ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pralhad Joshi: ದೆಹಲಿಗೆ ಬಂದ ತವರಿನ ರೈತನಿಗೆ ಸ್ಮರಣಿಕೆ ನೀಡಿ ಅಭಿನಂದಿಸಿದ ಸಚಿವ ಪ್ರಲ್ಹಾದ್‌ ಜೋಶಿ

Pralhad Joshi: ದೆಹಲಿಗೆ ಬಂದಿದ್ದ ಧಾರವಾಡ ತಾಲೂಕಿನ ಪುದಕಲಕಟ್ಟಿ ಗ್ರಾಮದ ಹಿರಿಯ ರೈತನಿಗೆ ಶಾಲು ಹೊದಿಸಿ, ಸ್ಮರಣಿಕೆ ನೀಡುವ ಮೂಲಕ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಗೌರವಿಸಿದ್ದಾರೆ.

ನವದೆಹಲಿ: ಊರುಗೋಲು ಹಿಡಿದು ನಾಲ್ಕು ಹೆಜ್ಜೆ ಹಾಕುವ ಇಳಿ ವಯಸ್ಸಿನಲ್ಲೂ ʼಭಾರತ್ ಮಾತಾ ಕೀ ಜೈʼ ಎಂದರೆ ಸಾಕು ಎದೆಯುಬ್ಬಿಸಿ ನಡೆಯುವಂತಹ ಉತ್ಸಾಹಿ, ದೇಶಾಭಿಮಾನಿ! ಹಳ್ಳಿಯಿಂದ ದಿಲ್ಲಿವರೆಗೆ ಹೋದರೂ ತವರಿನವರ ಕಂಡರೆ ಅದಮ್ಯ ಅಭಿಮಾನ. ಇವರಲ್ಲಿ ಒಬ್ಬರು ಅನ್ನದಾತ, ಶ್ರೀಸಾಮಾನ್ಯ ಹಿರಿಯ ಜೀವಿ. ಮತ್ತೊಬ್ಬರು ಪ್ರಭಾವಿ ಸಚಿವರಾದರೂ (Pralhad Joshi) ತವರಿನವರೆಂದರೆ ಸಾಕು ಶ್ರೀಸಾಮಾನ್ಯರ ಹಾಗೆ ಅಪ್ಪಿಕೊಂಡು ಅಭಿನಂದಿಸುವ ಸರಳ ಜೀವಿ. ಈರ್ವರೂ ಪರಸ್ಥಳದಲ್ಲಿ ಪರಸ್ಪರ ಭೇಟಿಯಾದಾಗ ಆದ ಖುಷಿ ವರ್ಣಿಸಲಸಾಧ್ಯ. ಇಬ್ಬರಲ್ಲೂ ತಮ್ಮವರೆೇ ಎಂಬ ಪ್ರೀತಿ, ಅಭಿಮಾನಕ್ಕೆ ಪಾರವೇ ಇರಲಿಲ್ಲ.

ದೆಹಲಿಯಲ್ಲಿ ಧಾರವಾಡ ತಾಲೂಕಿನ ಪುದಕಲಕಟ್ಟಿ ಗ್ರಾಮದ ರೈತ ಶಂಕರೆಪ್ಪಾ ಕರೆಕೊಪ್ಪಾ ಅವರು ಧಾರವಾಡ ಸಂಸದ- ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರನ್ನು ದೆಹಲಿಯ ನಿವಾಸದಲ್ಲಿ ಭೇಟಿಯಾದ ಕ್ಷಣ ಪರಸ್ಪರ ಅಭಿಮಾನ, ಮಂದಹಾಸ ಮೂಡಿತು.

