ಮಂಗಳೂರು: ರೌಡಿ ಶೀಟರ್ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ (Suhas Shetty Murder Case) ಕೊಲೆಗೆ ಈ ಹಿಂದೆ ಕೊಲೆಯಾಗಿದ್ದ ಫಾಜಿಲ್ ಸಹೋದರ ಆದಿಲ್ ಸಂಚು ಹೂಡಿದ್ದು, 5 ಲಕ್ಷ ಫಂಡಿಂಗ್ ಮಾಡಿರುವುದಾಗಿ ನಗರ ಪೊಲೀಸ್ ಆಯುಕ್ತಾರಾದ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿರುವ ಅವರು, ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯನ್ನು ಮೇ.1 ರಂದು ರಾತ್ರಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 8 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಮಂಗಳೂರಿನ ಬಜಪೆ ಕಿನ್ನಿಪದವು ನಿವಾಸಿ ಅಬ್ದುಲ್ ಸಫ್ವಾನ್( 29), ಬಜ್ಪೆ ಶಾಂತಿಗುಡ್ಡೆ ಬಳಿಯ ನಿವಾಸಿ ನಿಯಾಜ್ (28), ಕೆಂಜಾರು ನಿವಾಸಿ ಮೊಹಮ್ಮದ್ ಮುಝಮಿಲ್ (32), ಕಳವಾರು ನಿವಾಸಿ ಕಲಂದರ್ ಶಾಫಿ (31), ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ರುದ್ರ ಪಾದ ನಿವಾಸಿ ರಂಜಿತ್ (19), ಕಳಸ ಕೋಟೆ ಹೊಳೆ ಮಾವಿನಕೆರೆ ಗ್ರಾಮದ ನಾಗರಾಜ್ (20), ಮಂಗಳೂರು ಜೋಕಟ್ಟೆ ನಿವಾಸಿ ಮೊಹಮ್ಮದ್ ರಿಜ್ವಾನ್ (28), 2022ರಲ್ಲಿ ಕೊಲೆಯಾದ ಫಾಝಿಲ್ ಸಹೋದರ್ ಆದಿಲ್ ಮೊಹರೂಫ್‌ನ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಆರೋಪಿಗಳಲ್ಲಿ ಆರು ಜನರು ಸೇರಿಕೊಂಡು ಸುಹಾಸ್ ಶೆಟ್ಟಿ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ. ಹತ್ಯೆಯ ಪ್ರಮುಖ ಆರೋಪಿ ಸಫ್ವಾನ್ ಆಗಿದ್ದು, ಈತನ ಮೇಲೆ 2023ರಲ್ಲಿ ಮೇಲೆ ಮಾರಣಾಂತಿಕ ಹಲ್ಲೆಯಾಗಿತ್ತು. ಸುಹಾಸ್ ಶೆಟ್ಟಿ ಸ್ನೇಹಿತರಾದ ಪ್ರಶಾಂತ್, ಧನರಾಜ್ ಹಲ್ಲೆ ಮಾಡಿದ್ದರು. ಇದರಿಂದ ಸುಹಾಸ್ ತನ್ನನ್ನು ಕೊಲೆ ಮಾಡಬಹುದು ಎಂಬ ಆತಂಕ ಸಫ್ವಾನ್‌ಗೆ ಇತ್ತು. ಈ ಹಿನ್ನೆಲೆ ಸುಹಾಸ್‌ನನ್ನು ಕೊಲೆ ಮಾಡಲು ತೀರ್ಮಾನ ಮಾಡಿದ್ದ.
