Chief Minister's medal: 219 ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗೆ ಮುಖ್ಯಮಂತ್ರಿಗಳ ಪದಕ ಘೋಷಣೆ
Chief Minister's medal: 2024ನೇ ಸಾಲಿನ ಮುಖ್ಯಮಂತ್ರಿಗಳ ಪದಕ ಪ್ರಕಟಿಸಿದ್ದು, ರಾಜ್ಯದ ಮೂವರು ಐಪಿಎಸ್ ಅಧಿಕಾರಿಗಳು ಸೇರಿ 219 ಮಂದಿ ಈ ಬಾರಿ ಮುಖ್ಯಮಂತ್ರಿಗಳ ಪದಕಕ್ಕೆ ಭಾಜನರಾಗಿದ್ದಾರೆ. ಇನ್ನು ನಕ್ಸಲರ ಶರಣಾಗತಿಗಾಗಿ ಕರ್ತವ್ಯ ನಿರ್ವಹಿಸಿದ ರಾಜ್ಯ ಗುಪ್ತವಾರ್ತೆ ಹಾಗೂ ರಾಜ್ಯ ನಕ್ಸಲ್ ನಿಗ್ರಹ ಪಡೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗೂ ಪದಕ ಘೋಷಣೆ ಮಾಡಲಾಹಿದೆ.


ಬೆಂಗಳೂರು: ರಾಜ್ಯ ಸರ್ಕಾರದಿಂದ 2024ನೇ ಸಾಲಿನ ಮುಖ್ಯಮಂತ್ರಿಗಳ ಪದಕ ಪ್ರಕಟಿಸಿದ್ದು, ರಾಜ್ಯದ ಮೂವರು ಐಪಿಎಸ್ ಅಧಿಕಾರಿಗಳು ಸೇರಿ 219 ಮಂದಿ ಈ ಬಾರಿ ಮುಖ್ಯಮಂತ್ರಿಗಳ ಪದಕಕ್ಕೆ ಭಾಜನರಾಗಿದ್ದಾರೆ. ಬೆಂಗಳೂರು ಗ್ರಾಮಾಂತರ ಎಸ್‌ಪಿ ಸಿ.ಕೆ. ಬಾಬಾ, ಸಿಐಡಿ ಎಸ್‌ಪಿ ಡಾ. ಅನೂಪ್ ಎ. ಶೆಟ್ಟಿ, ಹಾವೇರಿ ಎಸ್‌ಪಿ ಅಂಶು ಕುಮಾರ್, ಬೆಂಗಳೂರಿನ ಕೆ.ಜಿ. ಹಳ್ಳಿ ಉಪವಿಭಾಗದ ಎಸಿಪಿ ಪ್ರಕಾಶ್ ರಾಥೋಡ್, ಸಿಸಿಬಿ ಪಿಐ ಸಂತೋಷ್ ರಾಮ್, ಜಯನಗರ ಠಾಣೆ ಪಿಐ ಆರ್. ದೀಪಕ್, ಕಾಮಾಕ್ಷಿಪಾಳ್ಯ ಸಂಚಾರ ಠಾಣೆಯ ಪಿಐ ಎಸ್.ಟಿ. ಯೋಗೇಶ್, ಪೂರ್ವ ವಿಭಾಗದ ಮಹಿಳಾ ಠಾಣೆ ಪಿಐ ಶೋಭಾ ನರಸಿಂಹಯ್ಯ ಸೇರಿ 197 ಮಂದಿ ಪೊಲೀಸ್ ಅಧಿಕಾರಿ ಹಾಗೂ ಸಿಬಂದಿಗೆ ಮುಖ್ಯಮಂತ್ರಿಗಳ ಪದಕ ಘೋಷಣೆ ಮಾಡಲಾಗಿದೆ.
ಇದೇ ವೇಳೆ ರಾಜ್ಯ ಮತ್ತು ನೆರೆ ರಾಜ್ಯದ ನಕ್ಸಲರ ಶರಣಾಗತಿಗಾಗಿ ರಾಜ್ಯ ಗುಪ್ತವಾರ್ತೆ ಹಾಗೂ ರಾಜ್ಯ ನಕ್ಸಲ್ ನಿಗ್ರಹ ಪಡೆಯ 22 ಮಂದಿ ಅಧಿಕಾರಿ-ಸಿಬಂದಿಗೂ ಮುಖ್ಯಮಂತ್ರಿ ಪದಕ ಘೋಷಣೆ ಮಾಡಲಾಗಿದೆ.
ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ್ ಸೇರಿ ಮೂವರಿಗೆ ಮುಖ್ಯಮಂತ್ರಿ ಪದಕ
ಹಾವೇರಿ: ಪೊಲೀಸ್ ಇಲಾಖೆಯಲ್ಲಿ ಸಲ್ಲಿಸಿದ ಅತ್ಯುತ್ತಮ ಸೇವೆಯನ್ನು ಗುರುತಿಸಿ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ ಮುಖ್ಯಮಂತ್ರಿಗಳ ಪದಕ ನೀಡಿ ಗೌರವಿಸಲಾಗುತ್ತದೆ. ಇದೀಗ ರಾಜ್ಯ ಸರ್ಕಾರ 2024ನೇ ಸಾಲಿನ ಸಿಎಂ ಪದಕ ವಿಜೇತರ ಪಟ್ಟಿಗೆ ಅನುಮೋದನೆ ನೀಡಿದೆ. ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ್, ಶಿಗ್ಗಾಂವಿ ಪೊಲೀಸ್ ಠಾಣೆಯ ಸಿಬ್ಬಂದಿ ಎಚ್. ತಿಪ್ಪೆಸ್ವಾಮಿ (ಸ್ಪೆಷಲ್ ಆರ್‌ಎಚ್‌ಸಿ: 66, 10ನೇ ಪಡೆ, ಕೆಎಸ್‌ಆರ್‌ಪಿ, ಬೆಟಾಲಿಯನ್) ಹಾಗೂ ಸವಣೂರು ಪೊಲೀಸ್ ಠಾಣೆಯ ಬಸವರಾಜ ಡಿ ಮಲ್ಲೂರ್ (ಸಿಎಚ್‌ಸಿ: 783) ಅವರಿಗೂ ಸಿಎಂ ಮೆಡಲ್ ಲಭಿಸಿದೆ.