ಸಚಿವರು, ಶಂಕರೆಪ್ಪಾ ಅವರಿಗೆ, ಇದೇನು ಈ ವಯಸ್ಸಿನಲ್ಲಿ ದಿಲ್ಲಿವರೆಗೆ ಬಂದಿದ್ದೀರಿ...ಅದೂ ನನ್ನ ನೆನಪಿಸಿಕೊಂಡು...ಎಂದು ಅಚ್ಚರಿ ವ್ಯಕ್ತಪಡಿಸುತ್ತಾ, ನನ್ನಿಂದ ಏನಾದರೂ ಕೆಲಸವಾಗಬೇಬೇಕಿತ್ತಾ? ಎನ್ನುತ್ತಲೇ ಕುಶಲೋಪರಿ ವಿಚಾರಿಸಿದರು.

"ಏನಿಲ್ರೀ...ಎಲ್ಲಾ ಸೌಖ್ಯರೀ...ಗಣರಾಜ್ಯೋತ್ಸವ ಪೆರೇಡ್ ನೋಡಾಕಾಂತ ದಿಲ್ಲಿಗೆ ಬಂದಿದ್ನೇರೀ..ಹೀಂಗ್ ತಮ್ಮನ್ನೂ ಭೆಟ್ಟಿಯಾಗಿ ನೋಡ್ಕೊಂಡ್ ಹೋಗೋಣ್ ಅಂತ ಇಲ್ಲಿಗ್ ಬಂದೆ ನೋಡ್ರೀ" ಅಷ್ಟೇ ಎಂದು ನಗು ಚೆಲ್ಲಿದರು ರೈತ ಶಂಕರಪ್ಪ.

86ರ ಇಳಿ ವಯಸ್ಸಿನಲ್ಲಿ ತರುಣರಂತೆ ರಿಪಬ್ಲಿಕ್ ಡೇ ಪರೇಡ್ ನೋಡಲು ಹಳ್ಳಿಯಿಂದ ದಿಲ್ಲೀಗ್ ಬಂದೀರಲ್ಲ ಯಜಮಾನ್ರೇ..ಅದೆಂಥಾ ಉತ್ಸಾಹ, ದೇಶಾಭಿಮಾನ ನಿಮ್ದು...ಎಲ್ಲಾರೂ ಮೆಚ್ಚಬೇಕು" ಎನ್ನುತ್ತ ಸಚಿವ ಪ್ರಲ್ಹಾದ ಜೋಶಿ ಅವರು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು.

ಈ ಸುದ್ದಿಯನ್ನೂ ಓದಿ | Union Budget: ಬಡವರು, ಮಧ್ಯಮ ವರ್ಗಕ್ಕೆ ಅನುಕೂಲಕರ ಬಜೆಟ್‌; ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ಜೋಳದರೊಟ್ಟಿ ತಾಕತ್ತೈತೇ ಸಾರ್!:

ಊರಿಂದ ದಿಲ್ಲಿವರೆಗೆ ಸಾವಿರಾರು ಕಿಲೋಮೀಟರ್ ಪ್ರಯಾಣ ಮಾಡ್ದೆ. ಆದ್ರೇ ಸ್ವಲ್ಪವೂ ದಣಿವಾಗ್ಲಿಲ್ಲ. ಅದೇ ನಮ್ ಜೋಳದ ರೊಟ್ಟಿ ತಾಕತ್ತೈತಿ ಸಾರ್ ಎನ್ನುತ್ತಾ ರೈತ ಶಂಕರೆಪ್ಪ ಗಣರಾಜ್ಯೋತ್ಸವದ ಪೆರೇಡ್ ಪಸಂದಿತ್ತು ಎಂದು ಸಚಿವರಲ್ಲಿ ಸಂತಸ ಹಂಚಿಕೊಂಡರು.

