ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bengaluru Roads: ಮೊದಲು ರಸ್ತೆ ಗುಂಡಿ ಮುಚ್ಚಿ ಮಾನ ಕಾಪಾಡಿಕೊಳ್ಳಿ; ಡಿಕೆಶಿ ವಿರುದ್ಧ ಜೆಡಿಎಸ್‌ ಕಿಡಿ

Bengaluru Roads: ಬೆಂಗಳೂರಿನ ಮೂಲಸೌಕರ್ಯದ ಬಗ್ಗೆ ಉದ್ಯಮಿಗಳು ಕಳವಳಗೊಂಡಾಗ ಅವರಿಗೆ ಕೇಂದ್ರ ಸಚಿವರಾದ ಎಚ್‌.ಡಿ.ಕುಮಾರಸ್ವಾಮಿ ಅವರು ನೈತಿಕ ಸ್ಥೈರ್ಯ ತುಂಬಿದ್ದಾರೆ. ಅದರಲ್ಲಿ ತಪ್ಪೇನಿದೆ? ರಸ್ತೆಗಳ ನಿರ್ವಹಣೆ ನಿಮ್ಮ ಕೈಯಲ್ಲಿ ಆಗಲಿಲ್ಲ ಎಂದರೆ, ಬೆಂಗಳೂರು ಉಸ್ತುವಾರಿ ಬಿಡಿ. ಟ್ವಿಟ್ಟರ್ ಗಿಟ್ಟರ್ ಎಂದು ನಾಲಿಗೆ ಜಾರಬೇಡಿ ಎಂದು ಜೆಡಿಎಸ್‌ ಕಿಡಿಕಾರಿದೆ.

ಬೆಂಗಳೂರು: ಡಿಸಿಎಂ ಡಿ.ಕೆ. ಶಿವಕುಮಾರ್ ಅವರೇ, ನಿಮ್ಮಲ್ಲೇನೋ ಮೂಲಭೂತ ಸಮಸ್ಯೆ ಇದೆ. ಬರೀ ಧಿಮಾಕು, ಎಲ್ಲವನ್ನೂ ಬಲ್ಲೆ ಎನ್ನುವ ಪೋಷಾಕು! ಅದಕ್ಕೆ ಏನೋ ಬೆಂಗಳೂರಿನ ಮೂಲಭೂತ ಸೌಕರ್ಯ (Bengaluru Roads) ಎಕ್ಕುಟ್ಟಿ ಹೋಗಿದೆ ಎಂದು ಜೆಡಿಎಸ್‌ ಕಿಡಿಕಾರಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಯಿಸಿರುವ ಜೆಡಿಎಸ್‌, ಬಹುಶಃ, ನಿಮಗೆ ನೆಟ್ ವರ್ಕಿಂಗ್ ಸಮಸ್ಯೆ ಕಾಡುತ್ತಿರಬಹುದು. ನಿಮ್ಮ ಮಿದುಳು, ನಾಲಿಗೆಯ ನಡುವೆ ಲೈನಪ್ ಸರಿ ಇದ್ದಂತೆ ಇಲ್ಲ! ಏಕೆಂದರೆ, ಇನ್ನೊಬ್ಬರ ಹೇಳಿಕೆಯನ್ನು ಅರ್ಥೈಸಿಕೊಳ್ಳುವ ಬೌದ್ಧಿಕ ಸಾಮರ್ಥ್ಯ ನಿಮಗಿಲ್ಲ. ಅಸಂಬದ್ಧವಾಗಿ ಪ್ರತಿಕ್ರಿಯೆ ಕೊಡುತ್ತೀರಿ. ನಗೆಪಾಟಲಿಗೆ ತುತ್ತಾಗುತ್ತೀರಿ ಎಂದು ವ್ಯಂಗ್ಯವಾಡಿದೆ.

ನಗರದ ಮೂಲಸೌಕರ್ಯದ ಬಗ್ಗೆ ಉದ್ಯಮಿಗಳು ಕಳವಳಗೊಂಡಾಗ ಅವರಿಗೆ ಕೇಂದ್ರ ಸಚಿವರಾದ ಎಚ್‌.ಡಿ.ಕುಮಾರಸ್ವಾಮಿ ಅವರು ನೈತಿಕ ಸ್ಥೈರ್ಯ ತುಂಬಿದ್ದಾರೆ. ಅದರಲ್ಲಿ ತಪ್ಪೇನಿದೆ? ಕೇಂದ್ರದ ಅನುದಾನ ತರಲಿ ಎನ್ನುತ್ತೀರಿ? ಟ್ವಿಟ್ಟರ್ ಗಿಟ್ಟರ್ ಎನ್ನುತ್ತೀರಿ. ಆ ಬಗ್ಗೆ ಆಮೇಲೆ ಹೇಳೋಣ. ತೆರಿಗೆ ಬೀಜಾಸುರನಂತೆ ಬೆಂಗಳೂರು ಜನರ ರಕ್ತ ಹೀರಿ ತೆರಿಗೆ ಪೀಕುತ್ತಿದ್ದೀರಲ್ಲ, ಮೊದಲು ಅದಕ್ಕೆ ಲೆಕ್ಕ ಮಡಗಿ. ಅದು ಯಾರಪ್ಪನ ದುಡ್ಡು ಅಲ್ಲ. ಜನರ ಬೆವರಿನ ಹಣ. ಆ ದುಡ್ಡು ಎಲ್ಲಿ ಹೋಗುತ್ತಿದೆ? ಅದನ್ನೇ ಕುಮಾರಸ್ವಾಮಿ ಅವರು ಕೇಳಿದ್ದು ಎಂದು ತಿಳಿಸಿದೆ.

