ರಾಮನಗರ: ತಾಲೂಕಿನ ಬಿಡದಿ ಹೋಬಳಿಯ ಭದ್ರಾಪುರದ ಹಕ್ಕಿಪಿಕ್ಕಿ ಕಾಲೊನಿಯಲ್ಲಿ ಶವವಾಗಿ (Bidadi Girl death case) ಪತ್ತೆಯಾಗಿದ್ದ ಮಾತು ಬಾರದ ಮತ್ತು ಕಿವಿ ಕೇಳಿಸದ ಬಾಲಕಿ ಖುಷಿ (15) ಮೇಲೆ ಅತ್ಯಾಚಾರ ನಡೆದಿಲ್ಲ ಎಂದು ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್ಎಲ್) ವರದಿಯಿಂದ ದೃಢಪಟ್ಟಿದೆ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ ಗೌಡ ಅವರು, ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಮಗಳ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ ಎಂದು ತಾಯಿ ಸೇರಿ ಕುಟುಂಬದವರು ಆರೋಪಿಸಿದ್ದರು. ಹಾಗಾಗಿ, ಮರಣೋತ್ತರ ಪರೀಕ್ಷೆ ಸಂದರ್ಭದಲ್ಲಿ ಬಾಲಕಿ ದೇಹದ 32 ಮಾದರಿಗಳನ್ನು ಸಂಗ್ರಹಿಸಿ ಎಫ್‌ಎಸ್ಎಲ್‌ಗೆ ಕಳುಹಿಲಾಗಿತ್ತು. ಇಂದು ಸಂಜೆ ಕೈ ಸೇರಿದ ವರದಿಯಲ್ಲಿ ಅತ್ಯಾಚಾರ ನಡೆದಿಲ್ಲ ಎಂಬುದು ಗೊತ್ತಾಗಿದೆ ಎಂದು ಎಸ್‌ಪಿ ತಿಳಿಸಿದ್ದಾರೆ.
'ಬಾಲಕಿ ತಲೆಗೆ ಗಂಭೀರವಾದ ಪೆಟ್ಟು ಬಿದ್ದಿರುವ ಗುರುತುಗಳಿವೆ. ಸಾಮಾಜಿಕ ಮಾಧ್ಯಮಗಳಲ್ಲಿ ಹಬ್ಬಿಸಿರುವಂತೆ ಮೈ ಮೇಲೆ ಸಿಗರೇಟಿನಿಂದ ಸುಟ್ಟ ಗಾಯದಂತಹ ಯಾವುದೇ ಗುರುತುಗಳಿಲ್ಲ. ಸದ್ಯದಲ್ಲೇ ಮರಣೋತ್ತರ ಪರೀಕ್ಷೆ ವರದಿಯೂ ಕೈ ಬರಲಿದ್ದು, ಆಗ ಸಾವಿಗೆ ನಿಖರ ಕಾರಣ ಗೊತ್ತಾಗಲಿದೆ' ಎಂದು ವಿವರಿಸಿದ್ದಾರೆ.
ಬಾಲಕಿ ರೈಲಿಗೆ ಸಿಲುಕಿ ಮೃತಪಟ್ಟಿರಬಹುದಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಇದುವರೆಗಿನ ತನಿಖೆ ಹಾಗೂ ವಿವಿಧ ಸಾಕ್ಷ್ಯಗಳನ್ನು ಪರಿಶೀಲಿಸಿದಾಗ ರೈಲಿಗೆ ಸಿಲುಕಿ ಬಾಲಕಿ ಮೃತಪಟ್ಟಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ 10 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ, ಯಾರನ್ನೂ ಬಂಧಿಸಿರಲಿಲ್ಲ ಎಂದು ಮಾಹಿತಿ ನೀಡಿದ್ದಾರೆ.
8ನೇ ತರಗತಿ ಓದುತ್ತಿದ್ದ ಹಕ್ಕಿಪಿಕ್ಕಿ ಸಮುದಾಯದ ಖುಷಿ, ಮೇ 11ರಂದು ರಾತ್ರಿ ನಾಪತ್ತೆಯಾಗಿದ್ದಳು. ಬೆಳಗ್ಗೆ 7.45ರ ಸುಮಾರಿಗೆ ಗ್ರಾಮದ ಸಮೀಪದ ರೈಲು ಹಳಿ ಪಕ್ಕ ಆಕೆy ಶವ ಅರೆ ನಗ್ನಾವಸ್ಥೆಯಲ್ಲಿ ಪತ್ತೆಯಾಗಿತ್ತು. ಹೀಗಾಗಿ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ ಎಂದು ಹೇಳಲಾಗಿತ್ತು. ಹೀಗಾಗಿ ಬಿಡದಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಈ ಸುದ್ದಿಯನ್ನೂ ಓದಿ | Fraud case: ಡಿಸಿಸಿ ಬ್ಯಾಂಕ್‌ಗೆ ವಂಚನೆ ಕೇಸ್‌ನಲ್ಲಿ ಬಂಧನವಾಗಿದ್ದ ಡಿ.ಕೆ.ಸಿದ್ರಾಮ್ ಬಿಡುಗಡೆ
ಬೆಂಗಳೂರಲ್ಲಿ ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರುತ್ತಿದ್ದ ಆಫ್ರಿಕನ್ ಪ್ರಜೆ ಬಂಧನ

ಬೆಂಗಳೂರು: ಕಾಲೇಜು ವಿದ್ಯಾರ್ಥಿಗಳು ಮತ್ತು ಐಟಿ ಉದ್ಯೋಗಿಗಳಿಗೆ ಸಿಂಥೆಟಿಕ್ ಡ್ರಗ್ಸ್ ಮಾರಾಟ (Drugs Mafia) ಮಾಡುತ್ತಿದ್ದ ಆರೋಪದಲ್ಲಿ ನಗರದಲ್ಲಿ 40 ವರ್ಷದ ಆಫ್ರಿಕನ್ ಪ್ರಜೆಯ ಬಂಧನವಾಗಿದೆ. ಈ ಬಗ್ಗೆ ಬೆಂಗಳೂರು ಕೇಂದ್ರ ಅಪರಾಧ ವಿಭಾಗದ ಪೊಲೀಸರು ಮಾಹಿತಿ ನೀಡಿದ್ದು, ಡೇನಿಯಲ್ ಅರಿಂಜೆ ಒಕ್ವೋಶಾ ಎಂಬಾತನನ್ನು ಬಂಧಿಸಲಾಗಿದ್ದು, ಆತನಿಂದ 4 ಕೋಟಿ ರೂ. ಮೌಲ್ಯದ ಎಂಡಿಎಂಎ ಡ್ರಗ್ಸ್ ಅನ್ನು ಸಿಸಿಬಿ ವಶಪಡಿಸಿಕೊಂಡಿದೆ ಎಂದು ತಿಳಿಸಿದ್ದಾರೆ.
ಆರೋಪಿಯು 2023ರ ಡಿಸೆಂಬರ್ನಲ್ಲಿ ವ್ಯಾಪಾರ ವೀಸಾದ ಮೇಲೆ ಬೆಂಗಳೂರಿಗೆ ಆಗಮಿಸಿ, ಸೋಲದೇವನಹಳ್ಳಿಯಲ್ಲಿ ತನ್ನ ಸ್ನೇಹಿತನೊಂದಿಗೆ ಬಾಡಿಗೆ ಫ್ಲ್ಯಾಟ್‌ನಲ್ಲಿ ವಾಸಿಸುತ್ತಿದ್ದ. ಖಚಿತ ಮಾಹಿತಿ ಮೇರೆಗೆ ಒಕ್ವೋಶಾ ಮನೆ ಮೇಲೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ. ಆದರೆ ಡ್ರಗ್ಸ್ ಮಾರಾಟದಲ್ಲಿ ಶಾಮೀಲಾಗಿದ್ದಾನೆ ಎನ್ನಲಾದ ಆತನ ಸ್ನೇಹಿತ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಇತರ ರಾಜ್ಯಗಳಲ್ಲಿರುವ ತಮ್ಮ ಸಹವರ್ತಿಗಳಿಂದ ಮತ್ತು ಬೆಂಗಳೂರಿನ ಸುತ್ತಮುತ್ತಲಿನ ಸ್ಥಳೀಯ ಕೆಲವು ವ್ಯಕ್ತಿಗಳಿಂದ ಮಾದಕ ವಸ್ತುಗಳನ್ನು ಪಡೆಯುತ್ತಿದ್ದರು ಎಂದು ತನಿಖೆಯ ವೇಳೆ ತಿಳಿದುಬಂದಿದೆ. ಅವರು ಕಾಲೇಜು ವಿದ್ಯಾರ್ಥಿಗಳು ಮತ್ತು ಐಟಿ ವೃತ್ತಿಪರರನ್ನು ಗುರಿಯಾಗಿಸಿಕೊಂಡಿದ್ದರು ಎಂದು ತನಿಖೆ ವೇಳೆ ಗೊತ್ತಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಬಂಧಿತನಿಂದ ಪೊಲೀಸರು 1.48 ಕೆಜಿ ಬಿಳಿ ಬಣ್ಣದ ಎಂಡಿಎಂಎ ಡ್ರಗ್ಸ್ ಮತ್ತು 1.1 ಕೆಜಿ ಕಂದು ಬಣ್ಣದ ಎಂಡಿಎಂಎ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ಇದರ ಮೌಲ್ಯ 4 ಕೋಟಿ ರೂ. ಎಂದು ಅಂದಾಜಿಸಲಾಗಿದೆ.
ಈ ಸುದ್ದಿಯನ್ನೂ ಓದಿ | Viral News: ಟಾಯ್ಲೆಟ್ ಕಮೋಡ್ ಸ್ಫೋಟ; ಯುವಕನ ಸೀತಿ ಗಂಭೀರ; ಏನಿದು ಸುದ್ದಿ...?