ಬಡವರು, ಮಧ್ಯಮ ವರ್ಗಕ್ಕೆ ಅನುಕೂಲಕರ ಬಜೆಟ್‌: ಜೋಶಿ

ನವದೆಹಲಿ: ಫೆ. 1 ರಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಬಜೆಟ್‌ ಮಂಡನೆ (Union Budget) ಮಾಡಿದ್ದಾರೆ. ಅವರು ಈ ಬಾರಿಯ ಬಜೆಟ್‌ ಮಧ್ಯಮ ವರ್ಗದ ಬಜೆಟ್‌ ಎಂದು ಹೇಳಿದ್ದಾರೆ. ಬಜೆಟ್‌ ಬಗ್ಗೆ ಮಾತನಾಡಿರುವ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ( Pralhad Joshi ) ನಿರ್ಮಲಾ ಸೀತಾರಾಮನ್ ಅವರು ಬಡವರು, ಮಧ್ಯಮ ವರ್ಗ, ರೈತರು, ಸಣ್ಣ ಉದ್ದಿಮೆದಾರರು ಹಾಗೂ ಹಿಂದುಳಿದ ವರ್ಗಗಳಿಗೆ ಅನುಕೂಲವಾಗುವ ಬಜೆಟ್ ಮಂಡಿಸಿದ್ದಾರೆ ಎಂದು ಹೇಳಿದ್ದಾರೆ.

ದೆಹಲಿಯಲ್ಲಿ ಮಾತನಾಡಿದ ಅವರು ಬಜೆಟ್‌ ಆದಾಯ ತೆರಿಗೆ ವಿನಾಯಿತಿಯನ್ನು 12 ಲಕ್ಷ ರೂ ವರೆಗೆ ವಿಸ್ತರಿಸಿರುವುದರಿಂದ ಮಧ್ಯಮ ವರ್ಗದ ಜನರಿಗೆ ಹೆಚ್ಚು ಅನುಕೂಲ ಆಗಲಿದೆ. ಕ್ಯಾನ್ಸರ್‌ ರೋಗಕ್ಕೆ ಸಂಬಂಧಿಸಿದ ಔಷಧಿಗಳಿಗೆ ಆಮದು ಸುಂಕ ಕಡಿಮೆ ಮಾಡಿರುವುದರಿಂದ ಬಡ ಕುಟುಂಬಗಳಿಗೆ ಅನುಕೂಲವಾಗಲಿದೆ ಎಂದರು.

ಪರಿಶಿಷ್ಟ ಸಮುದಾಯದ ನವೋದ್ಯಮಿಗಳಿಗಾಗಿ ಇದೇ ಮೊದಲ ಬಾರಿ ಹೊಸ ಯೋಜನೆಯೊಂದನ್ನು ಪ್ರಾರಂಭಿಸಲಾಗುತ್ತಿದೆ. 5 ಲಕ್ಷ ಮಹಿಳೆಯರೂ ಇದರಡಿ ನವೋದ್ಯಮಿಗಳಾಗಿ ಹೊರ ಹೊಮ್ಮಲಿದ್ದಾರೆ ಎಂದು ತಿಳಿಸಿದರು. ದೇಶದ 7.7 ಕೋಟಿ ರೈತರು, ಮೀನುಗಾರರು ಮತ್ತು ಹೈನುಗಾರರಿಗೆ ಅಲ್ಪಾವಧಿ ಸಾಲವನ್ನು ಕೇಂದ್ರ ಸರ್ಕಾರ ಒದಗಿಸುತ್ತಿದ್ದು, ಕೆಸಿಸಿ ಸಾಲದ ಮಿತಿಯನ್ನು 3ಲಕ್ಷ ರೂ ದಿಂದ 5.ಲಕ್ಷರೂ ಗೆ ಹೆಚ್ಚಿಸಲಾಗುತ್ತದೆ ಎಂದು ಜೋಶಿ ಹೇಳಿದ್ದಾರೆ.

