ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Karnataka Assembly Session: ಆರ್‌ಸಿಬಿ ಮೆರವಣಿಗೆಗೆ ಅವಕಾಶ ನೀಡದ್ದನ್ನು ಖಂಡಿಸಿ ಟ್ವೀಟ್ ಮಾಡಿದ್ದು ಬಿಜೆಪಿಯಲ್ಲವೇ?: ಅಶೋಕ್‌ಗೆ ಡಿಕೆಶಿ ತಿರುಗೇಟು

DK Shivakumar: ಆರ್‌ಸಿಬಿ ವಿಜಯೋತ್ಸವದ ವೇಳೆ ತೆರೆದ ವಾಹನದಲ್ಲಿ ಮೆರವಣಿಗೆಗೆ ಅವಕಾಶ ನೀಡದ ಗೃಹ ಸಚಿವರ ನಡೆಯನ್ನು ಖಂಡಿಸಿ ಟ್ವೀಟ್ ಮಾಡಿದ್ದು ನಿಮ್ಮದೇ ಪಕ್ಷವಲ್ಲವೇ ಎಂದು ವಿರೋಧ ಪಕ್ಷದ ನಾಯಕ ಅಶೋಕ್ ಅವರಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಆರ್‌ಸಿಬಿ ಮೆರವಣಿಗೆಗೆ ಅವಕಾಶ ನೀಡದ್ದನ್ನು ಖಂಡಿಸಿದ್ದು ಬಿಜೆಪಿಯಲ್ಲವೇ?

Profile Siddalinga Swamy Aug 12, 2025 9:41 PM

ಬೆಂಗಳೂರು: ಆರ್‌ಸಿಬಿ ವಿಜಯೋತ್ಸವದ ವೇಳೆ ತೆರೆದ ವಾಹನದಲ್ಲಿ ಮೆರವಣಿಗೆಗೆ ಅವಕಾಶ ನೀಡದ ಗೃಹ ಸಚಿವರ ನಡೆಯನ್ನು ಖಂಡಿಸಿ ಟ್ವೀಟ್ ಮಾಡಿದ್ದು ನಿಮ್ಮದೇ ಪಕ್ಷವಲ್ಲವೇ ಎಂದು ವಿರೋಧ ಪಕ್ಷದ ನಾಯಕ ಅಶೋಕ್ (R Ashok) ಅವರಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ತಿರುಗೇಟು ನೀಡಿದರು. ವಿಧಾನಸಭೆಯಲ್ಲಿ ನಿಲುವಳಿ ಸೂಚನೆ ಮೇಲೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ಪ್ರಕರಣದ ಬಗ್ಗೆ ಚರ್ಚೆ ನಡೆಸುತ್ತಿರುವಾಗ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಧ್ಯ ಪ್ರವೇಶಿಸಿ ಛೇಡಿಸಿದರು.

ಆರ್‌ಸಿಬಿ ಕೇವಲ ದುಡ್ಡು ಮಾಡುವ ಉದ್ದೇಶ ಹೊಂದಿದೆಯೇ ಹೊರತು ಅವರಿಂದ ಯಾವುದೇ ಉತ್ತಮ ಕೆಲಸವಾಗಿಲ್ಲ. ಸರ್ಕಾರ ಜನರ ಸಂಭ್ರಮಾಚರಣೆ ವೇಳೆ ಕ್ರೆಡಿಟ್ ತೆಗೆದುಕೊಳ್ಳಲು ಮುಂದಾಗಿ ಈ ಕಾರ್ಯಕ್ರಮ ಆಯೋಜಿಸಿತು. ತರಾತುರಿಯಲ್ಲಿ ಕಾರ್ಯಕ್ರಮ ಆಯೋಜಿಸಿದ್ದಕ್ಕೆ ಈ ಕಾಲ್ತುಳಿತ ಪ್ರಕರಣ ಸಂಭವಿಸಿದ್ದು, ಇದಕ್ಕೆ ಸರ್ಕಾರವೇ ಹೊಣೆ ಎಂದು ಆರ್. ಅಶೋಕ್ ಅವರು ಆರೋಪ ಮಾಡಿದರು.

ಇದಕ್ಕೆ ಪ್ರತ್ಯುತ್ತರ ನೀಡಿದ ಡಿಸಿಎಂ ಡಿ.ಕೆ. ಶಿವಕುಮಾರ್‌, ʼಅಭಿಮಾನಿಗಳ ವಿಜಯೋತ್ಸವದ ವೇಳೆ ಮೆರವಣಿಗೆಗೆ ಸರ್ಕಾರ ನಿರಾಕರಿಸಿದಾಗ ನಿಮ್ಮ ಪಕ್ಷದ ವತಿಯಿಂದ ಬಂದ ಟ್ವೀಟ್ ಬಗ್ಗೆಯೂ ಮಾತನಾಡಿ. ಅದನ್ನು ಯಾಕೆ ಹಾಗೇ ಬಿಡುತ್ತೀರಿ? ಹಲವಾರು ವರ್ಷಗಳ ಅಭಿಮಾನಿಗಳ ಕನಸನ್ನು ಆರ್‌ಸಿಬಿ ಈ ವರ್ಷ ನನಸು ಮಾಡಿದೆ. ಆದರೆ ತೆರೆದ ಬಸ್‌ನಲ್ಲಿ ಆಟಗಾರರ ವಿಜಯೋತ್ಸವಕ್ಕೆ ಅನುಮತಿ ನಿರಾಕರಿಸುವ ಮೂಲಕ ಆಕಸ್ಮಿಕ ಗೃಹ ಸಚಿವ ಪರಮೇಶ್ವರ್ ಅವರು ತಾವೊಬ್ಬ ಅಸಮರ್ಥ ಹಾಗೂ ಅದಕ್ಷ ಎಂಬುದನ್ನು ಸಾಬೀತುಪಡಿಸಿದ್ದಾರೆ. ತಮ್ಮ ನೆಚ್ಚಿನ ಆಟಗಾರರನ್ನು ಅತಿ ಹತ್ತಿರದಿಂದ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದು, ಅಭಿಮಾನಿಗಳ ಸಂಭ್ರಮಕ್ಕೆ ಕಲ್ಲು ಹಾಕಿದ ಪರಮೇಶ್ವರ್ʼ ಎಂದು ಬಿಜೆಪಿ ಅಧಿಕೃತ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿತ್ತು. ಆ ಬಗ್ಗೆಯೂ ನೀವು ಹೇಳಬೇಕಲ್ಲವೇʼ ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ | Karnataka Assembly session: ಎರಡೆರಡು ಬಾರಿ ಪರಿಹಾರ; ತಪ್ಪಿತಸ್ಥರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದ ಎಂ.ಬಿ. ಪಾಟೀಲ್‌