PM Narendra Modi: ನಾಳೆ ಬೆಂಗಳೂರಿನಲ್ಲಿ ಪಿಎಂ ಮೋದಿ, ಈ ರಸ್ತೆಗಳಲ್ಲಿ ಸಂಚಾರ ನಿರ್ಬಂಧ, ಪರ್ಯಾಯ ಮಾರ್ಗ ಸೂಚನೆ
Narendra Modi: ಪ್ರಧಾನಿ ಮೋದಿಯವರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೇಲ್ವೆ ನಿಲ್ದಾಣದಲ್ಲಿ, ರಾಗೀಗುಡ್ಡ ಮೆಟ್ರೋ ನಿಲ್ದಾಣದಲ್ಲಿ ಹಾಗೂ ಎಲೆಕ್ಟ್ರಾನಿಕ್ ಸಿಟಿಯ ಐಐಐಟಿ ಕೇಂದ್ರದ ಸಭಾಂಗಣದಲ್ಲಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಪ್ರದೇಶಗಳ ಆಸುಪಾಸಿನಲ್ಲಿ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.


ಬೆಂಗಳೂರು: ಭಾನುವಾರ ಬೆಂಗಳೂರಿನಲ್ಲಿ (Bengaluru) ನಮ್ಮ ಮೆಟ್ರೊ ಹಳದಿ ಮಾರ್ಗ (Namma Metro Yellow Line) ಉದ್ಘಾಟನಾ ಸಮಾರಂಭ ನಡೆಯಲಿದ್ದು, ಅದರಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ (PM Narendra Modi) ಆಗಮಿಸಲಿದ್ದಾರೆ. ಹಲವಾರು ಗಣ್ಯ ವ್ಯಕ್ತಿಗಳು ಮತ್ತು ಸಾವಿರಾರು ಜನರು ಭಾಗವಹಿಸಲಿದ್ದಾರೆ. ಈ ಕಾರಣದಿಂದ ನಗರದ ಕೆಲವು ಪ್ರಮುಖ ರಸ್ತೆಗಳಲ್ಲಿ ಸಂಚಾರ ನಿರ್ಬಂಧ ಮತ್ತು ಪರ್ಯಾಯ ಮಾರ್ಗಗಳನ್ನು ಘೋಷಿಸಲಾಗಿದೆ.
ಮೋದಿಯವರು ಬೆಳಗ್ಗೆ 11.15ಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೇಲ್ವೆ ನಿಲ್ದಾಣದಲ್ಲಿ ಹೊಸ ಮೂರು ವಂದೇ ಭಾರತ್ ರೈಲುಗಳ ಸಂಚಾರಕ್ಕೆ ಹಸಿರು ನಿಶಾನೆ ತೋರಲಿದ್ದಾರೆ. 11.45ಕ್ಕೆ ಆರ್.ವಿ.ರಸ್ತೆಯ ರಾಗೀಗುಡ್ಡ ಮೆಟ್ರೋ ನಿಲ್ದಾಣದಲ್ಲಿ ನೂತನ ಹಳದಿ ಮಾರ್ಗಕ್ಕೆ ಚಾಲನೆ ನೀಡಿ ಅದೇ ರೈಲಿನಲ್ಲಿ ಎಲೆಕ್ಟ್ರಾನಿಕ್ ಸಿಟಿಗೆ ಪ್ರಯಾಣಿಸಲಿದ್ದಾರೆ. 12.55ಕ್ಕೆ ಎಲೆಕ್ಟ್ರಾನಿಕ್ ಸಿಟಿಯ ಐಐಐಟಿ ಕೇಂದ್ರದ ಸಭಾಂಗಣಕ್ಕೆ ಆಗಮಿಸಿ ಮೆಟ್ರೋ 3ನೇ ಹಂತದ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಪ್ರದೇಶಗಳ ಆಸುಪಾಸಿನಲ್ಲಿ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.
ಬೆಳಗ್ಗೆ 8:30 ರಿಂದ ಮಧ್ಯಾಹ್ನ 12:00ರವರೆಗೆ: ಮಾರೇನಹಳ್ಳಿ ಮುಖ್ಯ ರಸ್ತೆಯ ರಾಜಲಕ್ಷ್ಮಿ ಜಂಕ್ಷನ್‌ನಿಂದ 18ನೇ ಮುಖ್ಯ ರಸ್ತೆಯವರೆಗೆ ಹಾಗೂ ಮಾರೇನಹಳ್ಳಿ ಈಸ್ಟ್ ಎಂಡ್ ಮುಖ್ಯ ರಸ್ತೆ ಜಂಕ್ಷನ್‌ನಿಂದ ಅರವಿಂದ ಜಂಕ್ಷನ್‌ವರೆಗೆ ಸಂಚಾರ ನಿರ್ಬಂಧಿಸಲಾಗಿದೆ.
