ಬೆಂಗಳೂರು: ದೀಪಾವಳಿ ಹಬ್ಬಕ್ಕೆ (deepavali Festival) ಪಟಾಕಿ ಸಿಡಿಸುವ ಸಂಭ್ರಮದ ವೇಳೆ ಬೆಂಗಳೂರಿನಲ್ಲಿ ಮಕ್ಕಳು ಸೇರಿದಂತೆ 90ಕ್ಕೂ ಹೆಚ್ಚು ಮಂದಿ ಕಣ್ಣಿಗೆ ಗಾಯಗಳಾಗಿ (Injury) ನಗರದ ವಿವಿಧ ಕಣ್ಣಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಪಟಾಕಿ (fire crackers) ) ಸಿಡಿಸುವವರು, ನೋಡುತ್ತಾ ನಿಂತವರು ಮತ್ತು ದಾರಿಹೋಕರು ಪಟಾಕಿಯಿಂದ ಗಾಯಗೊಂಡಿದ್ದಾರೆ.
ನಾರಾಯಣ ನೇತ್ರಾಲಯದಲ್ಲಿ 51 ಜನರಿಗೆ ಚಿಕಿತ್ಸೆ ನೀಡಲಾಗಿದ್ದು, ಅದರಲ್ಲಿ 27 ಮಕ್ಕಳಿದ್ದಾರೆ. ಆರು ಜನರಿಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆ. ಉಳಿದವರು ಹೊರ ರೋಗಿಗಳಾಗಿ ಮತ್ತು ಒಳ ರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ. 51 ಜನರಲ್ಲಿ 38 ಜನರು ತಾವೇ ಪಟಾಕಿ ಸಿಡಿಸುವಾಗ ಗಾಯಗೊಂಡಿದ್ದಾರೆ. ಉಳಿದವರು ಬೇರೆಯವರು ಸಿಡಿಸಿದ ಪಟಾಕಿ ಕಿಡಿ ಸಿಡಿದು ಗಾಯಗೊಂಡಿದ್ದಾರೆ. ನಾರಾಯಣ ನೇತ್ರಾಲಯದಲ್ಲಿ 43 ಜನರಿಗೆ ಚಿಕಿತ್ಸೆ ನೀಡಲಾಗಿದ್ದು, ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ 13 ಮಂದಿ ಚಿಕಿತ್ಸೆ ಪಡೆದಿದ್ದಾರೆ. ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ 13 ಪ್ರಕರಣ ದಾಖಲಾಗಿದ್ದರೆ, ಪ್ರಭಾ ಕಣ್ಣಿನ ಆಸ್ಪತ್ರೆಯಲ್ಲಿ 6 ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗಿದ್ದು, ಅಗರ್ವಾಲ್ ಕಣ್ಣಿನ ಆಸ್ಪತ್ರೆಯಲ್ಲಿ ಮೂವರು ಟ್ರೀಟ್‌ಮೆಂಟ್ ಪಡೆದಿದ್ದಾರೆ.
