ಚಿಕ್ಕಬಳ್ಳಾಪುರ: ಕೆಲವರಲ್ಲಿ ಜ್ಞಾನವಿರುತ್ತದೆ, ಕೆಲವರಲ್ಲಿ ಧ್ಯಾನ ಮಾತ್ರವೇ ಇರುತ್ತದೆ. ಇವೆರೆಡೂ ಸಮಾಗಮವಾಗಿರುವ ವ್ಯಕ್ತಿತ್ವಗಳು ಅಪರೂಪ. ಅಂಥ ಅಪರೂಪದ ವ್ಯಕ್ತಿತ್ವ ಸದ್ಗುರು ಶ್ರೀ ಮಧುಸೂದನ ಸಾಯಿ. ಸದ್ಗುರುಗಳು ಕೇಳಿದ್ದನ್ನೆಲ್ಲವನ್ನೂ ಭಗವಂತ ಅನುಗ್ರಹಿಸುತ್ತಿದ್ದಾನೆ. ಮುದ್ದೇನಹಳ್ಳಿಗೆ ಬಂದಾಗಲೆಲ್ಲವೂ ನಮ್ಮ ಅಂತರಂಗದ ಪ್ರಯಾಣ ಆರಂಭವಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಮತ್ತು ಹಾಲಿ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಚಿಕ್ಕಬಳ್ಳಾಪುರ ತಾಲೂಕು ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನಡೆಯುತ್ತಿರುವ ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಮಹೋತ್ಸವದಲ್ಲಿ ಶುಕ್ರವಾರ (ಸೆ.26) ಅವರು ಮಾತನಾಡಿ, ಸದ್ಗುರು ಶ್ರೀ ಮಧುಸೂದನ ಸಾಯಿ ಅವರದು ಜ್ಞಾನ-ಧ್ಯಾನ ಮೇಳೈಸಿರುವ ಅಪರೂಪದ ವ್ಯಕ್ತಿತ್ವ ಎಂದು ಬಣ್ಣಿಸಿದರು.
"ನನ್ನ ಮತ್ತು ಮಧುಸೂದನ ಸಾಯಿ ಅವರ ಸಂಬಂಧ ದೈವದತ್ತವಾದುದು. ನಾನು ಮೊದಲ ಬಾರಿ ಅವರನ್ನು ಭೇಟಿಯಾದಾಗ ಒಬ್ಬ ವ್ಯಕ್ತಿ ಅಲ್ಲ, ಒಂದು ಶಕ್ತಿ ನನ್ನೊಂದಿಗೆ ಮಾತನಾಡುತ್ತಿದೆ ಎನಿಸಿತು. ಆ ಶಕ್ತಿಯು ಮಾನವಕುಲದ ಒಳಿತಿಗಾಗಿ ಶ್ರಮಿಸುತ್ತಿದೆ. ಇದು ಆಲೋಚನೆ ಮತ್ತು ಕಾರ್ಯಗಳಲ್ಲಿ ಶುದ್ಧತೆ ಇದ್ದಾಗ ಮಾತ್ರ ಸಾಧ್ಯ. ನಾವೆಲ್ಲರೂ ಚೈತನ್ಯದ ಕೇಂದ್ರವೇ ಆಗಿದ್ದೇವೆ. ಆದರೆ ನಮ್ಮಲ್ಲಿ ಚೈತನ್ಯವು ಹಲವೆಡೆಗೆ ಹರಿದು ಹೋಗುತ್ತಿರುತ್ತದೆ. ಆದರೆ ಮಧುಸೂದನ ಸಾಯಿ ಅವರ ಶಕ್ತಿಗೆ ಮಿತಿಯಿಲ್ಲ. ಇಲ್ಲಿ ನಾವೇನು ನೋಡುತ್ತೇವೆಯೋ ಅದು ಪವಾಡದಂತೆ ಇದೆ. ಇದು ದೇವರು ಅವರಿಗೆ ನೀಡಿರುವ ಹಲವು ಜವಾಬ್ದಾರಿಗಳ ಪೈಕಿ ಒಂದು ಮಾತ್ರ. ಭಕ್ತಿ ಎಂದರೇನು? ಅದು ಶುದ್ಧ ಪ್ರೀತಿ. ಶುದ್ಧ ಪ್ರೀತಿಯು ಯಾವುದೇ ಷರತ್ತುಗಳು ಇರುವುದಿಲ್ಲ. ಭಕ್ತಿಗೆ ಯಾವುದೇ ನಿರೀಕ್ಷೆಗಳು ಇರುವುದಿಲ್ಲ.

