ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Pratibha Prahlad Interview: ಬೆಂಗಳೂರಿನಲ್ಲಿ ಸಾಂಸ್ಕೃತಿಕ ಕೇಂದ್ರ; ಹೆಗಡೆ ಕನಸು ನನಸು ಮಾಡಲು ಹೊರಟಿದ್ದಾರೆ ಪ್ರತಿಭಾ ಪ್ರಹ್ಲಾದ್

ಪ್ರತಿಭಾ ಪ್ರಹ್ಲಾದ್‌ ಅವರು ಅಂತಾರಾಷ್ಟ್ರೀಯ ಖ್ಯಾತಿಯ ಕರ್ನಾಟಕದ ಹೆಮ್ಮೆಯ ಭರತನಾಟ್ಯ ಕಲಾವಿದೆ. ದೆಹಲಿಯ ಇಂಟರ್‌ನ್ಯಾಷನಲ್‌ ಆರ್ಟ್‌ ಫೆಸ್ಟಿವಲ್‌ ಆರಂಭಿಸಿದ ಶ್ರೇಯಸ್ಸು ಇವರದು. ಕೇಂದ್ರ ಸಂಗೀತ ನಾಟಕ ಅಕಾಡೆಮಿ ಸದಸ್ಯರಾಗಿ ವಿಭಿನ್ನವಾಗಿ ಕಾರ್ಯ ನಿರ್ವಹಿಸಿದವರು. ಮಾಜಿ ಮುಖ್ಯಮಂತ್ರಿ ದಿ. ರಾಮಕೃಷ್ಣ ಹೆಗಡೆ ಅವರ ಸಂಗಾತಿಯಾಗಿದ್ದ ಪ್ರತಿಭಾ ಪ್ರಹ್ಲಾದ್‌ ಅವರೀಗ ಹೆಗಡೆ ಹೆಸರಿನಲ್ಲಿ ಬೆಂಗಳೂರಿನಲ್ಲಿ ಸಾಂಸ್ಕೃತಿಕ ಕೇಂದ್ರ ಸ್ಥಾಪಿಸಲು ಶ್ರಮಿಸುತ್ತಿದ್ದಾರೆ. ತಮ್ಮ ಕಲಾ ಬದುಕಿನ ಕುರಿತು ಅವರು ವಿಶ್ವವಾಣಿ ಟಿವಿ ಜತೆ ಮಾತನಾಡಿದ್ದಾರೆ.

ಹೆಗಡೆ ಕನಸು ನನಸು ಮಾಡಲು ಹೊರಟಿದ್ದಾರೆ ಪ್ರತಿಭಾ ಪ್ರಹ್ಲಾದ್

Profile Prabhakara R Feb 23, 2025 6:00 AM
  • ವಿಶೇಷ ಸಂದರ್ಶನ: ವೈದೇಹಿ ಬಾಟಿ

ಬೆಂಗಳೂರು: ಪ್ರತಿಭಾ ಪ್ರಹ್ಲಾದ್‌ ಅವರು ಅಂತಾರಾಷ್ಟ್ರೀಯ ಖ್ಯಾತಿಯ ಕರ್ನಾಟಕದ ಹೆಮ್ಮೆಯ ಭರತನಾಟ್ಯ ಕಲಾವಿದೆ. ದೆಹಲಿಯ ಇಂಟರ್‌ನ್ಯಾಷನಲ್‌ ಆರ್ಟ್‌ ಫೆಸ್ಟಿವಲ್‌ ಆರಂಭಿಸಿದ ಶ್ರೇಯಸ್ಸು ಇವರದು. ಕೇಂದ್ರ ಸಂಗೀತ ನಾಟಕ ಅಕಾಡೆಮಿ ಸದಸ್ಯರಾಗಿ ವಿಭಿನ್ನವಾಗಿ ಕಾರ್ಯ ನಿರ್ವಹಿಸಿದವರು. ಮಾಜಿ ಮುಖ್ಯಮಂತ್ರಿ ದಿ. ರಾಮಕೃಷ್ಣ ಹೆಗಡೆ ಅವರ ಸಂಗಾತಿಯಾಗಿದ್ದ ಪ್ರತಿಭಾ ಪ್ರಹ್ಲಾದ್‌ (Pratibha Prahlad Interview) ಅವರು ಹೆಗಡೆ ಅವರ ಹೆಸರಿನಲ್ಲಿ ಸಾಂಸ್ಕೃತಿಕ ಕೇಂದ್ರ ಸ್ಥಾಪಿಸುವ, ಈ ಮೂಲಕ ಬೆಂಗಳೂರನ್ನು ಅಂತಾರಾಷ್ಟ್ರೀಯ ಸಾಂಸ್ಕೃತಿಕ ಹಬ್‌ ಆಗಿ ರೂಪಿಸುವ ಕನಸು ಕಂಡಿದ್ದಾರೆ. ಈ ಕೇಂದ್ರಕ್ಕೆ ಸರ್ಕಾರ ಈಗಾಗಲೇ ನಿವೇಶನ ನೀಡಿದೆ. ಅಂತಾರಾಷ್ಟ್ರೀಯ ದರ್ಜೆಯ ಸಭಾಂಗಣ ನಿರ್ಮಿಸಲು ಶ್ರಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಿಶ್ವವಾಣಿ ಟಿವಿ ಪ್ರತಿಭಾ ಪ್ರಹ್ಲಾದ್‌ ಅವರ ವಿಶೇಷ ಸಂದರ್ಶನ ನಡೆಸಿದೆ. ಸಂದರ್ಶನದ ಸಾರ ಇಲ್ಲಿದೆ.

