿಗಳಿಗೆ ನೀರು ನೀಡುತ್ತಿದ್ದೇವೆ. ನೀರಿನ ಸಂಪರ್ಕ ಶುಲ್ಕ ಕಟ್ಟಲು ಆಗದೇ ಇರುವವರಿಗೆ 12 ಕಂತುಗಳಲ್ಲಿ ಪಾವತಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಪ್ರತಿದಿನ 775 ಎಂಎಲ್‌ಡಿ ನೀರನ್ನು ಪೂರೈಸಲಾಗುತ್ತಿದೆ. ಸುಮಾರು 3.5 ಲಕ್ಷ ಜನರಿಗೆ ಅನುಕೂಲವಾಗುತ್ತಿದೆ. 2100 ಕಿಮೀ ಉದ್ದ ಸಂಪರ್ಕ ಜಾಲವನ್ನು ವಿಸ್ತರಿಸಲಾಗುತ್ತಿದೆ. ಇದರಿಂದ 50 ಲಕ್ಷ ಜನರಿಗೆ ಅನುಕೂಲವಾಗಲಿದೆ. 14 ವರ್ಷದಿಂದ ನೀರಿನ ದರ ಏರಿಕೆ ಮಾಡಿರಲಿಲ್ಲ ಆದ ಕಾರಣಕ್ಕೆ ಪೈಸೆಗಳ ಲೆಕ್ಕದಲ್ಲಿ ಏರಿಕೆ ಮಾಡಿದ್ದೇವೆ. ಅತ್ಯಂತ ಕಡಿಮೆ ದರಕ್ಕೆ ಕಾವೇರಿ ಆನ್ ವ್ಹೀಲ್ ಯೋಜನೆ ಮೂಲಕ ಮನೆ ಬಾಗಿಲಿಗೆ ಕಾವೇರಿ ನೀರು ಪೂರೈಕೆ ಮಾಡಲಾಗುತ್ತಿದೆ. ಈಗಾಗಲೇ 6ನೇ ಹಂತಕ್ಕೂ ಯೋಜನೆ ರೂಪಿಸಲಾಗಿದೆ ಎಂದರು.

ಟನಲ್‌ ವೆಚ್ಚ ನಮ್ಮಲ್ಲಿಯೇ ಕಡಿಮೆ

ಟನಲ್ ಯೋಜನೆ ವೆಚ್ಚ ಹೆಚ್ಚಾಯಿತು ಎಂದು ಟೀಕೆ ಮಾಡುತ್ತಿದ್ದಾರೆ. ಬೇರೆ ರಾಜ್ಯಗಳಿಗಿಂತ ನಮ್ಮಲ್ಲಿ ಶೇ.40 ರಷ್ಟು ಕಡಿಮೆ ವೆಚ್ಚದಲ್ಲಿ ನಿರ್ಮಾಣ‌ ಮಾಡುತ್ತಿದ್ದೇವೆ. ನಮ್ಮಲ್ಲಿ 16.5 ಕಿಮೀ ಉದ್ದದ ಟನಲ್ ನಿರ್ಮಾಣ ಮಾಡುತ್ತಿದ್ದು ಪ್ರತಿ ಕಿ.ಮೀಗೆ 770 ಕೋಟಿ ವೆಚ್ಚ ಮಾಡಲಾಗುತ್ತಿದೆ. ಥಾನೆಯಲ್ಲಿನ ಟನಲ್‌ ರಸ್ತೆಗೆ ಪ್ರತಿ ಕಿ.ಮೀ ಗೆ 1,215 ಕೋಟಿ ವೆಚ್ಚ ಮಾಡಲಾಗಿದೆ. ಆರೆಂಜ್ ಗೇಟ್ 1,316 ಕೋಟಿ, ಗಾಯ್ ಮುಖೆ ಟನಲ್‌ಗೆ 1,320 ಕೋಟಿಯನ್ನು ಪ್ರತಿ ಕಿ.ಮೀ ಖರ್ಚು ಮಾಡಲಾಗಿದೆ ಎಂದರು.

