ಬೆಂಗಳೂರು: ರಾಜ್ಯದ ಗ್ರಾಮ ಪಂಚಾಯತಿ (Grama Panchayat) ವ್ಯಾಪ್ತಿಯಲ್ಲಿ ಸ್ಥಳೀಯ ಯೋಜನಾ ಪ್ರದೇಶವನ್ನು ಹೊರತುಪಡಿಸಿದ ಪ್ರದೇಶಗಳಲ್ಲಿನ ಭೂಪರಿವರ್ತಿತ (converted land) ಜಮೀನುಗಳಲ್ಲಿ ಬಡಾವಣೆಗಳ ವಿನ್ಯಾಸ ಅನುಮೋದನೆಗೆ ರಾಜ್ಯ ಸರ್ಕಾರ (Karnataka government) ಅನುಮತಿಸಿ ಆದೇಶಿಸಿದೆ. ಈ ಮೂಲಕ ಗ್ರಾಮೀಣ ಭಾಗದಲ್ಲಿಯೂ ಬಡಾವಣೆಗಳನ್ನು ನಿರ್ಮಿಸುವುದಕ್ಕೆ ಅವಕಾಶ ನೀಡಿದಂತೆ ಆಗಿದೆ.
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸ್ಥಳೀಯ ಯೋಜನಾ ಪ್ರದೇಶವನ್ನು ಹೊರತುಪಡಿಸಿದ ಪ್ರದೇಶಗಳಲ್ಲಿನ ಭೂಪರಿವರ್ತಿತ ಜಮೀನುಗಳಲ್ಲಿ ಬಡಾವಣೆಗಳ ವಿನ್ಯಾಸ ಅನುಮೋದನೆಯ ಕುರಿತು ವಹಿಸಬೇಕಾದ ಕ್ರಮಗಳ ಬಗ್ಗೆ ಗ್ರಾಮೀಣಾಭಿವೃದ್ಧಿ ಇಲಾಖೆ ಸುತ್ತೋಲೆಯ ಮೂಲಕ ಸ್ಪಷ್ಟ ನಿರ್ದೇಶನಗಳನ್ನು ನೀಡಿದ್ದು, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ಅಧಿನಿಯಮ, 2025 ರ ಪ್ರಕರಣ 199(ಬಿ) ರಲ್ಲಿ ಕಟ್ಟಡ ನಿರ್ಮಾಣ ಉದ್ದೇಶಗಳಿಗಾಗಿ ಇರುವ ಕಟ್ಟಡ ನಿವೇಶನಗಳಿಗಾಗಿ ಹೊಸ ಖಾತಾ ಅಥವಾ ಪಿ.ಐ.ಡಿಯನ್ನು ನೀಡಲು, ಗ್ರಾಮ ಪಂಚಾಯತಿ ಅಥವಾ ಸರ್ಕಾರವು ಅಧಿಸೂಚನೆಯ ಮೂಲಕ ಗೊತ್ತುಪಡಿಸಲಾದ ಪ್ರಾಧಿಕಾರಗಳು, ಅಧಿಕಾರ ವ್ಯಾಪ್ತಿಯ ಯೋಜನಾ ಪ್ರಾಧಿಕಾರದ ಮೂಲಕ ಬಡಾವಣೆ ನಕ್ಷೆಗಾಗಿ ಪೂರ್ವಾನುಮೋದನೆಯನ್ನು ಪಡೆದುಕೊಳ್ಳಬೇಕಾಗಿದೆ ಎಂದು ತಿಳಿಸಿರುವ ಸಚಿವರು ಅಭಿವೃದ್ಧಿದಾರರು ವಿನಿಯಮ 4(1) ರಲ್ಲಿ ತಿಳಿಸಿರುವಂತೆ ನಮೂನೆ-1ರಲ್ಲಿ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಗ್ರಾಮ ಪಂಚಾಯತಿಗೆ ಸಲ್ಲಿಸಬೇಕೆಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಇದನ್ನೂ ಓದಿ: DK Shivakumar: ಟನಲ್ ರಸ್ತೆ ಯೋಜನೆ ಮುಂದುವರಿಸಿ; ಡಿಸಿಎಂಗೆ ಸಾರ್ವಜನಿಕರ ಬೆಂಬಲ