ವಿಶ್ವವಾಣಿ: ರಾಮಕೃಷ್ಣ ಹೆಗಡೆ ಅವರ ಹೆಸರಿನಲ್ಲಿ ಸಾಂಸ್ಕೃತಿಕ ಕೇಂದ್ರ ಸ್ಥಾಪಿಸಲು ಮುಂದಾಗಿದ್ದೀರಿ. ಅದರ ರೂಪುರೇಷೆ ಏನು? ಕಾರ್ಯ ಚಟುವಟಿಕೆ ಹೇಗಿರುತ್ತದೆ? ಅಷ್ಟಕ್ಕೂ ಈ ಕೇಂದ್ರದ ಬಗ್ಗೆ ನಿಮ್ಮ ಕಲ್ಪನೆ ಏನು?

ಪ್ರತಿಭಾ ಪ್ರಹ್ಲಾದ್: ರಾಮಕೃಷ್ಣ ಹೆಗಡೆ ಅವರು 1990ರಲ್ಲಿ ʼಪ್ರಸಿದ್ಧ ಫೌಂಡೇಶನ್‌ʼ ಎಂಬ ಸಂಸ್ಥೆ ಸ್ಥಾಪಿಸಿದ್ದರು. ನಾವಿಬ್ಬರೂ ಆ ಸಂಸ್ಥೆಯ ಸ್ಥಾಪಕ ಟ್ರಸ್ಟಿಗಳಾಗಿದ್ದೆವು. ಆ ಸಂಸ್ಥೆಯ ಮೂಲಕ ಕರ್ನಾಟಕದಾದ್ಯಂತ ಸಾಕಷ್ಟು ಕಾರ್ಯಕ್ರಮಗಳನ್ನು ಮಾಡಿದ್ದೆವು. ಈ ಹಿಂದೆ ಹಂಪಿಯಲ್ಲಿ ಅದ್ಭುತವಾದ ನ್ಯಾಷನಲ್‌ ಟೂರಿಸಂ ಫೆಸ್ಟಿವಲ್‌ ಕಾರ್ಯಕ್ರಮ ನಡೆದಿತ್ತು. ಅದನ್ನು ಕೂಡ ʼಪ್ರಸಿದ್ಧ ಫೌಂಡೇಶನ್‌ʼ ಮೂಲಕವೇ ಆಯೋಜಿಸಿದ್ದೆವು. ಆ ಸಂಸ್ಥೆಗೆ ಸರ್ಕಾರ ಒಂದು ನಿವೇಶನ ಮಂಜೂರು ಮಾಡಿತ್ತು. ಆ ಜಾಗದಲ್ಲಿ ರಾಮಕೃಷ್ಣ ಹೆಗಡೆ ಹೆಸರಿನಲ್ಲಿ ಸಾಂಸ್ಕೃತಿಕ ಕೇಂದ್ರ ಕಟ್ಟಡವೊಂದನ್ನು ಕಟ್ಟಬೇಕೆಂಬ ಇಚ್ಛೆ ನನಗಿದೆ.

