ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Pratibha Prahlad Interview: ರಾಮಕೃಷ್ಣ ಹೆಗಡೆ ಮತ್ತು ನನ್ನ ಅನುಬಂಧ ಪೂರ್ವಜನ್ಮದ ಬಂಧ: ಪ್ರತಿಭಾ ಪ್ರಹ್ಲಾದ್‌

Pratibha Prahlad Interview: ಪ್ರತಿಭಾ ಪ್ರಹ್ಲಾದ್‌ ಅವರು ಅಂತಾರಾಷ್ಟ್ರೀಯ ಖ್ಯಾತಿಯ ಕರ್ನಾಟಕದ ಹೆಮ್ಮೆಯ ಭರತನಾಟ್ಯ ಕಲಾವಿದೆ. ದೆಹಲಿಯ ಇಂಟರ್‌ನ್ಯಾಷನಲ್‌ ಆರ್ಟ್‌ ಫೆಸ್ಟಿವಲ್‌ ಆರಂಭಿಸಿದ ಶ್ರೇಯಸ್ಸು ಇವರದು. ಕೇಂದ್ರ ಸಂಗೀತ ನಾಟಕ ಅಕಾಡೆಮಿ ಸದಸ್ಯರಾಗಿ ವಿಭಿನ್ನವಾಗಿ ಕಾರ್ಯ ನಿರ್ವಹಿಸಿದವರು. ಮಾಜಿ ಮುಖ್ಯಮಂತ್ರಿ ದಿ. ರಾಮಕೃಷ್ಣ ಹೆಗಡೆ ಅವರ ಸಂಗಾತಿಯಾಗಿದ್ದ ಪ್ರತಿಭಾ ಪ್ರಹ್ಲಾದ್‌ ಅವರು ಹೆಗಡೆ ಜತೆಗಿನ ತಮ್ಮ 14 ವರ್ಷಗಳ ಸಾಂಗತ್ಯ ಬಗ್ಗೆ, ತಮ್ಮಿಬ್ಬರ ಆತ್ಮೀಯ ದಿನಗಳ ಬಗ್ಗೆ ವಿಶ್ವವಾಣಿ ಟಿವಿ ಸ್ಪೆಷಲ್ ಜತೆ ಮಕ್ತವಾಗಿ ಮಾತನಾಡಿದ್ದಾರೆ

ರಾಮಕೃಷ್ಣ ಹೆಗಡೆ-ನನ್ನ ಅನುಬಂಧ ಪೂರ್ವಜನ್ಮದ ಬಂಧ: ಪ್ರತಿಭಾ ಪ್ರಹ್ಲಾದ್‌

Profile Prabhakara R Feb 22, 2025 6:00 AM

| ವಿಶೇಷ ಸಂದರ್ಶನ: ವೈದೇಹಿ ಬಾಟಿ

ಬೆಂಗಳೂರು: ಪ್ರತಿಭಾ ಪ್ರಹ್ಲಾದ್‌ ಅವರು ಅಂತಾರಾಷ್ಟ್ರೀಯ ಖ್ಯಾತಿಯ ಕರ್ನಾಟಕದ ಹೆಮ್ಮೆಯ ಭರತನಾಟ್ಯ ಕಲಾವಿದೆ. ದೆಹಲಿಯ ಇಂಟರ್‌ನ್ಯಾಷನಲ್‌ ಆರ್ಟ್‌ ಫೆಸ್ಟಿವಲ್‌ ಆರಂಭಿಸಿದ ಶ್ರೇಯಸ್ಸು ಇವರದು. ಕೇಂದ್ರ ಸಂಗೀತ ನಾಟಕ ಅಕಾಡೆಮಿ ಸದಸ್ಯರಾಗಿ ವಿಭಿನ್ನವಾಗಿ ಕಾರ್ಯ ನಿರ್ವಹಿಸಿದವರು. ಮಾಜಿ ಮುಖ್ಯಮಂತ್ರಿ ದಿ. ರಾಮಕೃಷ್ಣ ಹೆಗಡೆ ಅವರ ಸಂಗಾತಿಯಾಗಿದ್ದ ಪ್ರತಿಭಾ ಪ್ರಹ್ಲಾದ್‌ ಅವರು (Pratibha Prahlad Interview) ಹೆಗಡೆ ಜತೆಗಿನ 14 ವರ್ಷಗಳ ಸಾಂಗತ್ಯ ಬಗ್ಗೆ ವಿಶ್ವವಾಣಿ ಟಿವಿ ಸ್ಪೆಷಲ್ ಜತೆ ಮಕ್ತವಾಗಿ ಮಾತನಾಡಿದ್ದಾರೆ. ಸಂದರ್ಶನದ ಸಾರ ಇಲ್ಲಿದೆ.

Pratibha Prahlad (1)

ವಿಶ್ವವಾಣಿ: ನೀವು ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆ ಅವರ ಸಂಗಾತಿಯಾಗಿದ್ದವರು. ನಿಮ್ಮ ಮತ್ತು ಅವರ ಮೊದಲ ಭೇಟಿ ಹೇಗಾಯಿತು? ಯಾವಾಗ ಆಯಿತು?