ಬೆಳಗ್ಗೆ 9:30 ರಿಂದ ಮಧ್ಯಾಹ್ನ 2:30ರವರೆಗೆ: ಸಿಲ್ಕ್ ಬೋರ್ಡ್ ಕಡೆಯಿಂದ ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ಫ್ಲೈಓವರ್ ಮತ್ತು ಹೊಸೂರು ರಸ್ತೆಯ ಮೂಲಕ ಹೊಸೂರು ಕಡೆಗೆ ಹಾಗೂ ಹೊಸೂರು ಕಡೆಯಿಂದ ಬೆಂಗಳೂರು ನಗರದ ಕಡೆಗೆ ಸಂಚಾರಕ್ಕೆ ನಿರ್ಬಂಧ ಇರಲಿದೆ. ಇದಲ್ಲದೆ, ಎಲೆಕ್ಟ್ರಾನಿಕ್ ಸಿಟಿ 1ನೇ ಹಂತದ ಇನ್‌ಫೋಸಿಸ್ ಅವೆನ್ಯೂ, ವೇಲಾಂಕಣಿ ರಸ್ತೆ ಮತ್ತು ಹೆಚ್.ಪಿ. ಅವೆನ್ಯೂ ರಸ್ತೆಗಳಲ್ಲಿ ಕೂಡ ವಾಹನ ಸಂಚಾರ ನಿರ್ಬಂಧಿಸಲಾಗಿದೆ.
ಪರ್ಯಾಯ ಮಾರ್ಗಗಳು
ಮಾರೇನಹಳ್ಳಿ ಮುಖ್ಯ ರಸ್ತೆಯ ರಾಜಲಕ್ಷ್ಮಿ ಜಂಕ್ಷನ್‌ನಿಂದ ಜಯದೇವ ಕಡೆಗೆ ಹೋಗುವ ವಾಹನ ಸವಾರರು ಬನಶಂಕರಿ ಬಸ್ ನಿಲ್ದಾಣದ ಮೂಲಕ ಸಾರಕ್ಕಿ ಮಾರ್ಕೆಟ್ ರಸ್ತೆ/9ನೇ ಕ್ರಾಸ್ ರಸ್ತೆಯಲ್ಲಿ ಎಡ ತಿರುವು ಪಡೆದು ಐ.ಜಿ. ಸರ್ಕಲ್, ಆರ್.ವಿ. ಡೆಂಟಲ್ ಜಂಕ್ಷನ್ ಮಾರ್ಗವಾಗಿ ಜಯದೇವ ಕಡೆಗೆ ತಲುಪಬಹುದು.
ಹೊಸೂರು ರಸ್ತೆಯಿಂದ ಕನಕಪುರ ರಸ್ತೆ, ಮೈಸೂರು ರಸ್ತೆ ಮತ್ತು ತುಮಕೂರು ರಸ್ತೆ ಕಡೆಗೆ ಹೋಗುವ ವಾಹನಗಳು ಹೊಸೂರು ರಸ್ತೆ ಬೊಮ್ಮಸಂದ್ರ ಜಂಕ್ಷನ್‌ನಿಂದ ಜಿಗಣಿ ರಸ್ತೆಯ ಮೂಲಕ ಬನ್ನೇರುಘಟ್ಟ ರಸ್ತೆಯಲ್ಲಿ ನೈಸ್ ರಸ್ತೆಯನ್ನು ತಲುಪಬಹುದು.
ನೈಸ್ ರಸ್ತೆಯಿಂದ ಹೊಸೂರು ಕಡೆಗೆ ಹೋಗುವವರು ಬನ್ನೇರುಘಟ್ಟ ಜಂಕ್ಷನ್‌ನಲ್ಲಿ ಇಳಿದು, ಜಿಗಣಿ ರಸ್ತೆಯ ಮೂಲಕ ಬೊಮ್ಮಸಂದ್ರ ಜಂಕ್ಷನ್‌ನಲ್ಲಿ ಹೊಸೂರು ರಸ್ತೆಯನ್ನು ತಲುಪಿ ಪ್ರಯಾಣಿಸುವುದು.
ಹೆಚ್.ಎಸ್‌ಆರ್. ಲೇಔಟ್, ಕೋರಮಂಗಲ, ಬೆಳ್ಳಂದೂರು, ವೈಟ್‌ಫೀಲ್ಡ್‌ನಂತಹ ಪ್ರದೇಶಗಳಿಂದ ಹೊಸೂರು ಕಡೆಗೆ ಹೋಗುವವರು ಸರ್ಜಾಪುರ ರಸ್ತೆಯ ಮೂಲಕ ಚಂದಾಪುರ ತಲುಪಿ ನಂತರ ಹೊಸೂರು ಕಡೆಗೆ ಪ್ರಯಾಣಿಸಬಹುದು.
ಎಲೆಕ್ಟ್ರಾನಿಕ್ ಸಿಟಿ 1ನೇ ಹಂತದಲ್ಲಿ ಸಂಚರಿಸುವ ವಾಹನಗಳು 2ನೇ ಕ್ರಾಸ್ ರಸ್ತೆ, ಶಿಕಾರಿಪಾಳ್ಯ ರಸ್ತೆ, ಹುಲಿಮಂಗಲ ರಸ್ತೆ ಮತ್ತು ಗೊಲ್ಲಹಳ್ಳಿ ರಸ್ತೆಗಳನ್ನು ಬಳಸಬಹುದು. ಸಾರ್ವಜನಿಕರು ಈ ಬದಲಾವಣೆಗಳನ್ನು ಗಮನಿಸಿ, ತಮ್ಮ ಪ್ರಯಾಣವನ್ನು ಯೋಜಿಸಿಕೊಳ್ಳುವಂತೆ ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.
ಇದನ್ನೂ ಓದಿ: Narendra Modi: ನಾಳೆ ಬೆಂಗಳೂರಿಗೆ ಪಿಎಂ ನರೇಂದ್ರ ಮೋದಿ; ನಮ್ಮ ಮೆಟ್ರೋ ಹಳದಿ ಮಾರ್ಗ, ವಂದೇ ಭಾರತ್ ರೈಲಿಗೆ ಚಾಲನೆ