ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Suhas Shetty Murder: ಸುಹಾಸ್‌ ಶೆಟ್ಟಿ ಕೊಲೆ 8 ಆರೋಪಿಗಳ ಬಂಧನ, ಕೋಮು ವಿರೋಧಿ ಕಾರ್ಯಪಡೆ ರಚನೆ: ಜಿ ಪರಮೇಶ್ವರ

ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು 5 ತಂಡಗಳನ್ನು ರಚಿಸಿ ಆರೋಪಿಗಳಿಗಾಗಿ ಬಲೆ ಬೀಸಿದ್ದರು. ಸದ್ಯ ಬಲೆಗೆ 8 ಮಂದಿ ಶಂಕಿತ ಆರೋಪಿಗಳು ಬಿದ್ದಿದ್ದಾರೆ. ಬಂಧಿತ 8 ಮಂದಿಯನ್ನು ಅಬ್ದುಲ್ ಸಫ್ವಾನ್, ನಿಯಾಜ್, ಎಂಡಿ ಮುಜಾಮಿಲ್, ಕಲಂದರ್ ಶಫಿ, ಆದಿಲ್ ಮೆಹರೂಫ್, ನಾಗರಾಜ್, ಎಂಡಿ ರಿಜ್ವಾನ್ ಮತ್ತು ರಂಜಿತ್ ಎಂದು ಗುರುತಿಸಲಾಗಿದೆ ಎಂದು ಗೃಹ ಸಚಿವರು ತಿಳಿಸಿದರು.

8 ಆರೋಪಿಗಳ ಬಂಧನ, ಕೋಮು ವಿರೋಧಿ ಕಾರ್ಯಪಡೆ ರಚನೆ: ಜಿ ಪರಮೇಶ್ವರ

ಗೃಹ ಸಚಿವ ಜಿ. ಪರಮೇಶ್ವರ್

ಹರೀಶ್‌ ಕೇರ ಹರೀಶ್‌ ಕೇರ May 3, 2025 2:37 PM

ಮಂಗಳೂರು: ಹಿಂದುತ್ವ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ (Suhas Shetty Murder case) 8 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಜಿಲ್ಲೆಯಲ್ಲಿ ಇನ್ನು ಮುಂದೆ ಇಂತಹ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತೇವೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಒಂದು ನಿರ್ಧಾರಕ್ಕೆ ಬಂದಿದೆ. ಇಂತಹ ಘಟನೆಗಳು ಮತ್ತೆ ಸಂಭವಿಸದಂತೆ ನೋಡಿಕೊಳ್ಳಲು, ನಾವು ಎರಡೂ ಜಿಲ್ಲೆಗಳಲ್ಲಿ ಕೋಮು ವಿರೋಧಿ ಕಾರ್ಯಪಡೆಯನ್ನು ರಚಿಸುತ್ತಿದ್ದೇವೆ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ (Home minister G parameshwara) ತಿಳಿಸಿದ್ದಾರೆ.

ಮಂಗಳೂರಿಗೆ ಇಂದು ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕಾರ್ಯಪಡೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪ್ರತ್ಯೇಕವಾಗಿ ಕಾರ್ಯ ನಿರ್ವಹಿಸಲಿದೆ. ಕೋಮುವಾದವನ್ನು ಬೆಂಬಲಿಸುವ ಅಥವಾ ಉತ್ತೇಜಿಸುವವರ ವಿರುದ್ಧ ಕೋಮು ವಿರೋಧಿ ಕಾರ್ಯಪಡೆ ಕಠಿಣ ಕ್ರಮ ಕೈಗೊಳ್ಳುತ್ತದೆ ಎಂದರು.

ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು 5 ತಂಡಗಳನ್ನು ರಚಿಸಿ ಆರೋಪಿಗಳಿಗಾಗಿ ಬಲೆ ಬೀಸಿದ್ದರು. ಸದ್ಯ ಬಲೆಗೆ 8 ಮಂದಿ ಶಂಕಿತ ಆರೋಪಿಗಳು ಬಿದ್ದಿದ್ದಾರೆ. ಬಂಧಿತ 8 ಮಂದಿಯನ್ನು ಅಬ್ದುಲ್ ಸಫ್ವಾನ್, ನಿಯಾಜ್, ಎಂಡಿ ಮುಜಾಮಿಲ್, ಕಲಂದರ್ ಶಫಿ, ಆದಿಲ್ ಮೆಹರೂಫ್, ನಾಗರಾಜ್, ಎಂಡಿ ರಿಜ್ವಾನ್ ಮತ್ತು ರಂಜಿತ್ ಎಂದು ಗುರುತಿಸಲಾಗಿದೆ ಎಂದರು.