ಕೆಲವರು ಕಣ್ಣನ್ನೇ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಪಟಾಕಿ ಸಿಡಿತದಿಂದ 20 ವರ್ಷದ ಯುವಕ ಶಾಶ್ವತ ದೃಷ್ಠಿ ಸಮಸ್ಯೆಗೆ ತುತ್ತಾಗಿದ್ದಾನೆ. ಪಟಾಕಿ ಸಿಡಿದು ಕಣ್ಣಿನ ದೃಷ್ಟಿ ಸಂಪೂರ್ಣ ಹಾನಿ ಆಗಿದೆ. ಬಿಹಾರ ಮೂಲದ ಯುವಕ ಬೆಂಗಳೂರಿನ ಅಕ್ಕಿಪೇಟೆಯಲ್ಲಿ ವಾಸವಾಗಿದ್ದು, ಇಡೀ ಕುಟುಂಬ ಈತನ ದುಡಿಮೆ ಮೇಲೆ ಅವಲಂಬನೆ ಆಗಿದೆ. ಸದ್ಯ ಮಿಂಟೋ ಆಸ್ಪತ್ರೆಯಲ್ಲಿ ಯುವಕನಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ: ದೀಪಾವಳಿ ವೇಳೆ ಮಿನಿ ಭಾರತವಾದ ಸಿಡ್ನಿ; ಬೆಳಕಿನ ಹಬ್ಬದಲ್ಲಿ ಆಸ್ಟ್ರೇಲಿಯಾದ ಪ್ರಮುಖ ನಗರ ಮಿಂದೆದ್ದಿದ್ದು ಹೀಗೆ
ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ 67 ವರ್ಷದ ವಿದೇಶಿ ವ್ಯಕ್ತಿಯ ಕಣ್ಣಿಗೆ ಪಟಾಕಿಯ ಕಿಡಿ ಕಣ್ಣಿಗೆ ತಾಗಿ ಗಾಯಗೊಂಡಿದ್ದಾರೆ. ಅವರ ಕಣ್ಣಿನ ರೆಟಿನಾ ಪರೀಕ್ಷೆ ನಡೆಸಲು ಸೂಚಿಸಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಹತ್ತು ವರ್ಷದ ಬಾಲಕ ಪಟಾಕಿ ಹಚ್ಚುವಾಗ ಕಿಡಿ ಸಿಡಿತದಿಂದ ಅವನ ಕಣ್ಣಿನ ರೆಪ್ಪೆ, ಕೂದಲು ಸುಟ್ಟಿದ್ದು, ಕಾರ್ನಿಯಾಗೆ ಪಟಾಕಿ ಕಣಗಳು ಸೇರಿ ಹಾನಿಯಾಗಿದೆ.
ಪಟಾಕಿ ಸಿಡಿದು 13 ವರ್ಷದ ಬಾಲಕನ ಕಣ್ಣಿಗೆ ತೀವ್ರ ಗಾಯ ಆಗಿದೆ. ಬಾಲಕನಿಗೆ ಶೇಕಡಾ 70ರಷ್ಟು ದೃಷ್ಟಿ ಸಮಸ್ಯೆ ಆಗಿದ್ದು, ಬಾಲಕನ ಕಣ್ಣಿಗೆ ಸರ್ಜರಿ ಅಗತ್ಯ ಎಂದು ವೈದ್ಯರು ಹೇಳಿದ್ದಾರೆ. 6ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿ, ಸದ್ಯ ಪ್ರಭಾ ಕಣ್ಣಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ.
ಪಟಾಕಿ ಹೊಡೆಯುವಾಗ ಎಚ್ಚರಿಕೆ ವಹಿಸಿ
ಪಟಾಕಿ ಹಚ್ಚುವಾಗ ರಕ್ಷಣಾತ್ಮಕ ಕನ್ನಡಕಗಳನ್ನು ಬಳಕೆ ಮಾಡಬೇಕು. ಯಾವಾಗಲೂ ಪಟಾಕಿಯಿಂದ ಸುರಕ್ಷಿತ ಅಂತರವನ್ನು ಕಾಪಾಡಿಕೊಳ್ಳಬೇಕು. ಅದರಲ್ಲಿಯೂ ಮಕ್ಕಳು ಪಟಾಕಿ ಸಿಡಿಸುವಾಗ ಪೋಷಕರು ಹೆಚ್ಚಿನ ಕಾಳಜಿ ವಹಿಸಬೇಕು. ಶಬ್ದ ಮಾಡುವ ಪಟಾಕಿಗಳಿಗಿಂತ ಸುರಕ್ಷಿತ, ಕಡಿಮೆ ತೀವ್ರತೆಯ ಪಟಾಕಿಗಳನ್ನು ಬಳಕೆ ಮಾಡುವುದು ಬಹಳ ಉತ್ತಮ. ಅದರಲ್ಲಿಯೂ ಇತ್ತೀಚಿನ ದಿನಗಳಲ್ಲಿ ಮನೆಯಲ್ಲಿಯೇ ಪಟಾಕಿಗಳನ್ನು ತಯಾರಿಸುವುದು ಹೆಚ್ಚಾಗಿದೆ. ಆದರೆ ಇದು ಕೂಡ ಒಳ್ಳೆಯದಲ್ಲ. ಏಕೆಂದರೆ ಅವುಗಳಲ್ಲಿ ಗುಣಮಟ್ಟದ ಕೊರತೆ ಇದ್ದು ಅನಿರೀಕ್ಷಿತ ಸ್ಫೋಟಗಳಿಗೆ ಕಾರಣವಾಗಬಹುದು, ಕಣ್ಣಿನ ಗಾಯಗಳ ಅಪಾಯವನ್ನು ಹೆಚ್ಚಿಸಬಹುದು. ಕಣ್ಣಿನ ಸಮಸ್ಯೆ ಮತ್ತು ಅಲರ್ಜಿ ಇರುವವರು ಪಟಾಕಿಯ ಹೊಗೆಗಳಿಂದ ಆದಷ್ಟು ದೂರವಿರಿ. ಪರಿಸರ ಸ್ನೇಹಿ ಪಟಾಕಿಗಳು ಮತ್ತು ಬೆಳಕಿನ ಪರ್ಯಾಯಗಳನ್ನು ಆರಿಸಿಕೊಳ್ಳಿ, ಅದು ಪರಿಸರ ಮತ್ತು ನಿಮ್ಮ ಆರೋಗ್ಯಕ್ಕೆ ಉಂಟಾಗುವ ಹಾನಿಯನ್ನು ಕಡಿಮೆ ಮಾಡುತ್ತದೆ.
