ಬೆಂಗಳೂರು: ಈ ಬಾರಿ ಗಣೇಶ ಚೌತಿ (Ganesh Chaturthi) ಮತ್ತು ಈದ್ ಮಿಲಾದ್ (Eid Milad) ಹಬ್ಬದ ವೇಳೆ ಕಿವಿಗಡಚಿಕ್ಕುವ ಡಿಜೆ ಶಬ್ದದ ಹಾವಳಿಯಿಂದ (DJ ban) ಮುಕ್ತಿ ಸಿಗಲಿದೆ. ಎರಡೂ ಹಬ್ಬಗಳ ಆಚರಣೆ ಪೂರ್ಣಗೊಳ್ಳುವವರೆಗೆ ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ದಿ: 27-08-202025 ರಿಂದ 15-09-2025 ರವರೆಗೆ ಡಿಜೆ ಸಿಸ್ಟಂ ಬಳಕೆಯನ್ನು ನಿಷೇಧಗೊಳಿಸಲು ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಸರ್ಕಾರ ಸೂಚಿಸಿದೆ.
ದಿ: 27-08-2025 ರಂದು ಗಣೇಶ ಹಬ್ಬದ ಪ್ರಯಕ್ತ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಟಾಪಿಸಿ, ನಂತರ ವಿವಿಧ ದಿನಗಳಂದು ವಿಸರ್ಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದು ಆ.27 ರಿಂದ ಸೆ.15 ರವರೆಗೆ ಒಟ್ಟು 20 ದಿನಗಳ ಕಾಲ ವಿವಿಧ ಜಿಲ್ಲೆಗಳಲ್ಲಿ ಪ್ರಮುಖ, ಅತಿಸೂಕ್ಷ್ಮ ಪ್ರದೇಶಗಳ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಿದ್ದಾರೆ. ಹಾಗೂ ದಿ:05-09-2025 ರಿಂದ 10-09-2025 ರವರೆಗೆ ಮುಸ್ಲಿಂ ಬಾಂಧವರು ಈದ್ ಮಿಲಾದ್ ಹಬ್ಬ ಆಚರಿಸಲಿದ್ದಾರೆ.
ಈ ಆಚರಣೆಗಳ ಸಂದರ್ಭದಲ್ಲಿ ಡಿಜೆ ಸಿಸ್ಟಂಗಳನ್ನು ಉಪಯೋಗಿಸುವುದರಿಂದ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ, ವಯಸ್ಕರಿಗೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳಿಗೆ ತೊಂದರೆಯಾಗುವುದರೊಂದಿಗೆ ಕಾನೂನು ಸುವ್ಯವಸ್ಥೆಗೆ ಧಕ್ಕೆಯುಂಟಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕ ಹಿತದೃಷ್ಟಿಯಿಂದ, ಸೌಹಾರ್ದತೆ ಮತ್ತು ಶಾಂತಿ ಕಾಪಾಡುವ ಸಲುವಾಗಿ ಗಣೇಶೋತ್ಸವ ಮತ್ತು ಈದ್ ಮಿಲಾದ್ ಹಬ್ಬಗಳ ಆಚರಣೆಗಳು ಪೂರ್ಣಗೊಳ್ಳುವವರೆಗೆ ರಾಜ್ಯಾದ್ಯಂತ ಡಿಜೆ ಸಿಸ್ಟಂಗಳ ಬಳಕೆಯನ್ನು ನಿಷೇಧಿಸಿ ಆದೇಶಿಸಲಾಗಿದೆ.
ಕೆಲವು ಸಂದರ್ಭಗಳಲ್ಲಿ ಡಿಜೆ ಶಬ್ದದ ಪರಿಣಾಮ ಹೃದಯಾಘಾತ ಹಾಗೂ ಹೃದಯವೈಫಲ್ಯದಿಂದ ಸಾವುಗಳೂ ಸಂಭವಿಸಿವೆ. ಡಿಜೆಯ ಮಾರಣಾಂತಿಕ ಶಬ್ದಕ್ಕೆ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಯುವಕರು ಕೂಡ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಇದೆಲ್ಲದರ ಹಿನ್ನೆಲೆಯಲ್ಲಿ ಡಿಜೆ ಸದ್ದಿನ ನಿಷೇಧ ಚಿಂತನೆ ನಡೆದಿದೆ.
ಇದನ್ನೂ ಓದಿ:Viral Video: ಡಿಜೆ ಹಾಡಿನ ವಿಚಾರಕ್ಕೆ ಜಗಳ; ಕ್ಷಣಾರ್ಧದಲ್ಲಿ ರಣರಂಗವಾದ ಮದುವೆ ಮನೆ-ವಿಡಿಯೊ ವೈರಲ್!