ಪ್ರತಿಭಾ ಪ್ರಹ್ಲಾದ್:‌ ನನಗೆ 26ರ ವಯಸ್ಸಿನಲ್ಲೇ ಭರತನಾಟ್ಯಕ್ಕೆ A+ ಗ್ರೇಡ್‌ ಬಂದಿತ್ತು. A+ ಗ್ರೇಡ್‌ ಬಂದ ಕಲಾವಿದರಿಗೆ ನ್ಯಾಷನಲ್‌ ಪ್ರೋಗ್ರಾಮ್‌ ಆಫ್‌ ಡ್ಯಾನ್ಸ್‌ನಲ್ಲಿ ಪ್ರದರ್ಶನ ನೀಡಲು ಅವಕಾಶ ಸಿಗುತ್ತಿತ್ತು. ಕಾರ್ಯಕ್ರಮವನ್ನು ದೆಹಲಿಯಲ್ಲಿ ಆಯೋಜಿಸುತ್ತಿದ್ದರು. ನಾನು ಮೊದಲ ಬಾರಿಗೆ ಅಲ್ಲಿ ಪ್ರದರ್ಶನ ನೀಡಿದ್ದೆ. ಸಾವಿರಾರು ಜನ ಸೇರಿದ್ದರು. ಆಗ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆ ಅವರು ಕಾರ್ಯ ನಿಮಿತ್ತ ದೆಹಲಿಗೆ ಬಂದಿದ್ದರು. ಆಕಸ್ಮಿಕವಾಗಿ ನನ್ನ ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಜಗದೋದ್ಧಾರನ ಹಾಡಿಗೆ ನಾನು ನಾಟ್ಯವಾಡಿದ್ದೆ. ಅದನ್ನು ಅವರು ತುಂಬಾ ಇಷ್ಟಪಟ್ಟಿದ್ದರು. ಅಷ್ಟೇ ಅಲ್ಲದೆ ನನ್ನನ್ನು ನೇರ ಕಂಡು ಶುಭ ಹಾರೈಸಿದ್ದರು. ಅಲ್ಲಿಂದ ಬೆಂಗಳೂರಿಗೆ ಹೊರಟವರೇ ಅವರ ಕಚೇರಿ ಸಿಬ್ಬಂದಿಗೆ ಹೇಳಿ ನನ್ನ ವಿವರ ತರಿಸಿಕೊಂಡರು. ನಮ್ಮ ಮನೆಯ ಲ್ಯಾಂಡ್‌ಲೈನ್‌ಗೆ ಕರೆ ಮಾಡಿದರು. ನನ್ನ ಅಮ್ಮ ಕರೆ ಸ್ವೀಕರಿಸಿದಾಗ "ನಾನು ರಾಮಕೃಷ್ಣ ಹೆಗಡೆ. ಪ್ರತಿಭಾ ಅವರಿಗೆ ಫೋನ್‌ ಕೊಡಿʼʼ ಎಂದರು. ನನ್ನ ಅಮ್ಮ ಮತ್ತು ನನ್ನ ತಮ್ಮ ಇದೊಂದು ಹುಸಿ ಕರೆ ಇರಬೇಕು ಎಂದು ತಮಾಷೆ ಮಾಡಿದರು. ನಾನು ಮಾತನಾಡಿದೆ. ನಿಜಕ್ಕೂ ಕರೆ ಮಾಡಿದ್ದು ಹೆಗಡೆ ಅವರೇ ಎಂದು ತಿಳಿಯಿತು. ಅವರು ಮತ್ತೊಮ್ಮೆ ಶುಭಾಶಯ ತಿಳಿಸಿ, ನನ್ನ ಕಲೆಗೆ ಮೆಚ್ಚುಗೆ ಸೂಚಿಸಿದರು. ಮೊದಲ ಬಾರಿಗೆ ಇಂಡಿಯಾ ಇಂಟರ್‌ ನ್ಯಾಷನಲ್‌ ಸೆಂಟರ್‌ನಲ್ಲಿ ಪ್ರದರ್ಶನ ನೀಡಲು ಅವಕಾಶ ಕೊಡಿಸಿದರು. ಅಲ್ಲಿಗೆ ಅವರೂ ಬಂದಿದ್ದರು. ನಮ್ಮ ಬಾಂಧವ್ಯ ಬೆಳೆಯುತ್ತಾ ಹೋಯಿತು. ಇದಾದ ಬಳಿಕ ಅವರ ನಿವಾಸಕ್ಕೆ ಸಾಕಷ್ಟು ಬಾರಿ ಔತಣಕೂಟಕ್ಕೆ ಆಹ್ವಾನಿಸಿದರು. ಆಗೆಲ್ಲ ಅವರ ಮನೆಗೆ ಗಿರೀಶ್‌ ಕಾರ್ನಾಡ್‌, ಎಂ ಎಸ್‌ ಸತ್ಯು, ಅನಂತನಾಗ್‌, ಶಂಕರ್‌ನಾಗ್‌, ಅರುಂಧತಿ ನಾಗ್‌, ಕ್ರಿಕೆಟಿಗ ಜಿ.ಆರ್‌. ವಿಶ್ವನಾಥ್‌ ಹೀಗೆ ತುಂಬಾ ಜನರು ಬರುತ್ತಿದ್ದರು. ನನ್ನನ್ನು ನನ್ನ ತಂದೆಯೇ ಅವರ ಮನೆಗೆ ಡ್ರಾಪ್‌ ಮಾಡುತ್ತಿದ್ದರು. ಒಂದು ಗಂಟೆಯಾಗುವುದೇ ತಡ ಕರೆದುಕೊಂಡು ಹೋಗಲು ಬಂದು ಬಿಡುತ್ತಿದ್ದರು. ಆದರೂ ಬೇರೆ ಬೇರೆ ಸಂದರ್ಭಗಳಲ್ಲಿ ಇಬ್ಬರೂ ಭೇಟಿಯಾಗುತ್ತಿದ್ದೆವು.

Pratibha Prahlad (4)

ವಿಶ್ವವಾಣಿ: ನಿಮ್ಮಿಬ್ಬರಿಗೂ 36 ವರ್ಷಗಳ ವಯಸ್ಸಿನ ಅಂತರವಿತ್ತು. ಆ ಕಾಲಕ್ಕೆ ರಾಮಕೃಷ್ಣ ಹೆಗಡೆ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ನೀವೂ ನಿಮ್ಮ ಕಲಾ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಿರಿ. ಕಾರ್ಯ ಒತ್ತಡಗಳ ಮಧ್ಯೆಯೂ ನಿಮ್ಮ ಭೇಟಿ ಹೇಗೆ ಸಾಧ್ಯವಾಗುತ್ತಿತ್ತು? ನಿಮ್ಮಿಬ್ಬರ ನಡುವೆ ಸಂಬಂಧ ಬೆಳೆದದ್ದು ಹೇಗೆ?

