DHARMASTHALA CASE: ಧರ್ಮಸ್ಥಳದ ಹಾಗೂ ಹೆಗ್ಗಡೆ ಕುಟುಂಬದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡದಂತೆ ಗ್ಯಾಗ್ ಆರ್ಡರ್ ಆದೇಶ ಹೊರಡಿಸಿದ ಕೋರ್ಟ್!
ಧರ್ಮಸ್ಥಳದ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ ಮತ್ತು ಅವರ ಕುಟುಂಬದ ವಿರುದ್ಧ ಅವಹೇಳನಕಾರಿ ಹೇಳಿಕೆ ಹಾಗೂ ವರದಿ ಮಾಡದಂತೆ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯ ಗ್ಯಾಗ್ ಆರ್ಡರ್ ಆದೇಶ ಹೊರಡಿಸಿದೆ.

ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್

ಬೆಂಗಳೂರು: ಧರ್ಮಸ್ಥಳದ(Dharmasthala) ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ (D.Harshendra Kumar) ಮತ್ತು ಅವರ ಕುಟುಂಬದ ವಿರುದ್ಧ ಅವಹೇಳನಕಾರಿ ಹೇಳಿಕೆ(Defamatory Remarks) ಹಾಗೂ ವರದಿ ಮಾಡದಂತೆ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯ(City Civil Court, Bangalore) ಗ್ಯಾಗ್ ಆರ್ಡರ್ ಆದೇಶ (Gag Order) ಹೊರಡಿಸಿದೆ.
ಧರ್ಮಸ್ಥಳದ ನಿಗೂಢ ಶವಗಳ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸ್ವಚ್ಛತಾ ಕಾರ್ಮಿಕರೊಬ್ಬರು ನೀಡಿದ ದೂರಿನ ಆಧಾರದ ಮೇಲೆ, ಧರ್ಮಸ್ಥಳ ದೇವಸ್ಥಾನ ಮತ್ತು ಕಾರ್ಯದರ್ಶಿ ಹರ್ಷೇಂದ್ರ ಕುಮಾರ್ ಅವರು ಸಲ್ಲಿಸಿದ ಮಾನಹಾನಿ ಮೊಕದ್ದಮೆ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ವಿಜಯ ಕುಮಾರ್ ರೈ ಧರ್ಮಸ್ಥಳ ಹಾಗೂ ಡಿ. ಹರ್ಷೇಂದ್ರ ಕುಮಾರ್ ಹಾಗೂ ಅವರ ಕುಟುಂಬ ಜೊತೆಗೆ ಶ್ರೀಕ್ಷೇತ್ರ ಧರ್ಮಸ್ಥಳ ನಡೆಸುತ್ತಿರುವ ಸಂಸ್ಥೆಗಳ ವಿರುದ್ಧ ಮಾಧ್ಯಮಗಳ ಮೂಲಕ ಅವಹೇಳನಕಾರಿ ವರದಿ ಮಾಡದಂತೆ ಮಧ್ಯಂತರ ತಡೆಯಾಜ್ಞೆ ಹೊರಡಿಸಿದೆ ಹಾಗೂ ಈಗಾಗಲೇ ಸಾಮಾಜಿಕ ಮಾಧ್ಯಮಗಳೂ ಸೇರಿದಂತೆ ಇನ್ನಿತರೆ ಮಾಧ್ಯಮಗಳು ಮಾಡಿರುವ ಅವಹೇಳನಕಾರಿ ವರದಿಗಳನ್ನು ಅಳಿಸಿ ಹಾಕುವಂತೆ ಸೂಚಿಸಿದೆ.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರು, ಧಾರ್ಮಿಕ ಕ್ಷೇತ್ರ ಹಾಗೂ ಅದರ ಆಡಳಿತಕ್ಕೆ ಒಳಪಡುವ ಒಂದು ಸಂಸ್ಥೆಗಳ ಮೇಲೆ ಆರೋಪ ಬಂದರೆ ಅಲ್ಲಿನ ಸಿಬ್ಬಂದಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದ್ದು, ಕ್ಷೇತ್ರದ ಅಡಿಯಲ್ಲಿ ನಾನಾ ವಿದ್ಯಾ ಸಂಸ್ಥೆಗಳು ಕಾರ್ಯಾಚಾರಿಸುತ್ತಿದೆ. ಈ ಬೆಳವಣಿಗೆಯಿಂದ ವಿವಿಧ ಕಾಲೇಜುಗಳು ಮತ್ತು ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳು ಸೇರಿದಂತೆ ಅಪಾರ ಪ್ರಮಾಣದ ಭಕ್ತರ ಭಾವನೆಯ ಮೇಲೆ ಮೇಲೆ ಪರಿಣಾಮ ಬೀರುತ್ತದೆ. ಒಂದು ಸುಳ್ಳು ಮತ್ತು ಮಾನಹಾನಿಕರ ಹೇಳಿಕೆಗಳು ಸಂಸ್ಥೆಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಗಣನೆಗೆ ತೆಗೆದುಕೊಂಡು ಈ ಆದೇಶವನ್ನು ಹೊರಡಿಸಲಾಗಿದೆ.
