ಮುದ್ದೇನಹಳ್ಳಿ: ಚಿಕ್ಕಬಳ್ಳಾಪುರ ತಾಲೂಕು ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ಶುಕ್ರವಾರ (ಆಗಸ್ಟ್ 15) ‘ಒಂದು ವಿಶ್ವ ಒಂದು ಕುಟುಂಬ ಜಾಗತಿಕ ಸಾಂಸ್ಕೃತಿಕ ಉತ್ಸವ 2025’ಕ್ಕೆ (World Cultural Festival 2025) ಚಾಲನೆ ನೀಡಲಾಯಿತು. ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯ ಮತ್ತು ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ (IGNCA) ಸಹಯೋಗದಲ್ಲಿ ಆರಂಭವಾದ ಈ ಸಾಂಸ್ಕೃತಿಕ ಸಂಭ್ರಮವು ಜಗತ್ತನ್ನು ಬೆಸೆಯುವ ಪ್ರಯತ್ನ ಮಾಡಲಿದೆ.
ಒಟ್ಟು 100 ದಿನಗಳ ಕಾಲ ನಡೆಯಲಿರುವ ಜಾಗತಿಕ ಮಟ್ಟದ ಸಾಂಸ್ಕೃತಿಕ ಉತ್ಸವವು ಸಂಸ್ಕೃತಿ, ಅಧ್ಯಾತ್ಮ, ಸೇವೆ ಮತ್ತು ಮಾನವೀಯತೆಯ ಸಹಯೋಗದ ಆಚರಣೆಗಳ ಮೂಲಕ 100 ದೇಶಗಳನ್ನು ಬೆಸೆಯಲಿದೆ. ಪವಿತ್ರ ಪರಂಪರೆಗಳಿಂದ ಆಧುನಿಕ ಅಭಿವ್ಯಕ್ತಿಗಳವರೆಗೆ, ವಿಭಿನ್ನ ಶ್ರದ್ಧೆಗಳ ಸಂವಾದದಿಂದ ಕಲಾತ್ಮಕ ಪ್ರದರ್ಶನಗಳವರೆಗೆ, ಉತ್ಸವವು ಸರಳವಾದ ಸತ್ಯವನ್ನು ಪುನರುಚ್ಚರಿಸಲು ಪ್ರಯತ್ನಿಸುತ್ತದೆ. ಗಡಿಗಳು ಮತ್ತು ವಿಭಜನೆಗಳ ಹೊರತಾಗಿಯೂ, ಪ್ರಪಂಚವು ಒಂದು ಕುಟುಂಬವಾಗಿ ಒಟ್ಟಿಗೆ ನಿಲ್ಲಬಹುದು ಎಂದು ಸಾರಿಹೇಳುವ ಪ್ರಯತ್ನ ಮಾಡಲಿದೆ.

ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ಭಾಷಣ ಮಾಡಿದ ‘ಒಂದು ವಿಶ್ವ ಒಂದು ಕುಟುಂಬ ಸೇವಾ ಅಭಿಯಾನ’ದ ಸಂಸ್ಥಾಪಕರಾದ ಸದ್ಗುರು ಶ್ರೀ ಮಧುಸೂದನ್ ಸಾಯಿ ಅವರು, ‘ಸಂಪರ್ಕ, ಕಾಳಜಿ, ಸಹಯೋಗ, ಸಹಬಾಳ್ವೆ ಮತ್ತು ಸಹಕಾರವೇ ಸಂಸ್ಕೃತಿ. ಶತಮಾನದಲ್ಲಿ ಒಮ್ಮೆ ನಡೆಯಬಹುದಾದ ವಿಶ್ವ ಸಾಂಸ್ಕೃತಿಕ ಉತ್ಸವದಂಥ ಮಹತ್ವದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಏಕತೆ, ಪ್ರೀತಿ ಮತ್ತು ಶಾಂತಿಯ ಅನುಭವ ಪಡೆದುಕೊಳ್ಳಬೇಕು’ ಎಂದು ಜಗತ್ತಿನ ಎಲ್ಲರಿಗೂ ಆಹ್ವಾನ ನೀಡಿದರು.
