ಬೆಂಗಳೂರು: ಗುವಾಹಟಿಯಿಂದ ಚೆನ್ನೈಗೆ 168 ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಇಂಡಿಗೋ ವಿಮಾನ ಹಾರಾಟದ ಸಮಯದಲ್ಲೇ ‘ಮೇಡೇ’ ಘೋಷಿಸಿ, ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅದೃಷ್ಟವಶಾತ್ ವಿಮಾನ (IndiGo flight emergency landing) ಸುರಕ್ಷಿತವಾಗಿ ಲ್ಯಾಂಡ್ ಆಗಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ಗುರುವಾರ ಈ ಘಟನೆ ನಡೆದಿದ್ದು, ಇಂಧನವು ತೀರಾ ಕಡಿಮೆ ಇದ್ದ ಹಿನ್ನೆಲೆಯಲ್ಲಿ ಇಂಡಿಗೋ ವಿಮಾನ ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ವಿಮಾನ ಗುವಾಹಟಿಯಿಂದ ಚೆನ್ನೈಗೆ ತೆರಳುತ್ತಿತ್ತು. ಇಂಧನ ಖಾಲಿಯಾಗುತ್ತಿದ್ದ ಹಿನ್ನೆಲೆಯಲ್ಲಿ ಏರ್ ಟ್ರಾಫಿಕ್ ಕಂಟ್ರೋಲ್ ಸಿಬ್ಬಂದಿಗೆ ಪೈಲಟ್ ಮೇಡೇ ಸಂದೇಶ ರವಾನಿಸಿದ್ದಾರೆ. ಕೂಡಲೇ ಅಧಿಕಾರಿಗಳು ವಿಮಾನವನ್ನು ಬೆಂಗಳೂರಿನಲ್ಲಿ ಸೇಫ್ ಲ್ಯಾಂಡ್ ಮಾಡಲು ಸೂಚಿಸಿದ್ದರು. ಇದರಂತೆ ಪೈಲಟ್ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿದರು ಎಂದು ವಿಮಾನಯಾನ ಸಂಸ್ಥೆಯ ಅಧಿಕಾರಿಗಳು ಹೇಳಿದ್ದಾರೆ.
ಇಂಡಿಗೊ 6E-6764 ವಿಮಾನ ಸಂಜೆ 4.40ಕ್ಕೆ ಗುವಾಹಟಿ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗಿತ್ತು. ಇದು 7.45ಕ್ಕೆ ಚೆನ್ನೈನಲ್ಲಿ ಲ್ಯಾಂಡ್ ಆಗಬೇಕಿತ್ತು. ಮಧ್ಯದಲ್ಲಿ ಇಂಧನ ಖಾಲಿಯ ಅಲರಾಂ ಸೂಚನೆ ಬಂದಿದ್ದರಿಂದ ವಿಮಾನ ಚೆನ್ನೈ ತಲುಪುವುದು ಅಸಾಧ್ಯವಾಗಿತ್ತು. ಈ ವೇಳೆ ಪೈಲಟ್ ಮೇಡೇ ಸಂದೇಶ ರವಾನಿಸಿ ಬೆಂಗಳೂರಿನಲ್ಲಿ ತುರ್ತು ಭೂಸ್ವರ್ಶ ಮಾಡಿದರು. ವಿಮಾನದಲ್ಲಿ 168 ಪ್ರಯಾಣಿಕರು, ಇಬ್ಬರು ಪೈಲಟ್, ಐವರು ಗಗನಸಖಿಯರು ಸೇರಿ 175 ಜನರಿದ್ದರು.
ಈ ಸುದ್ದಿಯನ್ನೂ ಓದಿ | SpiceJet Flight: ತಿರುಪತಿಗೆ ತೆರಳುತ್ತಿದ್ದ ಸ್ಪೈಸ್ ಜೆಟ್ ತುರ್ತು ಭೂಸ್ಪರ್ಶ!