ಉಡುಪಿ: ಬಿ.ಎಲ್.ಸಂತೋಷ್ ವಿರುದ್ಧ ಅವಹೇಳನಕಾರಿ ಹೇಳಿಕೆ ಪ್ರಕರಣದಲ್ಲಿ ಮಹೇಶ್ ಶೆಟ್ಟಿ ತಿಮರೋಡಿಗೆ ಜಾಮೀನು ಮಂಜೂರಾಗಿದೆ. ಈ ವೇಳೆ ಉಡುಪಿ ಕೋರ್ಟ್ ಆವರಣದಲ್ಲಿ ಮಾತನಾಡಿರುವ ತಿಮರೋಡಿ, ಏನೂ.... ಕಿತ್ಕೊಳೋಕೆ ಆಗಲ್ಲ ಎಂದು ನಾಲಿಗೆ ಹರಿಬಿಟ್ಟಿದ್ದಾರೆ. ನೀವು ಅರೆಸ್ಟ್ ಆಗಿದ್ದು ಆತ್ಮಸ್ಥೈರ್ಯ ಕುಗ್ಗಿಸಿತೇ ಎಂಬ ಮಾಧ್ಯಮದವರ ಪ್ರಶ್ನೆಗೆ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಇನ್ನು ಹಿರಿಯಡ್ಕ ಸಬ್ ಜೈಲಿನಿಂದ ಬಿಡುಗಡೆಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಹೇಶ್ ಶೆಟ್ಟಿ ತಿಮರೋಡಿ, ನಮ್ಮ ಹೋರಾಟ ಮುಂದುವರಿಯಲಿದೆ, ಸಹಕಾರ ನೀಡಿದ ವಕೀಲರಿಗೆ ಅಭಿನಂದನೆ ಸಲ್ಲಿಸುವೆ. ಅನಾಮಿಕನ ಬಂಧನದ ಬಗ್ಗೆ ನನಗೆ ಗೊತ್ತಿಲ್ಲ ಎಂದು ತಿಳಿಸಿದ್ದಾರೆ.
ಮಹೇಶ್ ಶೆಟ್ಟಿ ತಿಮರೋಡಿಯನ್ನು ಕೋರ್ಟ್ ಮುಂದೆ ಶನಿವಾರ ಹಾಜರುಪಡಿಸಲಾಗಿತ್ತು. ಬಿ.ಎಲ್. ಸಂತೋಷ್ ವಿರುದ್ಧ ಅವಹೇಳನಕಾರಿ ಹೇಳಿಕೆ ಪ್ರಕರಣದ ವಿಚಾರಣೆ ನಡೆಸಿದ ಉಡುಪಿ ಜಿಲ್ಲಾ ಕೋರ್ಟ್, ಜಾಮೀನು ಮಂಜೂರು ಮಾಡಿತ್ತು.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಗಿರೀಶ್ ಮಟ್ಟಣ್ಣನವರ್, ಮಹೇಶ್ ತಿಮರೋಡಿ ಅವರಿಗೆ ಜಾಮೀನು ಸಿಕ್ಕಿರುವುದು ಹೋರಾಟದ ಶಕ್ತಿ ಹೆಚ್ಚಿಸಿದೆ. ಅವರಿಗೆ ಜಾಮೀನು ಸಿಗಲು ಸಹಕರಿಸಿದ ವಕೀಲರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.