ಪ್ರತಿಭಾ ಪ್ರಹ್ಲಾದ್: ಎಲ್ಲವೂ ಋಣಾನುಬಂಧ. ಹೋದ ಜನ್ಮದಲ್ಲೇ ನಿಶ್ಚಯವಾಗಿತ್ತು ಎಂದು ಕಾಣುತ್ತದೆ. ಹಾಗಾಗಿಯೇ ಅಷ್ಟು ವಯಸ್ಸಿನ ಅಂತರವಿದ್ದರೂ ನಮ್ಮ ನಡುವೆ ಸಂಬಂಧ ಬೆಳೆಯಿತು. ನನ್ನ ಮತ್ತು ಅವರ ನಡುವೆ ಕೊನೆಯವರೆಗೂ ಮನಃಸ್ತಾಪಗಳಾಗಲಿಲ್ಲ.



ಇನ್ನು ನೀವು ಹೇಳಿದಂತೆ ಇಬ್ಬರಿಗೂ ಕಾರ್ಯ ಒತ್ತಡಗಳಿದ್ದವು. ಅವರು ತಮ್ಮ ರಾಜಕೀಯ ಜೀವನದಲ್ಲಿ ಬ್ಯುಸಿ ಇರುತ್ತಿದ್ದರು. ನಾನು ತಿಂಗಳಲ್ಲಿ ಹತ್ತಾರು ರಾಜ್ಯಗಳಿಗೆ ಪ್ರದರ್ಶನ ನೀಡಲು ಹೋಗಬೇಕಿತ್ತು. ಆದರೆ ನಮ್ಮ ನಡುವೆ ಒಂದು ಒಪ್ಪಂದವಾಗಿತ್ತು. ಅವರ ಹುಟ್ಟುಹಬ್ಬ, ನನ್ನ ಹುಟ್ಟುಹಬ್ಬ ಮತ್ತು ಹೊಸವರ್ಷದ ದಿನ ಇಬ್ಬರೂ ಭೇಟಿಯಾಗಬೇಕೆನ್ನುವುದೇ ಆ ಒಪ್ಪಂದ. ನಾವು ಒಳ್ಳೆಯ ಕ್ಷಣಗಳನ್ನು ಕಳೆಯುತ್ತಿದ್ದೆವು. ಬೇರೆ ಬೇರೆ ಸಂದರ್ಭಗಳಲ್ಲೂ ಭೇಟಿಯಾಗುತ್ತಿದ್ದೆವು. ಬೆಂಗಳೂರು ಮತ್ತು ಮದ್ರಾಸ್‌ನಲ್ಲಿ ನನ್ನ ಪ್ರದರ್ಶನವಿದ್ದರೆ ಅಲ್ಲಿಗೆ ಹೆಗಡೆ ಅವರು ಬರುತ್ತಿದ್ದರು.

Pratibha Prahlad (3)

ವಿಶ್ವವಾಣಿ: ನಿಮಗೆ ಹೆಗಡೆ ಅವರು ಅಷ್ಟು ಇಷ್ಟವಾಗಲು ಕಾರಣವೇನು? ಅವರ ಯಾವ ಸ್ವಭಾವ ನಿಮಗೆ ಹಿಡಿಸಿತು?

ಪ್ರತಿಭಾ ಪ್ರಹ್ಲಾದ್:‌ ಅವರ ಸಂಪೂರ್ಣ ವ್ಯಕ್ತಿತ್ವವೇ ನನಗೆ ಇಷ್ಟವಾಗಿತ್ತು. ಅವರು ಯಾರ ಬಗ್ಗೆಯೂ ಕೆಟ್ಟದ್ದು ಮಾತನಾಡುತ್ತಿರಲಿಲ್ಲ. ಕೆಟ್ಟ ಆಲೋಚನೆಯನ್ನೂ ಮಾಡುತ್ತಿರಲಿಲ್ಲ. ಅದೆಂಥ ಕಠಿಣ ಸಂದರ್ಭದಲ್ಲೂ ಯಾರಿಗೂ ಕೇಡು ಬಯಸಲಿಲ್ಲ. ದ್ರೋಹ ಬಗೆಯಲಿಲ್ಲ. ಅವರಿಗೆ ವಂಚನೆ ಗೊತ್ತಿರಲಿಲ್ಲ. ತಮ್ಮ ಸುತ್ತಮುತ್ತಲಿನ ಜನರನ್ನು ಅತ್ಯಂತ ಪ್ರೀತಿ ಮತ್ತು ಗೌರವದಿಂದ ಕಾಣುತ್ತಿದ್ದರು. ದೇವೇಗೌಡರಿಗೂ ಅವರು ಕೇಡು ಬಯಸಲಿಲ್ಲ. ಬಹುಮುಖ್ಯವಾಗಿ ಅವರಿಗೆ ಮಹಿಳೆಯರ ಮೇಲೆ ವಿಶೇಷವಾದ ಗೌರವವಿತ್ತು. ಸಂಬಂಧಗಳಿಗೆ ಬೆಲೆ ಕೊಡುತ್ತಿದ್ದರು. ಅವರು ಜಂಟಲ್‌ಮ್ಯಾನ್‌ ಅಲ್ಲ, ಸೂಪರ್‌ ಜಂಟಲ್‌ಮ್ಯಾನ್. ಆ ಕಾಲಕ್ಕೆ ನಮ್ಮಿಬ್ಬರ ಸಂಬಂಧದ ಬಗ್ಗೆ ಪತ್ರಿಕೆಗಳು ಇಲ್ಲಸಲ್ಲದ್ದು ಬರೆದವು. ನೂರಾರು ಜನರು ಬಾಯಿಗೆ ಬಂದಹಾಗೆ ಮಾತನಾಡಿದರು. ಆದರೆ ಅವರು ನನ್ನನ್ನು ಕುಗ್ಗಲು ಬಿಡಲಿಲ್ಲ. ಕೊನೆಯವರೆಗೂ ನನ್ನನ್ನು ನೋಯಿಸಲಿಲ್ಲ. ನನ್ನ ಯಾವ ಕೆಲಸಗಳಿಗೂ ಅಡ್ಡಿ ಬಂದವರಲ್ಲ. ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದರು.

