ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BY Vijayendra: ಧರ್ಮಸ್ಥಳ ವಿಷಯದಲ್ಲಿ ಸಿಎಂ, ಡಿಸಿಎಂಗೆ ಮುಖವಾಡ ಹಾಕಿ ಓಡಾಡುವ ಪರಿಸ್ಥಿತಿ ಬಂದಿದೆ ಎಂದ ವಿಜಯೇಂದ್ರ

BY Vijayendra: ಶ್ರೀ ಕ್ಷೇತ್ರ ಧರ್ಮಸ್ಥಳದ ವಿಷಯದಲ್ಲಿ ದೂರುದಾರನಿಗೆ ಮಾಸ್ಕ್ ಹಾಕಿಸಿದ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳು ಇದೀಗ ತಾವೇ ಮುಖವಾಡ ಹಾಕಿ ಓಡಾಡುವ ಪರಿಸ್ಥಿತಿ ಬಂದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ ವಿಜಯೇಂದ್ರ ಆರೋಪಿಸಿದ್ದಾರೆ.

ಬೆಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳದ ವಿಷಯದಲ್ಲಿ ದೂರುದಾರನಿಗೆ ಮಾಸ್ಕ್ ಹಾಕಿಸಿದ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳು ಇದೀಗ ತಾವೇ ಮುಖವಾಡ ಹಾಕಿ ಓಡಾಡುವ ಪರಿಸ್ಥಿತಿ ಬಂದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ ವಿಜಯೇಂದ್ರ (BY Vijayendra) ಆರೋಪಿಸಿದ್ದಾರೆ. ನಗರದಲ್ಲಿ ಶುಕ್ರವಾರ ಮಾಧ್ಯಮಗಳ ಜತೆ ಮಾತನಾಡಿದ ಅವರು, ಗುಂಡಿಗಳಲ್ಲಿ ಏನೂ ಸಿಕ್ಕದೇ ಈಗ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವರು ಆತಂಕದಲ್ಲಿದ್ದಾರೆ. ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳು ದೂರುದಾರನಿಗೆ ಮುಖವಾಡ ಹಾಕುವ ನಿರ್ಧಾರ ಮಾಡಿದ್ದರು. ದೂರುದಾರನ ಮುಖವಾಡವೂ ಕಳಚಿಬಿದ್ದಿದೆ ಎಂದು ಹೇಳಿದರು.

ಧರ್ಮಸ್ಥಳದ ವಿಚಾರವಾಗಿ ಬಿಜೆಪಿ ನಮ್ಮ ಹೋರಾಟವನ್ನು ಈಗಾಗಲೇ ಘೋಷಿಸಿದೆ; ‘ಧರ್ಮ ರಕ್ಷಣೆಗಾಗಿ ಧರ್ಮ ಯುದ್ಧʼ ನಡೆಸಲಿದ್ದೇವೆ ಎಂದರು. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು, ರಾಜ್ಯ ಸರ್ಕಾರದ ಪರಿಸ್ಥಿತಿ ಎಲ್ಲಿಗೆ ಬಂದು ನಿಂತಿದೆ ಎಂದರೆ, ಪಾಪ ಸಿದ್ದರಾಮಯ್ಯ ಅವರು ಯಾರೋ ಎಡಪಂಥೀಯ ಶಕ್ತಿಗಳ ಒತ್ತಡಕ್ಕೆ ಮಣಿದು ಧರ್ಮಸ್ಥಳದಲ್ಲಿ ಎಸ್‍ಐಟಿ ತನಿಖೆಗೆ ಆದೇಶಿಸಿದರು. ನಾವೂ ಅದನ್ನು ಸ್ವಾಗತ ಮಾಡಿದ್ದೆವು. ಗುಂಡಿ ಬಗೆದಂತೆ ಏನೋ ಸಿಕ್ಕುವುದಾಗಿ ವಿಧಾನಸೌಧದಲ್ಲಿ ಕುಳಿತು ಸಿದ್ದರಾಮಯ್ಯ ಅವರು ಕನಸು ಕಾಣುತ್ತಿದ್ದರು. 15- 16 ಗುಂಡಿ ತೋಡಿದರೂ ಧರ್ಮಸ್ಥಳದಲ್ಲಿ ಏನೂ ಸಿಕ್ಕಿಲ್ಲ ಎಂದು ದೂರಿದರು.

ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅವಿವೇಕತನದಿಂದ ನಡೆದುಕೊಳ್ಳುತ್ತಿದೆ. ಆ ದೂರುದಾರ, ಆತನ ಹಿಂದಿರುವ ದುಷ್ಟ ಶಕ್ತಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ; ಕೆಲ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಶ್ರೀ ಕ್ಷೇತ್ರದ ಬಗ್ಗೆ ಅಪಪ್ರಚಾರಗಳು ನಡೆಯುತ್ತಿವೆ. ಹಿಂದೂ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಏನಾದರೂ ಪೋಸ್ಟ್ ಮಾಡಿದರೆ, 24 ಗಂಟೆಯಲ್ಲಿ ಅವರನ್ನು ಬಂಧಿಸುತ್ತಾರೆ ಎಂದು ಆಕ್ಷೇಪಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳದ ವಿಷಯದಲ್ಲಿ 15-20 ದಿನಗಳಿಂದ ಸರಾಗವಾಗಿ ಅಪಪ್ರಚಾರ ನಡೆಯುತ್ತಿದೆ. ಆದರೂ, ಇವರ ವಿರುದ್ಧ ತನಿಖೆ ಮಾಡುತ್ತಿಲ್ಲ; ಇದರ ವಿರುದ್ಧ ಬಿಜೆಪಿ ಹೋರಾಟ ಕೈಗೆತ್ತಿಕೊಂಡಿದೆ ಎಂದು ಸ್ಪಷ್ಟಪಡಿಸಿದರು.

ಚಿನ್ನಸ್ವಾಮಿ ಕ್ರೀಡಾಂಗಣದ ಆರ್.ಸಿ.ಬಿ ಗೆಲುವಿನ ಸಂಭ್ರಮಾಚರಣೆಯಲ್ಲಿ ನಡೆದ ಕಾಲ್ತುಳಿತ, 11 ಸಾವಿನ ಸಂಬಂಧ ದುರ್ಘಟನೆಯ ಕುರಿತ ಉತ್ತರ ಕೊಡುವಾಗ ಮುಖ್ಯಮಂತ್ರಿಗಳು ಸದನದಲ್ಲಿ ಬಹಳ ಭಾವುಕರಾಗಿ ಆ ವಿಚಾರ ಪ್ರಸ್ತಾಪಿಸುವ ನಿರೀಕ್ಷೆ ಇಟ್ಟುಕೊಂಡಿದ್ದೆವು. ಆದರೆ, ಅವರು ಹರಿಕಥೆ ಹೇಳುವ ಕೆಲಸ ಮಾಡಿದರು ಎಂದು ಬಿ.ವೈ. ವಿಜಯೇಂದ್ರ ಟೀಕಿಸಿದರು.

ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆದ ಇಂಥ ಸಾವಿನ ಅಂಕಿ ಅಂಶವನ್ನು ಅವರು ನೀಡಿದರು. ಬಿಜೆಪಿ ಸಾವಿನಲ್ಲಿ ರಾಜಕೀಯ ಮಾಡುತ್ತಿಲ್ಲ. ಕೋವಿಡ್ ವೇಳೆ ಆಮ್ಲಜನಕ ಕೊರತೆಯಿಂದ ಚಾಮರಾಜನಗರ ಜಿಲ್ಲೆಯಲ್ಲಿ 36 ಜನರು ಮೃತಪಟ್ಟಿದ್ದರು. ಆಗ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವರು ರಾಹುಲ್ ಗಾಂಧಿಯನ್ನು ಕರೆದುಕೊಂಡು ಬಂದು ಕಳೆದ ಚುನಾವಣೆ ಸಂದರ್ಭದಲ್ಲಿ ಭಾರತ್ ಜೋಡೋ ಯಾತ್ರೆ ಮಾಡಿದ್ದರು. ಮೃತ 36 ಜನರ ಕುಟುಂಬದವರಿಗೆ ಸರ್ಕಾರಿ ನೌಕರಿ ಕೊಡುವುದಾಗಿ ತಿಳಿಸಿದ್ದರು. ಸರ್ಕಾರ ಬಂದು ಎರಡೂವರೆ ವರ್ಷ ಆದರೂ ನಿಮ್ಮ ಯೋಗ್ಯತೆಗೆ ಸರ್ಕಾರಿ ನೌಕರಿ ಕೊಡಲು ಸಾಧ್ಯವಾಯಿತೇ ಎಂದು ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದರು. ಸಾವಿನಲ್ಲಿ ರಾಜಕೀಯ ಮಾಡುವವರು ಕಾಂಗ್ರೆಸ್ ಪಕ್ಷದವರು ಎಂದು ಆರೋಪಿಸಿದರು.