ಬಿಜೆಪಿ ಸಂಸದರೊಬ್ಬರು ಟನಲ್ ರಸ್ತೆಯನ್ನು ದುಡ್ಡು ಹೊಡೆಯಲು ಮಾಡಲಾಗುತ್ತಿದೆ ಎಂದಿದ್ದಾರೆ. ಅವರ ಕಾಲದಲ್ಲಿ ಇಂತಹ ಯೋಜನೆ ಮಾಡಲು ಸಾಧ್ಯವಾಗಿಲ್ಲ. ಕೇಂದ್ರ ಸರ್ಕಾರದಿಂದ ಹಣವನ್ನೂ ತರಲು ಸಾಧ್ಯವಾಗಿಲ್ಲ. ನಾವು ಯಾವುದಾದರೂ ರೂಪದಲ್ಲಿ ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡುತ್ತಿದ್ದೇವೆ. ಆದರೂ ಈ ರೀತಿ ಮಾತನಾಡುತ್ತಾರೆ. ನಮ್ಮ ಅಭಿವೃದ್ಧಿ ಕೆಲಸಗಳಿಗೆ ವಿರೋಧ ಪಕ್ಷದ ನಾಯಕ ಅಶೋಕ್ ಸೇರಿದಂತೆ ಅನೇಕ ಶಾಸಕರು ಸಹಕಾರ ನೀಡುತ್ತಿದ್ದು, ಅವರಿಗೆ ಅಭಿನಂದಿಸುತ್ತೇನೆ ಎಂದರು.

ಆಧುನಿಕ ತಂತ್ರಜ್ಞಾನದಲ್ಲಿ ಕಸ ವಿಲೇವಾರಿ ಘಟಕ ಸ್ಥಾಪನೆ

ಕಸದ ಮಾಫಿಯಾ ತೊಡೆದು ಹಾಕಲು ಯಾರಿಂದಲೂ ಸಾಧ್ಯವಿಲ್ಲ. ಬಿಜೆಪಿ ಕಾಲದಲ್ಲಿ ಕರೆದಿದ್ದ ಟೆಂಡರ್ ಅನ್ನು ನ್ಯಾಯಾಲಯಕ್ಕೆ ಹೋಗಿ ನಿಲ್ಲಿಸಲಾಯಿತು. ‌ಈಗ 33 ಪ್ಯಾಕೇಜ್‌ಗಳನ್ನು ಮಾಡಿ ಕಸದ ಟೆಂಡರ್ ಕರೆಯಲಾಗಿದೆ. ಬೆಂಗಳೂರಿನ ಹೊರವಲಯದಲ್ಲಿ ನಾಲ್ಕು ದಿಕ್ಕುಗಳಲ್ಲಿ ಕಸ ವಿಲೇವಾರಿ ಘಟಕ ಮಾಡಲು ಉದ್ದೇಶಿಸಲಾಗಿದ್ದು, ಸದ್ಯಕ್ಕೆ ದೊಡ್ಡಬಳ್ಳಾಪುರದಲ್ಲಿ ಹಾಗೂ ನೈಸ್ ಸಂಸ್ಥೆಯವರ ಜತೆ 100 ಎಕರೆ ಜಾಗ ಪಡೆದು ಇದನ್ನು ನಿರ್ಮಿಸಲಾಗುತ್ತಿದೆ. ಇನ್ನುಳಿದಂತೆ ಇತರೆ ಎರಡು ಭಾಗದಲ್ಲಿ ಇದನ್ನು ಮಾಡಬೇಕಿದೆ. ಮುಂದೆ ಬೆಂಗಳೂರಿನ ಹೊರ ಭಾಗದಲ್ಲಿ ಎಲೆಕ್ಟ್ರಾನಿಕ ಸಿಟಿ, ರಾಮನಗರ, ಚನ್ನಪಟ್ಟಣ, ಮಾಗಡಿ ಭಾಗದಲ್ಲಿಯೂ ಮಾಡಲು ಸಿದ್ಧತೆ ಮಾಡುತ್ತಿದ್ದೇವೆ. ಈಗಿನ ಹೊಸ ತಂತ್ರಜ್ಞಾನದಲ್ಲಿ ಕಸವನ್ನು ಮೂರು ದಿನಗಳಲ್ಲಿ ಖಾಲಿ ಮಾಡಬಹುದು. ಅಲ್ಲದೇ ವಾಸನೆ ಮುಕ್ತವಾದ ಘಟಕಗಳನ್ನು ನಿರ್ಮಾಣ ಮಾಡಬಹುದಾಗಿದೆ. ಇದಕ್ಕಾಗಿ ಅಧಿಕಾರಿಗಳ ತಂಡವನ್ನು ಕರೆದುಕೊಂಡು ಚೆನ್ನೈ, ಹೈದರಾಬಾದ್, ದೆಹಲಿಗೆ ಹೋಗಿ ಅಧ್ಯಯನ ಮಾಡಿದ್ದೇವೆ ಎಂದು ವಿವರಿಸಿದರು.