Pratibha Prahlad (6)

ವಿಶ್ವವಾಣಿ: ರಾಮಕೃಷ್ಣ ಹೆಗಡೆ ಅವರೊಂದಿಗೆ ನೀವು ಕಳೆದ ಅಮೂಲ್ಯ ಮತ್ತು ಜೀವನದಲ್ಲಿ ಎಂದೂ ಮರೆಯಲಾಗದ ಕ್ಷಣವಿದ್ದರೆ ಅದು ಯಾವುದು?

ಪ್ರತಿಭಾ ಪ್ರಹ್ಲಾದ್: ಅವರೊಂದಿಗೆ ಕಳೆದ ಹದಿನಾಲ್ಕು ವರ್ಷಗಳು ಕೂಡ ನನ್ನ ಜೀವನದ ಅಮೂಲ್ಯ ಕ್ಷಣಗಳು. ಅವರು ನನ್ನನ್ನು ಅತೀವವಾಗಿ ಪ್ರೀತಿಸುತ್ತಿದ್ದರು. ನನ್ನ ಭಾವನೆಗಳನ್ನು ಅರ್ಥ ಮಾಡಿಕೊಳ್ಳುತ್ತಿದ್ದರು. ನನ್ನ ಪ್ರಯತ್ನಗಳಿಗೆ ಜೊತೆಯಾಗುತ್ತಿದ್ದರು. ಜೊತೆಗಿರುವವರನ್ನು ಚೆನ್ನಾಗಿ ನೋಡಿಕೊಳ್ಳುವ ಗುಣ ಅವರಿಗೆ ಒಗ್ಗಿತ್ತು. ಅವರೊಂದಿಗೆ ಇದ್ದ ಅಷ್ಟೂ ಕ್ಷಣಗಳನ್ನು ನಾನು ಜೀವನದಲ್ಲಿ ಮರೆಯಲಾರೆ. ಮುಖ್ಯವಾಗಿ ನಾನು ಅವರ ಅಧಿಕಾರ ಮತ್ತು ಹಣಕ್ಕೆ ಆಸೆಪಟ್ಟವಳಲ್ಲ. ನನಗೆ ಅದು ಬೇಕಾಗಿಯೂ ಇರಲಿಲ್ಲ. ಸ್ವಾತಂತ್ರ್ಯವಾಗಿ ಬದುಕುತ್ತಿದ್ದೆ. ನನಗೆ ಹೆಗಡೆ ಅವರ ಪ್ರೀತಿಯಷ್ಟೇ ಸಾಕಿತ್ತು. ನನ್ನ ಸ್ವಭಾವ ಅವರಿಗೆ ಹಿಡಿಸಿತ್ತು. ಹಾಗಾಗಿ ನನ್ನನ್ನು ಹೆಚ್ಚು ಗೌರವಿಸುತ್ತಿದ್ದರು.

ವಿಶ್ವವಾಣಿ: ಚಿರಂತನ್ ಮತ್ತು ಚಿರಾಯು ನಿಮ್ಮ ಅವಳಿ ಮಕ್ಕಳು. ಅವರ ಜೊತೆಗೆ ರಾಮಕೃಷ್ಣ ಹೆಗಡೆ ಅವರ ಒಡನಾಟ ಹೇಗಿತ್ತು? ಅವರೊಂದಿಗೆ ಹೇಗೆ ಸಮಯ ಕಳೆಯುತ್ತಿದ್ದರು?

ಪ್ರತಿಭಾ ಪ್ರಹ್ಲಾದ್: ಹೆಗಡೆ ಅವರಿಗೆ ಚಿರಂತನ್‌ ಮತ್ತು ಚಿರಾಯು ಕಂಡರೆ ಸಿಕ್ಕಾಪಟ್ಟೆ ಪ್ರೀತಿಯಿತ್ತು. ಸಾಕಷ್ಟು ಸಮಯವನ್ನು ಮಕ್ಕಳೊಂದಿಗೆ ಕಳೆದಿದ್ದಾರೆ. ನಾನು ಮೂರು ತಿಂಗಳು ಬಾಣಂತಿ ಇದ್ದಾಗಲೇ ಭರತನಾಟ್ಯ ಪ್ರದರ್ಶನ ನೀಡಲು ಪ್ರಯಾಣ ಮಾಡುತ್ತಿದ್ದೆ. ಅದರ ಬಗ್ಗೆ ಅವರಿಗೆ ಅಸಮಾಧಾನವಿತ್ತು. ಆದರೆ ಎಂದೂ ಬೈದವರಲ್ಲ. ಆಗೆಲ್ಲಾ ಮಕ್ಕಳಿಗೆ ಸ್ನಾನ ಮಾಡಿಸಿ, ಬಟ್ಟೆ ಹಾಕಿ ಅವರೇ ಊಟ ಮಾಡಿಸುತ್ತಿದ್ದರು. ಅವರಿಗೆ ಖುಷಿಯಿತ್ತು. ಮಕ್ಕಳನ್ನು ನೋಡಿದಾಗಲೆಲ್ಲ ಭಾವುಕರಾಗುತ್ತಿದ್ದರು. ಕೊನೆ ಕೊನೆಯಲ್ಲಿ ಅವರ ಆರೋಗ್ಯ ತೀವ್ರ ಹದಗೆಟ್ಟಾಗ ಚಿರಂತನ್‌ ಚಿರಾಯುವಿಗೆ ಪತ್ರ ಬರೆದಿದ್ದರು. "ನಿಮ್ಮ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಿ. ಅವಳು ನಿಮ್ಮನ್ನು ಸಾಕಲು ತುಂಬಾ ಕಷ್ಟಪಡುತ್ತಿದ್ದಾಳೆ. ನಿಮ್ಮ ಬೆಳವಣಿಗೆಯನ್ನು ಎಲ್ಲೋ ನಿಂತು ನೋಡುತ್ತೇನೆ" ಎಂದು ಬರೆದಿದ್ದರು. ಆ ಪತ್ರ ಓದಿ ನನಗೆ ಅಳು ಬಂದಿತ್ತು. ಅವರು ಅಷ್ಟುಬೇಗ ನಮ್ಮನ್ನು ಬಿಟ್ಟು ಹೋಗುತ್ತಾರೆ ಎಂದುಕೊಂಡಿರಲಿಲ್ಲ. ಅವರಿಲ್ಲ ಎಂಬುದನ್ನು ಒಪ್ಪಿಕೊಳ್ಳಲು ಈಗಲೂ ಆಗುತ್ತಿಲ್ಲ. ಇರುವಷ್ಟು ದಿನವೂ ಮಕ್ಕಳೊಂದಿಗೆ ಒಳ್ಳೆಯ ಕ್ಷಣಗಳನ್ನು ಕಳೆದಿದ್ದಾರೆ.

