ಹಾಸನ, ಅ.09: ವರ್ಷಕ್ಕೊಮ್ಮೆ ದರ್ಶನ ಭಾಗ್ಯ ನೀಡುವ ಹಾಸನಾಂಬ ದೇವಿಯ ಗರ್ಭಗುಡಿ ಬಾಗಿಲನ್ನು ಶಾಸ್ತ್ರೋಕ್ತವಾಗಿ ಗುರುವಾರ ಮಧ್ಯಾಹ್ನ 12:21ಕ್ಕೆ ತೆರೆಯಲಾಯಿತು. ಅರಸು ವಂಶಸ್ಥ ನಂಜರಾಜೇ ಅರಸ್ ಅವರು ಗೊನೆಯುಳ್ಳ ಬಾಳೆ ಕಂದು ಕಡಿದ ಬಳಿಕ ಗರ್ಭಗುಡಿ ಬಾಗಿಲನ್ನು ತೆರೆಯಲಾಗಿದೆ. ನಾಳೆಯಿಂದ ಸಾರ್ವಜನಿಕರಿಗೆ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಇಂದಿನಿಂದ ಅ. 23 ರವರೆಗೆ ಹಾಸನಾಂಬ ಜಾತ್ರಾ ಮಹೋತ್ಸವ (Hasanamba Jathra 2025) ನಡೆಯಲಿದೆ.
ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ, ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಆದಿಚುಂಚನಗಿರಿ ಹಾಸನ ಮಠದ ಪೀಠಾಧ್ಯಕ್ಷ ಶ್ರೀ ಶಂಭುನಾಥ ಸ್ವಾಮೀಜಿ, ಶಾಸಕ ಎಚ್.ಪಿ.ಸ್ವರೂಪ್ ಪ್ರಕಾಶ್, ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮದ್ ಸುಜೇತಾ ಸೇರಿದಂತೆ ಜಿಲ್ಲಾಡಳಿತದ ಅಧಿಕಾರಿಗಳು ಉಪಸ್ಥಿತರಿದ್ದರು.
ಇಂದಿನಿಂದ ಅ. 23 ರವರೆಗೆ ಹಾಸನಾಂಬ ಜಾತ್ರಾ ಮಹೋತ್ಸವ ನಡೆಯಲಿದೆ. ಈ ಭಾರಿ ಗೋಲ್ಡ್ ಪಾಸ್ ನೀಡಲಾಗಿದ್ದು, ಬೆಳಗ್ಗೆ 7 ರಿಂದ 10 ಗಂಟೆಯೊಳಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಬೆಳಗ್ಗೆ 10.30ರಿಂದ ಮಧ್ಯಾಹ್ನ 12.30ರವರೆಗೆ ಗಣ್ಯರಿಗೆ ದರ್ಶನಕ್ಕೆ ಅವಕಾಶವಿದೆ.
ಜಾತ್ರಾ ಮಹೋತ್ಸವ ಪ್ರಯುಕ್ತ ದೇವಾಲಯಕ್ಕೆ ಸುಣ್ಣ -ಬಣ್ಣ ಮಾಡಲಾಗಿದೆ. ಹಾಸನಾಂಬೆಗೆ ವಿವಿಧ ಆಭರಣ ಹಾಗೂ ಬಗೆಬಗೆಯ ಹೂಗಳಿಂದ ಅಲಂಕಾರ ಮಾಡಲಾಗಿದೆ. ಇನ್ನು ನಾಳೆಯಿಂದ ಸಾರ್ವಜನಿಕರಿಗೆ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ವಿಶೇಷ ದರ್ಶನಕ್ಕೆ 1 ಸಾವಿರ ಹಾಗೂ 300 ರೂ. ದರದ ಟಿಕೆಟ್ ಲಭ್ಯವಿದ್ದು, ಆನ್‌ಲೈನ್‌ನಲ್ಲಿ ಭಕ್ತರು ಟಿಕೆಟ್ ಪಡೆಯಬಹುದಾಗಿದೆ.
ಕಳೆದ ಬಾರಿ 15 ಲಕ್ಷಕ್ಕೂ ಅಧಿಕ ಭಕ್ತರು ಹಾಸನಾಂಬೆ ದೇವಿ ದರ್ಶನ ಮಾಡಿದ್ದರು. ಈ ಬಾರಿ ಸುಮಾರು 25 ಲಕ್ಷರು ಬರುವ ನಿರೀಕ್ಷೆ ಇದೆ. ಈಗಾಗಲೇ ಜಿಲ್ಲಾಡಳಿತ ಹಾಗೂ ದೇವಸ್ಥಾನ ಆಡಳಿತ ಮಂಡಳಿಯಿಂದ ದರ್ಶನಕ್ಕೆ ಅಗತ್ಯ ವ್ಯವಸ್ಥೆ ಮಾಡಲಾಗಿದೆ. ಗಣ್ಯರಿಗಾಗಿ ವಿಶೇಷ ಸಾಲು, ಟಿಕೆಟ್ ಪಡೆದು ಬರುವವರಿಗೆ ಪ್ರತ್ಯೇಕ ಸಾಲಿನ ವ್ಯವಸ್ಥೆ ಮಾಡಲಾಗಿದೆ.
ಈ ಸುದ್ದಿಯನ್ನೂ ಓದಿ | Hasanamba Utsav 2025: ನಾಳೆಯಿಂದ ಹಾಸನಾಂಬ ದರ್ಶನೋತ್ಸವ; ಈ ಬಾರಿ ವಿಐಪಿ ಸಂಸ್ಕೃತಿಗೆ ಬ್ರೇಕ್, ಏನೆಲ್ಲಾ ವ್ಯವಸ್ಥೆ?
ದೇವಿಯ ಭಕ್ತರಿಗಾಗಿ ಆಡಳಿತ ಮಂಡಳಿ ವಾಡ್ಸಾಪ್ ಚಾಟ್ ಮೂಲಕ ಆನ್ ಲೈನ್ ನೆರವು ನೀಡುವ ಯೋಜನೆ ಹಮ್ಮಿಕೊಂಡಿದ್ದು, ಟಿಕೆಟ್ ಬುಕ್ಕಿಂಗ್ ದರ್ಶನ ಸಮಯ ಸರತಿ ಸಾಲುಗಳಿ ಸ್ಥಿತಿಗತಿ, ಇ-ಹುಂಡಿ ಸೇರಿ ಹಲವು ಮಾಹಿತಿಗಳು ಆನ್‌ಲೈನ್ ಮೂಲಕ ಲಭ್ಯವಾಗಲಿದೆ.
ಈ ಬಾರಿ ಜಾತ್ರೋತ್ಸವದಲ್ಲಿ ಹೆಲಿ ಟೂರಿಸಂ, ಟೂರ್ ಪ್ಯಾಕೇಜ್, ಶ್ವಾನ ಪ್ರದರ್ಶನ, ಪಾಕ ಸ್ಪರ್ಧೆ, ಜಾನಪದ ಉತ್ಸವ ಆಯೋಜಿಸಲಾಗಿದೆ.