ಗುರುವಿನ ಮೂಲಕ ನಾವು ದೇವರನ್ನು ತಲುಪುತ್ತೇವೆ. ಭಕ್ತಿ ಎನ್ನುವುದು ಕರಗುವ, ಐಕ್ಯವಾಗುವ ಭಾವನೆ. ನಾವು ಕೇವಲ ಕರಗುವುದಷ್ಟೇ ಅಲ್ಲ, ಗುರುವಿನೊಂದಿಗೆ ಒಂದಾಗಬೇಕು. ಆಗ ಮಾತ್ರ ದೇವರನ್ನು ತಲುಪಲು ಸಾಧ್ಯವಾಗುತ್ತದೆ. ಸತ್ಯ ಸಾಯಿ ಬಾಬಾ ಅವರು ಭಕ್ತಿ-ಪ್ರೀತಿಯನ್ನು ಸೇವೆಯೊಂದಿಗೆ ಬೆಸುಗೆ ಹಾಕಿದ್ದರು. 'ಸೇವೆಯೇ ಪ್ರೀತಿ' ಎಂದು ಅವರು ಹೇಳುತ್ತಿದ್ದರು. 'ಯಾರು ಪ್ರೀತಿಸುತ್ತಾರೋ ಅವರು ಸೇವೆ ಮಾಡಬೇಕು. ಸೇವೆಯನ್ನು ಪ್ರೀತಿಯಿಂದ ಮಾಡಬೇಕು' ಎನ್ನುವುದು ಬಾಬಾ ಅವರ ಆಶಯ. ಮಧುಸೂದನ ಸಾಯಿ ಅವರು ಅದರಂತೆಯೇ ನಡೆದುಕೊಳ್ಳುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಜಾಗವನ್ನು (ಮುದ್ದೇನಹಳ್ಳಿಯನ್ನು) ನಾನು ಮೊದಲೂ ನೋಡಿದ್ದೆ. ಆಗ ಇಲ್ಲಿ ಕಲ್ಲು-ಮಣ್ಣುಗಳಷ್ಟೇ ಇತ್ತು. ಈಗ ಇದು ಶಾಶ್ವತ ಅಧ್ಯಾತ್ಮ ಕೇಂದ್ರವಾಗಿದೆ (ರಾಕ್ ಸಾಲಿಡ್ ಡಿವೈನ್ ಸೆಂಟರ್). ಭಾರತದ ಸಂಸ್ಕೃತಿ ಮತ್ತು ಪರಂಪರೆಯು ಜಗತ್ತಿನಲ್ಲಿಯೇ ವಿಶಿಷ್ಟವಾದುದು. ಹೀಗಾಗಿಯೇ ಜಗತ್ತು ಇಂದಿಗೂ ಸನಾತನ ಧರ್ಮದ ಕಡೆಗೆ ತಿರುಗಿ ನೋಡುತ್ತಿದೆ. ಸನಾತನ ಧರ್ಮವನ್ನು ಓದಿ ತಿಳಿಯಲು ಆಗುವುದಿಲ್ಲ. ಅನುಭವದಿಂದಷ್ಟೇ ಅರಿಯಬಹುದು. ಅನುಭವ ಪಡೆಯಲು ಈ ಸ್ಥಳಕ್ಕೆ ಬರಬೇಕು. ದೇವರ ಕರುಣೆ ಇದ್ದವರು ಮಾತ್ರವೇ ಇಲ್ಲಿಗೆ ಬರುತ್ತಾರೆ. ಇಲ್ಲಿಗೆ ಬಂದವರಿಗೆ ದೇವರ ಕರುಣೆಯು ಸಿಕ್ಕೇ ಸಿಗುತ್ತದೆ.