ಮಂಗಳೂರು ಕೋಮು ಸೂಕ್ಷ್ಮ ಪ್ರದೇಶ. ಗುಂಪು ಹಲ್ಲೆ ಮತ್ತು ಸುಹಾಸ್ ಹತ್ಯೆ ಪ್ರಕರಣ ಎರಡೂ ಘಟನೆಗಳು ಕೋಮು ಸಾಮರಸ್ಯಕ್ಕೆ ಸವಾಲೊಡ್ಡುತ್ತವೆ. ನಾವು ಯಾವುದೇ ರೀತಿಯ ಕೋಮು ಶಕ್ತಿಗಳನ್ನು ಸಹಿಸುವುದಿಲ್ಲ. ನಮ್ಮ ಸರ್ಕಾರ ಈ ಪ್ರದೇಶದಲ್ಲಿ ಶಾಂತಿ ಕಾಪಾಡಲು ಬದ್ಧವಾಗಿದೆ. ಈ ಘಟನೆಗಳ ಬಗ್ಗೆ ನಾವು ಸಕ್ರಿಯವಾಗಿ ತನಿಖೆ ನಡೆಸುತ್ತಿದ್ದೇವೆ. ನಕ್ಸಲ್ ವಿರೋಧಿ ಪಡೆಯಂತೆಯೇ ನಾವು ಕೋಮು ವಿರೋಧಿ ಕಾರ್ಯಪಡೆಯನ್ನು ಸ್ಥಾಪಿಸುತ್ತೇವೆ. ಇದು ಕೋಮು ಚಟುವಟಿಕೆಗಳನ್ನು ಮತ್ತು ಅವುಗಳನ್ನು ಬೆಂಬಲಿಸುವವರನ್ನು ಎದುರಿಸಲು ಸಮಗ್ರ ಅಧಿಕಾರವನ್ನು ಹೊಂದಿರುವ ಪ್ರತ್ಯೇಕ ವಿಭಾಗವಾಗಿರುತ್ತದೆ. ಪ್ರಚೋದನಕಾರಿ ಭಾಷಣಗಳು ಅಥವಾ ಹೇಳಿಕೆಗಳನ್ನು ನೀಡುವ ಯಾರಾದರೂ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನಾವು ಅಧಿಕಾರಿಗಳಿಗೆ ಸೂಚಿಸಿದ್ದೇವೆ ಎಂದರು.

ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡದಲ್ಲಿ ಯಾವುದೇ ಕೋಮು ಭಾಷಣಗಳು, ದ್ವೇಷ ಭಾಷಣಗಳು ನಡೆದರೆ, ಕೋಮು ವಿರೋಧಿ ಶಕ್ತಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಕೋಮು ವಿರೋಧಿ ಕಾರ್ಯಪಡೆ ರಚಿಸಲಾಗುವುದು. ಶೀಘ್ರದಲ್ಲೇ ರಚನೆಯಾಗಲಿರುವ ಕೋಮು ವಿರೋಧಿ ಕಾರ್ಯಪಡೆ ಹಿಂದಿನ ಕೋಮು ಗಲಭೆಗಳ ತನಿಖೆ ನಡೆಸುತ್ತದೆ. ಮುಂದೆ, ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವವರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳುತ್ತಾರೆ. ವ್ಯಕ್ತಿ ಎಷ್ಟೇ ಪ್ರಭಾವಿಯಾಗಿದ್ದರೂ, ಅವರು ರಾಜಕೀಯ ನಾಯಕರಾಗಿದ್ದರೂ ಸಹ, ಅವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ ಎಂದರು.

ಪ್ರಕರಣವನ್ನು ಖಂಡಿಸಿ ನಿನ್ನೆ ದಕ್ಷಿಣ ಕನ್ನಡ ಜಿಲ್ಲೆಯನ್ನು ಬಂದ್ ಮಾಡಿದ್ದು ಉದ್ರಿಕ್ತರ ಗುಂಪು ಬಸ್‌ಗಳ ಮೇಲೆ ಕಲ್ಲು ತೂರಾಟ ಮಾಡಿದ್ದರು. ಪರಿಣಾಮ ನಗರದಾದ್ಯಂತ ಬಿಗಿ ಪೊಲೀಸ್ ಭದ್ರತೆಯನ್ನ ಏರ್ಪಡಿಸಲಾಗಿತ್ತು. ಅಲ್ಲದೇ ಮಂಗಳೂರು ನಗರಾದ್ಯಂತ 144 ಸೆಕ್ಷನ್ ಜಾರಿಯಾಗಿದೆ. ನಿನ್ನೆಯಿಂದ ಮೇ 6ರ ಬೆಳಗ್ಗೆ 6 ಗಂಟೆಯವರೆಗೂ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

ಇಂದು ಗೃಹ ಸಚಿವರು ಮಂಗಳೂರಿನಲ್ಲಿ ಸಭೆ ನಡೆಸಿದ್ದು ಅದರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಜಂಟಿಯಾಗಿ ಎಡಿಜಿಪಿ ಹಿತೇಶ್, ಕಮಿಷನರ್ ಅನುಪಮ್ ಅಗರ್ವಾಲ್ ಸೇರಿದಂತೆ ಅಧಿಕಾರಿಗಳು ಭಾಗಿಯಾಗಿದ್ದರು.