ಬೀದರ್: ಸಂಸಾರದ ಸುಖ-ದುಃಖಗಳಲ್ಲಿ ಒಂದಾಗಿದ್ದ ವೃದ್ಧ ದಂಪತಿ ಸಾವಿನಲ್ಲೂ ಒಂದಾಗಿರುವ ಘಟನೆ ಜಿಲ್ಲೆಯ (Bidar News) ಕಮಲನಗರ ತಾಲೂಕಿನ ಮುಧೋಳ ಗ್ರಾಮದಲ್ಲಿ ಗುರುವಾರ ಸಂಭವಿಸಿದೆ. ಲಕ್ಷ್ಮಿಬಾಯಿ ಹೋಡಗೆ (83) ಅವರು ಗುರುವಾರ ಸಾಯಂಕಾಲ 5 ಗಂಟೆಗೆ ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದ್ದರು. ಇದಾದ ನಾಲ್ಕು ಗಂಟೆಗಳ ನಂತರ ರಾತ್ರಿ 9 ಗಂಟೆಗೆ ಪತಿ ಗುಂಡಪ್ಪ ಹೋಡಗೆ (93) ಅವರು ಕೂಡ ಕೊನೆಯುಸಿರೆಳೆದಿದ್ದಾರೆ.
65 ವರ್ಷದ ವೈವಾಹಿಕ ಜೀವನದಲ್ಲಿ ಮಿಂದಿದ್ದ ದಂಪತಿಯು ಒಂದೇ ದಿನದಲ್ಲಿ ಸಾವು ಕಂಡಿರುವುದು ಕುಟುಂಬಸ್ಥರು, ಗ್ರಾಮಸ್ಥರಲ್ಲಿ ದುಃಖ ಮೂಡಿಸಿದೆ. ಶುಕ್ರವಾರ ಬೆಳಗ್ಗೆಯಿಂದ ಸಂಜೆ ಅಂತ್ಯಸಂಸ್ಕಾರದವರೆಗೂ ಗ್ರಾಮ ಸೇರಿ ಇತರೆಡೆಯೂ ದಂತಿ ನಿಧನದ ಬಗ್ಗೆಯೇ ಚರ್ಚೆ. ಅನ್ಯೋನ್ಯವಾಗಿ ಜೀವನ ನಡೆಸುತ್ತಿದ್ದ ದಂಪತಿ ಸಾವಿನಲ್ಲೂ ಒಂದಾಗಿರುವುದನ್ನು ಕಂಡು ಜನರು ಮಮ್ಮಲ ಮರುಗಿದರು. ಇಬ್ಬರ ಪಾರ್ಥಿವ ಶರೀರವನ್ನು ದರ್ಶನಕ್ಕೆ ಇಟ್ಟು ಶುಕ್ರವಾರ ಸಂಜೆ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಮೃತ ದಂಪತಿಗಳಿಗೆ ಮೂವರು ಪುತ್ರರು, ನಾಲ್ವರು ಪುತ್ರಿಯರು ಇದ್ದಾರೆ.