ಕಾಲ್ತುಳಿತ ಸಾವಿನ ವಿಷಯದಲ್ಲಿ ತಮ್ಮ ತಪ್ಪನ್ನು ಮುಚ್ಚಿ ಹಾಕಿಕೊಳ್ಳುವ ಸಲುವಾಗಿ ಅಮಾಯಕ ಪೊಲೀಸ್ ಅಧಿಕಾರಿ ಮೇಲೆ ಕ್ರಮ ಕೈಗೊಂಡಿರಲ್ಲವೇ ಎಂದು ಕೇಳಿದ ಅವರು, ಪೊಲೀಸ್ ಇಲಾಖೆಗೇ ಅಪಮಾನ ಮಾಡುವ ಕೆಲಸ ಮಾಡಿದಿರಲ್ಲವೇ? ಅದಕ್ಕೆ ಮುಖ್ಯಮಂತ್ರಿಗಳು ಉತ್ತರ ಕೊಡಬೇಕಿತ್ತು ಎಂದು ಆಗ್ರಹಿಸಿದರು.

ಈ ಸುದ್ದಿಯನ್ನೂ ಓದಿ | Supreme Court: ಸುಪ್ರೀಂ ಕೋರ್ಟ್‌ನಿಂದ ಮಹತ್ವದ ಆದೇಶ; "ಆಕ್ರಮಣಕಾರಿ ಬೀದಿನಾಯಿಗಳನ್ನು ಮಾತ್ರ ಸ್ಥಳಾಂತರಿಸಿ"

ವಿಧಾನಸೌಧದ ಬಳಿ ವಿಜಯೋತ್ಸವ ಮಾಡಲು ತೀರ್ಮಾನ ಮಾಡಿದಿರಲ್ಲವೇ? ಆರ್‌ಸಿಬಿಯಲ್ಲಿ ಕರ್ನಾಟಕದ ಎಷ್ಟು ಆಟಗಾರರು ಇದ್ದಾರೆ ಎಂಬುದು ಆಗ ನಿಮಗೆ ಗೊತ್ತಿರಲಿಲ್ಲವೇ? ತಮ್ಮ ಕುಟುಂಬದ ಸದಸ್ಯರನ್ನು ಕರೆದುಕೊಂಡು ಸೆಲ್ಫಿ ಹೊಡೆಸಿಕೊಂಡಿರಲ್ಲವೇ? ಆಗ ಈ ತಂಡದಲ್ಲಿ ಎಷ್ಟು ಕನ್ನಡಿಗರಿದ್ದಾರೆ ಎಂದು ಗೊತ್ತಿರಲಿಲ್ಲವೇ? ಇವತ್ತು ಮುಖ್ಯಮಂತ್ರಿಗಳಿಗೆ ನೆನಪಾಗುತ್ತಿದೆಯೇ ಎಂದು ಪ್ರಶ್ನಿಸಿದ ಅವರು, ಕಾಲ್ತುಳಿತದ 11 ಸಾವು ಸರ್ಕಾರಿ ಪ್ರಾಯೋಜಿತ ಕೊಲೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ ವಿಜಯೇಂದ್ರ ಆರೋಪಿಸಿದ್ದಾರೆ.