Murder Case: ಅನೈತಿಕ ಸಂಬಂಧ ಶಂಕೆ; 3 ವರ್ಷದ ಮಗು ಎದುರೇ ದಂಪತಿಯ ಬರ್ಬರ ಹತ್ಯೆ!
Murder Case: ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಕೊಹಿನೂರು ಪಹಾಡ ಬಳಿ ಜೋಡಿ ಕೊಲೆ ನಡೆದಿದೆ. ಪೊಲೀಸರು ಸ್ಥಳ ಪರಿಶೀಲಿಸಿ, ಕೊಲೆ ಮಾಡಿದ ಇಬ್ಬರು ಯುವಕರು ಹಾಗೂ ಆರೋಪಿಯ ಸಹೋದರಿ ಸೇರಿ ಮೂವರ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಬೀದರ್: ಅನೈತಿಕ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ದಂಪತಿಯನ್ನು ಬರ್ಬರವಾಗಿ ಹತ್ಯೆ (Murder Case) ಮಾಡಿರುವುದು ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಕೊಹಿನೂರು ಪಹಾಡ ಬಳಿ ಮಂಗಳವಾರ ನಡೆದಿದೆ. ತಾಲೂಕಿನ ಜಾಫರವಾಡಿ ನಿವಾಸಿ ರಾಜು ಕಾಂತಪ್ಪ ಕೊಳಸೂರೆ (28) ಹಾಗೂ ಪತ್ನಿ ಶಾರದಾ (24) ಕೊಲೆಯಾದ ದಂಪತಿ. ತಾಲೂಕಿನ ಯರಂಡಗಿ ಗ್ರಾಮದ ದತ್ತಾತ್ರೇಯ ವಾಲೆ ಹಾಗೂ ತುಕಾರಾಮ ಚಿಟಂಪಲ್ಲೆ ಕೊಲೆ ಆರೋಪಿಗಳು. ಕೊಲೆಯಾದ ರಾಜು ಆರೋಪಿ ದತ್ತಾತ್ರೇಯನ ಸಹೋದರಿಯ ಜತೆ ಅನೈತಿಕ ಸಂಬಂಧ ಹೊಂದಿದ್ದಾನೆ ಎನ್ನುವ ಸಂಶಯದ ಮೇಲೆ ಕೃತ್ಯ ನಡೆದಿದೆ ಎಂದು ತಿಳಿದುಬಂದಿದೆ.
ಪತ್ನಿಯೊಂದಿಗೆ ಮುಂಬೈಗೆ ತೆರಳಿದ್ದ ರಾಜುನನ್ನು ಕೊಲೆ ಮಾಡಲು ಸಂಚು ರೂಪಿಸಿದ ಆರೋಪಿಗಳು, ಯುವತಿ ಕಡೆಯಿಂದ ಮೊಬೈಲ್ ಕರೆ ಮಾಡಿಸಿ ಆತನನ್ನು ಕರೆಸಿಕೊಂಡಿದ್ದಾರೆ. ಬಳಿಕ ದಂಪತಿಯನ್ನು ಕೊಹಿನೂರು ಪಹಾಡ ಬಳಿ ಮಾರ್ಗದ ಮಧ್ಯೆ ಮಾತನಾಡುವ ನೆಪದಲ್ಲಿ ಗ್ರಾಮದ ಹೊರವಲಯಕ್ಕೆ ಕರೆದುಕೊಂಡು ಹೋಗಿ ಮಚ್ಚಿನಿಂದ ಕತ್ತು ಸೀಳಿ ಕೊಲೆ ಮಾಡಿದ್ದಾರೆ. ಕೊಲೆ ಮಾಡಿದ ಇಬ್ಬರು ಯುವಕರು ಹಾಗೂ ಆರೋಪಿಯ ಸಹೋದರಿ ಸೇರಿ ಮೂವರ ವಿರುದ್ದ ಪ್ರಕರಣ ದಾಖಲಾಗಿದೆ.