ಇಲ್ಲಿಗೆ ಒಮ್ಮೆ ಬಂದರೆ ಹೊರಪ್ರಪಂಚವನ್ನು ಮರೆಯುತ್ತೇವೆ. ನಮ್ಮೊಳಗೆ ನಾವು ಇಳಿದಂತೆ ಆಗುತ್ತದೆ. ನೀವು ಹೊರ ಜಗತ್ತಿನ ಯಾನವನ್ನು ನಿಲ್ಲಿಸಿ, ಒಳ ಜಗತ್ತಿನ ಯಾನವನ್ನು ಆರಂಭಿಸುತ್ತೀರಿ. ನಮ್ಮ ಪ್ರಜ್ಞೆಯು ಇಲ್ಲಿ ಜಾಗೃತವಾಗುತ್ತದೆ. ಎಲ್ಲ ಒಳ್ಳೆಯತನಗಳೂ ಉಕ್ಕಿ ಹರಿಯುತ್ತವೆ. ನಮ್ಮ ಮಿತಿಗಳು ಕರಗಿ ಹೋಗುತ್ತವೆ. ನಮ್ಮೊಳಗಿನ ದೇವಸ್ವಭಾವವು ಜಾಗೃತವಾಗುತ್ತದೆ. ಇದು ದೊಡ್ಡ ಶಕ್ತಿ.
ಸ್ವಾಮೀಜಿ ಮಾಡುತ್ತಿರುವ ಕೆಲಸಗಳನ್ನು ನೋಡಿ ಕೆಲವರು ಆಶ್ಚರ್ಯಚಕಿತರಾಗುತ್ತಾರೆ. ಅವರು ಅವನ್ನು ನಿರ್ಮಿಸುವುದಿಲ್ಲ; ಸೃಷ್ಟಿಸುತ್ತಾರೆ ಎಂದೇ ಹೇಳುತ್ತೇನೆ. ಅವರು ಕಟ್ಟಡಗಳನ್ನು ಸೃಷ್ಟಿಸುತ್ತಿಲ್ಲ; ಭವಿಷ್ಯದ ಜನಾಂಗವನ್ನು ರೂಪಿಸುತ್ತಿದ್ದಾರೆ-ಸಿದ್ಧಪಡಿಸುತ್ತಿದ್ದಾರೆ. ಇಲ್ಲಿಗೆ ಬರುವ ಹುಡುಗರಿಗೆ ಅದೃಷ್ಟ ಇರಬೇಕು. ಅವರಿಗೆ ಸಂಸ್ಕಾರ, ಸಂಸ್ಕೃತಿ, ಭಕ್ತಿ, ಧೈರ್ಯ ಮತ್ತು ಆತ್ಮವಿಶ್ವಾಸ ಇರುತ್ತದೆ ಎಂದು ತಿಳಿಸಿದರು.
ಇಲ್ಲಿರುವವರಿಗೆ ಬದುಕಿನ ಅರ್ಥವು ಸಿಗುತ್ತದೆ. ನಮ್ಮ ಬದುಕಿಗೆ ಏನು ಅರ್ಥವಿದೆ? ನಾವೇಕೆ ಈ ಭೂಮಿಗೆ ಬಂದಿದ್ದೇವೆ? ಈ ಪ್ರಶ್ನೆಗಳನ್ನು ಕೇಳಿಕೊಳ್ಳಲು ನಮಗೆ ಧೈರ್ಯವಾಗುವುದಿಲ್ಲ. ನಾವೇಕೆ ಭೂಮಿಗೆ ಬಂದಿದ್ದೇವೆ ಎನ್ನುವುದು ಒಮ್ಮೆ ಅರ್ಥವಾದರೆ, ಗುರಿ ಸಿಕ್ಕರೆ ನಮಗೆ ಸರಿಯಾದ ಹಾದಿ ಕಾಣಿಸುತ್ತದೆ. ಹೆಚ್ಚು ಜನರು ತುಳಿಯದ ಹಾದಿಯಲ್ಲಿ ನಾವು ಹೆಜ್ಜೆ ಹಾಕುತ್ತೇವೆ.
