ಬೆಂಗಳೂರು: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ರಾಜ್ಯದ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತರು ವಾಸಿಸುತ್ತಿರುವ ನಗರ ಪ್ರದೇಶಗಳಲ್ಲಿನ ಅತೀ ಹಿಂದುಳಿದ ಕಾಲೋನಿಗಳನ್ನು ಮಾದರಿ ಕಾಲೋನಿಗಳನ್ನಾಗಿ ಅಭಿವೃದ್ಧಿ ಪಡಿಸಲು 398 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲು ಸಚಿವ ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅಧ್ಯಕ್ಷತೆಯಲ್ಲಿ ಗುರುವಾರ ಸಚಿವ ಸಂಪುಟ ಸಭೆಯಲ್ಲಿ (Cabinet Meeting) ಹಲವು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಏನೇನು ನಿರ್ಣಯಗಳನ್ನು ಕೈಗೊಳ್ಳಲಾಯಿತು ಎಂಬುದರ ಕುರಿತ ವಿವರ ಇಲ್ಲಿದೆ.
ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು
- ʼಕರ್ನಾಟಕ ಉಪಖನಿಜ ರಿಯಾಯಿತಿ (ತಿದ್ದುಪಡಿ) ನಿಯಮಗಳು, 2025ʼಕ್ಕೆ ಸಂಪುಟ ಅನುಮೋದನೆ ನೀಡಿದೆ.
- ಸಾರ್ವಜನಿಕ ಸರ್ಕಾರಿ ಕಾರ್ಯಕ್ರಮಗಳಲ್ಲಿ ಆಹ್ವಾನ ಪತ್ರಿಕೆ ಮತ್ತು ವೇದಿಕೆ ಮೇಲೆ ಆಸೀನರಾಗುವ ಗಣ್ಯರು ಸೇರಿದಂತೆ ವಿವಿಧ ಶಿಷ್ಟಾಚಾರದ ಬಗ್ಗೆ ಪರಿಷ್ಕೃತ ಮಾರ್ಗಸೂಚಿಗಳನ್ನು ಹೊರಡಿಸಲು ಸಚಿವ ಸಂಪುಟ ಅನುಮೋದಿಸಿದೆ.
- ಪಿಎಂ ಕುಸುಮ್-ಬಿ ಯೋಜನೆಯಡಿ Stand-alone / off Grid Solar Pump ಸ್ಥಾಪನೆಗೆ ಹಿಂದಿನ ಸರ್ಕಾರಿ ಆದೇಶದ ಮಾರ್ಪಾಡು ಮಾಡುವ ಬಗ್ಗೆ- ವಿದ್ಯುತ್ ಜಾಲದಿಂದ ಪಂಪ್ ಸೆಟ್ ಇರುವ ದೂರವನ್ನು ಲೆಕ್ಕಿಸದೆ ಕಾರ್ಯಗತಗೊಳಿಸಲಾದ ಪಂಪ್ ಸೆಟ್‌ಗಳ ವೆಚ್ಚದ ಶೇ. 50ರಷ್ಟನ್ನು ರಾಜ್ಯ ಸರ್ಕಾರದ ಸಹಾಯಧನ ಆಗಿರಬೇಕು ಎಂದು ಸಚಿವ ಸಂಪುಟ ನಿರ್ಣಯಿಸಿದೆ.
- ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆಯು ಪರಿಶೋಧಿಸಿ, (vetted) ನೀಡಿರುವ ಇದರೊಂದಿಗೆ ಲಗತ್ತಿಸಿರುವ ಅನುಬಂಧದಲ್ಲಿರುವ “The Bio-Diesel (B-100) Blending with High Speed Diesel for Transportation Purposes (Licensing) Order, 2022”ರ ಕರಡು ಅಧಿಸೂಚನೆಗೆ ಅನುಮೋದನೆ ನೀಡಲು; ಸಚಿವ ಸಂಪುಟ ನಿರ್ಣಯಿಸಿದೆ.