ಕೊಲೆಯಾದ ದಂಪತಿಗೆ ಮೂರು ವರ್ಷದ ಪುಟ್ಟ ಮಗುವಿದೆ. ಏನೂ ಅರಿಯದ ಮಗುವಿನ ಮುಂದೆಯೇ ಪಾಲಕರನ್ನು ಕೊಲೆ ಮಾಡಲಾಗಿದೆ. ತಂದೆ, ತಾಯಿಯನ್ನು ಕಳೆದುಕೊಂಡ ಮಗು ಕೊಲೆಯಾದ ಸ್ಥಳದಲ್ಲಿ ಅನಾಥವಾಗಿ ಕುಳಿತಿದ್ದ ದೃಶ್ಯ ನೋಡುಗರ ಮನಕಲಕುವಂತಿತ್ತು.
ಘಟನಾ ಸ್ಥಳಕ್ಕೆ ಎಸ್ಪಿ ಪ್ರದೀಪ್ ಗುಂಟಿ, ಡಿವೈಎಸ್ಪಿ ಜೆ.ಎಸ್. ನ್ಯಾಮಗೌಡರ್, ಸಿಪಿಐ ಕೃಷ್ಣಕುಮಾರ ಪಾಟೀಲ್, ಪಿಎಸ್ಐ ಸುವರ್ಣ ಮಲಶೆಟ್ಟಿ ಇತರರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Bribery case: ಯಾದಗಿರಿ ಪಿಡಬ್ಲ್ಯುಡಿಯಲ್ಲಿ ಭಾರಿ ಭ್ರಷ್ಟಾಚಾರ; 17 ಲಕ್ಷ ಬಿಲ್ ಪಾವತಿಗೆ 4.80 ಲಕ್ಷ ಲಂಚ ಪಡೆದ ಅಧಿಕಾರಿಗಳು!
ಬೇರೆ ಜಾತಿ ಯುವಕನನ್ನು ಪ್ರೀತಿಸಿದ್ದಕ್ಕೆ ಮಗಳನ್ನೇ ಕೊಲೆಗೈದು ನದಿಗೆ ಶವ ಎಸೆದ ತಂದೆ!

ರಾಯಚೂರು: ಬೇರೆ ಜಾತಿ ಯುವಕನನ್ನು ಪ್ರೀತಿಸಿದ್ದಕ್ಕೆ ತಂದೆಯೇ ಮಗಳನ್ನು ಕೊಲೆ ಮಾಡಿ ಶವವನ್ನು ನದಿಗೆ ಎಸೆದಿರುವ ಘಟನೆ (Honor killing) ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಂಚಿನಾಳ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಯುವಕನ ವಿರುದ್ಧದ ಪೋಕ್ಸೋ ಪ್ರಕರಣದ ವಿಚಾರಣೆ ವೇಳೆ ಆರೋಪಿಯೇ ನ್ಯಾಯಾಲಯದಲ್ಲಿ ನಿಜಾಂಶ ತಿಳಿಸಿದ್ದರಿಂದ ಘಟನೆ ಬೆಳಕಿಗೆ ಬಂದಿದೆ.
2024ರ ಸೆಪ್ಟೆಂಬರ್ 29ರಂದು ಪುತ್ರಿ ರೇಣುಕಾಳನ್ನು (18) ಕೊಲೆ ಮಾಡಿದ್ದ ತಂದೆ ಲಕ್ಕಪ್ಪ ಕಂಬಳಿ ಶವವನ್ನು ಮೂಟೆಕಟ್ಟಿ ಕೃಷ್ಣಾ ನದಿಗೆ ಎಸೆದಿದ್ದ. ಗ್ರಾಮದ ಅನ್ಯ ಜಾತಿಯ ಯುವಕ ಹನುಮಂತನನ್ನು ರೇಣುಕಾ ಪ್ರೀತಿಸಿದ್ದಳು. ಮದುವೆಗೆ ಕುಟುಂಬದವರು ವಿರೋಧ ವ್ಯಕ್ತಪಡಿಸಿದ್ದಕ್ಕೆ ಇಬ್ಬರೂ ಗ್ರಾಮ ಬಿಟ್ಟು ಓಡಿಹೋಗಿದ್ದರು. ಆಗ ರೇಣುಕಾಗೆ 17 ವರ್ಷ ವಯಸ್ಸಾಗಿತ್ತು. ಮಗಳು ಅಪ್ರಾಪ್ತ ವಯಸ್ಕಳಾಗಿದ್ದರಿಂದ ಆಕೆಯ ತಂದೆ ಲಕ್ಕಪ್ಪ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ, ಹನುಮಂತನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಲಾಗಿತ್ತು.
