ಮಂಗಳೂರು: ಧರ್ಮಸ್ಥಳ ಪ್ರಕರಣದ (Dharmasthala Case) ಬಗ್ಗೆ ಎಐ ವಿಡಿಯೊ ಮಾಡಿ ಜನರಲ್ಲಿ ಕೋಮು ವೈಷಮ್ಯ ಮೂಡಿಸಲು ಪ್ರಯತ್ನಿಸಿದ ಯೂಟ್ಯೂಬರ್ ಸಮೀರ್ ಎಂ.ಡಿ.ಗೆ (Youtuber Sameer) ಸದ್ಯ ಬಂಧನದ ಭೀತಿ ದೂರವಾಗಿದೆ. ಮಂಗಳೂರು ಜಿಲ್ಲಾ ಸತ್ರ ನ್ಯಾಯಾಲಯ ಆತನಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದು, ಬಿಗ್ ರಿಲೀಫ್ ಸಿಕ್ಕಂತಾಗಿದೆ. ಆತನ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಸುಮೋಟೋ ಪ್ರಕರಣ ದಾಖಲಾಗಿತ್ತು. ಆತನನ್ನು ಬಂಧಿಸಲು ಪೊಲೀಸರು ಬೆಂಗಳೂರಿಗೆ ಆಗಮಿಸಿದ್ದರು.
ಬೆಂಗಳೂರಿನ ಬನ್ನೇರುಘಟ್ಟದಲ್ಲಿರುವ ಸಮೀರ್ ಮನೆಯನ್ನು ಪೊಲೀಸರು ಸುತ್ತುವರಿದ ಹಿನ್ನೆಲೆಯಲ್ಲಿ ಆತ ಅಲ್ಲಿಂದ ಪರಾರಿಯಾಗಿದ್ದ. ಇದೀಗ ನಿರೀಕ್ಷಣಾ ಮಂಜೂರಾಗಿದೆ. ಪೊಲೀಸರು ಈ ಹಿಂದೆ ನೋಟಿಸ್ ಕೊಟ್ಟಿದ್ದರೂ ಸಮೀರ್ ವಿಚಾರಣೆಗೆ ಹಾಜರಾಗಿರಲಿಲ್ಲ. ಜನರನ್ನು ಪ್ರಚೋದಿಸುತ್ತಿದ್ದಾನೆ ಎಂದು ಆತನ ವಿರುದ್ಧ ಸುಮೋಟೋ ಪ್ರಕರಣ ದಾಖಲಾಗಿತ್ತು.
ಜುಲೈಯಲ್ಲಿಯೇ ಸಮೀರ್ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಕೇಸುಗಳು ದಾಖಲಾಗಿದ್ದವು. ಧರ್ಮಸ್ಥಳ ಕ್ಷೇತ್ರದ ಕುರಿತು ಅವಹೇಳನಕಾರಿ ವಿಡಿಯೊ ಮಾಡಿರುವುದು, ಜನರಲ್ಲಿ ಕೋಮು ವೈಷಮ್ಯ ಮೂಡಿಸಲು ಪ್ರಯತ್ನಿಸಿರುವುದು ಮುಂತಾದ ಪ್ರಕರಣಗಳಿವೆ.
ಈ ಸುದ್ದಿಯನ್ನೂ ಓದಿ: Dharmasthala Case: ಯೂಟ್ಯೂಬರ್ ಸಮೀರ್ ಮನೆ ಸುತ್ತುವರಿದ ಪೊಲೀಸರು, ಸಮೀರ್ ಪರಾರಿ
ತಿಮರೋಡಿ ಬಂಧನ
ಬೆಳ್ತಂಗಡಿ: ಇತ್ತ ಧರ್ಮಸ್ಥಳ ಕ್ಷೇತ್ರದ ವಿರುದ್ಧ ಹೋರಾಡುವ ಮಹೇಶ್ ಶೆಟ್ಟಿ ತಿಮರೋಡಿಯನ್ನು ಗುರುವಾರ ಪೊಲೀಸರು ಅವರ ನಿವಾಸದಿಂದ ವಶಕ್ಕೆ ಪಡೆದಿದ್ದಾರೆ. ಅವರ ವಿರುದ್ಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾದ ಹಿನ್ನೆಲೆ ಅವರ ನಿವಾಸಕ್ಕೆ ಆಗಮಿಸಿದ ಪೊಲೀಸರು ವಶಕ್ಕೆ ಪಡೆದು ಅವರದ್ದೇ ಕಾರಿನಲ್ಲಿ ಕರೆದೊಯ್ದಿದ್ದರು. ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಹೇಳನ ಮಾಡಿರುವ ಕುರಿತು ದೂರು ಸಲ್ಲಿಸಲಾಗಿತ್ತು.
ಏನಿದು ಪ್ರಕರಣ?
ಆಗಸ್ಟ್ 16ರಂದು ಫೇಸ್‌ಬುಕ್ ಪೇಜ್‌ನಲ್ಲಿ ಮಹೇಶ ಶೆಟ್ಟಿ ತಿಮರೋಡಿಯು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ತೇಜೋವಧೆ ಮಾಡಿದ್ದಾರೆ ಎಂದು ಆರೋಪಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಉಡುಪಿ ಗ್ರಾಮಾಂತರ ಬಿಜಿಪಿಯ ಮಂಡಲಾಧ್ಯಕ್ಷ ರಾಜೀವ ಕುಲಾಲ್ ಅವರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ತಿಮರೋಡಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.