- ಮಾಲೂರು, ಕೊರಟಗೆರೆ, ಮಾಗಡಿ, ಕುಶಾಲನಗರ, ಜಗಳೂರು, ಸವಣೂರು, ರಾಮದುರ್ಗ ಮತ್ತು ಸವದತ್ತಿ ತಾಲೂಕು ಮಟ್ಟದ ಆಸ್ಪತ್ರೆಗಳನ್ನು ಹಾಗೂ ದಾವಣಗೆರೆ ಜಿಲ್ಲಾ ಆಸ್ಪತ್ರೆ ಮತ್ತು ಮಂಗಳೂರಿನ ವೆನ್ಹಾಕ್ ಆಸ್ಪತ್ರೆಗಳ ನವೀಕರಣ ಕಾಮಗಾರಿಗಳನ್ನು ಒಟ್ಟು 542 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕೈಗೊಳ್ಳಲು ಅನುಮೋದನೆ ನೀಡಲಾಗಿದೆ.
- 35 ಸಂಚಾರಿ ಆರೋಗ್ಯ ಘಟಕಗಳ ದುರಸ್ತಿಯನ್ನು ಕೈಗೊಂಡು ಹೊಸದಾಗಿ ವೈದ್ಯಕೀಯ ಉಪಕರಣಗಳನ್ನು ಅಳವಡಿಸಿ, ಈ ವಾಹನಗಳನ್ನು Connected Health Eco-System ಸಂಚಾರಿ ಆರೋಗ್ಯ ಘಟಕಗಳಾಗಿ 12.25 ಕೋಟಿ ರೂ. ವೆಚ್ಚದಲ್ಲಿ ಪರಿವರ್ತಿಸಲು ಹಾಗೂ 14.70 ಕೋಟಿ ರೂ. ಅಂದಾಜು ಮೊತ್ತದಲ್ಲಿ ಈ ವಾಹನಗಳ ವಾರ್ಷಿಕ ನಿರ್ವಹಣೆ ಮಾಡಲು ಅನುಮೋದನೆ ನೀಡಲಾಗಿದೆ.
- ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಮಂಡಳಿಯ ಸುಂಕ ಸಂಗ್ರಹಣೆಯನ್ನು ಹೆಚ್ಚಿಸಲು "Labour Cess Tracking & Monitoring System Software" ಎಂಬ ನೂತನ ತಂತ್ರಾಂಶವನ್ನು 28.19 ಕೋಟಿ ರೂ. ಅಂದಾಜು ಮೊತ್ತದಲ್ಲಿ ಅಭಿವೃದ್ಧಿಪಡಿಸುವ ಬಗ್ಗೆ ಸಚಿವ ಸಂಪುಟ ಮಂಜೂರಾತಿ ನೀಡಿ, ಈ ವೆಚ್ಚದ ಬಗ್ಗೆ ಪುನರ್ ಪರಿಶೀಲನೆ ನಡೆಸಲು ಸೂಚಿಸಲಾಯಿತು.
- ರಾಜ್ಯಾದ್ಯಂತ "ಜಿಲ್ಲಾ ಕಾರ್ಮಿಕರ ಸೇವೆಗಳ ವಿವಿಧೋದ್ದೇಶ ಸಹಕಾರ ಸಂಘ (ನಿಯಮಿತ) ವನ್ನು ಸ್ಥಾಪಿಸಲು ಹಾಗೂ ಸದರಿ ಸಂಘಗಳನ್ನು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ರಚಿಸಲು ಹಾಗೂ ಎಲ್ಲಾ ಜಿಲ್ಲೆಗಳಲ್ಲಿ ರಚಿಸುವ” ಜಿಲ್ಲಾ ಕಾರ್ಮಿಕ ಸೇವೆಗಳ ವಿವಿಧೋದ್ದೇಶ ಸಹಕಾರ ಸಂಘ ನಿ.ಕ್ಕೆ ಆರ್ಥಿಕ ಇಲಾಖೆಯಿಂದ ಕೆಟಿಪಿಪಿ ಕಾಯ್ದೆಯನ್ವಯ 4ಜಿ ವಿನಾಯ್ತಿ ನೀಡಲು ಸಚಿವ ಸಂಪುಟ ನಿರ್ಧರಿಸಿದೆ.
- ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿ 1,000 ಹಾಸಿಗೆ ಸಾಮರ್ಥ್ಯದ ಹೆಚ್ಚುವರಿ ವಾರ್ಡ್‌ಗಳಿಗೆ ಅವಶ್ಯವಿರುವ ಉಪಕರಣಗಳು, ಪೀಠೋಪಕರಣಗಳನ್ನು 20.05 ಕೋಟಿ ರೂ. ಅಂದಾಜು ಮೊತ್ತದಲ್ಲಿ ಖರೀದಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
- ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ರಾವಂದೂರು ಬೆಟ್ಟದಪುರ ರಸ್ತೆಯ ಸರಪಳಿ 34.30 ಕೀ.ಮೀ.ಯಿಂದ (ಬೆಟ್ಟದಪಾದ) ಶ್ರೀ ಶಿಡ್ಲು ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನಕ್ಕೆ ರಸ್ತೆ ನಿರ್ಮಾಣ ಕಾಮಗಾರಿಯನ್ನು 50 ಕೋಟಿ ರೂ. ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆಯನ್ನು ಸಚಿವ ಸಂಪುಟ ನೀಡಿದೆ.
- ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಹಂತ-5 ಘಟ್ಟ-1 ರಡಿಯಲ್ಲಿ 467 ಕಿ.ಮೀ. ಉದ್ದದ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು 4,000 ರೂ. ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲಾಗಿದ್ದು, ರಸ್ತೆ ನಿರ್ಮಾಣದ ನಂತರ 6ನೇ ವರ್ಷದಲ್ಲಿ ಡಾಂಬರು ಮೇಲ್ಪದರವನ್ನು ಅಳವಡಿಸಲು ಪ್ರಾವಧಾನ ಮಾಡಲಾಗಿರುವ ಅಂಶವನ್ನು ಕೈಬಿಡಲು ಸಚಿವ ಸಂಪುಟ ಒಪ್ಪಲಿಲ್ಲ. ಆದರೆ ಆಯಾ ಕಾಮಗಾರಿಗಳ ಅಡಿಯಲ್ಲಿ ಸ್ಥಳದ ಅವಶ್ಯಕತೆಗೆ ಅನುಗುಣವಾಗಿ ಹೆಚ್ಚುವರಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಅನುಮೋದನೆ ನೀಡಲಾಗಿದೆ.
- ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಗುಳ್ಳಾಪುರ ಗ್ರಾಮದಿಂದ ಹೆಗ್ಗಾರ ಗ್ರಾಮಕ್ಕೆ ಸಂಪರ್ಕಿಸುವ ಜಿಲ್ಲಾ ಮುಖ್ಯ ರಸ್ತೆಯ ಗಂಗಾವಳಿ ನದಿಗೆ ಸೇತುವೆ ನಿರ್ಮಾಣ ಕಾಮಗಾರಿಯನ್ನು 35 ಕೋಟಿ ರೂ. ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
- ಬೆಂಗಳೂರಿನ ಮಾಗಡಿ ಮುಖ್ಯ ರಸ್ತೆಯಲ್ಲಿರುವ ನಿರಾಶ್ರಿತರ ಪರಿಹಾರ ಕೇಂದ್ರದ ಸಜ್ಜೆಪಾಳ್ಯ ಗ್ರಾಮದಲ್ಲಿರುವ ಸರ್ವೆ ನಂಬರ್ 4ರಲ್ಲಿ ಲಭ್ಯವಿರುವ ಜಮೀನಿನಲ್ಲಿ 5 ಎಕರೆ ಜಮೀನನ್ನು ಪರಿಶಿಷ್ಟ ಪಂಗಡಗಳ ನಿರ್ದೇಶನಾಲಯ, ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ಕೇಂದ್ರ ಕಚೇರಿಗಳಿಗೆ ಸ್ಥಳಾವಕಾಶ ಕಲ್ಪಿಸಲು "ಶ್ರೀ ಮಹರ್ಷಿ ವಾಲ್ಮೀಕಿ ಸೌಧ” ನಿರ್ಮಾಣ ಮಾಡಲು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಗೆ ಗುತ್ತಿಗೆ ಆಧಾರದ ಮೇಲೆ ನೀಡಲು ಸಚಿವ ಸಂಪುಟ ಒಪ್ಪಿದೆ.
