ಕೋಲಾರ: ಉಗ್ರವಾದಿ ಸಂಘಟನೆಗಳ ಕುರಿತು ಸಾಮಾಜಿಕ (Sedition case) ಜಾಲತಾಣಗಳಲ್ಲಿ ಪದೇ ಪದೇ ಹುಡುಕಾಟ ನಡೆಸುತ್ತಿದ್ದ ಬಾಲಕನನ್ನು ಭದ್ರತಾ ಮತ್ತು ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ ಹಾಗೂ ಉಗ್ರವಾದಿ ಸಂಘಟನೆಗಳ ಕುರಿತು ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಈತ ಹುಡುಕಾಡಿದ್ದಾನೆ. ಅಷ್ಟೇ ಅಲ್ಲದೆ ಹಲವು ದೇಶ ವಿರೋಧಿ ಪೋಸ್ಟ್‌ಗಳನ್ನು ಈತ ಹಂಚಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಬಾಲಕ ಮೂಲತಃ ಆಂದ್ರ ಪ್ರದೇಶದ ಮುಸ್ಲಿಂ ಕುಟುಂಬಕ್ಕೆ ಸೇರಿದವನು ಎಂದು ಹೇಳಲಾಗಿದೆ.
ಬಾಲಕನ ಕುಟುಂಬ ಹಲವು ವರ್ಷಗಳ ಹಿಂದೆ ಆಂದ್ರ ಪ್ರದೇಶದ ರಾಮಕುಪ್ಪಂ ತೊರೆದು ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಬೇತಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ದ್ಯಾವರಹಳ್ಳಿ ಗ್ರಾಮದ ಬಳಿ ಬಾಡಿಗೆ ಮನೆಯಲ್ಲಿ ವಾಸವಾಗಿದೆ. ಬಾಲಕ ಉಗ್ರಗಾಮಿ ಸಂಘಟನೆಗೆ ಸಂಬಂಧಿಸಿದಂತೆ ಕೆಲವೊಂದು ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದನು. ಅಲ್ಲದೆ, ಪದೇ ಪದೇ ಉಗ್ರಗಾಮಿ ಸಂಘಟನೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹುಡುಕಾಡುತ್ತಿದ್ದ ಹಿನ್ನೆಲೆಯಲ್ಲಿ ಅಧಿಕಾರಿಗಳು ಆತನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಇಡೀ ದಿನ ಆತನನ್ನು ವಿಚಾರಣೆ ನಡೆಸಿ, ನಂತರ ಆತನನ್ನು ಬೇತಮಂಗಲ ಪೊಲೀಸರ ವಶಕ್ಕೆ ನೀಡಿದ್ದಾರೆ.
ಬಾಲಕ ಮೇಡಹಳ್ಳಿ ಬಳಿ ಚಿಕನ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದನು. ಈತನ ಚಲನವಲನಗಳ ಮೇಲೆ ಕಣ್ಣಿಟ್ಟಿದ್ದ ಆತಂಕರಿ ಭದ್ರತಾ ಅಧಿಕಾರಿಗಳು ಹಾಗೂ ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಸದ್ಯ ಬಾಲಕನ ವಿರುದ್ಧ ಬೇತಮಂಗಲ ಪೊಲೀಸ್ ಠಾಣೆಯಲ್ಲಿ ದೇಶದ್ರೋಹ ಹಾಗೂ ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ ಆರೋಪದಡಿ ಪ್ರಕರಣ ದಾಖಲಾಗಿದೆ. ಆರೋಪಿ ಬಾಲಕನ್ನು ಪೊಲೀಸರು ಬಂಧಿಸಿ ಕೆಜಿಎಫ್ ಬಾಲ ಮಂದಿರದಲ್ಲಿ ಇರಿಸಲಾಗಿದೆ.
ಈ ಸುದ್ದಿಯನ್ನೂ ಓದಿ: Viral News: ನನ್ನ ಪತಿ ದೇಶದ್ರೋಹಿ... ಗಂಡನ ನಕಲಿ ದಾಖಲೆ ನೋಡಿದ ಹೆಂಡ್ತಿಯಿಂದ ಪೊಲೀಸರಿಗೆ ದೂರು
ಪ್ರತ್ಯೇಕ ಘಟನೆಯಲ್ಲಿ ಕಳೆದ ಎರಡು ತಿಂಗಳ ಹಿಂದೆ ಪಾಕಿಸ್ತಾನ್ ಜಿಂದಾಬಾದ್ ಎಂದು ಫ್ಯಾಕ್ಟರಿಯ ಮಷಿನ್ ಮೇಲೆ ಬರೆದ ಆರೋಪದ ಮೇಲೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಟ್ರೈನಿ ಕೆಲಸಗಾರನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಈತನ ವಿರುದ್ಧ ದೇಶದ್ರೋಹದ ಆರೋಪದ ಮೇಲೆ ಇದೀಗ ಪ್ರಕರಣ ದಾಖಲಿಸಲಾಗಿದೆ ಎಂದು ಮಹಾರಾಷ್ಟ್ರ ಪೊಲೀಸರು ತಿಳಿಸಿದ್ದರು. ಬಂಧಿತನನ್ನು ಉಮರ್ ಶೇಕ್ ಎಂದು ಗುರುತಿಸಲಾಗಿದ್ದು, ಈತ ಚಿಕಲ್ತಾನ ಕೈಗಾರಿಕಾ ಎಸ್ಟೇಟ್‌ನಲ್ಲಿರುವ ಕ್ಲಚ್ ಪ್ಲೇಟ್ ತಯಾರಿಕಾ ಸಂಸ್ಥೆ ಎಕ್ಸೆಡಿ ಪ್ರೈವೇಟ್ ಲಿಮಿಟೆಡ್ನಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದ. ಸಂಸ್ಥೆಯ ಮಷಿನ್ ಮೇಲೆ ಈತ ಕೆಂಪು ಬಣ್ಣದ ಪೆನ್ ಸಹಾಯದಿಂದಾಗಿ ಪಾಕಿಸ್ತಾನ ಪರ ಹೇಳಿಕೆ ಬರೆದಿದ್ದಾರೆ. ಸಂಸ್ಥೆ ಗಮನಕ್ಕೆ ಬಂದ ಬಳಿಕ ಆಡಳಿತ ಮಂಡಳಿ ಉಮರ್ಗೆ ಈ ಕುರಿತು ನೋಟಿಸ್ ನೀಡಿತ್ತು. ಇದರಿಂದಾಗಿ ಈ ವಿಚಾರ ಬೆಳಕಿಗೆ ಬಂದಿದೆ.