ಎಲ್ಲರಿಗೂ ತಿಳಿದಿರುವಂತೆ ಹೆಗಡೆ ಅವರು ಕರ್ನಾಟಕ ಕಂಡ ಅಪರೂಪದ ಮುಖ್ಯಮಂತ್ರಿ. ಅವರು ದೂರದೃಷ್ಟಿಯ ನಾಯಕ. ಅವರಿಗೆ ಕರ್ನಾಟಕದ ಬಗ್ಗೆ ಸಾಕಷ್ಟು ಕನಸುಗಳಿದ್ದವು. ಅದರಲ್ಲೂ ಬೆಂಗಳೂರನ್ನು ಸಾಂಸ್ಕೃತಿಕ ಕೇಂದ್ರವಾಗಿಸಬೇಕೆಂಬ ಹಂಬಲವಿತ್ತು. ಕಲೆ ಮತ್ತು ಸಾಂಸ್ಕೃತಿಕವಷ್ಟೇ ಅಲ್ಲದೆ ಸಾಹಿತ್ಯ ಕ್ಷೇತ್ರದಲ್ಲೂ ಬದಲಾವಣೆ ತರಲು ಬಯಸಿದ್ದರು. ʼಇಂಡಿಯಾ ಇಂಟರ್‌ ನ್ಯಾಷನಲ್‌ ಸೆಂಟರ್‌ʼ ರೀತಿ ಬೆಂಗಳೂರಿನ ಸಾಂಸ್ಕೃತಿಕ ಕೇಂದ್ರವನ್ನು ಬೆಳೆಸಬೇಕೆಂಬ ಆಸೆ ಅವರಿಗಿತ್ತು. ಬಹು ಕಲೆಗಳಿಗೆ ಪ್ರೋತ್ಸಾಹ ನೀಡಿ ಪ್ರತಿಭಾವಂತ ಕಲಾವಿದರಿಗೆ ವೇದಿಕೆ ಒದಗಿಸಬೇಕೆಂಬ ಬಯಕೆಯಿತ್ತು. ಈಗ ಅವರ ಕನಸನ್ನು ನನಸು ಮಾಡಲು ನಾನು ಹೊರಟಿದ್ದೇನೆ.



ಈಗಿನ ಹೊಸ ತಲೆಮಾರಿನ ಯುವಕರಿಗೆ ನಮ್ಮ ದೇಶದ ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ತಿಳಿಸಿಕೊಡಬೇಕು. ಕೇವಲ ಭರತನಾಟ್ಯ ಮತ್ತು ಸಂಗೀತ ಹೇಳಿಕೊಡದೆ ಅವರಿಗೆ ನಮ್ಮ ದೇಶದ ಶ್ರೀಮಂತ ಪರಂಪರೆಯ ಬಗ್ಗೆ ಹೇಳಿಕೊಡುವ ಅಗತ್ಯವಿದೆ. ಆ ನಿಟ್ಟಿನಲ್ಲಿ ಕಾರ್ಯ ಚಟುವಟಿಕೆಯನ್ನು ಆರಂಭಿಸಿದ್ದೇನೆ.

Pratibha Prahlad (11)

ವಿಶ್ವವಾಣಿ: ನಿಮ್ಮ ಈ ಕೆಲಸಕ್ಕೆ ಯಾರೆಲ್ಲ ಕೈ ಜೋಡಿಸಿದ್ದಾರೆ? ಏನೆಲ್ಲಾ ಯೋಜನೆಗಳಿವೆ?

ಪ್ರತಿಭಾ ಪ್ರಹ್ಲಾದ್:‌ ನನ್ನೊಂದಿಗೆ ಒಳ್ಳೆಯ ತಂಡವಿದೆ. ತಾಳ್ಮೆ, ಶ್ರದ್ಧೆಯಿಂದ ಕೆಲಸ ಮಾಡುವ ಜನರಿದ್ದಾರೆ. ಅವರಿಗೆ ನನ್ನ ಆಲೋಚನೆಗಳು ಅರ್ಥವಾಗಿವೆ. ನಾನು ಕಳೆದ 50 ವರ್ಷಗಳಿಂದ ಕಲಾ ಕ್ಷೇತ್ರದಲ್ಲಿರುವುದರಿಂದ ನನ್ನ ಸಂಪರ್ಕದಲ್ಲಿ ಸಾವಿರಾರು ಕಲಾವಿದರಿದ್ದಾರೆ. ಅವರೆಲ್ಲರೂ ನನ್ನ ಕೆಲಸಕ್ಕೆ ಕೈ ಜೋಡಿಸುತ್ತಾರೆ. ಸಾಂಸ್ಕೃತಿಕ ಕೇಂದ್ರ ಕಟ್ಟಡ ಕಟ್ಟಲು ನನ್ನಲ್ಲಿ ಹಣವಿಲ್ಲ. ಆದರೆ ಅದನ್ನು ನಡೆಸಿಕೊಂಡು ಹೋಗುವ ಶಕ್ತಿಯಿದೆ. ಇಂಥ ಉಪಯುಕ್ತ ಕೇಂದ್ರಕ್ಕೆ ಕರ್ನಾಟಕ ಸರ್ಕಾರದ ಸಹಕಾರ ನಿರೀಕ್ಷಿಸಿದ್ದೇನೆ.