ಈ ಸುದ್ದಿಯನ್ನೂ ಓದಿ | BBMP Budget 2025: ಬಿಬಿಎಂಪಿ ಬಜೆಟ್; ರಾಜಧಾನಿಯಲ್ಲಿನ್ನು ಕಸಕ್ಕೂ ಕರಭಾರ!
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ್ ಅವರು ಸೇರಿ ಜಿಲ್ಲೆಯ ಮೂವರಿಗೆ ಸಿಎಂ ಮೆಡಲ್ ಲಭಿಸಿದ್ದಕ್ಕೆ ಪೊಲೀಸ್ ಸಿಬ್ಬಂದಿ ಸಂತಸ ವ್ಯಕ್ತಪಡಿಸಿದ್ದಾರೆ. ಒಳಾಡಳಿತ ಇಲಾಖೆಯ ಸರಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಈ ಪತ್ರ ಹೊರಡಿಸಿದ್ದಾರೆ.
ರಾಜ್ಯ ಸಿವಿಲ್ ಸೇವೆ ಹುದ್ದೆಗಳ ಹೊಸ ನೇಮಕಾತಿಗೆ ಸರ್ಕಾರ ತಡೆ
ಬೆಂಗಳೂರು: ರಾಜ್ಯ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳ ನೇಮಕಾತಿಗಾಗಿ ಹೊಸದಾಗಿ ಅಧಿಸೂಚನೆ (Job Recruitment) ಹೊರಡಿಸುವುದನ್ನು ತಡೆ ಹಿಡಿಯಲು ರಾಜ್ಯ ಸರ್ಕಾರ ಮಹತ್ವದ ಆದೇಶ ನೀಡಿದೆ. ಇದಕ್ಕೆ ಸಂಬಂಧಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ-1 ಉಮಾ ವರದಯ್ಯ ಸುತ್ತೋಲೆ ಹೊರಡಿಸಿದ್ದು, ಒಂದು ವೇಳೆ ಸುತ್ತೋಲೆಯನ್ನು ಉಲ್ಲಂಘಿಸಿದರೆ ನೇಮಕಾತಿ ಪ್ರಾಧಿಕಾರಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
25.11.2024 ಸುತ್ತೋಲೆಯಲ್ಲಿ, ರಾಜ್ಯ ಸಿವಿಲ್ ಸೇವೆಗಳಲ್ಲಿನ ಮೀಸಲಾತಿ ಅನ್ವಯವಾಗುವ ವೃಂದಗಳಲ್ಲಿನ ಹುದ್ದೆಗಳಿಗೆ ನೇರ ನೇಮಕಾತಿ ಮಾಡಲು ಹೊಸದಾಗಿ ಯಾವುದೇ ಅಧಿಸೂಚನೆಯನ್ನು ಹೊರಡಿಸಬಾರದೆಂದು ಸೂಚಿಸಲಾಗಿತ್ತು. ಆದಾಗ್ಯೂ ಕೆಲವು ನೇಮಕಾತಿ ಪ್ರಾಧಿಕಾರಗಳು ಈ ಸೂಚನೆಗಳನ್ನು ಉಲ್ಲಂಘಿಸಿ ನೇರ ನೇಮಕಾತಿ ಮಾಡಲು ಹೊಸ ಅಧಿಸೂಚನೆಗಳನ್ನು ಹೊರಡಿಸಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ.
ಈ ಹಿನ್ನೆಲೆಯಲ್ಲಿ ದಿನಾಂಕ: 25.11.2024ರ ನಂತರ ನೇರ ನೇಮಕಾತಿಗಾಗಿ ಯಾವುದೇ ಹೊಸ ಅಧಿಸೂಚನೆಗಳನ್ನು ಹೊರಡಿಸಿದ್ದಲ್ಲಿ, ಈ ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಪಡಿಸಲು ಆಯಾಯ ನೇಮಕಾತಿ ಪ್ರಾಧಿಕಾರಗಳಿಗೆ ಈ ಮೂಲಕ ಸೂಚಿಸಲಾಗಿದೆ. ಅಲ್ಲದೇ ದಿನಾಂಕ: 25.11.2024ರ ಸುತ್ತೋಲೆಯನ್ನು ಉಲ್ಲಂಘಿಸುವ ಎಲ್ಲಾ ನೇಮಕಾತಿ ಪ್ರಾಧಿಕಾರಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಆಯಾಯ ಆಡಳಿತ ಇಲಾಖೆಯ ಕಾರ್ಯದರ್ಶಿಗಳಿಗೆ ಈ ಮೂಲಕ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Job Guide: ರಾಷ್ಟ್ರೀಯ ಕೆಮಿಕಲ್ & ಫರ್ಟಿಲೈಸರ್ಸ್ ಲಿಮಿಟೆಡ್‌ನಲ್ಲಿದೆ 74 ಹುದ್ದೆ; ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