ಹಾಸನ : ಹಾಸನದಲ್ಲಿ (Hassan news) ಜಿಲ್ಲಾ ಆಸ್ಪತ್ರೆ (HIMS) ವೈದ್ಯರು ಮಹಾ ಎಡವಟ್ಟೊಂದನ್ನು ಮಾಡಿದ್ದು, ಪೇಷೆಂಟ್ ಒಬ್ಬರ ಎಡಗಾಲು ಬದಲು ಬಲಗಾಲಿಗೆ ಶಸ್ತ್ರಚಿಕಿತ್ಸೆ (operation) ಮಾಡಿದ್ದಾರೆ. ಜಿಲ್ಲಾಸ್ಪತ್ರೆಯ ವೈದ್ಯ ಸಂತೋಷ ಅವರು ಜ್ಯೋತಿ ಎಂಬ ಮಹಿಳೆಯ ಬಲಗಾಲು ಕುಯ್ದು, ಅಲ್ಲಿ ತಾವು ಕಾಣಬೇಕಿದ್ದ ರಾಡ್ ಕಾಣದೆ ಗಾಬರಿಯಾಗಿದ್ದಾರೆ. ನಂತರ ಸಾವರಿಸಿಕೊಂಡು ಎಡಗಾಲನ್ನೂ ಕುಯ್ದಿದ್ದಾರೆ. ಹೀಗೆ ಮಹಿಳೆಎರಡೂ ಕಾಲುಗಳನ್ನು ಕುಯ್ಯಿಸಿಕೊಂಡು ಆಘಾತಕ್ಕೊಳಗಾಗಿದ್ದಾರೆ.
ಗಾಯಗೊಂಡಿರುವ ಪೇಷೆಂಟ್ ಜ್ಯೋತಿ, ಚಿಕ್ಕಮಂಗಳೂರು ಜಿಲ್ಲೆಯ ಬೂಚನಹಳ್ಳಿಯ ಕಾವಲು ಗ್ರಾಮದ ನಿವಾಸಿಯಾಗಿದ್ದಾರೆ. ಎರಡುವರೆ ವರ್ಷದ ಹಿಂದೆ ಜ್ಯೋತಿ ಅಪಘಾತದಲ್ಲಿ ಗಾಯಗೊಂಡಿದ್ದರು. ತೀವ್ರ ಪೆಟ್ಟಾಗಿ ನಡೆಯಲು ಸಾಧ್ಯವಾಗದೆ ಇದ್ದುದರಿಂದ ವೈದ್ಯರು ಎಡಗಾಲಿಗೆ ರಾಡ್ ಅಳವಡಿಸಿದ್ದರು. ಇತ್ತೀಚಿಗೆ ಕಾಲಿಗೆ ಅಳವಡಿಸಿದ್ದ ರಾಡ್‌ನಿಂದ ಜ್ಯೋತಿಗೆ ನೋವು ಕಾಣಿಸಿಕೊಂಡಿತ್ತು.
ಹಿಮ್ಸ್ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾಕ್ಟರ್ ಸಂತೋಷ್ ಬಳಿ ತೋರಿಸಿದ್ದರು. ರಾಡನ್ನು ತೆಗೆಯಲು ಸೂಚಿಸಲಾಗಿತ್ತು. ಸೆಪ್ಟೆಂಬರ್ 20ರಂದು ಹಾಸನದ ಹಿಮ್ಸ್ ಆಸ್ಪತ್ರೆಗೆ ಜ್ಯೋತಿ ದಾಖಲಾಗಿದ್ದರು. ನಿನ್ನೆ ಜ್ಯೋತಿಗೆ ಶಸ್ತ್ರಚಿಕಿತ್ಸೆ ನಡೆಸಿದ್ದ ವೈದ್ಯ ಸಂತೋಷ್, ಶಸ್ತ್ರಚಿಕಿತ್ಸೆಯ ವೇಳೆ ಎಡಗಾಲು ಬದಲು ಬಲಗಾಲು ಕುಯ್ದು ಎಡವಟ್ಟು ಮಾಡಿದ್ದಾರೆ. ಕಡೆಗೆ ತಮ್ಮ ತಪ್ಪಿನ ಅರಿವಾಗಿ ಎಡಗಾಲನ್ನೂ ಕೊಯ್ದು ಅದಕ್ಕೆ ಅಳವಡಿಸಿದ್ದ ರಾಡ್ ಅನ್ನು ತೆಗೆದಿದ್ದಾರೆ. ವೈದ್ಯರ ಎಡವಟ್ಟಿಗೆ ಮಹಿಳೆ ಜ್ಯೋತಿ ಆಘಾತಕ್ಕೆ ಒಳಗಾಗಿದ್ದಾರೆ.