ರಸ್ತೆ ಬದಿ ವ್ಯಾಪಾರಿಗಳಿಗೆ 7200 ತಳ್ಳುವ ಗಾಡಿ ನೀಡಲಾಗಿದೆ. ವಿಶ್ವಬ್ಯಾಂಕ್ ನೆರವಿನಿಂದ 2 ಸಾವಿರ ಕೋಟಿ ರೂ. ಮೊತ್ತದಲ್ಲಿ 173 ಕಿ.ಮೀ ಮಳೆ ನೀರುಗಾಲುವೆಗಳ ಅಭಿವೃದ್ಧಿಗೆ 16 ಪ್ಯಾಕೇಜ್‌ಗಳಲ್ಲಿ ಕೆಲಸ ಕೈಗೆತ್ತಿಕೊಳ್ಳಲಾಗಿದೆ. 800 ಕಿಮೀನಲ್ಲಿ 480 ಕಿ.ಮೀ ಕಾಮಗಾರಿ ಮುಗಿದಿದ್ದು, 195 .ಕಿಮೀ ಕಾಮಗಾರಿ ನಡೆಯುತ್ತಿದೆ. 170 ಕಿ.ಮೀ ಬಾಕಿ ಉಳಿದಿದೆ ಇದಕ್ಕೆ ಟೆಂಡರ್ ಕರೆಯಲಾಗಿದೆ. ಕೆರೆಗಳ ಇಂಟರ್‌ ಲಿಂಕಿಂಗ್‌ಗೆ 1700 ಕೋಟಿ ಮೊತ್ತದ ಯೋಜನೆ ಕೈಗೆತ್ತಿಕೊಳ್ಳಲಾಗಿದೆ ಎಂದರು.

ಪಿಆರ್‌ಆರ್ ಯೋಜನೆಗೆ ವಶಪಡಿಸಿಕೊಂಡಿರುವ ಭೂಮಿಯನ್ನು ಡಿನೋಟಿಫೈ ಮಾಡಿ ನಾನು ಜೈಲಿಗೆ ಹೋಗಲು ತಯಾರಿಲ್ಲ. ನನ್ನ ತಾಯಿಯ ಭೂಮಿಯೇ ಹೋಗಿದೆ. ಶಿವರಾಂ ಕಾರಂತ ಬಡಾವಣೆಯಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನೀಡಲು ಆಗಿಲ್ಲ. ನ್ಯಾಯಾಲಯದಲ್ಲಿ ತಡೆಯಾಜ್ಞೆ ತರಲಾಗಿದೆ. ಪರಿಹಾರಕ್ಕೆ 60:40 ಅನುಪಾತದಲ್ಲಿ ಒಪ್ಪಿಗೆ ಸೂಚಿಸಲಾಗಿದೆ ಎಂದರು.

ಹೊರವಲಯಕ್ಕೂ ಮೆಟ್ರೋ ವಿಸ್ತರಣೆಗೆ ಡಿಪಿಆರ್

ಹೊಸಕೋಟೆ, ನೆಲಮಂಗಲ, ಹೊಸೂರು, ತಾವರೆಕೆರೆ ಭಾಗಕ್ಕೆ ಮೆಟ್ರೋ ಸಂಪರ್ಕ ಕಲ್ಪಿಸಲು ಡಿಪಿಆರ್ ಕರೆಯಲಾಗಿದೆ. ಕಾಳೇನ ಅಗ್ರಹಾರದಿಂದ ತಾವರೆಕೆರೆಗೆ ಸಂಪರ್ಕ ಕಲ್ಪಿಸುವ ನೇರಳೆ ಮಾರ್ಗವು 7.5 ಕಿಮೀ ಇದು ಡಿಸೆಂಬರ್ 26 ರ ಹೊತ್ತಿಗೆ ಸಾರ್ವಜನಿಕ ಸೇವೆಗೆ ದೊರೆಯಲಿದೆ. ಈ ಎಲ್ಲಾ ಯೋಜನೆಗಳ ಬಗ್ಗೆ ಪ್ರಧಾನಿಯವರಿಗೆ ತಿಳಿಸಿ ಸೂಕ್ತ ಅನುದಾನಕ್ಕೆ ಮನವಿ ಸಲ್ಲಿಸಿದ್ದೇನೆ ಎಲ್ಲರೂ ಒತ್ತಡ‌ ಹಾಕಿಸಿದರೆ ನಿಮ್ಮ, ನಮ್ಮ ಬೆಂಗಳೂರು ಅಭಿವೃದ್ಧಿಯಾಗಲಿದೆ ಎಂದರು.