2022ರಲ್ಲಿ ಹತ್ಯೆಯಾಗಿದ್ದ ಫಾಜಿಲ್‌ನ ತಮ್ಮನನ್ನು ಸಫ್ವಾನ್ ಸಂಪರ್ಕಿಸಿ ಸುಹಾಸ್‌ನ ಕೊಲೆ ಮಾಡೋಕೆ ತೀರ್ಮಾನ ಮಾಡುತ್ತಾನೆ. ಫಾಜಿಲ್ ಸಹೋದರ ಆದಿಲ್, ಸುಹಾಸ್ ಕೊಲೆಗೆ ಐದು ಲಕ್ಷ ರೂ.ಗಳನ್ನು ನೀಡುವುದಾಗಿ ಹೇಳಿರುತ್ತಾನೆ. ಅಲ್ಲದೆ ಅದಕ್ಕೆ ಮುಂಗಡವಾಗಿ ಮೂರು ಲಕ್ಷ ರೂ.ಗಳನ್ನು ಸಫ್ವಾನ್ ತಂಡಕ್ಕೆ ನೀಡಿದ್ದ. ನಂತರ ನಿಯಾಜ್‌ನ ಇಬ್ಬರು ಸ್ನೇಹಿತರು ನಾಗಾರಾಜ್ ಮತ್ತು ರಂಜಿತ್‌ನನ್ನು ಸಫ್ವಾನ್ ಸಂಪರ್ಕ ಮಾಡುತ್ತಾನೆ. ಈ ಇಬ್ಬರು ಸಫ್ವಾನ್ ಮನೆಯಲ್ಲಿ ಎರಡು ದಿನ ಇದ್ದು, ಮೇ 1 ರಂದು ಸುಹಾಸ್ ಚಲನವಲನಗಳನ್ನು ಗಮನಿಸಿ ಕೊಲೆ ಮಾಡಿದ್ದಾರೆ ಎಂದು ಅಗರ್ವಾಲ್ ತಿಳಿಸಿದರು.
ಈ ಪ್ರಕರಣವನ್ನು ರಿವೇಂಜ್ ಅಂತ ಹೇಳಲು ಈಗ ಆಗಲ್ಲ. ಕಾರಣ ಸಫ್ವಾನ್‌ಗೂ ಸುಹಾಸ್‌ನಿಂದ ಕೊಲೆ ಆಗುವ ಆತಂಕ ಇತ್ತು. ಹಾಗಾಗಿ ಆದಿಲ್‌ನ ಸಂಪರ್ಕ ಪಡೆದು ಕೊಲೆ ಮಾಡಲಾಗಿದೆ ಎಂದರು.
ಈ ಸುದ್ದಿಯನ್ನೂ ಓದಿ | Suhas Shetty Murder: ಸುಹಾಸ್ ಶೆಟ್ಟಿ ಕೊಲೆ 8 ಆರೋಪಿಗಳ ಬಂಧನ, ಕೋಮು ವಿರೋಧಿ ಕಾರ್ಯಪಡೆ ರಚನೆ: ಜಿ ಪರಮೇಶ್ವರ
ಸುಹಾಸ್ ಶೆಟ್ಟಿ ಕೊಲೆಗೆ ಬುರ್ಖಾಧಾರಿ ಮಹಿಳೆ ಸಾಥ್ ನೀಡಿರುವ ವಿಡಿಯೋ ವೈರಲ್ ಕುರಿತು ಪ್ರತಿಕ್ರಿಯಿಸಿದ ಅಗರ್ವಾಲ್ ಅವರು, ಆ ಮಹಿಳೆ ಕೊಲೆ ಆರೋಪಿ ನಿಯಾಜ್‌ನ ಸಂಬಂಧಿಕರಾಗಿದ್ದು, ಯಾವುದೋ ಕೆಲಸಕ್ಕೆ ಅಲ್ಲಿ ಬಂದಿರುವುದಾಗಿ ಹೇಳಿದ್ದಾಳೆ. ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದೇವೆ. ಇನ್ನು ಕೊಲೆ ನಡೆಸಲು ಆರೋಪಿಗಳು ಬಾಡಿಗೆಯಲ್ಲಿ ಆ ವಾಹನವನ್ನು ಪಡೆದುಕೊಂಡಿದ್ದರು ಎಂದು ಹೇಳಿದರು.