Elephant Arjuna: ದಸರಾ ಆನೆ ಅರ್ಜುನನ ಹೆಸರಲ್ಲಿ ಪ್ರಶಸ್ತಿ ಸ್ಥಾಪಿಸಿದ ರಾಜ್ಯ ಸರ್ಕಾರ
Forest Department: ಮಾನವ-ವನ್ಯಜೀವಿ ಸಂಘರ್ಷ ತಡೆಗಟ್ಟುವ, ವನ್ಯಪ್ರಾಣಿಗಳನ್ನು ಸೆರೆಹಿಡಿಯುವ ಕಾರ್ಯಚರಣೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಹಾಗೂ ಸೆರೆಹಿಡಿಯುವ ಆನೆಗಳನ್ನು ಪಳಗಿಸಿ ಆರೈಕೆ ಮಾಡುವಲ್ಲಿ ಯಶಸ್ವಿಯಾಗಿರುವ ಮಾವುತ/ಸಿಬ್ಬಂದಿಯನ್ನು ಗುರುತಿಸಿ ಅರ್ಜುನ ಆನೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.


ಬೀದರ್: ಹಾಸನದ ಯಸಳೂರು ಬಳಿ ಪುಂಡಾನೆ ಸೆರೆ ಕಾರ್ಯಾಚರಣೆ ವೇಳೆ ಹುತಾತ್ಮನಾದ ದಸರಾ ಆನೆ ಅರ್ಜುನನ ಹೆಸರಲ್ಲಿ ವಾರ್ಷಿಕ ಪ್ರಶಸ್ತಿ (Elephant Arjuna) ಸ್ಥಾಪಿಸಲಾಗಿದ್ದು, ಆ.4ರಂದು ಗಜಪಯಣದ ವೇಳೆ ಮಾವುತ/ಸಿಬ್ಬಂದಿಗೆ ಪ್ರಥಮ ಪ್ರಶಸ್ತಿ ಪ್ರದಾನ ಮಾಡಲಾಗುವುದು. 2025ರ ದಸರಾ ಆನೆಗಳ ಆಯ್ಕೆ ಸಮಿತಿಯ ಸಭೆಯಲ್ಲಿ ಪ್ರಶಸತಿ ಪುರಸ್ಕೃತರನ್ನು ಆಯ್ಕೆ ಮಾಡಲಾಗಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಚ್.ಡಿ. ಕೋಟೆ ಶಾಸಕ ಅನಿಲ್ ಕುಮಾರ್ ಸಿ. ಅವರು ಅರ್ಜುನನ ಹೆಸರಲ್ಲಿ ವಾರ್ಷಿಕ ಪ್ರಶಸ್ತಿ ಸ್ಥಾಪಿಸುವ ಸಲಹೆ ನೀಡಿದ್ದರು. ಅದರಂತೆ ಮಾನವ-ವನ್ಯಜೀವಿ ಸಂಘರ್ಷ ತಡೆಗಟ್ಟುವ ಹಾಗೂ ವನ್ಯಪ್ರಾಣಿಗಳನ್ನು ಸೆರೆಹಿಡಿಯುವ ಕಾರ್ಯಚರಣೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ಕಾರ್ಯಚರಣೆಯನ್ನು ಯಶಸ್ವಿಗೊಳಿಸಿರುವ ಹಾಗೂ ಸೆರೆಹಿಡಿಯುವ ಆನೆಗಳನ್ನು ಪಳಗಿಸಿ ಆರೈಕೆ ಮಾಡುವಲ್ಲಿ ಯಶಸ್ವಿಯಾಗಿರುವ ಮಾವುತ/ಸಿಬ್ಬಂದಿಯನ್ನು ಗುರುತಿಸಿ ಪ್ರತಿವರ್ಷ ನಡೆಯುವ ಗಜಪಯಣದ ಸಂದರ್ಭದಲ್ಲಿ ಅರ್ಜುನ ಆನೆ ಪ್ರಶಸ್ತಿ ಪ್ರದಾನ ಮಾಡಲು ತೀರ್ಮಾನಿಸಲಾಗಿದೆ ಎಂದಿದ್ದಾರೆ.
1968ರಲ್ಲಿ ಕಾಕನಕೋಟೆಯಲ್ಲಿ ನಡೆದ ಖೆಡ್ಡಾ ಕಾರ್ಯಾಚರಣೆಯಲ್ಲಿ ಸೆರೆಹಿಡಿಯಲಾಗಿದ್ದ ಅರ್ಜುನ 22 ಬಾರಿ ಜಂಬೂಸವಾರಿಯಲ್ಲಿ ಭಾಗಿಯಾಗಿ, 8 ಬಾರಿ 750 ಕೆ.ಜಿ. ತೂಕದ ಚಿನ್ನದ ಅಂಬಾರಿಯನ್ನು ಹೊತ್ತು, ದೇಶದ ಜನರ ಮನ ಗೆದ್ದಿದ್ದ. ಅರಣ್ಯ ಸಿಬ್ಬಂದಿಯ ಪ್ರಾಣ ಉಳಿಸಲು ಪ್ರಾಣತ್ಯಾಗ ಮಾಡಿದ ಅರ್ಜುನನ ಹೆಸರು ಚಿರಸ್ಥಾಯಿಯಾಗಿ ಉಳಿಯುವಂತೆ ಈ ಪ್ರಶಸ್ತಿ ಸ್ಥಾಪಿಸಲಾಗಿದೆ ಎಂದು ಅವರು ಹೇಳಿದರು.
ಈ ಸುದ್ದಿಯನ್ನೂ ಓದಿ | AICC's legal conclave: ಅಂಬೇಡ್ಕರ್, ನೆಹರು ಆದರ್ಶಗಳನ್ನು ಹಿಂತಿರುಗಿ ನೋಡಬೇಕಿದೆ: ಸಿಎಂ ಸಿದ್ದರಾಮಯ್ಯ
ಆ.4ರಂದು ವೀರನಹೊಸಹಳ್ಳಿಯಲ್ಲಿ ನಡೆಯಲಿರುವ ಗಜ ಪಯಣದ ಸಂದರ್ಭದಲ್ಲಿ ಹಾಸನ, ಸಕಲೇಶಪುರ, ಕೊಡಗು ಮೊದಲಾದ ಕಡೆಗಳಲ್ಲಿ ಆನೆ ಮತ್ತು ವನ್ಯಜೀವಿ ಸೆರೆ ಕಾರ್ಯಚರಣೆಗಳಲ್ಲಿ ಯಶಸ್ವಿಯಾಗಿ ಭಾಗಿಯಾಗಿರುವ ಭೀಮ ಆನೆಯ ಮಾವುತ ಗುಂಡ ಹಾಗೂ ಕವಾಡಿ ನಂಜುಂಡಸ್ವಾಮಿ ಅವರಿಗೆ 2025ರ ಸಾಲಿನ ಅರ್ಜುನ ಆನೆ ಪ್ರಶಸ್ತಿ ನೀಡಲು 2025ರ ದಸರಾ ಆನೆಗಳ ಆಯ್ಕೆ ಸಮಿತಿಯ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ.