ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Monsoon Session: ರಾಜ್ಯ ಮುಂಗಾರು ಅಧಿವೇಶನ ಆರಂಭ, ಸಂತಾಪ ಸೂಚನೆ ವೇಳೆ ಗುಡುಗಿದ ಸ್ಪೀಕರ್

ಇಂದಿನಿಂದ ರಾಜ್ಯ ವಿಧಾನ ಮಂಡಲದ ಮುಂಗಾರು ಅಧಿವೇಶನ (Monsoon Session) ಶುರುವಾಗಿದೆ. ಅಧಿವೇಶನದ ಮೊದಲ ದಿನವೇ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿಪಕ್ಷಗಳು ಮುಂದಾಗಿದೆ. ಆರ್ ಸಿ ಬಿ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತದಿಂದ 11 ಜನ ಸಾವಿನ ವಿಚಾರವನ್ನು ಪ್ರಸ್ತಾಪಿಸಲು ನಿಲುವಳಿ ಸೂಚನೆ ನೀಡಲಾಯಿತು.

ಮುಂಗಾರು ಅಧಿವೇಶನ ಆರಂಭ, ಸಂತಾಪ ಸೂಚನೆ ವೇಳೆ ಗುಡುಗಿದ ಸ್ಪೀಕರ್

ಹರೀಶ್‌ ಕೇರ ಹರೀಶ್‌ ಕೇರ Aug 11, 2025 12:36 PM

ಬೆಂಗಳೂರು: ಇಂದಿನಿಂದ ರಾಜ್ಯ ವಿಧಾನ ಮಂಡಲದ ಮುಂಗಾರು ಅಧಿವೇಶನ (Monsoon Session) ಶುರುವಾಗಿದೆ. ವಿಧಾನಸಭೆಯಲ್ಲಿ ವಂದೇ ಮಾತರಂ ಗೀತೆಯ ಮೂಲಕ ಕಲಾಪ ಶುರುವಾಯಿತು. ಸದನದ ಆರಂಭದಲ್ಲಿ ಆರ್‌ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತದಲ್ಲಿ ಮೃತಪಟ್ಟವರಿಗೆ ಹಾಗೂ ಗುಜರಾತ್​ ವಿಮಾನ ದುರಂತದಲ್ಲಿ ಮೃತಪಟ್ಟವರಿಗೆ ಸಂತಾಪ ಸಲ್ಲಿಸಲಾಯಿತು. ಜೊತೆಗೆ ಈ ಅವಧಿಯಲ್ಲಿ ಮೃತಪಟ್ಟ ಸಾಹಿತಿ ಎಚ್‌ಎಸ್‌ ವೆಂಕಟೇಶಮೂರ್ತಿ, ಮೇಗಾನೆ ರಾಮಯ್ಯ ಮೊದಲಾದವರಿಗೆ ಸಂತಾಪ ವ್ಯಕ್ತಪಡಿಸಲಾಯಿತು.

ಈ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಮೃತಪಟ್ಟವರಿಗೆ ಸಂತಾಪ ಸೂಚನೆಯ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ತಮ್ಮಷ್ಟಕ್ಕೇ ಮಾತಿನಲ್ಲಿ ನಿರತರಾಗಿದ್ದ ಸಂಸ್ಕೃತಿ ಸಚಿವ ಶಿವರಾಜ್‌ ತಂಗಡಗಿ ಮೊದಲಾದವರನ್ನು ಸ್ಪೀಕರ್‌ ಯು.ಟಿ ಖಾದರ್‌ ತರಾಟೆಗೆ ತೆಗೆದುಕೊಂಡರು. ʼನೀವು ನಿಮ್ಮಷ್ಟಕ್ಕೇ ಮಾತನಾಡುವುದಾದರೆ ಸಂತಾಪ ಸೂಚನೆ ಯಾಕೆ ಬೇಕು? ಅದಕ್ಕೊಂದು ಪಾವಿತ್ರ್ಯ ಇಲ್ಲವೇʼ ಎಂದು ಗುಡುಗಿದರು.

