ಚಿಕ್ಕಬಳ್ಳಾಪುರ: ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ (Sathya Sai Grama) ಗುರುವಾರ ವಿಜಯ ದಶಮಿ ದಿನದಂದು ಸದ್ಗುರು ಶ್ರೀ ಮಧುಸೂದನ ಸಾಯಿ ಅವರ (Sadguru Sri Madhusudan Sai) ಮಾರ್ಗದರ್ಶನದಲ್ಲಿ ಉಮಾ ಮಹೇಶ್ವರ ದೇವಸ್ಥಾನದಲ್ಲಿ ಪ್ರಾಣ ಪ್ರತಿಷ್ಠಾಪನೆ, ಕಳಸ ಪ್ರತಿಷ್ಠಾಪನೆ ವಿಧಿಗಳು ನೆರವೇರಿದವು.

ಪುರೋಹಿತರು ಸ್ವರಬದ್ಧವಾಗಿ ವೇದ ಮಂತ್ರಗಳನ್ನು ಪಾರಾಯಣ ಮಾಡುತ್ತಿದ್ದಾಗ ಒಂದು ರೀತಿಯ ದೈವಿಕ ವಾತಾವರಣ ಎಲ್ಲೆಡೆ ನೆಲೆಗೊಂಡಂತೆ ಭಾಸವಾಯಿತು. ಪ್ರಾಣ ಪ್ರತಿಷ್ಠಾಪನೆಯ ನಂತರ ಉಮಾ-ಮಹೇಶ್ವರ ದೇವರ ರಥಯಾತ್ರೆ ನಡೆಯಿತು. ನವರಾತ್ರಿ ಪ್ರಯುಕ್ತ ನಡೆಯುತ್ತಿರುವ ದುರ್ಗಾಪೂಜೆ ಮತ್ತು ಅತಿರುದ್ರ ಮಹಾಯಜ್ಞಗಳು ಗುರುವಾರ ಸಂಪನ್ನಗೊಂಡವು. ಶಾಂತಿಕೊಡುವ ಲಕ್ಷ್ಮೀನಾರಾಯಣ ಹೃದಯ ಹೋಮ, ಸಂಪತ್ತು ಪ್ರದಾಯಕ ಎಂಬ ನಂಬಿಕೆಯಿರುವ ಕುಬೇರ ಲಕ್ಷ್ಮೀ ಹೋಮಗಳು ಶಾಸ್ತ್ರಬದ್ಧವಾಗಿ ನೆರವೇರಿದವು. ಬಂಗಾಳಿ ಶೈಲಿಯ ದುರ್ಗಾ ಆರತಿಯ ನಂತರ ದುರ್ಗೆಯ ವಿಗ್ರಹವನ್ನು ವಿಸರ್ಜಿಸಲಾಯಿತು.

ಈ ವೇಳೆ ಆಶೀರ್ವಚನ ನೀಡಿದ ಸದ್ಗುರು ಶ್ರೀ ಮಧುಸೂದನ ಸಾಯಿ, ''ಜಗತ್ತಿನ ತಂದೆ-ತಾಯಿಗಳಾದ ಈಶ್ವರ-ಪಾರ್ವತಿಯರು ನಮ್ಮ ಆಶ್ರಮಕ್ಕೆ ಬಂದಿದ್ದಾರೆ. ಅವರ ಕುಟುಂಬದಲ್ಲಿ ನಂದಿ, ಸರ್ಪ, ಇಲಿ, ನವಿಲು, ಸಿಂಹಗಳೂ ಇವೆ. ಒಂದು ಶಿಸ್ತು ಇಲ್ಲದಿದ್ದರೆ ಇವುಗಳ ಪರಿಸ್ಥಿತಿ ಏನಾಗಬಹುದು ಊಹಿಸಿ? ನಾವು ದೇವರ ಕುಟುಂಬ ಎನ್ನುವ ಭಾವ ನಮ್ಮಲ್ಲಿ ಸದಾ ಜಾಗೃತವಾಗಿದ್ದರೆ ನಮ್ಮ ಬದುಕು ಸುಧಾರಿಸುತ್ತದೆ. ಈ ದೇಗುಲದಲ್ಲಿ ಪ್ರಾಣಪ್ರತಿಷ್ಠಾಪನೆಯಾದ ನಂತರ ಇದು ಭೂ ಕೈಲಾಸವೇ ಆಗಲಿದೆ'' ಎಂದು ತಿಳಿಸಿದರು.
