ರಾಯಚೂರು: ನಗರದಲ್ಲಿ ಬೀದಿ ನಾಯಿಗಳ ಹಾವಳಿ (Stray Dog Attack) ಮಿತಿಮೀರಿದೆ. ನಗರದ ವಾರ್ಡ್ ನಂ.8 ಅಂದ್ರೂನ್ ಕಿಲ್ಲಾದಲ್ಲಿ ಬೀದಿ ನಾಯಿಗಳ ದಾಳಿಯಿಂದ 4 ವರ್ಷದ ಮಗು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಮನೆ ಮುಂದೆ ಆಡಿಕೊಳ್ಳುತ್ತಿದ್ದ ವೇಳೆ ನಾಯಿಗಳು ದಾಳಿ ಮಾಡಿದ್ದು, ಮಗುವಿನ ತಲೆ, ಕತ್ತಿನ ಭಾಗಕ್ಕೆ ಕಚ್ಚಿ ಗಾಯಗೊಳಿಸಿವೆ.
ಗಂಭೀರವಾಗಿ ಗಾಯಗೊಂಡ ಮಗುವನ್ನು ನಗರದ ರಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ನಗರದಲ್ಲಿ ಕಳೆದ ಒಂದು ತಿಂಗಳಲ್ಲಿ 5 ಮಂದಿ ಮೇಲೆ ಬೀದಿ ನಾಯಿ ದಾಳಿಗಳು ಎಂದು ಸ್ಥಳೀಯರು ಅಸಮಧಾನ ಹೊರಹಾಕಿದ್ದಾರೆ. ಬೀದಿ ನಾಯಿಗಳ ನಿಯಂತ್ರಣಕ್ಕೆ ದೂರುಗಳು ಸಲ್ಲಿಕೆಯಾದರೂ ಮಹಾನಗರ ಪಾಲಿಕೆ ಕ್ರಮ ಕೈಗೊಳ್ಳುವಲ್ಲಿ ನಿರ್ಲಕ್ಷ್ಯ ವಹಿಸುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಲಿಂಗಸುಗೂರಿನಲ್ಲಿ ಮೊಹರಂ ಆಚರಣೆ ವೇಳೆ ಬೆಂಕಿಯಲ್ಲಿ ಬಿದ್ದು ವ್ಯಕ್ತಿ ಸಾವು
ರಾಯಚೂರು: ಮೊಹರಂ ಆಚರಣೆ ವೇಳೆ ಬೆಂಕಿಯಲ್ಲಿ ಬಿದ್ದು ವ್ಯಕ್ತಿ ಮೃತಪಟ್ಟಿರುವ ಘಟನೆ ಜಿಲ್ಲೆಯ ಲಿಂಗಸುಗೂರು ತಾಲೂಕಿನ ಯರಗುಂಟಿಯಲ್ಲಿ ನಡೆದಿದೆ. ಅಲಾಯಿ ಕುಣಿಯಲ್ಲಿ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ ವ್ಯಕ್ತಿ ಕೊನೆಯುಸಿರೆಳೆದಿದ್ದಾನೆ. ಯರಗುಂಟಿ ಗ್ರಾಮದ ಹನುಮಂತ ಮೃತ ವ್ಯಕ್ತಿ. ಬೆಂಕಿ ದೊಡ್ಡ ಪ್ರಮಾಣದಲ್ಲಿ ಹೊತ್ತಿ ಉರಿಯುತ್ತಿದ್ದರಿಂದ ಸ್ಥಳದಲ್ಲೇ ನೂರಾರು ಜನರಿದ್ದರೂ ಯುವಕನನ್ನು ರಕ್ಷಿಸಲು ಅಸಹಾಯಕರಾಗಿದ್ದಾರೆ. ಲಿಂಗಸುಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಪ್ರೀತಿ ನಿರಾಕರಿಸಿದ್ದಕ್ಕೆ ಚಾಕುವಿನಿಂದ ಇರಿದ ಪ್ರೇಮಿ; ಚಿಕಿತ್ಸೆ ಫಲಿಸದೇ ಯುವತಿ ಸಾವು
ಮೈಸೂರು: ಯುವಕನೊಬ್ಬ ತನ್ನನ್ನು ಪ್ರೀತಿಸಲು ನಿರಾಕರಿಸಿದ್ದಕ್ಕೆ ಚಾಕುವಿನಿಂದ ಇರಿದ ಪರಿಣಾಮ ಯುವತಿ ಮೃತಪಟ್ಟಿರುವ ಘಟನೆ (Stabbing case) ನಗರದಲ್ಲಿ ನಡೆದಿದೆ. ಮಂಡ್ಯ ಜಿಲ್ಲೆಯ ಪಾಂಡವಪುರ ನಿವಾಸಿ ಪೂರ್ಣಿಮಾ (36) ಮೃತ ಯುವತಿ. ಅಭಿಷೇಕ್ ಕೊಲೆ ಆರೋಪಿ. ಚಾಕು ಇರಿತದಿಂದ ತೀವ್ರವಾಗಿ ಗಾಯಗೊಂಡ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಯುವತಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾಳೆ.
ಯುವತಿ ಪೂರ್ಣಿಮಾ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಳು. ಆರೋಪಿ ಅಭಿಷೇಕ್ ತಲೆಮರೆಸಿಕೊಂಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ನಗರದ ಕೃಷ್ಣಮೂರ್ತಿ ಪುರಂನಲ್ಲಿರುವ ಅಂಬೇಡ್ಕರ್ ಪಾರ್ಕ್ ಮುಂಭಾಗದಲ್ಲಿಇವರಿಬ್ಬರೂ ಮಾತನಾಡುತ್ತಿದ್ದ ಸಂದರ್ಭ ಪ್ರೀತಿಸುವಂತೆ ಒತ್ತಡ ಹೇರಿದ್ದಾನೆ. ಆದರೆ, ಆಕೆ ನಿರಾಕರಿಸಿದ ಹಿನ್ನೆಲೆಯಲ್ಲಿಆಕೆಗೆ ಚಾಕುವಿನಿಂದ ಇರಿದಿದ್ದಾನೆ.
ಆಕೆಯ ತಲೆ, ಕುತ್ತಿಗೆ, ಹೊಟ್ಟೆ ಭಾಗಕ್ಕೆ ಗಂಭೀರ ಗಾಯವಾಗಿದ್ದು, ಆತನೇ ಆಸ್ಪತ್ರೆಗೆ ದಾಖಲಿಸಿ ಪರಾರಿಯಾಗಿದ್ದಾನೆ. ಈ ಸಂಬಂಧ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.