Union Budget 2025-26: 1 ಗಂಟೆ 14 ನಿಮಿಷ ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್; ಇಲ್ಲಿದೆ ಅತೀ ದೀರ್ಘ, ಕಡಿಮೆ ಅವಧಿಯ ಬಜೆಟ್ ಭಾಷಣಗಳ ವಿವರ
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 8ನೇ ಕೇಂದ್ರ ಬಜೆಟ್ ಮಂಡಿಸಿದ್ದಾರೆ. ಅವರ ಈ ಬಜೆಟ್ ಭಾಷಣವು 1 ಗಂಟೆ 14 ನಿಮಿಷಗಳ ಕಾಲ ನಡೆಯಿತು. ಅತ್ಯಂತ ಚಿಕ್ಕ ಬಜೆಟ್ ಭಾಷಣಗಳಲ್ಲಿ ಇದೂ ಒಂದು ಎನಿಸಿಕೊಂಡಿದೆ. ಇಲ್ಲಿದೆ ಅತೀ ದೀರ್ಘ ಮತ್ತು ಕಡಿಮೆ ಅವಧಿಯ ಬಜೆಟ್ ಭಾಷಣದ ವಿವರ.
ಹೊಸದಿಲ್ಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 8ನೇ ಕೇಂದ್ರ ಬಜೆಟ್ ಮಂಡಿಸಿದ್ದಾರೆ. ಅವರ ಈ ಬಜೆಟ್ ಭಾಷಣವು 1 ಗಂಟೆ 14 ನಿಮಿಷಗಳ ಕಾಲ ನಡೆಯಿತು. ಅತ್ಯಂತ ಚಿಕ್ಕ ಬಜೆಟ್ ಭಾಷಣಗಳಲ್ಲಿ ಇದೂ ಒಂದು ಎನಿಸಿಕೊಂಡಿದೆ (Union Budget 2025-26). ಈ ಹಿಂದೆ ಅವರು ಸುದೀರ್ಘ ಬಜೆಟ್ ಭಾಷಣ ಮಾಡಿದ ದಾಖಲೆಯನ್ನೂ ಹೊಂದಿದ್ದಾರೆ. ನಿರ್ಮಲಾ ಸೀತಾರಾಮನ್ ಅವರು 2020ರಲ್ಲಿ ಇತಿಹಾಸದಲ್ಲಿಯೇ ಅತಿ ಉದ್ದದ ಬಜೆಟ್ ಭಾಷಣ ಮಾಡಿದ್ದರು. ಅಂದು ಅವರ ಬಜೆಟ್ ಭಾಷಣ 2 ಗಂಟೆ 40 ನಿಮಿಷಗಳ ಕಾಲ ನಡೆದಿತ್ತು.
ಅಲ್ಲದೆ ಅವರು ತಮ್ಮ ಭಾಷಣವನ್ನು 2 ಪುಟ ಓದಲು ಬಾಕಿ ಇರುವಂತೆ ಮೊಟಕುಗೊಳಿಸಿದ್ದರು. ತೆರಿಗೆದಾರರು ಮತ್ತು ಮಧ್ಯಮ ವರ್ಗಕ್ಕಾಗಿ ಹಲವು ಯೋಜನೆಗಳನ್ನು ಅವರು ಈ ಬಾರಿ ಪ್ರಕಟಿಸಿದ್ದಾರೆ.
ಸುದೀರ್ಘ ಬಜೆಟ್ ಭಾಷಣಗಳು
ಇನ್ನು 2019ರಲ್ಲಿ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್‌ನ ಅವಧಿ 2 ಗಂಟೆ 19 ನಿಮಿಷಗಳದ್ದಾಗಿತ್ತು. ಅದಕ್ಕೂ ಮೊದಲು ನಿರ್ಮಲಾ ಸೀತಾರಾಮನ್ ಅವರಿಗಿಂತ ಅತಿ ಉದ್ದದ ಬಜೆಟ್ ಭಾಷಣ ಮಾಡಿದ ಕೀರ್ತಿ ಜಸ್ವಂತ್ ಸಿಂಗ್ ಅವರದ್ದಾಗಿತ್ತು. ಅವರು 2003ರಲ್ಲಿ 2 ಗಂಟೆ 13 ನಿಮಿಷಗಳ ಭಾಷಣ ಮಾಡಿದ್ದರು. 2014ರಲ್ಲಿ ಅರುಣ್ ಜೇಟ್ಲಿ ಅವರು 2 ಗಂಟೆ 10 ನಿಮಿಷಗಳ ಬಜೆಟ್ ಭಾಷಣ ಮಂಡಿಸಿದ್ದರು.