ನಿಮ್ಮ ಕಣ್ಣುಗಳಿಗೆ ಗಾಯವಾದಲ್ಲಿ ಕಣ್ಣುಗಳನ್ನು ಉಜ್ಜಬೇಡಿ. ವೈದ್ಯರನ್ನು ಸಂಪರ್ಕಿಸದೆ ಕಣ್ಣಿಗೆ ಯಾವುದೇ ರೀತಿಯ ಔಷಧಗಳನ್ನು ಬಳಸಬೇಡಿ. ಕಣ್ಣಿನಲ್ಲಿ ಸಿಲುಕಿಕೊಂಡಿರುವ ಯಾವುದೇ ಕಣಗಳನ್ನು ತೆಗೆಯಲು ಪ್ರಯತ್ನ ಪಡಬೇಡಿ. ತಕ್ಷಣ ಹತ್ತಿರದ ಆಸ್ಪತ್ರೆಗೆ ಅಥವಾ ಕಣ್ಣಿನ ತಜ್ಞರ ಬಳಿ ಹೋಗಿ.
ದೀಪಾವಳಿ ಹೊತ್ತಲ್ಲೇ ಹೆಚ್ಚಿದ ವಾಯುಮಾಲಿನ್ಯ
ಬೆಂಗಳೂರಿನ ವಾಯು ಗುಣಮಟ್ಟ ದೀಪಾವಳಿ ಪಟಾಕಿಯಿಂದಾಗಿ ಮತ್ತಷ್ಟು ಹದಗೆಟ್ಟಿದೆ. BWSSB ಕಾಡುಬೀಸನಹಳ್ಳಿಯಲ್ಲಿ AQI ಅಂದ್ರೆ ಏರ್ ಕ್ವಾಲಿಟಿ ಇಂಡೆಕ್ಸ್ ಅರ್ಥಾತ್ ಗಾಳಿಯ ಗುಣಮಟ್ಟ 140 ಆಗಿದೆ. ಅಂದ್ರೆ ಇಲ್ಲೇ ಹೆಚ್ಚು ಮಾಲಿನ್ಯ ಆಗಿರುವುದು ಕಂಡುಬಂದಿದೆ. ಮೆಜೆಸ್ಟಿಕ್ ಭಾಗದಲ್ಲಿ ವಾಯು ಗುಣಮಟ್ಟ 116 ಆಗಿದ್ರೆ, BTM ಲೇಔಟ್ 90 ಆಗಿದೆ. ಬಾಪೂಜಿ ನಗರದಲ್ಲಿ 88 ಇದ್ದು, ಜಯನಗರದಲ್ಲಿ 80 AQI ದಾಖಲಾಗಿದೆ. ಇತರೆ ಏರಿಯಾಗಳಿಗೆ ಹೋಲಿಸಿದರೆ ಹೆಬ್ಬಾಳ ಕಡಿಮೆ ವಾಯು ಮಾಲಿನ್ಯ ಆಗಿದ್ದು, ಇಲ್ಲಿ 79 AQI ದಾಖಲಾಗಿದೆ.