ಗ್ಯಾಗ್ ಆದೇಶದ ಅನ್ವಯ ಶ್ರೀ ಕ್ಷೇತ್ರ ಧರ್ಮಸ್ಥಳ, ಹೆಗ್ಗಡೆ ಕುಟುಂಬ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ನಡೆಸುತ್ತಿರುವಂತಹ ಸಂಸ್ಥೆಗಳು ಹಾಗೂ ಅವರ ಕುಟುಂಬಸ್ಥರ ವಿರುದ್ಧ ಸಾಮಾಜಿಕ ಜಾಲತಾಣಗಳಾದ ವಾಟ್ಸ್ ಆ್ಯಪ್, ಫೇಸ್ ಬುಕ್, ಇನ್ಸ್ಟಾಗ್ರಾಮ್, ಯೂ–ಟ್ಯೂಬ್, ಟಿ.ವಿ.ಚಾನೆಲ್ ಹಾಗೂ ಇತರೆ ಯಾವುದೇ ರೀತಿಯ ಮಾಧ್ಯಮ ಪ್ರಕಾರಗಳಲ್ಲಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ, ಅವಹೇಳನಕಾರಿ ವರದಿ ಅಥವಾ ಮಾತನಾಡಬಾರದು ಎಂದು ನಿರ್ಬಂಧ ಹೇರಿದೆ. ಅಲ್ಲದೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಅನೇಕ ಸೋಷಿಯಲ್ ಮೀಡಿಯಾಗಳಲ್ಲಿ ಅಪಪ್ರಚಾರ ಮಾಡಿರುವ, 4,140 ಯೂಟ್ಯೂಬ್ ವಿಡಿಯೋಗಳು, 3,584 ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳು, 932 ಫೇಸ್‌ಬುಕ್ ಪೋಸ್ಟ್‌ಗಳು ಮತ್ತು 108 ಸುದ್ದಿ ಲೇಖನಗಳು ಸೇರಿದಂತೆ ಒಟ್ಟು 8,842 ಲಿಂಕ್‌ಗಳ ಪಟ್ಟಿಯನ್ನು ಹರ್ಷೇಂದ್ರ ಕುಮಾರ್ ಅವರು ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಅವೆಲ್ಲಾವನ್ನು ಡಿಲೀಟ್ ಮಾಡುವಂತೆ ಆದೇಶಿಸಿದೆ.