ಉದ್ಯಮಿಗಳಿಗೆ ಧಮ್ಕಿ ಹಾಕಿ, ದಾದಾಗಿರಿ ಮಾಡುವುದಕ್ಕೆ ನಿಮ್ಮನ್ನು ಡಿಸಿಎಂ ಮಾಡಿಲ್ಲ ಮಿ. ಶಿವಕುಮಾರ್. ಕೆಲಸ ಮಾಡಿ ಎಂದು ಜನ ಕೂರಿಸಿದ್ದಾರೆ. ಆ ಹಳೆಯ ಚಾಳಿ ಬಿಡಿ. ದಾದಾಗಿರಿಯ ದಿನಗಳು ಮುಗಿದವು. ಮೊದಲು ರಸ್ತೆ ಗುಂಡಿ ಮುಚ್ಚಿ ಮಾನ ಕಾಪಾಡಿಕೊಳ್ಳಿ. ಕೈಯಲ್ಲಿ ಆಗಲಿಲ್ಲ ಎಂದರೆ, ಬೆಂಗಳೂರು ಉಸ್ತುವಾರಿ ಬಿಡಿ. ಟ್ವಿಟ್ಟರ್ ಗಿಟ್ಟರ್ ಎಂದು ನಾಲಿಗೆ ಜಾರಬೇಡಿ. ಜಗತ್ತಿನಲ್ಲಿ ಏನೇನು ಆಗುತ್ತಿದೆ ಎಂಬುದನ್ನು ಗಮನಿಸಿ ಎಂದು ಹೇಳಿದೆ.

ಈ ಸುದ್ದಿಯನ್ನೂ ಓದಿ | Prof R G Hegde Column: ರಸ್ತೆಗಳು ಇರುವುದು ಸಂಚಾರಕ್ಕಾಗಿ, ಮೆರವಣಿಗೆಗಾಗಿ ಅಲ್ಲ

ರಸ್ತೆ ಗುಂಡಿಗಳನ್ನು ಬೇಗ ಮುಚ್ಚುವಂತೆ ಸೂಚನೆ

ಬೆಂಗಳೂರು: ಎಲ್ಲಾ ಐದು ನಗರ ಪಾಲಿಕೆಗಳಿಗೆ ಸರ್ಕಾರ ಬಿಡುಗಡೆ ಮಾಡಿರುವ ತಲಾ 25 ಕೋಟಿ ರೂ. ಬಳಸಿಕೊಂಡು ರಸ್ತೆ ಗುಂಡಿಗಳನ್ನು ಶೀಘ್ರ ಮುಚ್ಚುವಂತೆ ಅಧಿಕಾರಿಗಳಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಸೂಚಿಸಿದ್ದಾರೆ.

ರಸ್ತೆ ಗುಂಡಿಗಳ ಕುರಿತು ಸಾರ್ವಜನಿಕವಾಗಿ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಗುರುವಾರ ಅಧಿಕಾರಿಗಳ ಜತೆ ನಡೆಸಿ ಸಭೆಯಲ್ಲಿ ಮಾತನಾಡಿದ ಅವರು, ರಸ್ತೆಗಳು ಹಾಗೂ ಗುಂಡಿಗಳ ಸಂಖ್ಯೆ, ಗುತ್ತಿಗೆದಾರರ ನಿಯೋಜನೆ, ತಗಲುವ ವೆಚ್ಚ, ಕಾಮಗಾರಿ ಮಾದರಿಯ ಕುರಿತು ವಿವರವಾದ ವರದಿ ನೀಡಬೇಕು. ಗುಂಡಿ ಮುಚ್ಚಲು ನೋಡಲ್ ಅಧಿಕಾರಿಗಳನ್ನು ನಿಯೋಜಿಸಬೇಕು. ಗುತ್ತಿಗೆದಾರರಿಂದ ಗುಂಡಿಗಳನ್ನು ಮುಚ್ಚಿಸುತ್ತಿರುವ ಕುರಿತು ಮೇಲ್ವಿಚಾರಣೆ ಮಾಡಬೇಕು ಎಂದು ಅವರು ನಿರ್ದೇಶನ ನೀಡಿದರು.