ವಿಶ್ವವಾಣಿ: ಭರತನಾಟ್ಯ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಖ್ಯಾತಿ ನಿಮಗಿದೆ. ನಿಮ್ಮ ಈ ಸಾಧನೆ ಅನನ್ಯ. ನಿಮ್ಮ ಬಾಲ್ಯ ಹೇಗಿತ್ತು? ಈ ಕಲಾಯಾನ ಶುರುವಾದದ್ದು ಹೇಗೆ?

ಪ್ರತಿಭಾ ಪ್ರಹ್ಲಾದ್:‌ ನಾನು ಭರತನಾಟ್ಯವನ್ನು ಆಯ್ಕೆ ಮಾಡಿಕೊಳ್ಳಲಿಲ್ಲ. ಬದಲಾಗಿ ಭರತನಾಟ್ಯವೇ ನನ್ನನ್ನು ಆಯ್ಕೆ ಮಾಡಿಕೊಂಡಿತು. ಯಾಕೆಂದರೆ ನಮ್ಮ ಕುಟುಂಬದಲ್ಲಿ ಯಾರೂ ಕಲಾವಿದರಿರಲಿಲ್ಲ. ಅಮ್ಮ ಪ್ರೊಫೆಸರ್‌ ಆಗಿದ್ದರು. ತಂದೆ ಎಂಜಿನಿಯರ್.‌ ಅವರಿಗೆ ನನ್ನನ್ನು ಭರತನಾಟ್ಯ ಕಲಾವಿದೆ ಮತ್ತು ಗಾಯಕಿಯನ್ನಾಗಿಸುವ ಆಸೆಯಂತೂ ಇರಲಿಲ್ಲ. ಸಂಜೆ ನಾಲ್ಕು ಗಂಟೆಯಾಗುತ್ತಿದ್ದಂತೆ ನಮ್ಮ ಮನೆಯ ಬೀದಿಯಲ್ಲಿ ಥಯ ಥೈ ಥಕ ಥೈ ಎಂಬ ಸ್ವರ ಕಿವಿಗೆ ಬೀಳುತ್ತಿತ್ತು. ನನಗಾಗ ಕೇವಲ ನಾಲ್ಕೂವರೆ ವರ್ಷ. ಒಂದು ಸಣ್ಣ ಮನೆಯಲ್ಲಿ ಸುನಂದಾ ಎಂಬುವವರು ಸಾಕಷ್ಟು ವಿದ್ಯಾರ್ಥಿಗಳಿಗೆ ಭರತನಾಟ್ಯ ಕಲಿಸುತ್ತಿದ್ದರು. ನಾನು ಚಿಕ್ಕ ಹುಡುಗಿಯಾದ್ದರಿಂದ ಅವರು ನನಗೆ ಕಲಿಸಲು ಮನಸ್ಸು ಮಾಡಿರಲಿಲ್ಲ. ನಾನು ಸಂಜೆಯಾದರೆ ಅವರ ಮನೆಗೆ ಹೋಗಿ ಅಲ್ಲಿ ನಾಟ್ಯ ಮಾಡುತ್ತಿದ್ದವರನ್ನು ನೋಡಿ ಕಲಿಯುತ್ತಿದ್ದೆ. ಹೀಗೊಮ್ಮೆ ಅವರ ವಿದ್ಯಾರ್ಥಿಗಳು ದೊಡ್ಡ ವೇದಿಕೆಯಲ್ಲಿ ಪ್ರದರ್ಶನ ನೀಡಬೇಕಿತ್ತು. ಒಂದು ಹುಡುಗಿ ಸರಿಯಾಗಿ ಕಲಿತಿರಲಿಲ್ಲ. ಆಗ ಸುನಂದಾ ಅವರ ಗುರುಗಳಾದ ಲೋಕಯ್ಯ ಅವರು ನನ್ನನ್ನು ಆಯ್ಕೆ ಮಾಡಿದರು. ಈ ಹುಡುಗಿಗೆ ಅವಕಾಶ ಕೊಟ್ಟು ನೋಡು ಎಂದರು. ನಾನು ನೋಡುತ್ತಲೇ ಕಲಿತಿದ್ದ ವಿಷಯ ಅವರಿಗೆ ಗೊತ್ತಿತ್ತು.