ನಮ್ಮ ಕೆಲಸಕ್ಕೆ ಕೇಂದ್ರ ಸರ್ಕಾರದಿಂದ ಪ್ರಶಸ್ತಿ

ಆಸ್ತಿ ದಾಖಲೆಗಳನ್ನು ತಿದ್ದುವುದನ್ನು ತಪ್ಪಿಸಲು 25 ಲಕ್ಷ‌ ಆಸ್ತಿಗಳನ್ನು ಡಿಜಿಟಲ್ ಮೂಲಕ ಸ್ಕ್ಯಾನ್ ಮಾಡಲಾಗಿದೆ. ಇ- ಖಾತೆಗಳನ್ನು ಮಾಡಲು ದೊಡ್ಡ ಆಂದೋಲನವನ್ನೇ ಹಮ್ಮಿಕೊಳ್ಳಲಾಗಿದೆ. ಮನೆ, ಮನೆಗೆ ತೆರಳಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಈ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸಲು ನಾವು ತೀರ್ಮಾನಿಸಿದ್ದು, ಇಲ್ಲಿ ಯಾರೇ ಲಂಚ ಕೇಳಿದರೂ ನಮ್ಮ ಗಮನಕ್ಕೆ ತನ್ನಿ, ಸಂಜೆ ವೇಳೆಗೆ ಅವರನ್ನು ಅಮಾನತುಗೊಳಿಸುತ್ತೇವೆ. ಈಗಾಗಲೇ 7.2 ಲಕ್ಷ ಖಾತೆಗಳನ್ನು ವಿತರಣೆ ಮಾಡಲಾಗಿದೆ. ಪ್ರತಿಯೊಂದು ಮನೆಗೂ ಡ್ರಾಫ್ಟ್ ಖಾತೆ ನೀಡಲು ಆಲೋಚಿಸಲಾಗಿದೆ. ಜುಲೈ ತಿಂಗಳಿನಿಂದಲೇ ಖಾತಾ ಮಾಸ ಎನ್ನುವ ಅಭಿಯಾನ ಪ್ರಾರಂಭ ಮಾಡಿದ್ದೇವೆ. ತೆರಿಗೆ ಪಾವತಿಯೂ ಸಹ ಗಣಕೀಕೃತವಾಗುತ್ತದೆ ಎಂದರು.

ನಮ್ಮ ಈ ಕಾರ್ಯವನ್ನು ನೋಡಿ ಕೇಂದ್ರ ನಗರಾಭಿವೃದ್ಧಿ ಇಲಾಖೆಯಿಂದ ಪ್ರಶಸ್ತಿ ನೀಡಿದ್ದಾರೆ. ಇದರಿಂದ ಆಸ್ತಿ ಸ್ವಯಂ ಘೋಷಣೆ ವೇಳೆ ತೆರಿಗೆ ಸೋರಿಕೆಯಾಗುವುದು ಸಹ ನಿಲ್ಲಲಿದೆ. ಇ- ಆಸ್ತಿ ದಾಖಲೆಯಲ್ಲಿ ಮಾಲೀಕರ ಪೋಟೋ ಹಾಗೂ ಕಟ್ಟಡದ ಫೋಟೋ ಸಹ ಇರಲಿದೆ. ಗಂಡ- ಹೆಂಡತಿ ಜಂಟಿ ಖಾತೆ ಇದ್ದರೆ ಇಬ್ಬರ ಫೋಟೊ ಸಹ ದಾಖಲೆಯಲ್ಲಿ ಇರಲಿದೆ. ಇದರಿಂದ ಬೋಗಸ್ ನೋಂದಣಿಗೆ ಕಡಿವಾಣ ಬೀಳಲಿದೆ ಎಂದು ತಿಳಿಸಿದರು.