ಸುಭದ್ರವಾದ ಜಗತ್ತಿಗೆ ಭದ್ರಬುನಾದಿ ಹಾಕಬೇಕಿದ್ದರೆ ಸಾಮರಸ್ಯ ಬೆಳೆಯಬೇಕು. ನಾವು ಪರಸ್ಪರರ ಮೌಲ್ಯಗಳ ವಿನಿಮಯ ಮಾಡಿಕೊಳ್ಳಬೇಕಾದ ಅಗತ್ಯವಿದೆ. ಎಲ್ಲಾ ವೈವಿಧ್ಯತೆಗಳನ್ನು ಸಮನ್ವಯಗೊಳಿಸಿ ಜಾಗತಿಕ ಏಕತೆಯನ್ನು ಸಾಧಿಸುವುದೇ ಜಾಗತಿಕ ಸಾಂಸ್ಕೃತಿಕ ಉತ್ಸವದ ಉದ್ದೇಶ ಎಂದು ವಿವರಿಸಿದರು.

ಮಾನವನ ಬದುಕು ವೈವಿಧ್ಯದ ಆಗರ. ಅದನ್ನು ಸಮನ್ವಯಗೊಳಿಸುವುದೇ ಮಾನವೀಯತೆ. ಭಗವಾನ್ ಶ್ರೀ ಸತ್ಯಸಾಯಿ ಬಾಬಾ ಅವರು ಮನುಕುಲ ಸಮನ್ವಯದ ರೂವಾರಿ. ಅವರು ಮಹಾನ್ ದಾರ್ಶನಿಕರಲ್ಲದೇ ಸಹಾನುಭೂತಿಯ ಮೂರ್ತ ಸ್ವರೂಪರಾಗಿದ್ದರು. ಅಂಥವರ ದಾರ್ಶನಿಕ ದೃಷ್ಟಿಕೋನವನ್ನು ನಾವು ಬೆಳೆಸಬೇಕಾಗಿದೆ. ಆ ದಾರ್ಶನಿಕ ದೃಷ್ಟಿಕೋನದ ಜಾಡಿನಲ್ಲಿ ಸಾಗಿದಾಗ ನಮ್ಮ ಬದುಕಿಗೆ ಬೇಕಾದ ಉತ್ತಮ ಮಾರ್ಗದರ್ಶನ ದೊರೆಯುತ್ತದೆ ಎಂದು ಅಭಿಪ್ರಾಯಪಟ್ಟರು.
ಶ್ರೀ ಸತ್ಯ ಸಾಯಿ ಲೋಕ ಸೇವಾ ಸಮೂಹ ಶಿಕ್ಷಣ ಸಂಸ್ಥೆಗಳ ಪ್ರಧಾನ ಮಾರ್ಗದರ್ಶಕ ಡಾ ಬಿ.ಎನ್.ನರಸಿಂಹಮೂರ್ತಿ ತಮ್ಮ ದಿಕ್ಸೂಚಿ ಉಪನ್ಯಾಸದಲ್ಲಿ ಸಾಮರಸ್ಯದ ಅಗತ್ಯವನ್ನು ಮನಮುಟ್ಟುವಂತೆ ವಿವರಿಸಿದರು. ಶತ ದಿನಗಳ ಸಾಂಸ್ಕೃತಿಕ ಉತ್ಸವದ ಲಾಂಛನವನ್ನು ಲೋಕಾರ್ಪಣೆ ಮಾಡಿದ ‘ಕರ್ಮಯೋಗಿ ಭಾರತ್’ ಸೇವಾ ಅಭಿಯಾನದ ಅಧ್ಯಕ್ಷರಾದ ಪದ್ಮಭೂಷಣ ಶ್ರೀ ಸುಬ್ರಮಣಿಯನ್ ರಾಮದೊರೈ ಉತ್ಸವದ ಆಶಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ‘ಕಾಳಜಿ, ಹಂಚಿಕೊಳ್ಳುವ ಮನೋಭಾವ, ಔದಾರ್ಯ, ಸದ್ಭಾವನೆ, ತಿಳಿವಳಿಕೆ ಮತ್ತು ಸಹಕಾರ’ದ ಸಂದೇಶಗಳು ವಿಶ್ವ ಸಾಂಸ್ಕೃತಿಕ ಉತ್ಸವದ ಮೂಲಕ ಜಗತ್ತಿನೆಲ್ಲೆಡೆ ಪಸರಿಸಲಿದೆ ಎಂದರು.