Pratibha Prahlad (10)

ಅಮ್ಮನ ಬಳಿ ಗೆಜ್ಜೆ ಮತ್ತು ಕಾಸ್ಟ್ಯೂಮ್ಸ್‌ಗಾಗಿ ಹತ್ತು ರೂಪಾಯಿ ಪಡೆದು ಮೊದಲ ಬಾರಿಗೆ ವೇದಿಕೆ ಏರಿದೆ. ಅಲ್ಲಿಂದ ಈ ಜರ್ನಿ ಶುರುವಾಯಿತು. ಮುಂದೆ ಅಸಾಧಾರಣ ಕಲಾವಿದರಾದ ಮುತ್ತುಸ್ವಾಮಿ ಪಿಳ್ಳೈ, ಕಲಾನಿಧಿ ನಾರಾಯಣನ್‌, ವೆಂಪತಿ ಚಿನ್ನ ಸತ್ಯಂ ಇವರಿಂದ ಭರತನಾಟ್ಯ, ಕುಚುಪುಡಿ ಕಲಿತೆ.

ಕಲಿಯುವ ಸಲುವಾಗಿಯೇ ರೈಲಿನಲ್ಲಿ ಮದ್ರಾಸ್‌ಗೆ ಹೋಗಿ ಬರುತ್ತಿದ್ದೆ. 18 ವರ್ಷವಿದ್ದಾಗಲೇ ಈ ಕಲೆಯನ್ನು ವೃತ್ತಿಯಾಗಿ ಆಯ್ಕೆ ಮಾಡಿಕೊಂಡೆ. ಆದರೆ ನಮ್ಮ ಅಮ್ಮ ವಿದ್ಯಾಭ್ಯಾಸದ ಕಡೆಗೂ ಗಮನಕೊಡು ಎನ್ನುತ್ತಿದ್ದರು. ಹಾಗಾಗಿ ಜರ್ನಲಿಸಂ ಅಂಡ್‌ ಮಾಸ್‌ ಕಮ್ಯೂನಿಕೇಷನ್‌ ವಿಷಯದಲ್ಲಿ ಪದವಿ ಪಡೆದೆ. ಜರ್ನಲಿಸ್ಟ್‌ ಆಗಿಯೂ ಕೆಲಸ ಮಾಡಿದ ಅನುಭವವಿದೆ. ಟೈಮ್ಸ್‌ ಆಫ್ ಇಂಡಿಯಾ, ಡೆಕ್ಕನ್‌ ಹೆರಾಲ್ಡ್‌ ಪತ್ರಿಕೆಗಳಿಗೆ ಲೇಖನ ಬರೆಯುತ್ತಿದ್ದೆ. ಕ್ಯಾಮೆರಾ ಮತ್ತು ಎಡಿಟಿಂಗ್‌ ಕೆಲಸಗಳನ್ನು ಕೂಡ ಮಾಡಿದ್ದೇನೆ.

ಆದರೆ‌ ನನ್ನ ಅಂತಿಮ ಆಯ್ಕೆ ಭರತನಾಟ್ಯವೇ ಆಗಿತ್ತು. ಆರಂಭದಿಂದಲೂ ನನ್ನಲ್ಲೊಂದು ಕೊರಗಿತ್ತು. ಈ ಹಿಂದೆ ಭರತನಾಟ್ಯ ಕ್ಷೇತ್ರದಲ್ಲಿ ಕರ್ನಾಟಕದ ಯಾವ ಕಲಾವಿದರೂ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿರಲಿಲ್ಲ. ನಾನು ರಾಷ್ಟ್ರಮಟ್ಟದಲ್ಲಿ ಜನಪ್ರಿಯತೆ ಗಳಿಸಬೇಕೆಂಬ ಇಂಗಿತದೊಂದಿಗೆ ಪ್ರಾಮಾಣಿಕವಾಗಿ ಈ ಕಲೆಯನ್ನು ಒಲಿಸಿಕೊಂಡೆ. ಅಂದುಕೊಂಡಂತೆ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದೆ. ಕಳೆದ 58 ವರ್ಷಗಳಿಂದ ಈ ಕ್ಷೇತ್ರಕ್ಕೆ ನನ್ನನ್ನು ನಾನು ಅರ್ಪಿಸಿಕೊಂಡಿದ್ದೇನೆ.

