Rahul Gandhi: ಬಿಜೆಪಿ ಮತ ಕಳ್ಳತನ ಆರೋಪಿಸಿ ಆ.5ರಂದು ಬೆಂಗಳೂರಿನಲ್ಲಿ ರಾಹುಲ್ ಗಾಂಧಿ ಪಾದಯಾತ್ರೆ, ಕಾಂಗ್ರೆಸ್ ಪ್ರತಿಭಟನೆ
ರಾಹುಲ್ ಗಾಂಧಿ (Rahul Gandhi) ನೇತೃತ್ವದಲ್ಲಿ ಬೆಂಗಳೂರು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ (Freedom park) ಕಾಂಗ್ರೆಸ್ ಪ್ರತಿಭಟನೆ ನಡೆಯಲಿದ್ದು, ಮೌರ್ಯ ಸರ್ಕಲ್‌ನಿಂದ ಕಾಂಗ್ರೆಸ್ (Congress) ಮುಖಂಡರು ಅರ್ಧ ಕಿಲೋಮೀಟರ್ ಪಾದಯಾತ್ರೆ ನಡೆಸಲಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ.


ಬೆಂಗಳೂರು: ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ‘ಮತ ಕಳ್ಳತನ’ ನಡೆದಿದೆ ಎಂದು ಆರೋಪಿಸಿರುವ ಕಾಂಗ್ರೆಸ್, ಆಗಸ್ಟ್ 5ರಂದು ಬೆಂಗಳೂರಿನಲ್ಲಿ (Bengaluru) ಬೃಹತ್ ಪ್ರತಿಭಟನಾ ಸಮಾವೇಶ ನಡೆಸಲು ಮುಂದಾಗಿದೆ. ರಾಹುಲ್ ಗಾಂಧಿ (Rahul Gandhi) ನೇತೃತ್ವದಲ್ಲಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ (Freedom park) ಈ ಪ್ರತಿಭಟನೆ ನಡೆಯಲಿದ್ದು, ಮೌರ್ಯ ಸರ್ಕಲ್‌ನಿಂದ ಕಾಂಗ್ರೆಸ್ (Congress) ಮುಖಂಡರು ಅರ್ಧ ಕಿಲೋಮೀಟರ್ ಪಾದಯಾತ್ರೆ ನಡೆಸಲಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ.
ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನಾ ಸಮಾವೇಶ ನಡೆಸಿ, ಬಳಿಕ ನಿಯೋಗದ ಮೂಲಕ ಚುನಾವಣಾ ಆಯೋಗಕ್ಕೆ ದೂರು ನೀಡಲು ಕಾಂಗ್ರೆಸ್ ತೀರ್ಮಾನಿಸಿದೆ. ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ರಾಜ್ಯ ಉಸ್ತುವಾರಿ ಸುರ್ಜೇವಾಲಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಿಎಂ, ಡಿಸಿಎಂ, ಕೆಲ ಸಚಿವರು, ಶಾಸಕರು ಭಾಗವಹಿಸಿ ಅಂತಿಮ ತೀರ್ಮಾನ ನಡೆಸಿದ್ದಾರೆಂದು ತಿಳಿದುಬಂದಿದೆ.
ಬೆಂಗಳೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಪಕ್ಷದ ಕಾರ್ಯಕರ್ತರನ್ನು ಒಳಗೊಳ್ಳುವ ಮೂಲಕ ಪ್ರತಿಭಟನೆಯನ್ನು ಯಶಸ್ವಿಗೊಳಿಸಲು ಕ್ರಿಯಾ ಯೋಜನೆಯನ್ನು ರೂಪಿಸಿದ್ದಾರೆಂದು ತಿಳಿದುಬಂದಿದೆ. ಸಭೆಯಲ್ಲಿ ಸಚಿವರಾದ ರಾಮಲಿಂಗಾರೆಡ್ಡಿ, ಕೆ ಎಚ್ ಮುನಿಯಪ್ಪ, ಬೈರತಿ ಸುರೇಶ್, ಜಮೀರ್ ಅಹಮದ್ ಖಾನ್, ದಿನೇಶ್ ಗುಂಡೂರಾವ್, ಡಾ ಎಂ ಸಿ ಸುಧಾಕರ್, ಎನ್ ಚಲುವರಾಯಸ್ವಾಮಿ, ಈಶ್ವರ್ ಖಂಡ್ರೆ, ಆರ್ ಬಿ ತಿಮ್ಮಾಪುರ್, ಎಂಎಲ್ ಸಿ ಬಿ ಕೆ ಹರಿಪ್ರಸಾದ್, ಶಾಸಕರಾದ ರೂಪಕಲಾ ಶಶಿದರ್, ಶರತ್ ಬಚ್ಚೇಗೌಡ ಭಾಗವಹಿಸಿದ್ದರು.
ಇದೊಂದು ದೊಡ್ಡ ಜೋಕ್: ವಿಜಯೇಂದ್ರ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬೆಂಗಳೂರಿನಲ್ಲಿ ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆಗೆ ಮುಂದಾಗಿರುವುದು ದೊಡ್ಡ 'ಜೋಕ್' ಎಂದು ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಬುಧವಾರ ಟೀಕಿಸಿದ್ದಾರೆ. ಬಿಜೆಪಿ ಚುನಾವಣಾ ಆಯೋಗವನ್ನು ದುರ್ಬಳಕೆ ಮಾಡಿಕೊಂಡಿದ್ದರೆ ನಾವು (ಬಿಜೆಪಿ) ಕರ್ನಾಟಕದಲ್ಲಿ ವಿಪಕ್ಷ ಸ್ಥಾನದಲ್ಲಿ ಕೂರುವ ಅವಶ್ಯಕತೆ ಇರಲಿಲ್ಲ ಎಂದರು. ಕಾಂಗ್ರೆಸ್ 66 ಶಾಸಕ ಸ್ಥಾನ ಪಡೆದರೆ, ಬಿಜೆಪಿ 136 ಸ್ಥಾನದಿಂದ ಅಧಿಕಾರಕ್ಕೆ ಬರುತ್ತಿತ್ತು ಎಂದು ಹೇಳಿದರು.
ಈ ವಿಚಾರದಲ್ಲಿ ರಾಹುಲ್ ಗಾಂಧಿ ದಾರಿ ತಪ್ಪಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಚುನಾವಣಾ ಆಯೋಗ ಮತ್ತು ಚುನಾವಣಾ ಪ್ರಕ್ರಿಯೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಕ್ಕಾಗಿ ರಾಜ್ಯದ ಮತದಾರರಲ್ಲಿ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: Rahul Gandhi: ಆಗಸ್ಟ್ 4ರಂದು ಬೆಂಗಳೂರಿನಲ್ಲಿ ರಾಹುಲ್ ಗಾಂಧಿ ಪಾದಯಾತ್ರೆ