ಶಿರಾ ಕ್ಷೇತ್ರದ ಶಾಸಕ ಹಾಗೂ ದೆಹಲಿಯಲ್ಲಿ ಕರ್ನಾಟಕ ರಾಜ್ಯದ ವಿಶೇಷ ಪ್ರತಿನಿಧಿ ಡಾ ಟಿ.ಬಿ.ಜಯಚಂದ್ರ ಮಾತನಾಡಿ, ಈ ಉಪಕ್ರಮವು ಜಾಗತಿಕ ಸಂಸ್ಕೃತಿಯನ್ನು ಸಂಭ್ರಮಿಸುವ, ಪ್ರೀತಿ ಮತ್ತು ಸೇವೆಯನ್ನು ತಳಹದಿಯಾಗಿ ಹೊಂದಿರುವ ಪರಂಪರೆಯ ಮುಂದುವರಿಕೆಯಾಗಿದೆ. ಸತ್ಯ ಸಾಯಿ ಬಾಬಾ ಅವರ ಜೀವನದ ಪುನರವಲೋಕನಕ್ಕೆ ಇದೊಂದು ಸಂದರ್ಭವಾಗಿದೆ. ಬಾಬಾ ಅವರ ದಿವ್ಯ ಚೈತನ್ಯವು ನಮ್ಮೊಂದಿಗೆ ಇರುವ ಭಾವ ತೀವ್ರತೆಯನ್ನು ಉಂಟು ಮಾಡುತ್ತಿದೆ’ ಎಂದು ಶ್ಲಾಘಿಸಿದರು.
ಭಾರತ ಸರ್ಕಾರದ ಸಂಸ್ಕೃತಿ ಖಾತೆ ಸಚಿವ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಅವರು ವಿಡಿಯೊ ಸಂದೇಶದ ಮೂಲಕ ಉತ್ಸವದಲ್ಲಿ ಪಾಲ್ಗೊಳ್ಳಲಿರುವ ಎಲ್ಲ ದೇಶಗಳಿಗೂ ಆತ್ಮೀಯ ಸ್ವಾಗತ ಕೋರಿದರು. ಭಾರತೀಯ ಪರಂಪರೆಯ ಶ್ರೀಮಂತಿಕೆಯನ್ನು ಸಶಕ್ತವಾಗಿ ಪ್ರದರ್ಶಿಸಲು ‘ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರ’ದ ಮೂಲಕ ವಿಶೇಷ ಪ್ರದರ್ಶನ ಆಯೋಜಿಸುವುದಾಗಿ ಘೋಷಿಸಿದರು.
ಬೆಂಗಳೂರಿನ ‘ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರ’ದ ದಕ್ಷಿಣ ಪ್ರಾದೇಶಿಕ ನಿರ್ದೇಶಕ ಶ್ರೀ ಡಿ.ಮಹೇಂದ್ರ, ದೇಶ-ವಿದೇಶಗಳ ಗಣ್ಯರು, ವಿದ್ಯಾರ್ಥಿಗಳು, ವಿವಿಧ ವಿಭಾಗಗಳ ಮುಖ್ಯಸ್ಥರು ಭಾಗವಹಿಸಿದ್ದರು. ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ನಡೆಸಿಕೊಟ್ಟ ‘ವಂದೇ ಮಾತರಂ’ ಸಾಂಸ್ಕೃತಿಕ ಪ್ರದರ್ಶನದೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು. ಮುಂದಿನ ದಿನಗಳಲ್ಲಿ ನಡೆಯಲಿರುವ ಹಲವು ಮಹತ್ವದ ಆಚರಣೆಗಳಿಗೆ ‘ವಂದೇ ಮಾತರಂ’ ಸಶಕ್ತ ಮುನ್ನುಡಿ ಬರೆಯಿತು.
ಜಾಗತಿಕ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ವಿನಿಮಯದಲ್ಲಿ ‘ವಿಶ್ವ ಸಾಂಸ್ಕೃತಿಕ ಉತ್ಸವ 2025’ ಒಂದು ಹೆಗ್ಗುರುತಾಗಿದೆ. ಜಾಗತಿಕ ಮಟ್ಟದಲ್ಲಿ ಸಾಂಸ್ಕೃತಿಕ ಮತ್ತು ಅಧ್ಯಾತ್ಮಿಕ ಚಿಂತನೆಗಳ ವಿನಿಮಯಕ್ಕೆ ಇದು ಅದ್ಭುತ ವೇದಿಕೆ ಒದಗಿಸಲಿದೆ. ಭೌಗೋಳಿಕತೆ, ನಂಬಿಕೆ ಮತ್ತು ಸಂಪ್ರದಾಯಗಳನ್ನು ಮೀರಿ ಮಾನವೀಯತೆಯನ್ನು ಬೆಸೆಯುವ ಪ್ರಯತ್ನಗಳ ಮೇಲೆ ಈ ಉತ್ಸವವು ಬೆಳಕು ಚೆಲ್ಲುತ್ತದೆ.