ವಿನ್ಯಾಸ ನಕ್ಷೆಯ ಪ್ರಕಾರ ಬಡಾವಣೆಯ ಮಾಲೀಕರು ಸಂಬಂಧಿಸಿದ ಗ್ರಾಮ ಪಂಚಾಯತಿಗೆ ವಿನ್ಯಾಸ ನಕ್ಷೆಯ ಪ್ರಕಾರ ರಸ್ತೆಗಳ ಅಗಲೀಕರಣಕ್ಕೆ ಮೀಸಲಿರಿಸಿದ ರಸ್ತೆಗಳು ಸೇರಿದಂತೆ ರಸ್ತೆಗಳು, ಪಾರ್ಕ್‌ಗಳು, ವಾಹನ ನಿಲ್ದಾಣಗಳು, ನಾಗರೀಕ ಸೌಲಭ್ಯದ ಪ್ರದೇಶಗಳು, ಸಾರ್ವಜನಿಕ ಬಳಕೆಯ ಪ್ರದೇಶಗಳು ಹಾಗೂ ಇತರೆ ಮೂಲಭೂತ ಸೌಕರ್ಯಗಳ ಪ್ರದೇಶಗಳನ್ನು ಉಚಿತವಾಗಿ ನೋಂದಾಯಿತ ಪರಿತ್ಯಾಜನ ಪತ್ರದ ಮುಖಾಂತರ ವರ್ಗಾಯಿಸಬೇಕಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಮಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಬಡಾವಣೆಯ ಮಾಲೀಕರು, ವಿನಿಯಮ-11 ರ ಪ್ರಕಾರ ಅನುಮೋದಿತ ಬಡಾವಣೆಯಲ್ಲಿನ ಅಭಿವೃದ್ಧಿ ಕಾರ್ಯಗಳನ್ನು ಪ್ರಸ್ತುತ ಜಾರಿಯಲ್ಲಿರುವ ನಿಯಮಗಳಂತೆ ಸಂಬಂಧಿಸಿದ ಇಲಾಖೆಗಳಾದ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಎಸ್ಕಾಂ ಹಾಗೂ ಅವಶ್ಯಕ ಇತರೆ ಇಲಾಖೆಗಳಿಂದ ಅನುಮೋದಿತ ವಿನ್ಯಾಸದಂತೆ ದೃಢೀಕೃತ ಅಂದಾಜು ಪಟ್ಟಿಗಳನ್ವಯ ಅನುಷ್ಟಾನ ಮಾಡಬೇಕಾಗುತ್ತದೆ ಎಂದೂ ಸಚಿವರು ಮಾಹಿತಿ ನೀಡಿದ್ದಾರೆ.
ಸ್ಥಳೀಯ ಯೋಜನಾ ಪ್ರದೇಶವನ್ನು ಹೊರತುಪಡಿಸಿದ ಪ್ರದೇಶದಲ್ಲಿ ಬರುವ ಗ್ರಾಮ ಪಂಚಾಯತಿಗಳು ತಮ್ಮ ವ್ಯಾಪ್ತಿಯಲ್ಲಿನ ಭೂಪರಿವರ್ತಿತ ಜಮೀನುಗಳಲ್ಲಿ ವಿನ್ಯಾಸ ಅನುಮೋದನೆ ಹಾಗೂ ಅಭಿವೃದ್ಧಿ ಕಾಮಗಾರಿಗಳನ್ನು ಮಾರ್ಗಸೂಚಿಗಳನ್ವಯ ಅನುಷ್ಠಾನಗೊಳಿಸಿರುವುದನ್ನು ಖಾತ್ರಿಪಡಿಸಿಕೊಂಡು ಬಡಾವಣೆಗಳಿಗೆ ಸಂಬಂಧಿಸಿದ ಎಲ್ಲಾ ಅಗತ್ಯ ದಾಖಲೆಗಳನ್ನು ನಿರ್ವಹಿಸಿ, ತೆರಿಗೆ ವ್ಯಾಪ್ತಿಗೆ ಒಳಪಡಿಸಲು ಅಗತ್ಯ ಕ್ರಮವಹಿಸಲು ತಿಳಿಸಲಾಗಿದೆ ಎಂದೂ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.