ಪೋಕ್ಸೋ ಪ್ರಕರಣದಡಿ ಪೊಲೀಸರು ಹನುಮಂತನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಆದರೆ, ರೇಣುಕಾ ಮಾತ್ರ ಹನುಮಂತನನ್ನೇ ಮದುವೆ ಆಗುತ್ತೇನೆಂದು ಪಟ್ಟು ಹಿಡಿದಿದ್ದಳು. ಇದಾದ ಕೆಲವು ದಿನಗಳ ನಂತರ ಹನುಮಂತ ಜಾಮೀನು ಮೇಲೆ ಹೊರ ಬಂದಿದ್ದ. ಬಳಿಕ ಆತನ ಜತೆ ರೇಣುಕಾ ಓಡಾಟ ಆರಂಭಿಸಿದ್ದಳು. ಎಷ್ಟೇ ಬುದ್ಧಿ ಹೇಳಿದರೂ ಕೇಳದೆ, ಹನುಮಂತನನ್ನೇ ಮದುವೆ ಆಗುವೆ ಎಂದಿದ್ದಳು. ಇದರಿಂದ ಕೋಪಗೊಂಡು ಮಗಳನ್ನು ಕೊಲೆ ಮಾಡಿರುವುದಾಗಿ ತಂದೆ ಲಕ್ಕಪ್ಪ ನ್ಯಾಯಾಲಯದಲ್ಲಿ ತಪ್ಪೊಪ್ಪಿಕೊಂಡಿದ್ದಾರೆ.
ಈ ಸುದ್ದಿಯನ್ನೂ ಓದಿ | Bribery case: ಯಾದಗಿರಿ ಪಿಡಬ್ಲ್ಯುಡಿಯಲ್ಲಿ ಭಾರಿ ಭ್ರಷ್ಟಾಚಾರ; 17 ಲಕ್ಷ ಬಿಲ್ ಪಾವತಿಗೆ 4.80 ಲಕ್ಷ ಲಂಚ ಪಡೆದ ಅಧಿಕಾರಿಗಳು!
ಪೋಕ್ಸೋ ಪ್ರಕರಣದ ವಿಚಾರಣೆಗೆ ಹಲವು ಬಾರಿ ಪುತ್ರಿ ರೇಣುಕಾ ಗೈರಾದ ಬಗ್ಗೆ ನ್ಯಾಯಾಧೀಶರು ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ಮಗಳನ್ನು ವಿಚಾರಣೆಗೆ ಹಾಜರುಪಡಿಸುವಂತೆ ತಾಕೀತು ಮಾಡಿದ್ದಾರೆ. ಈ ವೇಳೆ ಲಕ್ಕಪ್ಪ ಅನಿವಾರ್ಯವಾಗಿ ತಪ್ಪೊಪ್ಪಿಕೊಳ್ಳಬೇಕಾಗಿ ಬಂದಿದೆ. ಮಗಳನ್ನು ಕೊಲೆ ಮಾಡಿ ಮೂಟೆ ಕಟ್ಟಿ ನದಿಗೆ ಎಸೆದಿರುವುದಾಗಿ ಲಕ್ಕಪ್ಪ ಕೋರ್ಟ್ಗೆ ಹೇಳಿಕೆ ನೀಡಿದ್ದಾನೆ. ಇದರಿಂದಾಗಿ ಮರ್ಯಾದಾ ಹತ್ಯೆ ಪ್ರಕರಣ ಕೊನೆಗೂ ಬಯಲಾಗಿದೆ.