Pratibha Prahlad (5)

ವಿಶ್ವವಾಣಿ: ರಾಮಕೃಷ್ಣ ಹೆಗಡೆ ಅವರನ್ನು ಅಧಿಕೃತವಾಗಿ ಮದುವೆಯಾಗಬೇಕಿತ್ತು ಎಂದು ನಿಮಗೆ ಅನಿಸಲೇ ಇಲ್ಲವೇ? ಆ ನಿರ್ಧಾರವನ್ನು ಯಾಕೆ ನೀವು ತೆಗೆದುಕೊಳ್ಳಲಿಲ್ಲ?

ಪ್ರತಿಭಾ ಪ್ರಹ್ಲಾದ್:‌ ರಾಮಕೃಷ್ಣ ಹೆಗಡೆ ಅವರಿಗೆ ಈ ಮೊದಲೇ ಮದುವೆಯಾಗಿತ್ತು. ಶಕುಂತಲಾ ಅವರೊಂದಿಗೆ ಸುದೀರ್ಘ ದಾಂಪತ್ಯ ಜೀವನವನ್ನು ನಡೆಸಿದ್ದರು. ಹೆಗಡೆ ಅವರಿಗೆ ಡಿವೋರ್ಸ್‌ ಕೊಡುವುದು ಸಾಧ್ಯವಿರಲಿಲ್ಲ. ಹಾಗೆ ನೋಡಿದರೆ ನನಗೆ ಅಧಿಕೃತವಾಗಿ ಮದುವೆಯಾಗಲು ಇಷ್ಟವಿರಲಿಲ್ಲ. ಯಾಕೆಂದರೆ ಹಿಂದೂ ವಿವಾಹ ಕಾಯ್ದೆ ಪ್ರಕಾರ ಗಂಡಸು ಒಬ್ಬ ಮಹಿಳೆಯನ್ನು ಮಾತ್ರ ವಿವಾಹವಾಗಬೇಕು. ನಾನು ಮದುವೆಯಾದರೂ ಎರಡನೇ ಹೆಂಡತಿ ಅನ್ನಿಸಿಕೊಳ್ಳುತ್ತೇನೆ. ಕಾನೂನಾತ್ಮಕವಾಗಿಯೂ ಅಷ್ಟು ಹಕ್ಕುಗಳಿರುವುದಿಲ್ಲ. ನಾವು ಮದುವೆಯಾಗದಿದ್ದರೂ ಚೆನ್ನಾಗಿದ್ದೆವು. ಪರಸ್ಪರ ಪ್ರೀತಿ ಮತ್ತು ನಂಬಿಕೆಯಿತ್ತು. ಸಂಬಂಧ ಗಟ್ಟಿಯಾಗಿತ್ತು. ಇಷ್ಟೆಲ್ಲಾ ಇದ್ದಮೇಲೆ ಮದುವೆ ಯಾಕೆ? ಇಷ್ಟಕ್ಕೂ ಮದುವೆ ಎನ್ನುವುದು ಒಂದು ಕರಾರು, ಜವಾಬ್ದಾರಿ ಅಷ್ಟೇ. ಅಧಿಕೃತವಾಗಿ ಮದುವೆ ಆಗುವುದು ಅಂದರೆ ಅದೊಂದು ಲಿಖಿತ ಕಾಗದದ ಚೂರು ಅಷ್ಟೇ. ನನ್ನ ಮತ್ತು ರಾಮಕೃಷ್ಣ ಹೆಗಡೆಯವರ ಸಂಬಂಧ ಇದನ್ನೆಲ್ಲ ಮೀರಿದ್ದು.

Pratibha Prahlad (2)

ವಿಶ್ವವಾಣಿ: ನಿಮ್ಮ ಮತ್ತು ರಾಮಕೃಷ್ಣ ಹೆಗಡೆ ಅವರ ಸಂಬಂಧವನ್ನು ಹೆಗಡೆ ಅವರ ವಿರೋಧಿ ಬಣದವರು ರಾಜಕೀಯ ಅಸ್ತ್ರವಾಗಿಸಿಕೊಂಡಿದ್ದರು. ನಿಮ್ಮಿಬ್ಬರ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿದ್ದವು. ಆಗೆಲ್ಲಾ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತಿದ್ದಿರಿ?