ಒಟಿಎಸ್ ಮೂಲಕ 1,200 ಕೋಟಿ ಹೆಚ್ಚು ತೆರಿಗೆ ಸಂಗ್ರಹ

ಓಟಿಎಸ್ ಯೋಜನೆಯಿಂದ 2.60 ಲಕ್ಷ ಮಾಲೀಕರಿಗೆ ಅನುಕೂಲವಾಯಿತು. 1,200 ಕೋಟಿಯಷ್ಟು ಹೆಚ್ಚವರಿ ತೆರಿಗೆ ಸಂಗ್ರಹವಾಯಿತು. ಬಡ್ಡಿ, ದಂಡ ಎಲ್ಲವನ್ನು ಮನ್ನಾ ಮಾಡಲಾಯಿತು. ಟಿಡಿಆರ್ ವ್ಯವಸ್ಥೆಯನ್ನು ಸಹ ಸರಳೀಕರಣಗೊಳಿಸಲಾಗಿದೆ. 50×80 ಅಳತೆವರೆಗಿನ ಕಟ್ಟಡಗಳ ನಿರ್ಮಾಣಕ್ಕೆ ಪ್ರಮಾಣಿಕೃತ ಎಂಜಿನಿಯರ್ ಹಾಗೂ ವಾಸ್ತುಶಿಲ್ಪಗಳಿಂದಲೇ ಅನುಮೋದನೆ ನೀಡುವ 'ನಂಬಿಕೆ ನಕ್ಷೆ' ಯೋಜನೆಗೆ 2024 ರ ಮಾರ್ಚ್ ತಿಂಗಳಲ್ಲೇ ಚಾಲನೆ ನೀಡಲಾಗಿದೆ. ಇದರಿಂದ ಈಗಾಗಲೇ 9 ಸಾವಿರ ನಕ್ಷೆಗಳನ್ನು ನೀಡಲಾಗಿದೆ ಎಂದು ತಿಳಿಸಿದರು.

ಬಡಾವಣೆಗಳನ್ನು ನಿರ್ಮಿಸಿದ ನಂತರ ಕಂದಾಯ ನಿವೇಶನಗಳನ್ನು ಹಂಚಿದ ನಂತರ ಅಲ್ಲಿರುವ ರಸ್ತೆಗಳು ಮಾಲೀಕನ ಹೆಸರಿನಲ್ಲಿ ಇದ್ದ ಅನೇಕ ಪ್ರಕರಣಗಳಿದ್ದವು. ಆದ ಕಾರಣಕ್ಕೆ ನಗರದ ಎಲ್ಲಾ ಖಾಸಗಿ ರಸ್ತೆಗಳು ಸರ್ಕಾರಿ ರಸ್ತೆಗಳು ಎಂದು ಘೋಷಣೆ ಮಾಡಿ ಎಲ್ಲದಕ್ಕೂ ಖಾತೆಗಳನ್ನು ಮಾಡಲಾಯಿತು. 7.5 ಲಕ್ಷ ಬಿ ಖಾತೆಗಳನ್ನು ಎ ಖಾತೆಗಳನ್ನಾಗಿ ಮಾಡಬೇಕಿದೆ. ಆದ ಕಾರಣಕ್ಕೆ ಅನಭಿವೃದ್ದಿ ಭೂಮಿ ಎಂದು ಶೇ.5.5 ರಷ್ಟು ಶುಲ್ಕ ಪಾವತಿಸಿಕೊಂಡು ಎ ಖಾತೆ ನೀಡಲು ತೀರ್ಮಾನ ಮಾಡಿದ್ದೇವೆ ಎಂದರು.

ಪ್ರೀಮಿಯಂ ಎಫ್‌ಎಆರ್ ಕಾನೂನನ್ನು ಬಿಜೆಪಿ ಸಮಯದಲ್ಲಿ ತರಲಾಗಿತ್ತು. ಇದು ಬೆಂಗಳೂರಿಗೆ ಬೇಡ ಎಂದು ನಾನು ತಿದ್ದುಪಡಿ ತಂದಿದ್ದೆ ಅದನ್ನು ಎಲ್ಲರೂ ಒಪ್ಪಿದ್ದರು. ಆದರೆ ರಾಜ್ಯಪಾಲರು ಅಂಕಿತ ಹಾಕಲಿಲ್ಲ. ಕೊನೆಗೆ ಬಿಜೆಪಿ ಕಾಲದ ಕಾನೂನನ್ನೇ ಜಾರಿಗೆ ತರಲಾಯಿತು. ಈ ಕಾನೂನಿನ ಅನ್ವಯ ಬೆಂಗಳೂರಿನಲ್ಲಿ 5 ಸಾವಿರ ಕೋಟಿ ಸಂಗ್ರಹವಾಗುವ ನಿರೀಕ್ಷೆಯಿದೆ ಎಂದರು.