ಅತೀ ಕಡಿಮೆ ಅವಧಿಯ ಬಜೆಟ್ ಭಾಷಣ
ಭಾರತದಲ್ಲಿ ಅತ್ಯಂತ ಕಡಿಮೆ ಅವಧಿಯ ಬಜೆಟ್ ಭಾಷಣ ನಡೆಸಿದ ದಾಖಲೆ ಹಣಕಾಸು ಸಚಿವ ಹಿರುಭಾಯಿ ಎಂ. ಪಟೇಲ್ ಅವರ ಹೆಸರಿಲ್ಲಿದೆ. 1977ರಲ್ಲಿ ಅವರು ಮಂಡಿಸಿದ ಬಜೆಟ್ ಕೇವಲ 800 ಪದಗಳನ್ನು ಒಳಗೊಂಡಿತ್ತು.
ಅತೀ ಹೆಚ್ಚು ಪದಗಳನ್ನು ಒಳಗೊಂಡ ಬಜೆಟ್
ಅತೀ ಹೆಚ್ಚು ಪದಗಳನ್ನು ಒಳಗೊಂಡ ಬಜೆಟ್ ಮಂಡಿಸಿದವರು ಮನಮೋಹನ್ ಸಿಂಗ್. 1991ರಲ್ಲಿ ಅಂದಿನ ಹಣಕಾಸು ಸಚಿವರಾಗಿದ್ದ ಅವರ ಭಾಷಣ 18,650 ಪದಗಳನ್ನು ಒಳಗೊಂಡಿತ್ತು. ಜಾಗತಿಕ ಆರ್ಥಿಕತೆಗೆ ಭಾರತದ ಬಾಗಿಲುಗಳನ್ನು ತೆರೆದ ಐತಿಹಾಸಿಕ ಭಾಷಣ ಅದಾಗಿತ್ತು. ಅವರು ಮಂಡಿಸಿದ 1991ರ ಬಜೆಟ್ ಅನ್ನು ಭಾರತದ ಅತ್ಯಂತ ಕ್ರಾಂತಿಕಾರಕ ಬಜೆಟ್ ಎಂದು ಪರಿಗಣಿಸಲಾಗುತ್ತದೆ. ಇದು ವರ್ಷಗಳ ನಿಶ್ಚಲತೆಯ ನಂತರ ಭಾರತೀಯ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣವನ್ನು ಒಳಗೊಂಡಿತ್ತು. ಪಿ.ವಿ. ನರಸಿಂಹರಾವ್ ಸರ್ಕಾರದಲ್ಲಿ 1991ರಿಂದ 1996ರವರೆಗೆ ಮನಮೋಹನ್ ಸಿಂಗ್ ಅವರು ಹಣಕಾಸು ಸಚಿವರಾಗಿ ಸೇವೆ ಸಲ್ಲಿಸಿದ್ದರು.
ನಿರ್ಮಲಾ ಸೀತಾರಾಮನ್ ಅವರು 2024ರಲ್ಲಿ ಕೇವಲ 60 ನಿಮಿಷಗಳಲ್ಲಿ ಮಂಡಿಸಿದ ಮಧ್ಯಂತರ ಬಜೆಟ್, ಇಲ್ಲಿಯವರೆಗಿನ ಅವರ ಅತ್ಯಂತ ಕಡಿಮೆ ಅವಧಿಯ ಬಜೆಟ್ ಭಾಷಣ ಎನಿಸಿಕೊಂಡಿದೆ.