ಬೆಂಗಳೂರು: ನಗರದಲ್ಲಿ ಕಟ್ಟಡ ನಿರ್ಮಾಣದ ವೇಳೆಯಲ್ಲಿ ಮಣ್ಣು ಕುಸಿದು ಇಬ್ಬರು ಕಾರ್ಮಿಕರು ಮೃತಪಟ್ಟಿದ್ದು, ಮತ್ತೊಬ್ಬ ಕಾರ್ಮಿಕ ಗಂಭೀರವಾಗಿ ಗಾಯಗೊಂಡಿದ್ದಾರೆ. ಬೆಂಗಳೂರಿನ ಮಡಿವಾಳದ ಸಿದ್ಧಾರ್ಥ ಕಾಲೋನಿಯಲ್ಲಿ ದುರ್ಘಟನೆ ನಡೆದಿದೆ. ಕಟ್ಟಡ ನಿರ್ಮಾಣದ ವೇಳೆಯಲ್ಲಿ ಮಣ್ಣು ಕುಸಿದು ಲಾಲ್ ಮದನ್(33) ಹಾಗೂ ರಜಾವುದ್ದೀನ್ (30) ದುರ್ಮರಣ ಹೊಂದಿದ್ದಾರೆ. ಮತ್ತೊಬ್ಬ ಕಾರ್ಮಿಕ ಸೈಪುಲ್ಲಾ ಸ್ಥಿತಿ ಗಂಭೀರವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಟ್ಟಡ ನಿರ್ಮಾಣಕ್ಕೆ ಪಿಲ್ಲರ್ ಹಾಕಲು ಮಣ್ಣು ತೆಗೆಯುತ್ತಿದ್ದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ. ಪಿಲ್ಲರ್‌ಗಾಗಿ 20ಕ್ಕೂ ಹೆಚ್ಚು ಅಡಿ ಮಣ್ಣು ತೆಗೆಯಲಾಗುತ್ತಿತ್ತು. ಈ ವೇಳೆ ಕೆಳಗೆ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ಮಣ್ಣು ಬಿದ್ದು ಇಬ್ಬರು ಮೃತಪಟ್ಟಿದ್ದಾರೆ. ಈ ಸಂಬಂಧ ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಿಳೆಯ ಖಾಸಗಿ ವಿಡಿಯೋ ಇಟ್ಕೊಂಡು ಬ್ಲ್ಯಾಕ್‌ಮೇಲ್ ಮಾಡಿ 8 ಲಕ್ಷ ವಸೂಲಿ; ಇಬ್ಬರ ವಿರುದ್ಧ ಎಫ್‌ಐಆರ್
ಬೆಂಗಳೂರು: ಮಹಿಳೆಯ ಖಾಸಗಿ ವಿಡಿಯೋ ಇಟ್ಕೊಂಡು ಬ್ಲ್ಯಾಕ್‌ಮೇಲ್ (Blackmail Case) ಮಾಡಿ ಲಕ್ಷಾಂತರ ವಸೂಲಿ ಮಾಡಿದ ಇಬ್ಬರ ವಿರುದ್ಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ರೌಡಿ ಅರಸಯ್ಯನ ಗ್ಯಾಂಗ್‌ನಲ್ಲಿ ಗುರುತಿಸಿಕೊಂಡಿರುವ ಶೂಟ್ ಗಿರಿ ಹಾಗೂ ಸ್ವರೂಪ್ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ.
2022ರಲ್ಲಿ ಸ್ವರೂಪ್‌ಗೆ ಫೇಸ್‌ಬುಕ್‌ನಲ್ಲಿ ಮಹಿಳೆ ಪರಿಚಯವಾಗಿದ್ದಳು. ನಂತರ ಮಹಿಳೆ ಬಳಿ ಸ್ವರೂಪ್, ಕಷ್ಟ ಎಂದು ಹೇಳಿಕೊಂಡು 4.42 ಲಕ್ಷ ರೂ. ಹಣ ಪಡೆದಿದ್ದ. ಮಹಿಳೆ ಹಣ ವಾಪಸ್ ಕೇಳಿದಾಗ ಆಕೆಯ ಖಾಸಗಿ ವಿಡಿಯೋ ಹಾಗೂ ಫೋಟೋ ಇಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದ. ನಿರಂತರ ಬೆದರಿಕೆ ಹಾಕಿದ್ದರಿಂದ ಮಹಿಳೆ ತನ್ನ ಚಿನ್ನಾಭರಣ ಮಾರಿ, ಮತ್ತೆ 4.2 ಲಕ್ಷ ರೂ. ಹೆಚ್ಚುವರಿ ಹಣ ನೀಡಿದ್ದರು. ಹೀಗೆ ಒಟ್ಟು 8.62 ಲಕ್ಷ ರೂ.ಗಳನ್ನು ಮಹಿಳೆಯಿಂದ ವಸೂಲಿ ಮಾಡಲಾಗಿದೆ.
ಈ ಸುದ್ದಿಯನ್ನೂ ಓದಿ |Crime News: ಅತ್ಯಾಚಾರದ ಆರೋಪ ಹೊರಿಸಿದ ಗೆಳತಿ- ಮನನೊಂದು ಯುವಕ ಆತ್ಮಹತ್ಯೆಗೆ ಶರಣು
ನೊಂದ ಮಹಿಳೆ ಪೊಲೀಸ್ ಠಾಣೆಗೆ ದೂರು ಕೊಡಲು ಮುಂದಾದಾಗ ಶೂಟ್ ಗಿರಿ ಹಣ ಕೊಡುವುದಾಗಿ ಮಹಿಳೆಯನ್ನು ತಡೆದಿದ್ದ. ಬಳಿಕ ಹಣ ಕೊಡದೇ, ಸ್ವರೂಪ್ ನಮ್ಮ ಹುಡುಗ ಅವನ ತಂಟೆಗೆ ಬಂದರೆ ಸರಿ ಇರಲ್ಲ ಎಂದು ಬೆದರಿಕೆ ಹಾಕಿದ್ದ ಎಂದು ಮಹಿಳೆ ಆರೋಪಿಸಿದ್ದಾರೆ. ಅಲ್ಲದೇ ವಿಡಿಯೋ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.