ನಮಗೆ ಸಮಾಜವು ಹೆಸರು, ಅಸ್ಮಿತೆ (ಗುರುತು) ಕೊಟ್ಟಿದೆ. ಇದರಿಂದಾಗಿಯೇ ಹಲವು ಸಣ್ಣಸಣ್ಣ ಅಹಂಗಳು ಸೇರುತ್ತಾ ಹೋಗುತ್ತವೆ. ಒಮ್ಮೆ ವೈದ್ಯ ಅಥವಾ ಎಂಜಿನಿಯರ್ ಆದರೆ ಸಮಾಜದಲ್ಲಿ ದೊಡ್ಡ ಸಾಧನೆ ಎನಿಸಿಕೊಳ್ಳುತ್ತದೆ. ಶಾಸಕನಾದರೆ, ಸಚಿವನಾದರೆ ಅಹಂ ಬೆಳೆಯುತ್ತಾ ಹೋಗುತ್ತದೆ. ಆದರೆ ಇಲ್ಲಿ (ಮುದ್ದೇನಹಳ್ಳಿಯಲ್ಲಿ) ಅಹಂಕಾರವು ಸುಟ್ಟು ಹೋಗುತ್ತದೆ. ನಂತರ ನಮ್ಮ ಅಂತರಂಗ ಅರಿಯಲು ಪ್ರಯತ್ನಿಸುತ್ತೇವೆ. ನಮ್ಮ ಅಸ್ಮಿತೆಯನ್ನು ಕಳೆದುಕೊಂಡಾಗ ಬ್ರಹ್ಮಾಂಡದ ಭಾಗವಾಗುತ್ತೇವೆ ಎಂದು ಹೇಳಿದರು.
ಜಗತ್ತಿನಲ್ಲಿ ಎಲ್ಲ ಮಕ್ಕಳೂ ಸುಂದರವಾಗಿರುತ್ತಾರೆ, ನಾವೂ ಸುಂದರವಾಗಿಯೇ ಇದ್ದೆವು. ಆದರೆ ಈಗ ಸಾಕಷ್ಟು ಬದಲಾಗಿದ್ದೇವೆ. ಮಕ್ಕಳಿದ್ದಾಗ ನಮಗೆ ಮುಗ್ಧತೆ ಇತ್ತು. ಈಗ ಏನೇನೋ ಸೇರಿಕೊಂಡಿದೆ. ಒಬ್ಬ ವ್ಯಕ್ತಿ ಮುಗ್ಧತೆಯನ್ನು ಕೊನೆಯವರೆಗೂ ಉಳಿಸಿಕೊಳ್ಳುವುದು ದೊಡ್ಡ ಸಾಧನೆ. ನಮ್ಮ ಪ್ರಜ್ಞೆಯು, ಮಿದುಳು ಪ್ರತ್ಯೇಕವಾಗಿ ಆಲೋಚಿಸುತ್ತವೆ. ನಮ್ಮ ಪ್ರಜ್ಞೆಯು ಹೇಳಿದಂತೆ ಕೇಳಿದರೆ ಶುದ್ಧರಾಗುತ್ತೇವೆ. ನಾವು ಯಾವಾಗ ಸದ್ಗುರುಗಳನ್ನು ನೋಡಿದರೂ ಅವರಲ್ಲಿ ಮಗುವಿನ ಮುಗ್ಧತೆ ಕಾಣಿಸುತ್ತದೆ. ಮಗು ಎಷ್ಟು ಬೆಳೆದರೂ ಅದರ ಮುಗ್ಧತೆ ಮಾಸಿಲ್ಲ ಎಂದು ಹೇಳಬೇಕು ಎನಿಸುತ್ತಿದೆ.
ಇದನ್ನು ಯಾರೂ ಯೋಚಿಸಿ-ಯೋಜಿಸಿ ಮಾಡಿರುವಂಥದ್ದಲ್ಲ, ಸಹಜವಾಗಿ ಆಗಿರುವಂಥದ್ದು. ಹೀಗಾಗಿಯೇ ಅವರು ಬ್ರಹ್ಮಾಂಡದೊಂದಿಗೆ ನೇರ ಸಂಪರ್ಕ ಹೊಂದಿದ್ದಾರೆ. ನಮಗೆ ಪವಾಡಗಳನ್ನು ಮಾಡುತ್ತಿದ್ದಾರೆ ಎನಿಸುತ್ತದೆ. ಅಧ್ಯಾತ್ಮದ ಪ್ರಯಾಣದಲ್ಲಿ ಜ್ಞಾನ ಮತ್ತು ಧ್ಯಾನ ಎರಡೂ ಬಹಳ ಮುಖ್ಯ. ಇವೆರೆಡರ ಸಂಗಮ ಸದ್ಗುರು ಶ್ರೀ ಮಧುಸೂದನ ಸಾಯಿ. ಕೆಲವರಿಗೆ ಜ್ಞಾನವಿದೆ, ಧ್ಯಾನವಿಲ್ಲ. ಕೆಲವರಲ್ಲಿ ಧ್ಯಾನವಿದೆ; ಜ್ಞಾನವಿಲ್ಲ. ಅವರೆಡೂ ಒಬ್ಬರೇ ವ್ಯಕ್ತಿಯಲ್ಲಿ ಮೇಳೈಸಿರುವುದು ವಿಶೇಷ.