ಪ್ರತಿಭಾ ಪ್ರಹ್ಲಾದ್: ನನಗೆ ನಗು ಬರುತ್ತಿತ್ತು. ನನಗೆ ಮಾಡಲು ಸಾಕಷ್ಟು ಕೆಲಸಗಳಿದ್ದವು. ಅದರ ಬಗ್ಗೆ ತಲೆಕೆಡಿಸಿಕೊಳ್ಳಲೂ ಆಗುತ್ತಿರಲಿಲ್ಲ. ಅವರಿಗೆಲ್ಲಾ ನಮ್ಮ ಬಗ್ಗೆ ಮಾತನಾಡಲು ಎಷ್ಟೆಲ್ಲಾ ಸಮಯವಿದೆ ಎಂದುಕೊಳ್ಳುತ್ತಿದ್ದೆ. ಮಾಡಲು ಏನೂ ಕೆಲಸವಿಲ್ಲದವರು ಮಾತ್ರ ನಮ್ಮ ಬಗ್ಗೆ ಮಾತನಾಡುತ್ತಾರೆ. ಅಂಥವರ ಬಗ್ಗೆ ಗಮನ ಕೊಡಬಾರದು. ಮಾತನಾಡುವವರು ಬೇಕಾದದ್ದು ಮಾತನಾಡಲಿ ಎಂದು ಸುಮ್ಮನಾಗುತ್ತಿದ್ದೆ. ರಾಮಕೃಷ್ಣ ಹೆಗಡೆ ಅವರು ಕೂಡ ಅಷ್ಟಾಗಿ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ನಮ್ಮ ಸಂಬಂಧಕ್ಕೆ ನಾವಿಬ್ಬರೇ ಜವಾಬ್ದಾರರು ಅಲ್ಲವಾ? ಸಾರ್ವಜನಿಕ ವ್ಯಕ್ತಿಗಳಾಗಿ ನಾವಿಬ್ಬರೂ ಇದಕ್ಕೆ ದುಬಾರಿ ಬೆಲೆ ತೆತ್ತಿದ್ದೇವೆ. ಬೇರೆಯವರಿಗೆ ಏನು ಹಕ್ಕಿದೆ ನಮ್ಮ ಸಂಬಂಧವನ್ನ ಪ್ರಶ್ನಿಸೋಕೆ?

ವಿಶ್ವವಾಣಿ: ರಾಮಕೃಷ್ಣ ಹೆಗಡೆ ಅವರು ಈ ರಾಜ್ಯ ಕಂಡ ಅತ್ಯಂತ ಜನಪ್ರಿಯ ಮುಖ್ಯಮಂತ್ರಿ. ಅವರ ರಾಜಕೀಯ ಏಳುಬೀಳುಗಳನ್ನ ನೀವು ಹೇಗೆ ವ್ಯಾಖ್ಯಾನಿಸುತ್ತೀರಿ?

ಪ್ರತಿಭಾ ಪ್ರಹ್ಲಾದ್:‌ ಈ ಬಗ್ಗೆ ನಾನು ವಿವರವಾಗಿ ಪುಸ್ತಕ ಬರೆಯುತ್ತಿದ್ದೇನೆ. ಹೆಗಡೆಯವರ ಹಿಂದೆ ಮುಂದೆ ಏನೇನು ಕತೆಗಳು ನಡೀತಾ ಇತ್ತು ಎಂಬ ಬಗ್ಗೆ ವಿವರವಾಗಿ ಬರೆಯಲಿದ್ದೇನೆ. ವಿ ಪಿ ಸಿಂಗ್‌, ಚಂದ್ರಶೇಖರ್‌, ದೇವೇಗೌಡ, ಐ ಕೆ ಗುಜ್ರಾಲ್‌, ವಾಜಪೇಯಿ ಸೇರಿದಂತೆ ಐದು ಪ್ರಧಾನಮಂತ್ರಿಗಳು ಆ ದಿನಗಳಲ್ಲಿ ನಮ್ಮ ಮನೆಗೆ ಬರುತ್ತಿದ್ದರು. ರಾಷ್ಟ್ರಪತಿ, ಉಪ ರಾಷ್ಟ್ರಪತಿಗಳೂ ಬರುತ್ತಿದ್ದರು. ತಿಂಗಳಲ್ಲಿ ಹತ್ತು, ಹದಿನೈದು ಔತಣಕೂಟಗಳು ನಮ್ಮ ಮನೆಯಲ್ಲಿ ನಡೆಯುತ್ತಿದ್ದವು. ಮೈತ್ರಿಕೂಟ ಸರ್ಕಾರದ ಪ್ರಯೋಗ ಕಾಲ ಅದು. ರಾಜೀವ್‌ ಗಾಂಧಿ ಹತ್ಯೆ ನಡೆಯಿತು. ಹೆಗಡೆಯವರು ಬಾಗಲಕೋಟೆ ಲೋಕಸಭೆ ಚುನಾವಣೆಯಲ್ಲಿ ಸೋತರು. ಆ ದಿನಗಳಲ್ಲಿ ಹೆಗಡೆಯವರ ರಾಜಕೀಯ ಜೀವನ ಮತ್ತು ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಪಲ್ಲಟಗಳಾದವು. ಇವನ್ನೆಲ್ಲ ನಾನು ಹತ್ತಿರದಿಂದ ಕಂಡಿದ್ದೇನೆ. ಈ ಬಗ್ಗೆ ವಿವರವಾಗಿ ಬರೆಯಲಿದ್ದೇನೆ.

ವಿಶ್ವವಾಣಿ: ರಾಮಕೃಷ್ಣ ಹೆಗಡೆ ಅವರು ಬಹುಮತ ಪಡೆದು ಮುಖ್ಯತ್ರಿಯಾದರೂ ಎರಡು ಬಾರಿ ರಾಜೀನಾಮೆ ನೀಡಬೇಕಾದ ಪರಿಸ್ಥಿತಿ ಎದುರಾಯಿತು. ಅವರ ಪಕ್ಷವೇ ಅವರನ್ನು ಉಚ್ಚಾಟನೆ ಮಾಡಿತ್ತು. ಆಗೆಲ್ಲಾ ನೀವು ಅವರಿಗೆ ಸಲಹೆಗಳನ್ನು ನೀಡುತ್ತಿದ್ರಾ?