- ಮೆ. ಗೇಲ್ ಇಂಡಿಯಾ ಲಿಮಿಟೆಡ್ ಸಂಸ್ಥೆ ವತಿಯಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿ ದಿನ ಉತ್ಪತ್ತಿಯಾಗುವ ಘನತ್ಯಾಜ್ಯದ ಪೈಕಿ 300 ಮೆಟ್ರಿಕ್ ಟನ್ ಹಸಿ ತ್ಯಾಜ್ಯವನ್ನು ಪಯೋಗಿಸಿಕೊಂಡು Compressed Bio-Gas Plant ಅನ್ನು ಸ್ಥಾಪಿಸಲು ಹರಳಗುಂಟೆ ಗ್ರಾಮದ (KCDC ಸಂಸ್ಕರಣಾ ಘಟಕ) ಸರ್ವೆ ನಂ: 39, 40, 45 ಮತ್ತು 46ರಲ್ಲಿ ಲಭ್ಯವಿರುವ ಸುಮಾರು 18.00 ಎಕರೆ ಜಾಗವನ್ನು ಸೀಮಿತ ಬಳಕೆಗೋಸ್ಕರ ಮಾತ್ರ (For permissive use only) ಆಧಾರದಲ್ಲಿ 25 ವರ್ಷಗಳ ಅವಧಿಗೆ ಮೆ. ಗೇಲ್ ಇಂಡಿಯಾ ಲಿಮಿಟೆಡ್ ಸಂಸ್ಥೆಗೆ ನೀಡಲು ಸರ್ಕಾರಿ ಆದೇಶ ದಿನಾಂಕ: 30.12.2022 ನ್ನು ಪರಿಷ್ಕರಿಸಲು ಅನುಮೋದನೆ ನೀಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.
- ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಬೈರಮಂಗಲ ಕೆರೆಯ ದಡದಲ್ಲಿ 100 ದಶಲಕ್ಷ ಲೀಟರ್ ಸಾಮರ್ಥ್ಯದ ದ್ವಿತೀಯ ಹಂತದ ತ್ಯಾಜ್ಯ ನೀರು ಶುದ್ದೀಕರಣ ಘಟಕ ಹಾಗೂ 25 ದಶಲಕ್ಷ ಲೀಟರ್ ಸಾಮರ್ಥ್ಯದ ತೃತೀಯ ಹಂತದ ತ್ಯಾಜ್ಯ ನೀರು ಶುದ್ದೀಕರಣ ಘಟಕ ನಿರ್ಮಾಣ ಕಾಮಗಾರಿ ಮತ್ತು ಈ ಘಟಕಗಳ 7 ವರ್ಷಗಳ ಕಾರ್ಯಾಚರಣೆ ಮತ್ತು ನಿರ್ವಹಣೆ (O&M) ಯನ್ನು ಒಟ್ಟು 391.82 ಕೋಟಿ ರೂ. ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಈ ಸುದ್ದಿಯನ್ನೂ ಓದಿ | Karnataka Ratna: ರಾಜ್ಯ ಸರ್ಕಾರದ ಅತ್ಯುನ್ನತ ನಾಗರಿಕ ಪ್ರಶಸ್ತಿ ʼಕರ್ನಾಟಕ ರತ್ನʼ ಪಡೆದ ಸಾಧಕರ ಪಟ್ಟಿ