ಈಗ ಸ್ವಾಮೀಜಿ ಅವರು ಬಡವರಿಗಾಗಿ 650 ಹಾಸಿಗೆಗಳ ಆಸ್ಪತ್ರೆ ನಿರ್ಮಿಸುತ್ತಿದ್ದಾರೆ. ಬಿಲ್ ಇಲ್ಲದ ಸೇವೆ ಒದಗಿಸಲು ಹೇಗೆ ಸಾಧ್ಯವಾಗುತ್ತಿದೆ ಎಂದು ಹಲವರು ಆಶ್ಚರ್ಯಪಡುತ್ತಾರೆ. ಕೇವಲ ಇಲ್ಲಿ ಮಾತ್ರವಲ್ಲ, ನೈಜೀರಿಯಾದಿಂದ ಅಮೆರಿಕವರೆಗಿನ ಇವರ ಯಾವುದೇ ಆಸ್ಪತ್ರೆಯಲ್ಲಿ ಬಿಲ್ಲಿಂಗ್ ಕೌಂಟರ್‌ಗಳಿಲ್ಲ. ಇದೆಲ್ಲ ಹೇಗೆ ಸಾಧ್ಯವಾಯಿತು. ಸ್ವಾಮೀಜಿ ಸರ್ವಶಕ್ತ ಪರಮಾತ್ಮನಿಗೆ ಬ್ಲಾಂಕ್ ಚೆಕ್ ಕೊಟ್ಟಿದ್ದಾರೆ. ಪರಮಾತ್ಮನು ಇವರಿಗೆ ನಿರಂತರವಾಗಿ ವರದಾನ ಮಾಡುತ್ತಲೇ ಇದ್ದಾನೆ.
ಈ ಸುದ್ದಿಯನ್ನೂ ಓದಿ | Sadguru Shri Madhusudhan Sai: ಸಂವಹನದ ಆಂತರ್ಯ ಅರಿತವರು ಋಷಿಗಳಿಗೆ ಸಮಾನ : ಸದ್ಗುರು ಶ್ರೀ ಮಧುಸೂದನ ಸಾಯಿ
ಇಲ್ಲಿನ ಗೋಶಾಲೆ ನೋಡಿ ನನಗೆ ಬಹಳ ಸಂತೋಷವಾಯಿತು. ನಾನು ಮುಖ್ಯಮಂತ್ರಿಯಾಗಿದ್ದಾಗ 'ಪುಣ್ಯಕೋಟಿ' ಕಾರ್ಯಕ್ರಮ ರೂಪಿಸಿದ್ದೆ. ಗೋಶಾಲೆಗಳಲ್ಲಿರುವ ಪ್ರತಿ ಹಸುವಿನ ನಿರ್ವಹಣೆಗಾಗಿ ವರ್ಷಕ್ಕೆ 11 ಸಾವಿರ ಸಹಾಯಧನ ಕೊಡಲಾಗುತ್ತಿತ್ತು. ಪುಣ್ಯವನ್ನು ಎಲ್ಲರೂ ಸಂಪಾದಿಸಬೇಕು ಎಂದುಕೊಳ್ಳುತ್ತೇವೆ. ಆದರೆ ಅದು ದೇವರ ಅನುಗ್ರಹದಿಂದ ಸಿಗಬೇಕು. ಇಲ್ಲಿಗೆ ಬಂದಾಗ ನಮಗೆ ಪುಣ್ಯ ಸಿಕ್ಕೇ ಸಿಗುತ್ತದೆ. ನಾವು ಇಲ್ಲಿಗೆ ಹೆಚ್ಚೆಚ್ಚು ಬಂದರೆ ಪುಣ್ಯಶಾಲಿಗಳಾಗುತ್ತೇವೆ" ಎಂದು ಹೇಳಿದರು.