ಪ್ರತಿಭಾ ಪ್ರಹ್ಲಾದ್:‌ ನಾನು ಸಲಹೆಗಳನ್ನು ಕೊಟ್ಟರೂ ಅವರು ಕೇಳುತ್ತಾ ಇರಲಿಲ್ಲ. ಆದರೆ ಮೊಬೈಲ್‌ ಟಾಪಿಂಗ್‌ ವಿಷಯವಾಗಿ ಅವರು ರಾಜೀನಾಮೆ ನೀಡಿದಾಗ ಅವರನ್ನು ಪ್ರಶ್ನಿಸಿದ್ದೆ. ಯಾರೋ ಮಾಡಿದ ಕೆಲಸಕ್ಕೆ ಇವರು ರಾಜೀನಾಮೆ ಕೊಟ್ಟಿದ್ದು ನನಗೆ ಸರಿ ಕಂಡಿರಲಿಲ್ಲ. ಕುಲದೀಪ್‌ ಸಿಂಗ್‌ ಆಯೋಗದ ವರದಿ ಹಿನ್ನೆಲೆಯಲ್ಲಿ ಯೋಜನಾ ಆಯೋಗದ ಉಪಾಧ್ಯಕ್ಷ ಹುದ್ದೆಗೆ ಅವರು ರಾಜೀನಾಮೆ ಕೊಟ್ಟರು. ಆ ವರದಿಯನ್ನು ಪ್ರಧಾನಿಗೆ ಕೊಟ್ಟಿದ್ದಾರೆ ಅಷ್ಟೇ. ಪ್ರಧಾನಿ ಅದನ್ನು ಸ್ವೀಕರಿಸುವ ಮುನ್ನವೇ ಏಕೆ ರಾಜೀನಾಮೆ ಕೊಡಬೇಕು ಎಂದು ನಾನು ಪ್ರಶ್ನಿಸಿದ್ದೆ. ಆದರೆ ಅವರು ನನ್ನ ಮಾತು ಕೇಳಲಿಲ್ಲ. ಅವರು ಸೂಕ್ಷ್ಮ ಮನಸ್ಸಿನ ವ್ಯಕ್ತಿ. ಸಣ್ಣ ಆಘಾತವನ್ನೂ ಸಹಿಸಿಕೊಳ್ಳುತ್ತಿರಲಿಲ್ಲ.

ಜನತಾ ದಳದಿಂದ ಅವರನ್ನ ಯಾಕೆ ಹೊರಗೆ ಹಾಕಿದ್ರು ಅಂತ ನಮಗೆಲ್ಲ ಗೊತ್ತು. ಅದು ಚೀಪ್‌ ಪಾಲಿಟಿಕ್ಸ್‌. ಅವರ ಜೊತೆಗೇ ಇದ್ದ ದೇವೇಗೌಡ, ಲಾಲು ಪ್ರಸಾದ್ ಮುಂತಾದ ನಾಯಕರೇ ಹಿಂದಿನಿಂದ ಇರಿದಿದ್ದರು. ಅದನ್ನು ನಾವು ನಿರೀಕ್ಷಿಸಿರಲಿಲ್ಲ.‌ ಅಂತಹ ಮುತ್ಸದ್ಧಿ ನಾಯಕನಿಗೆ ಹಾಗಾಗಬಾರದಿತ್ತು. ಆ ದಿನಗಳನ್ನು ನೆನಪು ಮಾಡಿಕೊಂಡರೆ ಈಗಲೂ ಬೇಸರವಾಗುತ್ತದೆ.

ವಿಶ್ವವಾಣಿ: ರಾಮಕೃಷ್ಣ ಹೆಗಡೆ ಅವರು ಅನಾರೋಗ್ಯ ಸ್ಥಿತಿಯಲ್ಲಿದ್ದಾಗ ನೀವು ದೆಹಲಿಯಲ್ಲಿ ಅವರ ಆರೈಕೆ ಮಾಡುತ್ತಿದ್ದಿರಿ. ಇದ್ದಕ್ಕಿದ್ದ ಹಾಗೆ ಅವರ ಕುಟುಂಬ ಅವರನ್ನು ಕರೆದೊಯ್ಯಿತು. ಆಗ ನಿಮ್ಮನ್ನು ನೀವು ಹೇಗೆ ಗಟ್ಟಿ ಮಾಡಿಕೊಂಡಿರಿ?

ಪ್ರತಿಭಾ ಪ್ರಹ್ಲಾದ್:‌ ಅದು ಅತ್ಯಂತ ನೋವಿನ ಕ್ಷಣಗಳು. ಅದನ್ನು ನೆನಪು ಮಾಡಿಕೊಳ್ಳಲೂ ನನಗೆ ಇಷ್ಟವಿಲ್ಲ. ಆದರೆ ಆ ಸಂದರ್ಭವನ್ನೂ ನಾನು ಧೈರ್ಯವಾಗಿ ಎದುರಿಸಿದ್ದೆ. ಅವರು ಚೇತರಿಸಿಕೊಂಡರೆ ಸಾಕಿತ್ತು. ಅಂಥ ಕಠಿಣ ಸಮಯದಲ್ಲಿ ಅವರೊಂದಿಗೆ ನಾನು ಇರಬೇಕಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಇದ್ದಷ್ಟೂ ದಿನ ಆರೈಕೆ ಮಾಡಿದ್ದೇನೆ. ಒಳ್ಳೆಯ ಕ್ಷಣಗಳನ್ನು ಅವರೊಂದಿಗೆ ಕಳೆದಿದ್ದೇನೆ. ಕಷ್ಟ ಕಾಲದಲ್ಲಿ ಹೆಗಡೆ ಜತೆಗಿದ್ದ ತುಂಬಾ ಜನರ ನಿಜ ಸ್ವರೂಪ ನನಗೆ ಗೊತ್ತಾಯಿತು. ನಾನು ಯಾರಿಗೆ ತುಂಬಾ ಮರ್ಯಾದೆ ಕೊಡುತ್ತಿದ್ದೇನೋ ಅವರ ನಿಜ ವ್ಯಕ್ತಿತ್ವ ನನ್ನ ಕಣ್ಣ ಮುಂದೆ ಬಂತು. ಅಮ್ಮ ಕೂಡ ಆಗಷ್ಟೇ ನಿಧನರಾಗಿದ್ದರು. ಹೆಗಡೆಯವರೂ ಇಲ್ಲದೆ ನಾನು ಏಕಾಂಗಿಯಾಗಿಬಿಟ್ಟೆ. ನನ್ನ ಜೀವನದ ಅತ್ಯಂತ ಕರಾಳ ದಿನಗಳವು.