ಬೇಳೆ ಕಾಳುಗಳಲ್ಲಿ ಸ್ವಾವಲಂಬನೆ ಸಾಧಿಸಲು ಕೇಂದ್ರ ಸರ್ಕಾರ ಆಂದೋಲನ ಆರಂಭಿಸಿದೆ. ಕರ್ನಾಟಕದಲ್ಲಿ ತೊಗರಿ ಹೆಚ್ಚು ಬೆಳೆಯಲಾಗುತ್ತಿದ್ದು, ಇದರಿಂದ ರಾಜ್ಯಕ್ಕೆ ಹೆಚ್ಚು ಲಾಭವಾಗಲಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಮಿತಿ 3ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಳ ಮಾಡಿರುವುದರಿಂದ ರೈತರು ಕೃಷಿ ಖರ್ಚು-ವೆಚ್ಚ ಮಾಡಲು ಸಹಕಾರಿಯಾಗಲಿದೆ. ಹತ್ತಿ ಬೆಳೆಗೆ ಪ್ರೊತ್ಸಾಹ ನೀಡಲಾಗಿದೆ. ಸೇವಾ ಕ್ಷೇತ್ರದಲ್ಲಿನ ಹಂಗಾಮಿ ನೌಕರರಿಗೆ ಆರೋಗ್ಯ ವಿಮಾ ಯೋಜನೆ ವಿಸ್ತರಿಸಲಾಗಿದೆ. ಜೀವ ರಕ್ಷಕ ಔಷಧಗಳಿಗೆ ಬಜೆಟ್‌ನಲ್ಲಿ ಅಬಕಾರಿ ಸುಂಕ ವಿನಾಯಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಸ್ಟಾರ್ಟ್ ಅಪ್ ಗಳಿಗೆ 10000 ಕೋಟಿ: ಸ್ಟಾರ್ಟ್‌ಅಪ್‌ಗಳಿಗಾಗಿ 10,000 ಕೋಟಿ ರೂಪಾಯಿ ಹೊಸ ನಿಧಿಯನ್ನು ಸ್ಥಾಪಿಸಲಾಗುವುದು. ಮುಂದಿನ 5 ವರ್ಷಗಳಲ್ಲಿ ಮಹಿಳೆಯರಿಗೆ 2 ಕೋಟಿ ರೂ ವರೆಗೆ ಸಾಲ ಸೌಲಭ್ಯ ಒದಗಿಸುತ್ತದೆ ಎಂಬ ಮಾಹಿತಿನ್ನು ನೀಡಿದ್ದಾರೆ. ಅಷ್ಟೇ ಅಲ್ಲದೆ ಕ್ಲಸ್ಟರ್ ಅಭಿವೃದ್ಧಿಯನ್ನು ಕೇಂದ್ರೀಕರಿಸುವ ಮೂಲಕ ಭಾರತವನ್ನು ಆಟಿಕೆಗಳ ಜಾಗತಿಕ ಕೇಂದ್ರವನ್ನಾಗಿ ಮಾಡಲು "ಗ್ಲೋಬಲ್ ಹಬ್ ಫಾರ್ ಟಾಯ್ಸ್ " ಯೋಜನೆ ಜಾರಿಗೊಳ್ಳಲಿದೆ ಎಂದರು.

ನವಜಾತ ಶಿಶು ಮತ್ತು ಮಹಿಳೆಯರಿಗಾಗಿ ಸಕ್ಷಮ್ ಅಂಗನವಾಡಿ ಮತ್ತು ಪೋಷಣೆ 2.0 ಕಾರ್ಯಕ್ರಮ ರೂಪಿಸಲಾಗುತ್ತಿದೆ. ದೇಶಾದ್ಯಂತ 8 ಕೋಟಿಗೂ ಹೆಚ್ಚು ಮಕ್ಕಳು, 1 ಕೋಟಿ ಗರ್ಭಿಣಿಯರು ಮತ್ತು ತಾಯಂದಿರು ಹಾಗೂ ಈಶಾನ್ಯ ಪ್ರದೇಶದ ಸುಮಾರು 20 ಲಕ್ಷ ಹದಿಹರೆಯದ ಹೆಣ್ಣುಮಕ್ಕಳಿಗೆ ಪೌಷ್ಟಿಕ ಆಹಾರ ಕಲ್ಪಿಸಲಾಗುತ್ತದೆ. ಬಡ ಮತ್ತು ಮಧ್ಯಮ ವರ್ಗದ