ಅಧಿವೇಶನದ ಮೊದಲ ದಿನವೇ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿಪಕ್ಷಗಳು ಮುಂದಾಗಿದೆ. ಆರ್ ಸಿ ಬಿ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತದಿಂದ 11 ಜನ ಸಾವಿನ ವಿಚಾರವನ್ನು ಪ್ರಸ್ತಾಪಿಸಲು ನಿಲುವಳಿ ಸೂಚನೆ ನೀಡಲಾಯಿತು. ಈ ನಿಲುವಳಿ ಸೂಚನೆಗೆ ವಿಪಕ್ಷಗಳ ನಾಯಕರಾದ ಆರ್. ಅಶೋಕ್, ವಿಜಯೇಂದ್ರ, ಜೆಡಿಎಲ್‌ಪಿ ನಾಯಕ ಸುರೇಶ್ ಬಾಬು ಮತ್ತು ಇನ್ನೂ 11 ಮಂದಿ ಸಹಿ ಹಾಕಿದ್ದಾರೆ.

ದಿನಾಂಕ. 04-08-2025 ರಂದು ನಡೆದ ಆರ್​ಸಿಬಿ ಕ್ರಿಕೆಟ್ ತಂಡದ ಅಭಿನಂದನಾ ಕಾರ್ಯಕ್ರಮಕ್ಕೆ ಲಕ್ಷಾಂತರ ಅಭಿಮಾನಿಗಳು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸೇರಿದ್ದರಿಂದ ಉಂಟಾದ ಜನದಟ್ಟಣೆಯಿಂದ ಕ್ರೀಡಾಂಗಣದ ದ್ವಾರಗಳ ಬಳಿ ಕಾಲ್ತುಳಿತ ಉಂಟಾಗಿ ಅಮಾಯಕ 11 ಜನರು ಪ್ರಾಣ ಕಳೆದುಕೊಂಡಿದ್ದು, ಹಲವಾರು ಜನ ಗಾಯಗೊಂಡಿದ್ದಾರೆ. ವಿಧಾನಸೌಧದ ಗ್ರಾಂಡ್‌ ಸ್ಟೆಪ್ಸ್ ಮತ್ತು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಿದಾಗ, ಪೊಲೀಸರು ಅಗತ್ಯ ಭದ್ರತೆ ನೀಡಲು ಮತ್ತು ಜನದಟ್ಟಣೆ ನಿಯಂತ್ರಿಸಲು ಸಾಧ್ಯವಾಗದಿದ್ದರೂ ಸರ್ಕಾರ ತರಾತುರಿಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಲು ಅನುಮತಿ ನೀಡಿದ ಕಾರಣ ಈ ದುರ್ಘಟನೆ ನಡೆದಿದೆ. ಯಾವುದೇ ಸೂಕ್ತ ಸಿದ್ಧತೆ ಮಾಡಿಕೊಳ್ಳದೆ ಸುಮಾರು 1 ಕಿ.ಮೀ ಅಂತರದಲ್ಲಿ ಒಂದೇ ಸಮಯದಲ್ಲಿ ಎರಡು ಬೃಹತ್ ಕಾರ್ಯಕ್ರಮಗಳನ್ನು ತರಾತುರಿಯಲ್ಲಿ ಆಯೋಜಿಸಿದ ಪರಿಣಾಮ, ಈ ಮಹಾ ದುರಂತ ಸಂಭವಿಸಿದೆ. ಈ ದುರ್ಘಟನೆ ನಡೆದ ಬಗ್ಗೆ ಚರ್ಚಿಸಲು ದಿನಾಂಕ 11/08/2025ರಂದು ಅವಕಾಶ ನೀಡಬೇಕೆಂದು ಕೋರುತ್ತೇವೆ ಎಂದು ಬಿಜೆಪಿ ಮನವಿ ಮಾಡಿದೆ.

ಇದನ್ನೂ ಓದಿ: Monsoon Session: ರಾಜ್ಯ ಸರ್ಕಾರ ಕಾಟಾಚಾರಕ್ಕೆ ಅಧಿವೇಶನ ನಡೆಸುತ್ತಿದೆ: ಬಿ.ವೈ.ವಿಜಯೇಂದ್ರ