ವಿಶ್ವವಾಣಿ: ʼಮನದಂಗಳದಲ್ಲಿ ಮಾತುಕತೆʼ ಕಾರ್ಯಕ್ರಮದಲ್ಲಿ ನೀವು ರಾಮಕೃಷ್ಣ ಹೆಗಡೆ ಜತೆಗಿನ ಸಂಬಂಧದ ಬಗ್ಗೆ ಮಾತನಾಡಿದ್ದರ ವಿಡಿಯೊವನ್ನು ರಾಜ್ಯ ಸರ್ಕಾರ ಸೆನ್ಸಾರ್‌ ಮಾಡಿತ್ತು. ನೀವು ಇದನ್ನ ವಿರೋಧಿಸಿಲ್ಲವಾ?

ಪ್ರತಿಭಾ ಪ್ರಹ್ಲಾದ್:‌ ನಿಜ ಹೇಳಬೇಕೆಂದರೆ ಸೆನ್ಸಾರ್‌ ಮಾಡಿದ ಆ ವಿಡಿಯೊವನ್ನು ನಾನು ನೋಡಿರಲೇ ಇಲ್ಲ. ಸಂದರ್ಶನ ಮಾಡಿದವರು ಇದನ್ನು ನನ್ನ ಗಮನಕ್ಕೆ ತಂದರು. ನಾನು ಸಂಬಂಧಪಟ್ಟ ಇಲಾಖೆಗೆ ಆ ಬಳಿಕ ಪತ್ರ ಬರೆದೆ. ನೀವು ನನ್ನ ಸಂದರ್ಶನವನ್ನು ಯುಟ್ಯೂಬ್‌ಗೆ ಹಾಕಬೇಕು ಅಂದರೆ ಪೂರ್ಣ ಹಾಕಬೇಕು, ಕಟ್‌ ಮಾಡಬಾರದು ಅಂದೆ. ಯಾರನ್ನೋ ಓಲೈಸೋಕೆ ಯಾರೋ ಮಾಡಿರೋ ಕಿತಾಪತಿ ಇದು. ನನ್ನ ಜೀವನ ನನ್ನದು. ನನ್ನ ಜೀವನದ ಸತ್ಯವನ್ನ ನಾನು ಯಾಕೆ ಮುಚ್ಚುಮರೆ ಇಲ್ಲದೇ ಹೇಳಬಾರದು ಅಲ್ಲವಾ?

ವಿಶ್ವವಾಣಿ: ನೀವು ಈಗಲೂ ರಾಮಕೃಷ್ಣ ಹೆಗಡೆ ಅವರ ಜನ್ಮದಿನ ಮತ್ತು ಪುಣ್ಯಸ್ಮರಣೆಯ ದಿನ ಭಾವನಾತ್ಮಕವಾದ ಪೋಸ್ಟ್‌ ಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡುತ್ತೀರಿ. ಅವರನ್ನು ಹೇಗೆಲ್ಲಾ ನೆನಪು ಮಾಡಿಕೊಳ್ಳುತ್ತೀರಿ?

ಪ್ರತಿಭಾ ಪ್ರಹ್ಲಾದ್: ಹೆಗಡೆಯವರು ಮತ್ತು ನನ್ನದು ವಿಶೇಷ ಸಂಬಂಧ. ಅವರೊಂದಿಗೆ ಕಳೆದಿರುವುದು ನನ್ನ ಜೀವನದ ಸುವರ್ಣ ಕ್ಷಣ. ‌ಅವರನ್ನು ಮರೆಯಲು ಸಾಧ್ಯವೇ ಇಲ್ಲ. ನನ್ನ ಮತ್ತು ನನ್ನ ಮಕ್ಕಳ ನೆರಳಾಗಿ ಅವರು ಸದಾ ಇರುತ್ತಾರೆ. ನಾವು ಅವರ ಪ್ರೀತಿ ಮತ್ತು ಹಾರೈಕೆಯಿಂದಾಗಿಯೇ ಜೀವನ ನಡೆಸುತ್ತಿದ್ದೇವೆ. ಅವರು ಕಲಿಸಿದ ಪಾಠ ಮತ್ತು ಬಿಟ್ಟು ಹೋದ ನೆನಪುಗಳೊಂದಿಗೆ ಕಾಲ ಕಳೆಯುತ್ತಿದ್ದೇವೆ. ಅವರು ಕಂಡ ಕನಸುಗಳನ್ನು ನನಸು ಮಾಡುವ ಪ್ರಯತ್ನದಲ್ಲಿ ನಾನಿದ್ದೇನೆ. ಅವರು ಈಗಲೂ ನಮ್ಮ ಸುತ್ತಲೇ ಇದ್ದಾರೆ. ನಮ್ಮನ್ನು ಸದಾ ಕಾಪಾಡುತ್ತಾರೆ.