ವಿಶ್ವವಾಣಿ: ನೀವು ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಸದಸ್ಯರಾಗಿ ಕೂಡ ಕಾರ್ಯ ನಿರ್ವಹಿಸಿದ್ದೀರಿ. ಆ ದಿನಗಳಲ್ಲಿ ನಮ್ಮ ರಾಜ್ಯದ ಕಲಾವಿದರ ಬಗ್ಗೆ ಕೇಂದ್ರ ಯಾವ ನಿಲುವನ್ನು ಇಟ್ಟುಕೊಂಡಿತ್ತು? ನೀವು ಸದಸ್ಯರಾದ ಮೇಲೆ ಏನೆಲ್ಲಾ ಬದಲಾವಣೆಗಳನ್ನು ತಂದಿರಿ?

ಪ್ರತಿಭಾ ಪ್ರಹ್ಲಾದ್: ‌ನನಗೆ ಅದು ಅಪರೂಪದ ಅವಕಾಶ. ಆಗೆಲ್ಲ ಕರ್ನಾಟಕದ ಕಲಾವಿದರನ್ನು ಕಡೆಗಣಿಸಲಾಗಿತ್ತು. ಲಾಬಿ ಮಾಡುವವರಿಗೆ ಮಾತ್ರ ವಿಶೇಷ ಸೌಲಭ್ಯ ಮತ್ತು ಅಕಾಡೆಮಿ ಪ್ರಶಸ್ತಿಗಳು ಸಿಗುತ್ತಿದ್ದವು. ಕರ್ನಾಟಕದಲ್ಲಿ ಯಾವ ಹಿರಿಯ ಮತ್ತು ಪ್ರತಿಭಾವಂತ ಕಲಾವಿದರಿಗೂ ಪ್ರಶಸ್ತಿ ದೊರೆತಿರಲಿಲ್ಲ. ನಾನು ನನ್ನ ಐದು ವರ್ಷಗಳ ಅವಧಿಯಲ್ಲಿ ವರ್ಷಕ್ಕೆ ರಾಜ್ಯದ ಐವರು ಕಲಾವಿದರನ್ನು ಗುರುತಿಸಿ ಪ್ರಶಸ್ತಿ ನೀಡಿದೆ. ಒಟ್ಟು ಇಪ್ಪತ್ತೈದು ಕಲಾವಿದರಿಗೆ ಅಕಾಡೆಮಿ ಪ್ರಶಸ್ತಿ ಬಂತು. ನಮ್ಮ ಕಲಾವಿದರು ರಾಷ್ಟ್ರಮಟ್ಟದಲ್ಲೂ ಹೆಸರು ಮಾಡಿದರು.

Pratibha Prahlad (9)

ವಿಶ್ವವಾಣಿ: ಕಲಾವಿದರ ಬಗ್ಗೆ ಹಲವರಿಗೆ ತಾತ್ಸಾರ ಭಾವನೆಯಿದೆ. ಯಾಕಿರಬಹುದು?

ಪ್ರತಿಭಾ ಪ್ರಹ್ಲಾದ್:‌ ಸಾಮಾನ್ಯವಾಗಿ ಎಲ್ಲ ಪೋಷಕರು ತಮ್ಮ ಮಕ್ಕಳು ಡಾಕ್ಟರ್‌ ಮತ್ತು ಎಂಜಿನಿಯರ್‌ ಆಗಬೇಕೆಂದು ಬಯಸುತ್ತಾರೆ. ತಮ್ಮ ಮಕ್ಕಳು ಕಲಾವಿದರಾಗಲು ಬಯಸಿದರೆ ಸಸಿಯಲ್ಲೇ ಚಿವುಟುವ ಕೆಲಸ ಮಾಡುತ್ತಾರೆ. ಸಮಾಜದಲ್ಲಿ ಕಲಾವಿದರನ್ನು ಗೌರವಿಸುವವರು ಕಡಿಮೆ. ಹಾಗಾಗಿ ಕಲಾವಿದರೆಂದರೆ ಕೆಲವರಿಗೆ ತಿರಸ್ಕಾರದ ಭಾವನೆ. ಕಲಾವಿದ ಒಂದು ಪರಂಪರೆಯ ಕೊಂಡಿ. ಅದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಕಲಾವಿದರನ್ನು ಗೌರವಿಸಬೇಕು. ಅವರಿಗೆ ಪ್ರೋತ್ಸಾಹ ನೀಡಬೇಕು. ಆಗ ಮಾತ್ರ ಅವರು ಮುಂದಿನ ತಲೆಮಾರನ್ನು ಕಲೆಯ ಕಡೆಗೆ ತರುತ್ತಾರೆ.