ಇನ್ನು ಪ್ರಸ್ತುತ ದಾಖಲಾಗಿರುವ ವರದಿಯಲ್ಲಿ (ಎಫ್‌ಐಆರ್) ತಮ್ಮ ವಿರುದ್ಧ ಯಾವುದೇ ಆರೋಪಗಳಿಲ್ಲ ಹಾಗೇ 2012ರಲ್ಲಿ ದಾಖಲಾಗಿದ್ದ ಇದೇ ರೀತಿಯ ಪ್ರಕರಣದಲ್ಲಿ ತಾವು ಈಗಾಗಲೇ ಖುಲಾಸೆಯಾಗಿದ್ದೇವೆ ಎಂಬ ವಿಚಾರವನ್ನು ಡಿ.ಹರ್ಷೇಂದ್ರ ಕುಮಾರ್ ನ್ಯಾಯಾಲಯದ ಗಮನಕ್ಕೆ ತಂದಿದ್ದು, ನ್ಯಾಯಾಲಯವು ಈ ವಾದವನ್ನು ಪರಿಗಣಿಸಿದ್ದು, ಈಗಾಗಲೇ ಪ್ರಕಟವಾಗಿರುವ ಮಾನಹಾನಿಕರ ವಿಷಯಗಳನ್ನು ತಕ್ಷಣವೇ ಡಿಲೀಟ್ ಮಾಡುವಂತೆ ಆದೇಶಿಸಿದೆ.
ಈ ಸುದ್ದಿಯನ್ನು ಓದಿ: Jagdeep Dhankhar: ಜಗದೀಪ್ ಧನಕರ್ ಅವರ ನೀವೆಲ್ಲೂ ನೋಡಿರದ ಫೋಟೋಗಳಿವು; Exclusive
ಏನಿದು ಗ್ಯಾಗ್ ಆದೇಶ..?
ಗ್ಯಾಗ್ ಆರ್ಡರ್ ಎಂದರೆ, ನ್ಯಾಯಾಲಯವು ಕೆಲವು ವ್ಯಕ್ತಿಗಳಿಗೆ (ವಕೀಲರು, ಸಾಕ್ಷಿಗಳು, ಅಥವಾ ಪ್ರಕರಣದ ಇತರ ಪಕ್ಷಗಳು) ಪ್ರಕರಣದ ಬಗ್ಗೆ ಸಾರ್ವಜನಿಕವಾಗಿ ಮಾತನಾಡುವುದನ್ನು ಅಥವಾ ಮಾಹಿತಿಯನ್ನು ಹಂಚಿಕೊಳ್ಳುವವರ ವಿರುದ್ಧ ಜಾರಿಯಾಗುವ ಕಾನೂನು ಕ್ರಮ ಇದಾಗಿದ್ದು, ಪ್ರಕರಣದ ಬಗ್ಗೆ ಸಾರ್ವಜನಿಕವಾಗಿ ಮಾತನಾಡುವುದನ್ನು ಅಥವಾ ಮಾಹಿತಿಯನ್ನು ಹಂಚಿಕೊಳ್ಳುವುದನ್ನು ನಿಷೇಧಿಸುತ್ತದೆ. ಇದನ್ನು ಸಾಮಾನ್ಯವಾಗಿ ಪ್ರಕರಣದ ನ್ಯಾಯಯುತ ವಿಚಾರಣೆಯನ್ನು ಖಚಿತಪಡಿಸಿಕೊಳ್ಳಲು ಅಥವಾ ಗೌಪ್ಯತೆಯನ್ನು ಕಾಪಾಡಲು ನೀಡಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣಗಳಾದ ವಾಟ್ಸ್ ಆ್ಯಪ್, ಫೇಸ್ ಬುಕ್, ಇನ್ಸ್ಟಾಗ್ರಾಮ್, ಯೂ–ಟ್ಯೂಬ್ ಹಾಗೂ ದೃಶ್ಯ ಮಾಧ್ಯಮ ಸೇರಿದಂತೆ ಮತ್ತಿತ್ತರ ಮಾಧ್ಯಮಗಳ ಮೂಲಕ ನೀಡಲಾಗುತ್ತಿರುವ ಅವಹೇಳನಕಾರಿ ಹೇಳಿಕೆ ಮತ್ತು ಅಪಪ್ರಚಾರಕ್ಕೆ ಕಡಿವಾಣ ಹಾಕಲಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹಾಗೂ ಅವರ ಕುಟುಂಬಸ್ಥರ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಿ ತೇಜೋವಧೆ ಮಾಡುವುದನ್ನು ತಡೆಯಲು ಈ ಆದೇಶ ಬಹಳ ಪ್ರಮುಖವಾಗಿದೆ.