ಬೆಂಗಳೂರು: ಸಂಚಾರ ಪೊಲೀಸರನ್ನು ಅವಾಚ್ಯವಾಗಿ ನಿಂದಿಸಿ, ರಸ್ತೆಯಲ್ಲಿ ಹೈಡ್ರಾಮಾ ಮಾಡಿದ್ದ ಹಿಂದಿ ಮಹಿಳೆ ಸೇರಿ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ಬೆಂಗಳೂರಿನ ಯಲಹಂಕ ಬಳಿಕ ಶೇಷಾದ್ರಿ ಪುರಂ ಕಾಲೇಜು ಬಳಿ (Bengaluru News) ಮಹಿಳೆ ಮತ್ತು ಆಕೆಯ ಸಹ ಸವಾರ ನೋ ಪಾರ್ಕಿಂಗ್ ಜಾಗದಲ್ಲಿ ಗುರುವಾರ ದ್ವಿಚಕ್ರ ವಾಹನ ನಿಲ್ಲಿಸಿದ್ದರು. ಇದನ್ನು ಗಮನಿಸಿದ ಸಂಚಾರ ಪೊಲೀಸರು ಬೈಕ್‌ಗೆ ವೀಲ್ ಕ್ಲಾಂಪ್ ಹಾಕಿದ್ದರು. ಹೀಗಾಗಿ ಸಿಟ್ಟಗೆದ್ದ ಮಹಿಳೆ, ಸಂಚಾರ ಪೊಲೀಸರ ವಿರುದ್ಧವೇ ಹರಿಹಾಯ್ದಿದ್ದಳು.
ಪುರುಷ ಪೊಲೀಸ್ ವಿರುದ್ಧ ಮಾತ್ರವಲ್ಲದೇ ಸಂಚಾರ ಮಹಿಳಾ ಪೊಲೀಸರ ವಿರುದ್ಧವೂ ಅವಾಚ್ಯವಾಗಿ ನಿಂದನೆ ಮಾಡಿದ್ದರು. ಈ ವೇಳೆ ಪೊಲೀಸರು ಮಹಿಳೆ ಜತೆಗೆ ಕೆಲಸ ಮಾಡುತ್ತಿದ್ದ ಬೈಕ್ ಸವಾರನಿಗೆ ನೀವು ಈ ರೀತಿ ವರ್ತಿಸಿದರೆ ಜೈಲಿಗೆ ಕಳುಹಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಲೇ ಮಹಿಳೆ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನೆಟ್ಟಿಗರು ಕಿಡಿಕಾರಿದ್ದರು.
ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ್ದ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ, ಈ ಮಹಿಳೆಗೆ ಅದೆಷ್ಟು ದುರಹಂಕಾರ ನೋಡಿ. ರಾಜ್ಯದ ಪೊಲೀಸರನ್ನೇ ಇಂತಹ ಕೀಳು ಭಾಷೆಯಲ್ಲಿ ಮಾತಾಡ್ತಾರೆ ಅಂದ್ರೆ ಇವರೆಗೆಷ್ಟು ಕೊಬ್ಬು ಇರಬೇಕು. ನಮ್ಮ ಮೇಲೆಯೇ ಹಲ್ಲೆ, ಪೊಲೀಸರನ್ನೇ ಬೆದರಿಸೋದು ಏನಿದು? ಎಂದು ಮಹಿಳೆ ವಿರುದ್ಧ ಕ್ರಮ ಜರುಗಿಸಲು ಪೊಲೀಸರಿಗೆ ಆಗ್ರಹಿಸಿದ್ದರು.
ಪೊಲೀಸರ ಮೇಲೆ ಕೂಗಾಡುವುದರಿಂದ ನೀವು ವೀರರಾಗುವುದಿಲ್ಲ. ಅಸಭ್ಯ ಪದಗಳು ಮತ್ತು ಬೆದರಿಕೆಗಳು ನಿಮಗೆ ವಿಶೇಷ ವ್ಯಕ್ತಿಯಂತೆ ವಿಶೇಷ ಉಪಚಾರದ ಪಾಸ್‌ಗೆ ಕಾರಣವಾಗಬಹುದು—ಅದುವೇ ನೇರ ಪೊಲೀಸ್ ಠಾಣೆಗೆ. ಎಚ್ಚರಿಕೆ! ಬೆಂಗಳೂರು ನಗರ ಪೊಲೀಸರು ನಿಮ್ಮನ್ನು ಗಮನಿಸುತ್ತಿದ್ದಾರೆ.
— ಬೆಂಗಳೂರು ನಗರ ಪೊಲೀಸ್ BengaluruCityPolice (@BlrCityPolice) August 15, 2025
Shouting at the police won’t make you a hero. Vulgar words… pic.twitter.com/qzFAesPJza
ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಕೊನೆಗೂ ಹಿಂದಿ ಭಾಷಿಕ ಮಹಿಳೆ ಮೇಲೆ ಬೆಂಗಳೂರು ಸಂಚಾರ ಪೊಲೀಸರು ಕ್ರಮ ಕೈಗೊಂಡಿದ್ದು, ಮಹಿಳೆ ಮತ್ತು ಆಕೆಯ ಸಹ ಸವಾರನನ್ನು ವಶಕ್ಕೆ ಪಡೆದು ಇಬ್ಬರ ವಿರುದ್ಧ ಬಿಎನ್ಎಸ್ ಕಾಯ್ದೆ 132, 352, 79, 75 ಮತ್ತು ಇತರೆ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಂಧಿತರನ್ನು ಮಹಮದ್ ಸರ್ಬಸ್ (ಸಹ ಸವಾರ) ಮತ್ತು 37 ವರ್ಷದ ಮಹಿಳೆ ಹಿರಲ್ವ್ಯಾಸ್ ಎಂದು ಗುರುತಿಸಲಾಗಿದೆ. ಇಬ್ಬರೂ ಯಲಹಂಕ ನಿವಾಸಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Viral Video: ಛದ್ಮವೇಷ ಸ್ಪರ್ಧೆಗೆ ಉಷ್ಟ್ರ ಪಕ್ಷಿಯಂತೆ ವೇದಿಕೆಗೆ ಬಂದ ಬಾಲಕ; ಆಮೇಲೆ ಆಗಿದ್ದೇನು? ವಿಡಿಯೊ ನೋಡಿ
ಕೂಗಾಡುವುದರಿಂದ ನೀವು ವೀರರಾಗುವುದಿಲ್ಲ
ಪೊಲೀಸರ ಮೇಲೆ ಕೂಗಾಡುವುದರಿಂದ ನೀವು ವೀರರಾಗುವುದಿಲ್ಲ. ಅಸಭ್ಯ ಪದಗಳು ಮತ್ತು ಬೆದರಿಕೆಗಳು ನಿಮಗೆ ವಿಶೇಷ ವ್ಯಕ್ತಿಯಂತೆ ವಿಶೇಷ ಉಪಚಾರದ ಪಾಸ್‌ಗೆ ಕಾರಣವಾಗಬಹುದು. ಅದುವೇ ನೇರ ಪೊಲೀಸ್ ಠಾಣೆಗೆ. ಎಚ್ಚರಿಕೆ!... ಬೆಂಗಳೂರು ನಗರ ಪೊಲೀಸರು ನಿಮ್ಮನ್ನು ಗಮನಿಸುತ್ತಿದ್ದಾರೆ ಎಂದು ಅಪರಾಧ ಎಸಗುವವರಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.