''ತಂದೆ-ತಾಯಿಯಂತೆ ಮಕ್ಕಳು ಎನ್ನುವ ಮಾತು ಇದೆ. ನಾವೆಲ್ಲರೂ ಶಿವನ ಮಕ್ಕಳಾಗಿರುವ ಕಾರಣ ನಮ್ಮ ನಡವಳಿಕೆಯು ಅದಕ್ಕೆ ಅನುಗುಣವಾಗಿಯೇ ಇರಬೇಕು. ತಪ್ಪು ಮಾಡಿದ ಮಕ್ಕಳನ್ನು ತಿದ್ದಲೆಂದು ಲೋಕದಲ್ಲಿ ಸಾಮಾನ್ಯ ಪೋಷಕರು ಶಿಕ್ಷಿಸುವಂತೆ ಇವರೂ ಶಿಕ್ಷಿಸಬಹುದು. ಆದರೆ ನಾವೆಂದಿಗೂ ಅಂಥ ತಪ್ಪು ಮಾಡಬಾರದು'' ಎಂದು ಕಿವಿಮಾತು ಹೇಳಿದರು.
''ಹೋಮ, ಯಜ್ಞ, ಪೂಜೆಗಳ ಮೂಲಕ ಇಲ್ಲಿಗೆ ಆವಾಹನೆಗೊಂಡ ಎಲ್ಲ ದೇವತೆಗಳು ಈ ಸ್ಥಳವನ್ನು ಆಶೀರ್ವದಿಸಿದ್ದಾರೆ. ಇದು ನಿಜವಾಗಿಯೂ ಪುಣ್ಯ ಕ್ಷೇತ್ರವಾಗಿದೆ. ಶ್ರದ್ಧೆಯಿಂದ ನಡೆಸಲಾದ ಈ ಎಲ್ಲ ಆಚರಣೆಗಳಿಂದ ಪರಮಾತ್ಮನು ಸಂಪ್ರೀತನಾಗಿದ್ದಾನೆ. ಜಗತ್ತಿನ ಎಲ್ಲ ಒಳ್ಳೆಯ ಜನರು ಸುರಕ್ಷಿತವಾಗಿರಲಿ. ಇಡೀ ಜಗತ್ತು ಸಂತೋಷವಾಗಿರಲಿ ಎನ್ನುವ ಪ್ರಾರ್ಥನೆಯೊಂದಿಗೆ ಅತಿರುದ್ರ ಮಹಾಯಜ್ಞವನ್ನು ಪೂರ್ಣಗೊಳಿಸುತ್ತಿದ್ದೇವೆ'' ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ | Sadguru Sri Madhusudan Sai: ಮೃತ್ಯುಂಜಯನ ಆರಾಧನೆಯಿಂದ ಮೃತ್ಯು ಭಯ ದೂರ: ಸದ್ಗುರು ಶ್ರೀ ಮಧುಸೂದನ ಸಾಯಿ
ಸಂಜೆ ನಡೆದ ಕಾರ್ಯಕ್ರಮದಲ್ಲಿ ಉಮಾಮಹೇಶ್ವರ ದೇಗುಲದ ಜಾಲತಾಣ umamaheshwaratemple.org ಲೋಕಾರ್ಪಣೆ ಮಾಡಲಾಯಿತು. ಶಿಕ್ಷಣಕ್ಕೆ ಬೆಂಬಲ ನೀಡುತ್ತಿರುವ 'ಭಾರತೀಯ ಜೀವ ವಿಮಾ ನಿಗಮ'ಕ್ಕೆ 'ಸಿಎಸ್ಆರ್ ಸರ್ಕಲ್ ಆಫ್ ಹಾನರ್ ಪುರಸ್ಕಾರ' ನೀಡಿ ಗೌರವಿಸಲಾಯಿತು. ಕಂಪನಿಯ ಶಿವಮೊಗ್ಗದ ಹಿರಿಯ ವಿಭಾಗೀಯ ವ್ಯವಸ್ಥಾಪಕ ಪಿ. ಶ್ರೀನಿವಾಸ್ ಪ್ರಶಸ್ತಿ ಸ್ವೀಕರಿಸಿದರು.