ಚಿಂತಾಮಣಿ: ದೇಶಾದ್ಯಂತ ಕಾರ್ಗಿಲ್ ವಿಜಯ ದಿವಸ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಆದರೆ, ನಗರದಲ್ಲಿ (Chintamani News) ಮಾಜಿ ಸೈನಿಕರೊಬ್ಬರು, ತಮಗೆ ನೀಡಬೇಕಾದ ಜಮೀನನ್ನು ಅಧಿಕಾರಿಗಳು ಕೊಡುತ್ತಿಲ್ಲ ಎಂದು ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ತಾಲೂಕಿನ ಅಂಬಾಜಿ ದುರ್ಗಾ ಹೋಬಳಿಯ ರಾಯಪಲ್ಲಿ ಗ್ರಾಮದ ಮಾಜಿ ಸೈನಿಕ ಶಿವಾನಂದ ರೆಡ್ಡಿ ಎಂಬುವವರು ತಮ್ಮ ಪತ್ನಿ ಜತೆ ನ್ಯಾಯಕ್ಕಾಗಿ ಉಪವಾಸ ಸತ್ಯಾಗ್ರಹ ಕುಳಿತಿದ್ದಾರೆ.
ಚಿಂತಾಮಣಿ ನಗರದ ತಾಲೂಕು ಕಚೇರಿ ಆವರಣದಲ್ಲಿ ಭಾನುವಾರ ಬೆಳಗ್ಗೆ ಸತ್ಯಾಗ್ರಹ ಆರಂಭಿಸಿದ್ದಾರೆ. ಶಿವಾನಂದರೆಡ್ಡಿ ಸುಮಾರು ವರ್ಷಗಳ ಕಾಲ ಸೇವೆ ಸಲ್ಲಿಸಿ ಗಡಿ ಭಾಗದಲ್ಲಿ ನಡೆದ ಅಪಘಾತದಲ್ಲಿ ಅಂಗವಿಕಲರಾಗಿದ್ದರು. ಕಾಲಿಗೆ ತೀವ್ರ ಪೆಟ್ಟಾಗಿ ಸೇನೆಯಿಂದ ಕಡ್ಡಾಯ ನಿವೃತ್ತಿ ಪಡೆದಿದ್ದರು. ಹೀಗಾಗಿ ಜಮೀನು ಮಂಜೂರು ಮಾಡುವಂತೆ ರಾಜ್ಯ ಸರ್ಕಾರಕ್ಕೆ ಸೇನೆಯಿಂದ ಸೂಚಿಸಲಾಗಿತ್ತು. ಹಾಗೆ ಸೂಚಿಸಿ 26 ವರ್ಷ ಕಳೆದರೂ ಇವರಿಗೆ ಸರ್ಕಾರದಿಂದ ಜಮೀನು ಸಿಕ್ಕಿಲ್ಲ.
ಈ ಸುದ್ದಿಯನ್ನೂ ಓದಿ | Kalaburagi News: ಶ್ರೀ ಡಾ. ಶರಣಬಸಪ್ಪ ಅಪ್ಪ ಆರೋಗ್ಯ ಸ್ಥಿರ, ವದಂತಿಗೆ ಕಿವಿಗೊಡದಂತೆ ಮನವಿ
ಉಪವಾಸ ಸತ್ಯಾಗ್ರಹ ಕುಳಿತಿರುವ ಮಾಜಿ ಸೈನಿಕ ಶಿವಾನಂದ ರೆಡ್ಡಿ ಮಾತನಾಡಿ, ಸುಮಾರು 26 ವರ್ಷಗಳಿಂದ ಜಮೀನಿಗಾಗಿ ಹೋರಾಟ ಮಾಡುತ್ತಿದ್ದೇನೆ. ಆದರೆ ಯಾವುದೇ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನನಗೆ ನ್ಯಾಯ ಕೊಡಿಸಲು ಮುಂದಾಗುತ್ತಿಲ್ಲ. ತಾಲೂಕು ಆಡಳಿತದ ಕೆಲ ಕಂದಾಯ ಇಲಾಖೆಯ ಅಧಿಕಾರಿಗಳು ನನಗೆ ಜಮೀನು ನೀಡಬೇಕೆಂದರೆ, ಲಂಚ ಕೊಡಬೇಕೆಂದು ಡಿಮ್ಯಾಂಡ್ ಇಟ್ಟಿದ್ದರು. ಆ ವೇಳೆ ಅವರನ್ನು ನಾನು ಲೋಕಾಯುಕ್ತಕ್ಕೆ ಹಿಡಿದು ಕೊಟ್ಟಿದ್ದೆ. ಈ ಕಾರಣಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ನನಗೆ ಜಮೀನು ಮಂಜೂರು ಮಾಡಲು ವಿಳಂಬ ಮಾಡುತ್ತಿದ್ದಾರೆ. ನನಗೆ ಜಮೀನು ಸಿಗುವವರೆಗೂ ಉಪವಾಸ ಸತ್ಯಾಗ್ರಹವನ್ನು ಮುಂದುವರಿಸುತ್ತೇನೆ ಎಂದು ಹೇಳಿದರು.