ಬೆಂಗಳೂರು : ರಾಜ್ಯದ ಮಹಿಳೆಯರಿಗೆ 564.10 ಕೋಟಿ ಉಚಿತ ಪ್ರಯಾಣದ ಸೇವೆ ನೀಡಿದ ಶಕ್ತಿ ಯೋಜನೆ (Shakti Scheme) ಹಾಗೂ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ 464 ಪ್ರಶಸ್ತಿಗಳನ್ನು ಪಡೆದಿರುವ ಕೆಎಸ್‌ಆರ್‌ಟಿಸಿ (KSRTC) ʼಲಂಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ʼಗೆ (London book of workd records) ಸೇರ್ಪಡೆಯಾಗಿದೆ. ಶಕ್ತಿ ಯೋಜನೆಯು ಸಾಮಾಜಿಕ ಅಭಿವೃದ್ಧಿ ಮತ್ತು ಲಿಂಗ ಸಮಾನತೆ ತರುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಲಂಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನ ಪ್ರಮಾಣಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಇತ್ತೀಚೆಗಷ್ಟೇ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಮತ್ತು ಅಂತಾರಾಷ್ಟ್ರೀಯ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರ್ಪಡೆಯಾಗಿದ್ದ ಶಕ್ತಿ ಯೋಜನೆ ಇದೀಗ ಮತ್ತೊಂದು ವಿಶ್ವ ದಾಖಲೆಗೆ ಸೇರ್ಪಡೆಯಾಗಿದೆ. ವಿಶ್ವದಲ್ಲಿಯೇ ಮಹಿಳೆಯರಿಗೆ ಅತಿ ಹೆಚ್ಚು ಉಚಿತ ಪ್ರಯಾಣ ಸೇವೆ ನೀಡಿದ ಕಾರಣಕ್ಕಾಗಿ ಶಕ್ತಿ ಯೋಜನೆಯನ್ನು ಗುರುತಿಸಿ ಲಂಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ಗೆ ಸೇರ್ಪಡೆ ಮಾಡಲಾಗಿದೆ.
ಇದನ್ನೂ ಓದಿ: Shakti Scheme: ಮತ್ತೊಂದು ವಿಶ್ವದಾಖಲೆಗೆ ಸೇರ್ಪಡೆಯಾದ ಕರ್ನಾಟಕದ ಶಕ್ತಿ ಯೋಜನೆ
ಅದರ ಜತೆಗೆ 1997ರಿಂದ 2025ರ ಅ. 3ರವರೆಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ 464 ಪ್ರಶಸ್ತಿಗಳನ್ನು ಪಡೆದಿರುವ ಕೆಎಸ್ಸಾರ್ಟಿಸಿಯನ್ನೂ ಲಂಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ಗೆ ಸೇರ್ಪಡೆ ಮಾಡಿ ಪ್ರಮಾಣಪತ್ರ ನೀಡಲಾಗಿದೆ. ಈ ದಾಖಲೆಯು ಬೆಂಗಳೂರು, ಕರ್ನಾಟಕ ಮತ್ತು ಭಾರತವನ್ನು ವಿಶ್ವ ಮಟ್ಟದಲ್ಲಿ ಛಾಪು ಮೂಡಿಸಿದೆ ಎಂದು ಶ್ಲಾಘಿಸಲಾಗಿದೆ.
ಹರ್ಷ ವ್ಯಕ್ತಪಡಿಸಿದ ಸಿಎಂ ಸಿದ್ದರಾಮಯ್ಯ
ಶಕ್ತಿ ಯೋಜನೆ ಮತ್ತು ಕೆಎಸ್ಸಾರ್ಟಿಸಿಯು ಲಂಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ಗೆ ಸೇರ್ಪಡೆಯಾಗಿರುವುದಕ್ಕೆ ಹರ್ಷ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯದ ಸರ್ಕಾರಿ ಸಾರಿಗೆ ವ್ಯವಸ್ಥೆಯು ಎರಡು ಐತಿಹಾಸಿಕ ವಿಶ್ವ ದಾಖಲೆಗೆ ಸೇರ್ಪಡೆಯಾಗಿದೆ. ಆ ಮೂಲಕ ಕರ್ನಾಟಕ ಜಾಗತಿಕ ವೇದಿಕೆಗೆ ಪ್ರವೇಶಿಸಿದಂತಾಗಿದೆ. ನಮ್ಮ ಆಡಳಿತವು ಸಾಮಾಜಿಕ ನ್ಯಾಯ, ಮಹಿಳಾ ಸಬಲೀಕರಣ ಮತ್ತು ವಿಶ್ವ ದರ್ಜೆಯ ಸಾರ್ವಜನಿಕ ಸೇವೆಗೆ ಹೆಚ್ಚಿನ ಒತ್ತು ನೀಡಿದೆ. ಸಾರಿಗೆ ಸೇವೆಗೆ ಸಿಗುತ್ತಿರುವ ಮನ್ನಣೆಗಳು ಸಮಗ್ರ ಮತ್ತು ಸಹಾನುಭೂತಿಯ ನೀತಿಯಿಂದ ಎಲ್ಲವನ್ನೂ ಸಾಧಿಸಬಹುದು ಎಂಬುದನ್ನು ತೋರಿಸಿದೆ ಎಂದು ತಿಳಿಸಿದ್ದಾರೆ.