ಚಿಕ್ಕಬಳ್ಳಾಪುರ: ಸಂಸದ ಡಾ.ಕೆ. ಸುಧಾಕರ್ ಅವರ ತಾಯಿ ಶಾಂತಮ್ಮ ಅವರು ನನಗೂ ತಾಯಿಯೇ. ಅವರು ನನಗೂ ಊಟ ಹಾಕಿದ್ದಾರೆ. ಅವರಿಗೆ ಹೃದಯಾಘಾತವಾದಾಗ ಆಸ್ಪತ್ರೆಗೆ ತೆರಳಿಸುವಾಗ ಆರೂರಿನ ಮೆಡಿಕಲ್ ಕಾಲೇಜು ಬಳಿ ಮಾರ್ಗ ಮಧ್ಯೆ ತೀರಿಕೊಂಡರು. ಆದ್ದರಿಂದ ಅಲ್ಲಿಯೇ ಶಾಂತಮ್ಮ ಕಾರ್ಡಿಯಾಕ್ ಕೇರ್ ಸೆಂಟರ್ (Cardiac Care Centre) ನಿರ್ಮಿಸಿ, ಅದರ ಉದ್ಘಾಟನೆಗೆ ಸಂಸದ ಡಾ.ಕೆ.ಸುಧಾಕರ್ ಅವರನ್ನು ನಾನೇ ಖುದ್ದಾಗಿ ಹೋಗಿ ಆಹ್ವಾನಿಸುವೆ ಎಂದು ಶಾಸಕ ಪ್ರದೀಪ್ ಈಶ್ವರ್ (Pradeep Eshwar) ತಿಳಿಸಿದ್ದಾರೆ.
ತಾಲೂಕಿನ ಬೊಮ್ಮೆಗಾನಹಳ್ಳಿಯಲ್ಲಿ ಅಂಬೇಡ್ಕರ್ ವಸತಿ ಶಾಲೆಯನ್ನು ಉದ್ಘಾಟಿಸಿ ಅವರು ಮಾತನಾಡಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಆಸತ್ರೆ ನಿರ್ಮಾಣಕ್ಕೆ ರಾಜ್ಯ ಸರ್ಕಾರಕ್ಕೆ 80 ಕೋಟಿ ರೂ.ಗಳ ಪ್ರಸ್ತಾವನೆ ಸಲ್ಲಿಸಿದ್ದೇನೆ. ಮೆಡಿಕಲ್ ಕಾಲೇಜು ಆಸ್ಪತ್ರೆ ಆವರಣದಲ್ಲಿ ಸಂಸದ ಡಾ.ಕೆ.ಸುಧಾಕರ್ ಅವರ ತಾಯಿ ಶಾಂತಮ್ಮ ಅವರ ಹೆಸರಿನಲ್ಲಿ ಶಾಂತಮ್ಮ ಕಾರ್ಡಿಯಾಕ್ ಕೇರ್ ಸೆಂಟರ್ ನಿರ್ಮಿಸುತ್ತೇನೆ ಎಂದು ಹೇಳಿದ್ದಾರೆ.
ಸುಧಾಕರ್ ಅವರು ಒಳ್ಳೆಯ ಕೆಲಸ ಮಾಡಿದರೆ, ನಾನು ಅವರನ್ನು ಗೌರವಿಸುವೆ. ಹಾಗೆಯೇ ನಾನು ಒಳ್ಳೆಯ ಕೆಲಸ ಮಾಡಿದಾಗ ಅವರೂ ನನ್ನನ್ನು ಗೌರವಿಸಲಿ ಎಂದಿದ್ದಾರೆ.
ಸಿದ್ದರಾಮಯ್ಯ ಸರ್ಕಾರಕ್ಕೆ ಗೋಮಾತೆ ಶಾಪ ತಟ್ಟುತ್ತದೆ ಎಂಬ ಮಾಜಿ ಡಿಸಿಎಂ ಕೆ. ಎಸ್.ಈಶ್ವರಪ್ಪ ಹೇಳಿಕೆಗೆ ಉತ್ತರಿಸಿ, ಬಿಜೆಪಿ ನಾಯಕ ಯಡಿಯೂರಪ್ಪರನ್ನು ಬೀದಿಗಳಲ್ಲಿ ಬೈಯ್ಯುವುದನ್ನು ಮೊದಲು ಬಿಡಲಿ. ನಾಲ್ಕು ಗೋಡೆಗಳ ನಡುವೆ ಮಾತನಾಡಿಕೊಳ್ಳಬೇಕಾದ ಪಕ್ಷದ ಆಂತರಿಕ ಸಮಸ್ಯೆಯನ್ನು ಬೀದಿಗೆ ತಂದು ಈಶ್ವರಪ್ಪನವರು ಬಿಜೆಪಿಯಿಂದ ಉಚ್ಚಾಟನೆಯಾಗಿದ್ದಾರೆ. ಅವರು ಮೊದಲು ಬಿಜೆಪಿ ಸದಸ್ಯತ್ವ ಪಡೆಯಲಿ, ಆಗ ಅವರ ಗೋ ಹತ್ಯಾ ಶಾಪದ ಬಗ್ಗೆ ಮಾತನಾಡುವೆ ಎಂದು ಹೇಳಿದರು.
