ಬೆಂಗಳೂರು: ಬೆಂಗಳೂರಿನಲ್ಲಿ (Bengaluru) ಚಾಲಕರ ಅಜಾಗರೂಕತೆ ಹಾಗೂ ನಿರ್ಲಕ್ಷ್ಯದಿಂದ ಬಿಎಂಟಿಸಿ ಬಸ್ಸುಗಳಿಗೆ ಅನೇಕರು ಬಲಿಯಾಗಿದ್ದಾರೆ. ಇಂದು ಬಿಎಂಟಿಸಿಗೆ (BMTC bus accident) ಮತ್ತೊಬ್ಬ ಮಹಿಳೆ ಬಲಿಯಾಗಿದ್ದಾರೆ. ರೇಷ್ಮೆ ಸಂಸ್ಥೆಯ ಮೆಟ್ರೋ ಸ್ಟೇಷನ್ ಬಳಿ ಘಟನೆ ನಡೆದಿದೆ. ಕನಕಪುರ ಮಾರ್ಗದಲ್ಲಿ ಸಂಚರಿಸುವ ಬಸ್ಸೊಂದು ಇಂದು ಬೆಳಗ್ಗೆ ದ್ವಿಚಕ್ರ ವಾಹನವೊಂದಕ್ಕೆ ಗುದ್ದಿ ಅದರ ಮೇಲೆ ಹರಿದುಹೋದ ಕಾರಣ ಪಿಲಿಯನ್ ರೈಡರ್ ಆಗಿದ್ದ ಮಹಿಳೆ ಮೃತಪಟ್ಟಿದ್ದಾರೆ. ವಾಹನ ಓಡಿಸುತ್ತಿದ್ದ ಅವರ ಅಳಿಯ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವು ಬದುಕಿನೊಂದಿಗೆ ಹೋರಾಟ ನಡೆಸುತ್ತಿದ್ದಾರೆ
ಕಳೆದ ಶುಕ್ರವಾರವಷ್ಟೇ ಪೀಣ್ಯದ ಎರಡನೇ ಹಂತದಲ್ಲಿ ರಸ್ತೆ ಬದಿಯಲ್ಲಿ ನಿಂತಿದ್ದ ಐವರ ಮೇಲೆ ಚಾಲಕ ಬಿಎಂಟಿಸಿ ಬಸ್ ಹತ್ತಿಸಿದ್ದ ಪರಿಣಾಮ 25 ವರ್ಷದ ಸುಮ ಎನ್ನುವ ಮಹಿಳೆ ಸಾವನಪ್ಪಿದ್ದರು. ಇಂದು ಬೆಂಗಳೂರಿನ ರೇಷ್ಮೆ ಸಂಸ್ಥೆಯ ಮೆಟ್ರೋ ಸ್ಟೇಷನ್ ಬಳಿ ಮತ್ತೊಂದು ಅಪಘಾತ ಸಂಭವಿಸಿದೆ. ಬೈಕ್ ಸವಾರನಿಗೆ ಗಂಭೀರವಾದ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ಆತನನ್ನು ಶಿಫ್ಟ್ ಮಾಡಲಾಗಿದೆ. ಕೆಆರ್ ಮಾರ್ಕೆಟ್‌ನಿಂದ ಹಂಚಿಪುರ ಕಾಲೋನಿಗೆ ತೆರಳುತ್ತಿದ್ದ KA 01 F 4168 ಸಂಖ್ಯೆಯ ಬಿಎಂಟಿಸಿ ಬಸ್‌ನಿಂದ ಈ ಅಪಘಾತ ಸಂಭವಿಸಿದೆ.
ಬೆಂಗಳೂರಿನ ಮತ್ತೊಂದು ಶಾಲೆಗೆ ಬಾಂಬ್ ಬೆದರಿಕೆ
ಬೆಂಗಳೂರು: ಬೆಂಗಳೂರಿನ (Bengaluru) ಮತ್ತೊಂದು ಶಾಲೆಗೆ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಕ್ರಿಸಲಿಸ್ ಹೈ ಶಾಲೆಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ (Bomb Threat) ಹಾಕಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಶಾಲೆಗೆ ರಜೆ ನೀಡಿ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಲಾಗಿದೆ ಎಂದು ಶಾಲಾ ಆಡಳಿತ ಮಂಡಳಿ ತಿಳಿಸಿದೆ. ಶಾಲೆಗೆ ವರ್ತೂರು ಠಾಣೆಯ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ ಹಾಗೂ ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದೆ.
ಜುಲೈ 18ರಂದು ಆರ್.ಆರ್ ನಗರ, ಕೆಂಗೇರಿಯ ಶಾಲೆಗಳೂ ಸೇರಿದಂತೆ ಬೆಂಗಳೂರಿನ 40 ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶ ಬಂದಿತ್ತು. ಆಯಾ ಶಾಲೆಗಳಿಗೆ ಭೇಟಿ ನೀಡಿದ್ದ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯದಳ ಸಿಬ್ಬಂದಿ ಮಕ್ಕಳನ್ನು ಹೊರಗೆ ಕಳುಹಿಸಿ ತಪಾಸಣೆ ಮಾಡಿದ್ದರು. ಬಳಿಕ ಅವುಗಳೆಲ್ಲ ಹುಸಿ ಬಾಂಬ್ ಬೆದರಿಕೆ ಸಂದೇಶಗಳು ಎಂಬುದು ಬೆಳಕಿಗೆ ಬಂದಿತ್ತು.
ಇದನ್ನೂ ಓದಿ: Road Accident: ರಸ್ತೆ ಬದಿ ನಿಂತಿದ್ದವರಿಗೆ ಅಪ್ಪಳಿಸಿದ ಬಿಎಂಟಿಸಿ, ಒಬ್ಬ ಸಾವು, ನಾಲ್ವರಿಗೆ ಗಾಯ