ವಿಶ್ವವಾಣಿ: ದೆಹಲಿಯ ಇಂಟರ್‌ನ್ಯಾಷನಲ್‌ ಆರ್ಟ್‌ ಫೆಸ್ಟಿವಲ್‌ ನಿಮ್ಮ ಕಲ್ಪನೆಯ ಕೂಸು. ಈ ಕೇಂದ್ರದ ಆಶಯ ಈಡೇರಿತೆ?

ಪ್ರತಿಭಾ ಪ್ರಹ್ಲಾದ್:‌ ಈ ಹಿಂದೆ ಕಲಾವಿದರು ಅವರದ್ದೇ ಸ್ವಂತ ಖರ್ಚಿನಲ್ಲಿ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದರು. ಅವರೇ ಆಹ್ವಾನ ಪತ್ರಿಕೆ ನೀಡಿ ಕಾರ್ಯಕ್ರಮಕ್ಕೆ ಆಹ್ವಾನಿಸುತ್ತಿದ್ದರು. ವೇದಿಕೆ ಮೇಲೆ ಕಾರ್ಯಕ್ರಮವನ್ನೂ ಅವರೇ ನೀಡಬೇಕಿತ್ತು. ಕೊನೆಗೆ ಕಾರ್ಯಕ್ರಮಕ್ಕೆ ಬಂದ ಅತಿಥಿಗಳನ್ನು ಬೀಳ್ಕೊಡಬೇಕಿತ್ತು. ಕಲಾವಿದರ ಶಕ್ತಿಯೆಲ್ಲ ಸೋರಿ ಹೋಗುತ್ತಿತ್ತು. ಕಲಾವಿದರನ್ನು ಗುರುತಿಸಿ ಅವರಿಗೆ ವೇದಿಕೆ ಕಲ್ಪಿಸಿ ಕಾರ್ಯಕ್ರಮ ಆಯೋಜಿಸುವವರು ಇರಲಿಲ್ಲ. ಪ್ರತಿ ವರ್ಷವೂ ಹತ್ತಾರು ಫೆಸ್ಟಿವಲ್‌ಗಳು ನಡೆಯುತ್ತಿದ್ದವು. ಎಲ್ಲಾ ಕಡೆಯೂ ಅದೇ ಕಲಾವಿದರು ಬರುತ್ತಿದ್ದರು. ದೇಶದಲ್ಲಿ ಸಾವಿರಾರು ಪ್ರತಿಭಾವಂತ ಕಲಾವಿದರಿದ್ದಾರೆ. ಅವರಿಗೆ ವೇದಿಕೆ ಸಿಗುತ್ತಿರಲಿಲ್ಲ. ಹಾಗಾಗಿ ದೆಹಲಿಯಲ್ಲಿ ಒಂದು ಫೆಸ್ಟಿವಲ್‌ ಮಾಡಬೇಕೆಂದು ತೀರ್ಮಾನಿಸಿದೆ. ಯಾಕೆಂದರೆ ರಾಜಧಾನಿಗೆ ಎಲ್ಲಾ ರೀತಿಯ ಕಲಾವಿದರು ಬರುತ್ತಾರೆ. ಅವರ ಪ್ರತಿಭೆಯನ್ನು ಸಾವಿರಾರು ಜನರು ಗುರುತಿಸುತ್ತಾರೆ. ಆ ಕಾರಣದಿಂದ ದೆಹಲಿ ಇಂಟರ್‌ನ್ಯಾಷನಲ್‌ ಆರ್ಟ್‌ ಫೆಸ್ಟಿವಲ್‌ ಆಯೋಜಿಸುತ್ತಾ ಬಂದೆವು. ಅಸಾಮಾನ್ಯ ಕಲಾವಿದರು ಮುಖ್ಯ ವಾಹಿನಿಗೆ ಬಂದರು. ಕಲಾ ರಸಿಕರು ಅವರನ್ನು ಪ್ರೋತ್ಸಾಹಿಸಿದರು. ನನ್ನ ಕಲ್ಪನೆಯ ಕೂಸು ಯಶಸ್ಸನ್ನು ಕಂಡಿತು.