ರೋಗಿಗಳಿಗೆ ಅನುಕೂಲವಾಗುವಂತೆ ಅದರಲ್ಲೂ ವಿಶೇಷವಾಗಿ ಕ್ಯಾನ್ಸರ್ ಮತ್ತು ನಾನಾ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ನೆರವಾಗುವಂತೆ ಮೂಲ ಕಸ್ಟಮ್ಸ್ ಡ್ಯೂಟಿ (ಬಿಸಿಡಿ) ಯಿಂದ ಸಂಪೂರ್ಣ ವಿನಾಯಿತಿ ನೀಡಲಾಗುತ್ತಿದೆ. ಇದರಡಿ 36 ಜೀವರಕ್ಷಕ ಔಷಧಗಳನ್ನು ಸೇರಿಸಲು ಸರ್ಕಾರ ಮುಂದಾಗಿದೆ ಎಂದು ಅವರು ಹೇಳಿದ್ದಾರೆ.

ಟಿಡಿಎಸ್ ಮಿತಿ ಹೆಚ್ಚಳ: ಬಾಡಿಗೆ ಮೇಲಿನ ಟಿಡಿಎಸ್‌ಗೆ ವಾರ್ಷಿಕ ಮಿತಿಯನ್ನು 2.40 ಲಕ್ಷ ರೂ ದಿಂದ 6 ಲಕ್ಷ ರೂಗೆ ಹೆಚ್ಚಿಸಲಾಗುತ್ತಿದೆ.

ಆರ್‌ಬಿಐನ ಉದಾರೀಕೃತ ರವಾನೆ ಯೋಜನೆ (ಎಲ್‌ಆರ್‌ಎಸ್) ಅಡಿಯಲ್ಲಿ ಹಣ ರವಾನೆ ಮೇಲೆ ತೆರಿಗೆ ಸಂಗ್ರಹಿಸಲು (ಟಿಸಿಎಸ್) ಮಿತಿಯನ್ನು 7 ಲಕ್ಷದಿಂದ 10 ಲಕ್ಷ ರೂ ಗೆ ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ.

ಶಿಕ್ಷಣ ಉದ್ದೇಶೀತ ಹಣ ರವಾನೆ ಮೇಲಿನ TCS ಅನ್ನು ತೆಗೆದುಹಾಕಲು ಸರ್ಕಾರವು ಪ್ರಸ್ತಾಪಿಸಿದೆ ಎಂದು ವಿವರಿಸಿದರು.

ಈ ಸುದ್ದಿಯನ್ನೂ ಓದಿ: Union Budget 2025-26: 1 ಗಂಟೆ 14 ನಿಮಿಷ ಬಜೆಟ್‌ ಮಂಡಿಸಿದ ನಿರ್ಮಲಾ ಸೀತಾರಾಮನ್‌; ಇಲ್ಲಿದೆ ಅತೀ ದೀರ್ಘ, ಕಡಿಮೆ ಅವಧಿಯ ಬಜೆಟ್‌ ಭಾಷಣಗಳ ವಿವರ

75 ಸಾವಿರ ಮೆಡಿಕಲ್ ಸೀಟ್ ಗುರಿ: ಒಟ್ಟು ₹ 500 ಕೋಟಿ ವೆಚ್ಚದಲ್ಲಿ ಶಿಕ್ಷಣಕ್ಕಾಗಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ನಲ್ಲಿ ಶ್ರೇಷ್ಠತೆಯ ಕೇಂದ್ರವನ್ನು ಸ್ಥಾಪಿಸಲಾಗುವುದು. ಮುಂದಿನ ವರ್ಷದಲ್ಲಿ, ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳಲ್ಲಿ 10,000 ಹೆಚ್ಚುವರಿ ಮೆಡಿಕಲ್ ಸೀಟುಗಳನ್ನು ಸೇರಿಸಲಾಗುವುದು. ಮುಂದಿನ 5 ವರ್ಷಗಳಲ್ಲಿ 75,000 ಸೀಟುಗಳನ್ನು ಸೇರಿಸುವ ಗುರಿ ಹೊಂದಿದೆ ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ.