ಬೆಂಗಳೂರು : ಬೆಂಗಳೂರಲ್ಲಿ (Bengaluru) ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ (Harassment) ಪ್ರಕರಣಗಳು ಹೆಚ್ಚುತ್ತಿದ್ದು, ನಗರದ ಕಾಲೇಜು ವಿದ್ಯಾರ್ಥಿನಿಗೆ ಆಟೋ ಚಾಲಕನೋರ್ವ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. ಸೆಪ್ಟಂಬರ್ 8ರಂದು ಪುಟ್ಟೇನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, 19 ವರ್ಷದ ವಿದ್ಯಾರ್ಥಿನಿ ನೀಡಿರುವ ದೂರಿನ ಅನ್ವಯ ಆಟೋ ಚಾಲಕ ಹನುಮಂತಪ್ಪ ತಳವಾರ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೆ. 8 ರಂದು ಸಂಜೆ 4:30ಕ್ಕೆ ಕಾಲೇಜಿನಿಂದ ಮನೆಗೆ ತೆರಳಲು ವಿದ್ಯಾರ್ಥಿನಿ ರ‍್ಯಾಪಿಡೋ ಮೂಲಕ ಆಟೋ ಬುಕ್ ಮಾಡಿದ್ದಳು. ಸಂಜೆ 5:15 ಗಂಟೆ ಸುಮಾರಿಗೆ ಆಕೆಯನ್ನು ಮನೆ ಬಳಿ ಡ್ರಾಪ್ ಮಾಡಿದ್ದ ಚಾಲಕ, ಅದೇ ಸಂದರ್ಭದಲ್ಲಿ ನೀವು ಸಿನೆಮಾ ನಟಿಯ ಥರ ಇದ್ದೀರಿ ಎನ್ನುತ್ತ ಬ್ಯಾಗ್‌ಗಳನ್ನು ಇಳಿಸಲು ಸಹಾಯ ಮಾಡುವುದಾಗಿ ತಾನೂ ಕೆಳಗಿಳಿದಿದ್ದಾನೆ. ಬಳಿಕ ವಿದ್ಯಾರ್ಥಿನಿಯ ಸಮೀಪ ಬಂದು, ನಿಮಗೆ ಜ್ವರವಿದೆಯಾ? ಎಂದು ಆಕೆಯ ಹಣೆಯನ್ನು ಸ್ಪರ್ಶಿಸಿದ್ದ.
ಆ ಸಂದರ್ಭದಲ್ಲಿ ಸ್ಪರ್ಶಿಸದಂತೆ ತಿಳಿಸಿದರೂ, ಸಹ ವಿದ್ಯಾರ್ಥಿನಿಯ ಖಾಸಗಿ ಅಂಗ ಸ್ಪರ್ಶಿಸಲಾರಂಭಿಸಿದ್ದ. ಕೊನೆಗೆ ಭಯದಿಂದ ಆಟೋ ಚಾಲಕನನ್ನು ತಳ್ಳಿ ಮನೆಗೆ ತೆರಳಿರುವುದಾಗಿ ವಿದ್ಯಾರ್ಥಿನಿ ನೀಡಿದ ದೂರಿನಲ್ಲಿ ಆರೋಪಿಸಿದ್ದಾಳೆ. ಘಟನೆ ಸಂಬಂಧ ಸದ್ಯ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಟೋ ನಂಬರ್ ಆಧರಿಸಿ ಆರೋಪಿಯ ಪತ್ತೆ ಕಾರ್ಯ ಮುಂದುವರೆಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬೆಂಗಳೂರಿನ ಬೀದಿಯಲ್ಲಿ ಲೈಂಗಿಕ ವಿಕೃತಿ ತೋರಿದ ಕಾಮುಕ ಆರೆಸ್ಟ್
ಬೆಂಗಳೂರು: ಬೆಂಗಳೂರಿನಲ್ಲಿ ಬೆಚ್ಚಿ ಬೀಳಿಸೋ ಘಟನೆಯೊಂದು ನಡೆದಿದ್ದು, ಬೀದಿನಾಯಿಗೆ ಸಹಾಯ ಮಾಡುತ್ತಿದ್ದ ಯುವತಿಗೆ ಕಾಮುಕನೊಬ್ಬ ಲೈಂಗಿಕ ಕಿರುಕುಳ ನೀಡಿದ್ದಾನೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಶೋಧ ನಡೆಸಿ ವಿಕೃತನನ್ನು ಹೆಡೆಮುರಿ ಕಟ್ಟಿದ್ದಾರೆ. ಸೆಪ್ಟೆಂಬರ್ 7ರಂದು ರಾತ್ರಿ 11:50ರ ಹೊತ್ತಿಗೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಪಟ್ಟಂತೆ ಅಮೃತಹಳ್ಳಿ ಠಾಣೆ ಪೊಲೀಸರು ಮಂಜುನಾಥ್ ಎಂಬ ಆರೋಪಿಯನ್ನು ಆರೆಸ್ಟ್ ಮಾಡಿದ್ದಾರೆ.
ಅಂದು ರಾತ್ರಿ ಜಕ್ಕೂರು ಮುಖ್ಯ ರಸ್ತೆಯಲ್ಲಿ ಬೀದಿ ನಾಯಿಯೊಂದು ಅಪಘಾತಕ್ಕೆ ಒಳಗಾಗಿತ್ತು. ಕಾರು ನಿಲ್ಲಿಸಿ ಶ್ವಾನದ ರಕ್ಷಣೆಗೆ ಮುಂದಾಗಿದ್ದ ಯುವತಿಗೆ ಬೈಕ್‌ನಲ್ಲಿ ಬಂದ ಆರೋಪಿ ಬ್ಯಾಡ್ ಟಚ್ ಮಾಡಿ ಪರಾರಿಯಾಗಿದ್ದ. ನಾಯಿಯನ್ನು ರಕ್ಷಿಸಿದ್ದರಿಂದ ಯುವತಿ ಕೈಗೆ ರಕ್ತ ಆಗಿತ್ತು. ಈ ಹಿನ್ನೆಲೆಯಲ್ಲಿ ಪೆಟ್ರೋಲ್ ಬಂಕ್ ಬಳಿ ಯುವತಿ ಕೈ ತೊಳೆದುಕೊಳ್ಳುತ್ತಿದ್ದರು. ಸ್ವಲ್ಪ ಹೊತ್ತಿನ ಬಳಿಕ ಮತ್ತೆ ಬಂದು ಯುವತಿಯ ಖಾಸಗಿ ಅಂಗ ಮುಟ್ಟಿ ಆರೋಪಿ ಪರಾರಿಯಾಗಿದ್ದ. ಘಟನೆ ಸಂಬಂಧ ಅಮೃತಹಳ್ಳಿ ಠಾಣೆಯಲ್ಲಿ ಯುವತಿ ದೂರು ದಾಖಲಿಸಿದ್ದು, ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: Physical Abuse: ಬೆಂಗಳೂರಿನ ನಡುರಸ್ತೆಯಲ್ಲೇ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