Pratibha Prahlad (8)

ವಿಶ್ವವಾಣಿ: ನಿಮ್ಮ ಹಳೆಯ ಫೋಟೊಗಳನ್ನು ನೋಡುತ್ತಿದ್ದೆವು. ನೀವು ಸ್ಪುರದ್ರೂಪಿ. ನಿಮಗೆ ಸಿನಿಮಾ ಕ್ಷೇತ್ರಕ್ಕೆ ಬನ್ನಿ ಎಂದು ಯಾರೂ ಕರೆಯಲಿಲ್ಲವೇ?

ಪ್ರತಿಭಾ ಪ್ರಹ್ಲಾದ್:‌ ಗಿರೀಶ್‌ ಕಾರ್ನಾಡ್‌ ನಿರ್ದೇಶನದ ಉತ್ಸವ್‌ ಸಿನಿಮಾದಲ್ಲಿ ನಟಿಸಲು ಹೇಳಿದ್ದರು. ನನ್ನ ಅಭಿನಯದ ಶೂಟಿಂಗ್‌ ಕೂಡ ನಡೆದಿತ್ತು. ಆದರೆ ನಮ್ಮ ತಂದೆಗೆ ಸಿನಿಮಾ ನಟನೆಯ ಬಗ್ಗೆ ತೀವ್ರ ಅಸಮಾಧಾನವಿತ್ತು. ಸಿನಿಮಾದಲ್ಲಿ ನಟಿಸಕೂಡದು ಎಂದು ಕಟ್ಟುನಿಟ್ಟಾಗಿ ಹೇಳಿ ಬಿಟ್ಟರು. ತಂದೆಯ ಭಯದಿಂದ ಆ ಸಿನಿಮಾದ ಮುಂದಿನ ಶೂಟಿಂಗ್‌ಗೆ ಹೋಗಲಿಲ್ಲ.

ಈ ಸುದ್ದಿಯನ್ನೂ ಓದಿ | Pratibha Prahlad Interview: ರಾಮಕೃಷ್ಣ ಹೆಗಡೆ ಮತ್ತು ನನ್ನ ಅನುಬಂಧ ಪೂರ್ವಜನ್ಮದ ಬಂಧ: ಪ್ರತಿಭಾ ಪ್ರಹ್ಲಾದ್‌

ಆದರೆ ಎಂ ಎಸ್‌ ಸತ್ಯ ಅವರ ಸೀರಿಯಲ್‌ ಒಂದರಲ್ಲಿ ಭರತನಾಟ್ಯ ಕಲಾವಿದೆಯಾಗಿ ನಟಿಸಿದ್ದೆ. ಅದು ಸಾಕಷ್ಟು ಜನಪ್ರಿಯತೆ ಗಳಿಸಿತ್ತು. ಭರತನಾಟ್ಯ ಕಲಾವಿದೆಯ ಪಾತ್ರ ಸಿಕ್ಕರೆ ಪೋಷಕರು ಏನೂ ಹೇಳುತ್ತಿರಲಿಲ್ಲ. ಬೇರೆ ಪಾತ್ರವೆಂದರೆ ಸುತಾರಾಂ ಒಪ್ಪುತ್ತಿರಲಿಲ್ಲ. ಆರಂಭದಲ್ಲಿ ನೃತ್ಯ ಮಾಡುವುದೇ ತಪ್ಪು, ಇದನ್ನು ನಿಲ್ಲಿಸಿಬಿಡು ಎನ್ನುತ್ತಿದ್ದರು. ಮುಂದೆ ಹೇಗೋ ಸುಮ್ಮನಾದರು. ಹಾಗಾಗಿ ಸಿನಿಮಾ ರಂಗಕ್ಕೆ ಹೋಗಲಿಲ್ಲ. ನನಗೂ ಸಿನಿಮಾದ ಬಗ್ಗೆ ಅಂಥ ಮೋಹವಿರಲಿಲ್ಲ.