ಜೋಕರ್‌ಗಳು ವಿಧಾನಸೌಧಕ್ಕೆ ಆರಿಸಿ ಬರುತ್ತಿದ್ದಾರೆ ಎಂಬ ಯತ್ನಾಳ್ ಹೇಳಿಕೆಗೆ ಉತ್ತರಿಸಿ, ಹೌದು ನಾನು ಜೋಕರೇ, ಏಕೆಂದರೆ ಜನರ ನೋವು ಮರೆಸಿ, ಅವರಿಗೆ ಸಂತೋಷ ನೀಡುವವನೇ ಜೋಕರ್, ಆದರೆ ಇಷ್ಟು ದಿನ ವಿಧಾನಸೌಧಕ್ಕೆ ಬ್ರೋಕರ್‌ಗಳು ಆರಿಸಿ ಬರುತ್ತಿದ್ದರು. ಈಗ ಜೋಕರ್‌ಗಳು ಆರಿಸಿ ಬರುತ್ತಿದ್ದೇವೆ. ಆರಿಸಿ ಬರುತ್ತಿದ್ದ ಬ್ರೋಕರ್‌ಗಳು ಯಾರೆಂದು ಯತ್ನಾಳರನ್ನೇ ಕೇಳಬೇಕು ಎಂದು ಕಾಲೆಳೆದರು.
ಯತ್ನಾಳ್ ನನ್ನ ವಿರುದ್ಧ ಚುನಾವಣೆಗೆ ಸ್ಪರ್ಧಿಸುವುದಲ್ಲಾ, ನಾನೇ ಅವರ ವಿರುದ್ಧ ವಿಜಯಪುರದಲ್ಲಿ ಸ್ಪರ್ಧಿಸುವೆ, ಅವರಿಗೆ ಕನಿಷ್ಠ ಡೆಪಾಸಿಟ್ ಕೂಡ ಸಿಗದಂತೆ ಮಾಡುವೆ. ವಿಜಯಪುರ ನಗರದಲ್ಲಿ ಯಾವುದೇ ರಸ್ತೆಗಳು ಸರಿ ಇಲ್ಲಾ ಅವರು 40 ವರ್ಷದಿಂದ ಗೆದ್ದು ಬರುತ್ತಿರುವ ಅವರ ಕ್ಷೇತ್ರಕ್ಕೆ ಕೊಟ್ಟಿರುವುದು ಕೇವಲ ಒಂದು ಆ್ಯಂಬುಲೆನ್ಸ್ ಮಾತ್ರ. ನಾನು ನನ್ನ ಕ್ಷೇತ್ರಕ್ಕೆ ನೀಡಿರುವುದು 10 ಆ್ಯಂಬುಲೆನ್ಸ್ ಗಳು.
ಈ ಸುದ್ದಿಯನ್ನೂ ಓದಿ | CM Siddaramaiah: ಸಿಎಂ ಸಿದ್ದರಾಮಯ್ಯ ಕುಟುಂಬಕ್ಕೆ ಅನ್ನ, ಆಶ್ರಯ ನೀಡಿದ ಮರಿಸ್ವಾಮಿ ಯಾರು?
ನಾನು ಗೆದ್ದಾಗಿನಿಂದ 200 ಹಳ್ಳಿಗಳಿಗೆ ಭೇಟಿ ನೀಡಿ ಅಲ್ಲಿಯ ಜನತೆಯ ಕಷ್ಟ ಪರಿಹಾರಕ್ಕೆ ಯತ್ನಿಸಿ ಪರಿಹಾರ ನೀಡಿದ್ದೇನೆ. ಯತ್ನಾಳರು ಈವರೆಗೂ ಒಂದೇ ಒಂದು ಹಳ್ಳಿಗೂ ಭೇಟಿ ನೀಡಿಲ್ಲ. ನಾನು ಐನೂರಕ್ಕೂ ಹೇಚ್ಚು ಬೋರ್‌ವೆಲ್‌ಗಳನ್ನು ಪರಿಶಿಷ್ಟ ವರ್ಗ ಮತ್ತು ಜಾತಿಗೆ ನೀಡಿದ್ದೇನೆ. ಅವರು ಎಷ್ಟು ಕೊರೆಸಿದ್ದಾರೆ. ಇವೆಲ್ಲವನ್ನು ನೋಡಿದರೆ ನಾನು ವಿಜಯಪುರದಲ್ಲಿ ನಿಂತರೆ ಗೆಲ್ಲುವುದು ಶತಸಿದ್ದ. 2018ಕ್ಕೆ ಅವರು ಹಿಂದೂ ಸರ್ಕಾರ ಬರುತ್ತದೆ. ನಾನೇ ಮುಖ್ಯ ಮಂತ್ರಿ ಎಂದು ತಿರುಕನ ಕನಸು ಕಾಣುತ್ತಿದ್ದಾರೆ ಎಂದು ಲೇವಡಿ ಮಾಡಿದರು.