ಬಿ ಸ್ಮೈಲ್ ಸ್ಥಾಪನೆ

ಬಿ ಸ್ಮೈಲ್ (ಬೆಂಗಳೂರು ಸ್ಮಾರ್ಟ್ ಸಿಟಿ ಇನ್ಫ್ರಾಸ್ಟಕ್ಚರ್ ಲಿಮಿಟೆಡ್) ಎನ್ನುವ ನೂತನ ಕಂಪನಿ ಸ್ಥಾಪಿಸಲಾಗಿದೆ. ಇದರಿಂದ ದೊಡ್ಡ, ದೊಡ್ಡ ಯೋಜನೆಗಳನ್ನು ಅಂದರೆ ಎಲಿವೇಟೆಡ್ ಕಾರಿಡಾರ್, ವೈಟ್ ಟಾಪಿಂಗ್, ಟನಲ್ ರಸ್ತೆ ಇಂತಹ ಕಾಮಗಾರಿಗಳನ್ನು ನಿರ್ವಹಿಸಲಾಗುತ್ತದೆ. ಇಂತಹ ದೊಡ್ಡ ಯೋಜನೆಗಳು ಎರಡು ಮೂರು ಪಾಲಿಕೆಗಳಲ್ಲಿ ಹಾದು ಹೋಗುವ ಕಾರಣ ಇದನ್ನು ಸರ್ಕಾರವೇ ಹಣ ನೀಡಿ ಮಾಡಬೇಕಿದೆ. ಇವುಗಳಿಗೆ ಪಾಲಿಕೆಯಿಂದಲೂ ಹಣ ಪಡೆದು ಅನುಷ್ಠಾನಗೊಳಿಸುತ್ತದೆ. ಅದಕ್ಕಾಗಿ ಬಿ ಸ್ಮೈಲ್ ಅನ್ನು ಸ್ಥಾಪಿಸಲಾಗಿದೆ ಎಂದರು.‌

ಈ ಸುದ್ದಿಯನ್ನೂ ಓದಿ | Karnataka Assembly Session: ಬಡವರಿಗೆ ಸೂರು, ಅನ್ನ, ಉದ್ಯೋಗ, ರೈತರಿಗೆ ಭೂಮಿ ಕೊಟ್ಟಿದ್ದು ಕಾಂಗ್ರೆಸ್: ಡಿಕೆಶಿ

ʼಇತ್ತೀಚೆಗೆ ಪ್ರಧಾನಮಂತ್ರಿಗಳು ಬೆಂಗಳೂರಿಗೆ ಆಗಮಿಸಿದ್ದರು. ಬೆಂಗಳೂರು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತವನ್ನು ಜಾಗತಿಕ ಮಟ್ಟದಲ್ಲಿ ಕೊಂಡೊಯ್ದಿದೆ. ಬೆಂಗಳೂರಿನ ಪ್ರತಿಭೆ ಹಾಗೂ ಅವರ ಕೊಡುಗೆ ಅಪಾರ ಎಂದು ಮೋದಿ ಅವರು ಹೇಳಿದ್ದಾರೆ. ನಗರ ಪ್ರದೇಶಗಳು ಬೆಳವಣಿಗೆಯಾದಷ್ಟು ನಾವು ಪ್ರಗತಿ ಸಾಧಿಸುತ್ತೇವೆ. ಬೆಂಗಳೂರು ವಿಶ್ವದ ಪ್ರಮುಖ ನಗರಗಳಲ್ಲಿ ಒಂದಾಗಿದ್ದು, ಜಾಗತಿಕ ನಗರವಾಗಿದೆ. ನಾವು ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ಮಾಡಬೇಕಿದೆ ಎಂದು ಪ್ರಧಾನಮಂತ್ರಿಗಳು ಹೇಳಿದರುʼ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದರು.